ಮಂಗಳೂರು : ವಿಜಯ ಕರ್ನಾಟಕ ದಿನಪತ್ರಿಕೆ ಹಾಗೂ ಸಂಗೀತ ಭಾರತಿ ಪ್ರತಿಷ್ಠಾನದ ವತಿಯಿಂದ 21 ಜುಲೈ 2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮುಂಬಯಿಯ ಪಂಚಮ್ ನಿಶಾದ್‌ನ ಅಭೂತಪೂರ್ವ ಪರಿಕಲ್ಪನೆಯ ‘ಬೋಲಾವ ವಿಠಲ’ ವಿನೂತನ ಕಾರ್ಯಕ್ರಮಕ್ಕೆ ಭರ್ಜರಿ ಸ್ಪಂದನೆ ಕರಾವಳಿಯಲ್ಲಿ ದೊರೆಯಿತು. ‘ಜಯ್ ಜಯ್ ರಾಮಕೃಷ್ಣ ಹರೀ…’ ಎನ್ನುವ ಹಾಡಿನ ಮೂಲಕ ಅನಾವರಣಗೊಂಡ ಈ ಕಾರ್ಯಕ್ರಮ ಭಕ್ತಿಯ ಅಲೆಗೆ ಮುನ್ನುಡಿಯಾಗಿ ಸೇರಿದ ಶೋತೃಗಳು ಭಕ್ತಿಯ ಅಲೆಯಲ್ಲಿ ಮಿಂದೆದ್ದರು.
ಮಂಗಳೂರಿನಲ್ಲಿ ನಡೆದ ಆರನೇ ಆವೃತ್ತಿಯ ‘ಬೋಲಾವ ವಿಠಲ’ ಸಂಗೀತ ಕಾರ್ಯಕ್ರಮವನ್ನು ಮುಂಬಯಿಯ ಪಂಚಮ್ ನಿಶಾದ್‌ನ ಎಂ.ಡಿ. ಶಶಿ ವ್ಯಾಸ್ ಉದ್ಘಾಟಿಸಿದರು. ಹಿಂದೂಸ್ಥಾನಿ ಸಂಗೀತದ ಶ್ರೇಷ್ಠ ಕಲಾವಿದರಾದ ಸಂಗೀತ ಕಟ್ಟಿ ಕುಲಕರ್ಣಿ, ಜೀ ಮರಾಠಿ ಸರಿಗಮಪ ಸಂಗೀತ ಸ್ಪರ್ಧೆಯ ಫೈನಲಿಸ್ಟ್ ಮುಗ್ಧ ವೈಶಂಪಾಯನ ಹಾಗೂ ಪ್ರಥಮೇಶ ಲಘಾಟೆ ಅವರ ಮೂರು ಗಂಟೆಗಳ ಅಭಂಗ ರೂಪದ ಹಾಡುಗಾರಿಕೆ ಶೋತೃ ವರ್ಗದ ಮನಸೂರೆಗೊಂಡಿತು. ತಬ್ಲಾದಲ್ಲಿ ಪ್ರಸಾದ್ ಪಾದ್ಯೆ, ಪಕ್ವಾಜ್ ನಲ್ಲಿ ಸುಖದ್ ಮುಂಡೆ, ರಿದಂನಲ್ಲಿ ಸೂರ್ಯಕಾಂತ್ ಸುರ್ವೆ, ಹಾರ್ಮೋನಿಯಂನಲ್ಲಿ ಆದಿತ್ಯ ಒಕೆ, ಕೊಳಲಿನಲ್ಲಿ ಶಡಜ್ ಗೋಡ್ಖಿಂಡಿ ಸಾಥ್ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್, ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್, ಹಾಂಗ್ಯೋ ಐಸ್‌ಕ್ರೀಮ್ ಪ್ರೈವೇಟ್ ಲಿಮಿಟೆಡ್‌ನ ಎಂ.ಡಿ. ಪ್ರದೀಪ್ ಜಿ. ಪೈ, ನಿರ್ದೇಶಕರಾದ ದೀಪಾ ಪೈ, ವಿಜಯ ಕರ್ನಾಟಕ ಸ್ಥಾನೀಯ ಸಂಪಾದಕ ಬಿ. ರವೀಂದ್ರ ಶೆಟ್ಟಿ, ರೆಸ್ಪಾನ್ಸ್ ವಿಭಾಗದ ಎ.ಜಿ.ಎಂ. ರಾಮಕೃಷ್ಣ ಆರ್., ಆರ್ನ.ಎಂ.ಡಿ. ವಿಭಾಗದ ಚೀಫ್ ಮ್ಯಾನೇಜರ್ ನಾರಾಯಣ ಉಪಸ್ಥಿತರಿದ್ದರು. ಎಕ್ಸ್ ಪರ್ಟ್ ಸಮೂಹದ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷೆ ಉಷಾ ಪ್ರಭಾ ನಾಯಕ್ ಕಾರ್ಯಕ್ರಮ ನಿರೂಪಿಸಿ, ಎಕ್ಸ್ ಪರ್ಟ್ ಸಮೂಹ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್. ನಾಯಕ್ ವಂದಿಸಿದರು. ಈ ವಿನೂತನ ಸಂಗೀತ ಕಾರ್ಯಕ್ರಮದ ಯಶಸ್ಸಿಗೆ ಬ್ಯಾಂಕ್ ಆಫ್ ಇಂಡಿಯಾ, ಹಾಂಗ್ಯೋ ಐಸ್‌ಕ್ರೀಂ, ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್, ವೋಕ್ಸ್ ವ್ಯಾಗನ್ ಮಂಗಳೂರು, ಎಕ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ್ಥೆ, ಬೋಳಾಸ್, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್, ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆ, ಐಡಿಯಲ್ ಐಸ್‌ಕ್ರೀಂ, ಕಾರ್ಡೊಲೈಟ್ ಸಹಕರಿಸಿದ್ದರು.
ಪಾಂಡುರಂಗ ವಿಠಲನಿಗೆ ಸಮರ್ಪಿತವಾದ ಕಾಲಾತೀತ ಅಭಂಗ್ ಗಳೊಂದಿಗೆ ಆಧುನಿಕತೆ ಮತ್ತು ಸಾಂಪ್ರದಾಯಿಕತೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಹಾಡುಗಳು ಶೋತೃಗಳಿಗೆ ಭಕ್ತಿ ಭಾವದ ಅಲೆಯಲ್ಲಿ ಮಿಂದು ಬರುವಂತೆ ಮಾಡಿತು. ಆರಂಭದಲ್ಲಿ ಮುಗ್ಧ ವೈಶಂಪಾಯನ ಮತ್ತು ಪ್ರಥಮೇಶ ಲಘಾಟೆ ದಂಪತಿ ‘ಸುಖಚೇ ಚೇ ತುಕಾ ಭಾಗೇ ಪುಂಡರೀಕ ಭಾಗೇ..’, ‘ರವಿ ಶಶಿ ಕಾ ಹಾರ್ ನೌ ಪರಿಹಾರ್ ರಾಜಾ ಸಾ ಸುಕುಮಾರ್ ಮದನಾಚಾ ಸುಕುಮಾರ್…’, ‘ಝೋಹರ್ ಮಾಬಾಪ್ ತೋ ಹಾರ್’, ‘ಕೀರ್ತನಾ ಚಾ ಗಜರಾಹೋ ತಾ ಸಂತ ಭಾರ್ ಪುಂಡರೀಕ’, ‘ಕಮಲೇ ಕಮಲಾಲೇಯಾ.. ಲಿಂಗ ಶರೀರ ಭಾಗ್’, ‘ಪಂಡರೀ ಮಜೋ ಮಾಹೇರಾ ಪುಂಡರೀ’ ಮರಾಠಿ ಭಾಷೆಯ ಭಕ್ತಿ ಹಾಡುಗಳು ಹೊಸ ಲೋಕವನ್ನೇ ನಿರ್ಮಾಣ ಮಾಡಿತು.
ಪ್ರಥಮೇಶ ಲಘಾಟೆ ಹಾಡಿದ ‘ತುಂಗಾ ತೀರದಿ ನಿಂತ ಸುಯತಿವರ..’, ‘ಭಾಗ್ಯದ ಲಕ್ಷ್ಮಿ ಬಾರಮ್ಮಾ’, ‘ಪುರಂದರ ವಿಠಲನ ರಾಣಿ’ ಕೇಳುತ್ತಲೇ ಶೋತೃಗಳೆಲ್ಲರಿಂದ ಚಪ್ಪಾಳೆಗಳ ಸುರಿಮಳೆಯಾಯಿತು. ‘ವಿಠಲ ವಿಠಲ ವಿಠಲ’ ಹಾಡುಗಳನ್ನು ಹಾಡುಗಾರರ ಜತೆಗೆ ಕೇಳುಗರೂ ಹಾಡಿ ಭಕ್ತಿ ಲೋಕದಲ್ಲಿ ಸಂಚರಿಸಿದರು. ಬೋಲಾವ ವಿಠಲ ಪಹಾವ ವಿಠಲ…: ಎರಡನೇ ಹಂತದಲ್ಲಿ ಹಿಂದೂಸ್ಥಾನಿ ಸಂಗೀತದ ಶ್ರೇಷ್ಠ ಕಲಾವಿದರಾದ ಸಂಗೀತ ಕಟ್ಟಿ ಕುಲಕರ್ಣಿಯವರು ‘ಆರಂಭಿ ವಂದೇ ರಾಮ್ ಆಯೋಧ್ಯೆ ಚಾ ರಾಜಾ ರಾಮ್’, ‘ನೀರೇ ನೀ ಕರೆ ತಾರೆ ಮಾರ ಸುಂದರನಾ ಸುಕುಮಾರನಾ’, ‘ವಿಠಲ ಪುರಂದರ ವಿಠಲ’, ‘ಬೋಲಾವ ವಿಠಲ ಪಹಾವ ವಿಠಲ ತುಕಾ ಮಣಿ ದೇವಾ…’ ಹಾಡುಗಳು ನರೆದಿದ್ದವರನ್ನು ಸೂಜಿಗಲ್ಲಿನಂತೆ ಸೆಳೆಯಿತು.