ಬೆಂಗಳೂರು : ಭಾರತದ ಪ್ರತಿಷ್ಠಿತ ನಾಟಕೋತ್ಸವಗಳಲ್ಲಿ ಒಂದಾದ ಮಹೀಂದ್ರ ಎಕ್ಸ್ಲೆನ್ಸ್ ಇನ್ ಥಿಯೇಟರ್ ಅವಾರ್ಡ್ 2025 (META)’ಗೆ 367 ನಾಟಕಗಳ ಪೈಕಿ ಆಯ್ಕೆಯಾದ 10 ನಾಟಕಗಳಲ್ಲಿ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕವು ಒಂದು.
ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕದ ಬಗ್ಗೆ :
ತನ್ನ ಜನಾಂಗದ ಮೇಲೆ ನಿರಂತರ ನಡೆಯುತ್ತಿದ್ದ ಶೋಷಣೆಯನ್ನ ವಿರೋಧಿಸಿ, ತನ್ನ ಹಾಡಿನ ಮೂಲಕ ಜಗತ್ತಿಗೆ ಪರಿಚಯ ಇರುವ ಜಮೈಕಾದ ಹಾಡುಗಾರ, ಹೋರಾಟಗಾರ ‘ಬಾಬ್ ಮಾರ್ಲಿ’ಯ ರೂಪಕದಂತಿದೆ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕ.
ಹಲವು ಕನಸುಗಳನ್ನು ಹೊತ್ತು, ಸ್ವಚ್ಛಂದ ಬದುಕು ಕಟ್ಟಿಕೊಳ್ಳಲು ಹಳ್ಳಿಯಿಂದ ಪಟ್ಟಣಕ್ಕೆ ಬಂದ ಮೂವರು ತಮ್ಮ ಆಹಾರದಿಂದಾಗಿ ಅನುಭವಿಸುವ ಮಾನಸಿಕ ವೇದನೆ, ಒಬ್ಬಂಟಿತನ ಮತ್ತು ಅವರ ನಡುವೆ ನಡೆವ ಸಂಭಾಷಣೆ ನೋಡುಗರನ್ನು ಪ್ರಶ್ನಿಸುತ್ತಾ, ಅಣಕಿಸುತ್ತಾ ಸಾಗುತ್ತದೆ.
ಕಥೆಯಲ್ಲಿ ಉಪಕಥೆಗಳು, ಹಾಡುಗಳು, ತಾವು ಅನುಭವಿಸಿದ ಅನೇಕ ನೈಜ ಘಟನೆಗಳಿದ್ದು ಕೇಳಲು ಕಷ್ಟವಾದರೂ ಅವು ಸತ್ಯವೇ ಆಗಿವೆ. ನಾಟಕ ನೋಡುತ್ತಿದ್ದ ಹಾಗೇ ನಮ್ಮ ಸುತ್ತ ಈಗ ನಡೆಯುತ್ತಿರುವ ಹಲವು ಪ್ರಸಂಗಗಳು ಥಟ್ಟನೆ ಕಣ್ಣ ಮುಂದೆ ಬಂದು ಹೋಗುತ್ತವೆ, ಮುಟ್ಟಿ ನೋಡಿಕೊಳ್ಳುವಂತೆ ಮಾಡುತ್ತವೆ. ಈ ನಾಟಕದ ಮೂಲಕ, ನಾಟಕ ರಚನೆಯಲ್ಲೂ ನಿರ್ದೇಶಕರು ಸೈ ಎನಿಸಿಕೊಂಡಿದ್ದಾರೆ.
ನಾಟಕದಲ್ಲಿ ಬರುವ ‘ಮಿಂಚುಳ’, ‘ನಾಯಿ’, ‘ಪಡಸಾಲೆ’, ‘ಟಿವಿ’, ‘ಹಾಡುಗಳು’ ನಿಮ್ಮನ್ನು ಊರಿನ ಬಾಲ್ಯದ ನೆನಪಿಗೆ ಕರೆದುಕೊಂಡು ಹೋಗುವುದು ನಿಶ್ಚಿತ. ವೇದಿಕೆಯಲ್ಲಿ ಮೂರು ಜನರ ನಟನೆ, ಹಿತವಾದ ಸಂಗೀತ, ಕಣ್ಣಿಗೆ ಕಥೆಯನ್ನು ಇನ್ನೂ ಹತ್ತಿರ ಮಾಡುವ ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ ಬಹಳ ಮೆಚ್ಚುವಂತದ್ದು.
ಈ ಹಿಂದೆ ನಿರ್ದೇಶಕ ‘ಲಕ್ಷ್ಮಣ ಕೆ.ಪಿ.’ಯ – ‘We the people of India’, ದಕ್ಲಕಥಾ ದೇವಿಕಾವ್ಯ’ ನಮ್ಮ ಸುತ್ತ ಇರುವ ಧ್ವನಿ ಇಲ್ಲದವರ ಕಥೆಗಳಾದರೆ, ಈ ನಾಟಕದಲ್ಲಿ ‘ಬೃಹತ್ ಸುಂದರ ಮಹಾನಗರದಲ್ಲಿ ಆಹಾರದ ಆಧಾರದ ಮೇಲೆ ನಡೆವ ದೌರ್ಜನ್ಯ’ ಮುಖ್ಯವಾಗಿದೆ. ಪ್ರಸ್ತುತ ರಾಜಕೀಯ ವಿದ್ಯಮಾನಗಳು, ಧರ್ಮ ಸಂಘರ್ಷಗಳ ಎಳೆ ಸಾಮಾನ್ಯ ಜನರ ಆಹಾರದ ಮೇಲೆ ಹೇಗೆ ಹಿಡಿತ ಸಾಧಿಸುತ್ತಿದೆ ಎನ್ನುವ ಸೂಕ್ಷ್ಮ ವಿಚಾರವನ್ನು ರಂಗದ ಮೇಲೆ ತಂದಿರುವುದು ಇದೇ ಮೊದಲು.
ಈ ನಾಟಕದ ರಚನೆ, ವಿನ್ಯಾಸ, ನಿರ್ದೇಶನ ಲಕ್ಷ್ಮಣ ಕೆ.ಪಿ.ಯವರದು. ಸಂಗೀತ ಮರಿಯಮ್ಮನವರದು. ರಂಗದ ಮೇಲೆ – ಭರತ್ ಡಿಂಗ್ರಿ, ಶ್ವೇತಾ ಹೆಚ್.ಕೆ. ಮತ್ತು ಚಂದ್ರಶೇಖರ್ ಕೆ. ಹಾಗೂ ಬೆಳಕಿನ ವಿನ್ಯಾಸ ಮಂಜು ನಾರಾಯಣ.