ಬಂಟ್ವಾಳ : ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಯಕ್ಷಗಾನ ಬಯಲಾಟ ಸೇವೆಯ ಸಂದರ್ಭದಲ್ಲಿ ಕಲಾಪೋಷಕರಾದ ದಿ. ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ಬೊಂಡಾಲ ರಾಮಣ್ಣ ಶೆಟ್ಟಿಯವರ ಸಂಸ್ಮರಣ ಸಮಾರಂಭವು ದಿನಾಂಕ 15 ಫೆಬ್ರವರಿ 2025ರಂದು ಶಂಬೂರು ಗ್ರಾಮದ ಬೊಂಡಾಲದಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ “ಕರಾವಳಿ ಜಿಲ್ಲೆಗಳಲ್ಲಿ ಯಕ್ಷಗಾನ ಮನೆ ಮಾತು. ಇಲ್ಲಿನ ಕಲಾಪೋಷಕರಿಂದ ಯಕ್ಷಗಾನಕ್ಕೆ ವಿಶೇಷ ಮನ್ನಣೆ ಪ್ರಾಪ್ತವಾಗಿದೆ. ಅದರಲ್ಲೂ ಕಟೀಲು ಕ್ಷೇತ್ರದ ಹರಿಕೆ ಬಯಲಾಟ ಸಂದರ್ಭದಲ್ಲಿ ಮನೋರಂಜನೆಯೊಂದೇ ಮುಖ್ಯ ಉದ್ದೇಶವಾಗಿರದೆ ಅದನ್ನೊಂದು ಆರಾಧನೆಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಸಂದರ್ಭದಲ್ಲಿ ಕಲಾವಿದರನ್ನು ಗೌರವಿಸುವುದು ಒಂದು ಉತ್ತಮ ಸಂಪ್ರದಾಯ” ಎಂದು ಹೇಳಿದರು. ಕಟೀಲು ಕ್ಷೇತ್ರದ ಪ್ರಧಾನಾರ್ಚಕ ಶ್ರೀ ಅನಂತ ಪದ್ಮನಾಭ ಆಸ್ರಣ್ಣ ಶುಭಹಾರೈಸಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಕಟೀಲು ಮೇಳದ ಹಿರಿಯ ಕಲಾವಿದ ಹಾಸ್ಯಗಾರ ರವಿಶಂಕರ ವಳಕುಂಜ ಇವರಿಗೆ ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಅವರ ಸ್ಮರಣಾರ್ಥ 2024-25ನೇ ಸಾಲಿನ ‘ಬೊಂಡಾಲ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಧಾರ್ಮಿಕ ಪರಿಷತ್ತು ರಾಜ್ಯ ಸದಸ್ಯ ಎ. ರವಿಶಂಕರ ಶೆಟ್ಟಿ ಬಡಾಜೆ ಗುತ್ತು ಮತ್ತು ಅಹಮದ್ ನಗರದ ಉದ್ಯಮಿ ಹಾಗೂ ಕುಂಬಳೆ ಮುಂಡಪಲ್ಲ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ. ಶೆಟ್ಟಿ ಕುತ್ತಿಕಾರ್ ಮುಖ್ಯ ಅತಿಥಿಗಳಾಗಿದ್ದರು. ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣ ಭಾಷಣ ಮಾಡಿದರು.
ರವಿಶಂಕರ ವಳಕುಂಜ ಸನ್ಮಾನ ಸ್ವೀಕರಿಸಿ ಮಾತನಾಡಿ ಬೊಂಡಾಲ ಮನೆತನದವರು ಯಕ್ಷಗಾನ ಹಾಗೂ ಕಲಾವಿದರಿಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್, ಬೊಂಡಾಲ ಕುಟುಂಬಸ್ಥರು ಮತ್ತು ಊರ ಪ್ರಮುಖರು ಉಪಸ್ಥಿತರಿದ್ದರು. ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಬಯಲಾಟ ಸಮಿತಿ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿ ಪರಿಚಯಿಸಿದರು. ಗೌರವಾಧ್ಯಕ್ಷ ಬೊಂಡಾಲ ಸೀತಾರಾಮ ಶೆಟ್ಟಿ ವಂದಿಸಿದರು. ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ‘ಶ್ರೀ ದೇವಿ ಮಹಾತ್ಮೆ’ ಬಯಲಾಟ ಪ್ರದರ್ಶನವಾಯಿತು.