ಬೆಂಗಳೂರು : ಬುಕ್ ಬ್ರಹ್ಮ ಸಂಸ್ಥೆಯ ವತಿಯಿಂದ ದಿನಾಂಕ 08ರಿಂದ 10 ಆಗಸ್ಟ್ 2025 ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಪ್ರಸ್ತುತಪಡಿಸಿದ ʻಬುಕ್ ಬ್ರಹ್ಮ ಸಾಹಿತ್ಯ ಉತ್ಸವ-2025ʼರ ಕೊನೇಯ ದಿನದ ಕಾರ್ಯಕ್ರಮಗಳು ದಿನಾಂಕ 10 ಆಗಸ್ಟ್ 2025 ಭಾನುವಾರದಂದು ಕೋರಮಂಗಲದ ಸೇಂಟ್ ಜಾನ್ಸ್ ಆಡಿಟೋರಿಯಂನಲ್ಲಿ ನಡೆದಿದ್ದು, ವಿವಿಧ ವಿಚಾರ ಗೋಷ್ಠಿಗಳು, ಸಾಹಿತ್ಯಿಕ ಕಾರ್ಯಕ್ರಮಗಳ ಕೂಡುವಿಕೆಯೊಂದಿಗೆ ಸಾಹಿತ್ಯ ದಿಗ್ಗಜರು, ಸಾಹಿತ್ಯ ಪ್ರಿಯರ ಉಪಸ್ಥಿತಿಯಲ್ಲಿ ಸಂಭ್ರಮದಿಂದ ಜರುಗಿತು.
ಖ್ಯಾತ ಕರ್ನಾಟಕ ಹಿಂದೂಸ್ತಾನಿ ಗಾಯಕ ಪಿಟಿ ಗಣಪತಿ ಭಟ್ ಹಾಸನಗಿ ಅವರ ʻಮಾರ್ನಿಂಗ್ ಮೆಲೋಡಿʼಯೊಂದಿಗೆ ಉತ್ಸವದ ಮುಖ್ಯ ವೇದಿಕೆ ಮಂಟಪ ಸಭಾಂಗಣದಲ್ಲಿ ಮೂರನೇಯ ದಿನದ ಕಾರ್ಯಕ್ರಮವು ಆರಂಭವಾಯಿತು. ನಂತರದಲ್ಲಿ ಪೆರುಮಲ್ ಮುರುಗನ್ ಅವರೊಂದಿಗೆ ಟಿ.ಎಂ. ಕೃಷ್ಣ, ಪ್ರಶಾಂತ್ ಪ್ರಕಾಶ್, ಪ್ರತಿಭಾ ನಂದಕುಮಾರ್ ಇವರೊಂದಿಗೆ ಸುರೇಶ್ ನರಸಿಂಹ, ಶಾಜಿ ಚೇನ್, ಪ್ರಕಾಶ್ ಬರೆ, ವಿ.ಬಿ ತಾರಕೇಶ್ವರ್, ಎಂ.ಕೆ. ರಾಘವೇಂದ್ರ, ವಿಜಯ ಲಕ್ಷ್ಮಿ, ಪೂರ್ಣಿಮಾ ಮಾಳಗಿಮನಿ, ಕ್ಯಾ. ಸಜಿತ ನಾಯರ್, ಪಿ.ಎಂ ನಾರಾಯಣ್, ಹರೀಶ್ ಭಟ್ ಇವರೊಂದಿಗೆ ಸಂಜಯ್ ಕೊಪ್ಪಿಕರ್, ದೀಪಾ ಭಸ್ತಿ, ಶ್ರೀನಾಥ್ ಪೆರೂರ್, ವನಮಾಲ ವಿಶ್ವನಾಥ್, ಅನಿಲ್ ಕುಮಾರ್, ಚಂದ್ರಶೇಖರ ಕಂಬಾರ, ಮಧು ವೀರರಂಗವನ್, ದಾಮೋದರ್ ಮೌಜೊ ಅವರೊಂದಿಗೆ ಸಂವಾದಗಳು ನಡೆದವು.
ಅಂಗಳ ವೇದಿಕೆಯಲ್ಲಿ ಹಿರಿಯ ಕುಂ. ವೀರಭದ್ರಪ್ಪ ಹಾಗೂ ಪ್ರವರ ಕೊಟ್ಟೂರು ಅವರ ʻಮನದ ಮಾತು: ತಂದೆ ಮಗನ ಜುಗಲ್ ಬಂದಿʼಯೊಂದಿಗೆ ಮೊದಲ ಗೋಷ್ಠಿ ಆರಂಭವಾಯಿತು. ಈ ಸಂದರ್ಭದಲ್ಲಿ ಕುಂ. ವೀರಭದ್ರಪ್ಪ ಮಾತನಾಡುತ್ತಾ, “ಸಾಹಿತ್ಯ ಎನ್ನುವಂತಹದ್ದು ಶಿಸ್ತು ಬದ್ಧ, ಶ್ರೀಮಂತ ವ್ಯಕ್ತಿಗಳಿಗೆ ಹುಟ್ಟಲು ಸಾಧ್ಯವಿಲ್ಲ. ಬದಲಾಗಿ ಎಲ್ಲಿ ಬಡತನದ, ಹಸಿವಿನ ಅಸಹಾಯಕತೆಯ ಕ್ರೌರ್ಯವಿರುತ್ತದೋ ಅಲ್ಲಿ ಸಾಹಿತ್ಯ ಉದಯಿಸಲು ಸಾಧ್ಯ. ನನ್ನಲ್ಲಿ ಬರವಣಿಗೆ ಹುಟ್ಟಿಕೊಂಡಿದ್ದು ಕೂಡ ಹೀಗೆಯೇ. ನನ್ನ ಸಾಹಿತ್ಯ ಬೆಳವಣಿಗೆಗೆ ಪರಿಸರ, ಆ ಗ್ರಾಮೀಣ ಪ್ರದೇಶದ ನೋವು-ನಲಿವುಗಳು ಮುಖ್ಯ ಕಾರಣವಾಗಿದೆ. ಅದರೊಂದಿಗೆ ನಾನು ರಾಮಮನೋಹರ ಲೋಹಿಯ ಅವರಿಂದ ಪ್ರಭಾವಿತನಾಗಿದ್ದು, ಅದನ್ನು ಕೂಡ ನೀವು ನನ್ನ ಸಾಹಿತ್ಯದಲ್ಲಿ ಕಾಣಬಹುದು” ಎಂದು ಹೇಳಿದರು.
“ಹಿರಿಯ ಬರಹಗಾರರ ಬರಹಗಳೇ ಹೊಸ ಬರಹಗಾರರಿಗೆ ಮಾದರಿ. ಅವರ ಸಾಹಿತ್ಯವನ್ನು ಓದಿದಾಗಲೇ ನಮ್ಮಲ್ಲಿ ಆತ್ಮವಿಶ್ವಾಸ ಹುಟ್ಟುತ್ತದೆ. ಹೀಗಾಗಿ ಯಾವುದೇ ಒಬ್ಬ ಬರಹಗಾರ ಒಬ್ಬ ಉತ್ತಮ ಸಾಹಿತಿಯಾಗುವ ಮೊದಲು ಒಬ್ಬ ಅತ್ಯುತ್ತಮ ಓದುಗನಾಗಬೇಕು. ನನ್ನ ಹಲವು ಬರವಣಿಗೆಯಲ್ಲಿ ಹೆಣ್ಣಿನ ನೋವು-ನಲಿವುಗಳನ್ನು ಚಿತ್ರಿಸಿದ್ದೇನೆ. ಕಾರಣ ಹೆಣ್ತನ ಗೊತ್ತಿರುವವರು ಮಾತ್ರ ಮಹಿಳಾ ಸಾಹಿತ್ಯ ರಚಿಸಲು ಸಾಧ್ಯ. ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಅಲ್ಲಿನ ಹೆಣ್ಣುಮಕ್ಕಳ ನೋವಿನ ಬಗ್ಗೆ ನನಗರಿವಿತ್ತು. ಸಾಹಿತ್ಯದ ಮುಖ್ಯ ಉದ್ದೇಶವೇ ದಮನಿತರ ಧ್ವನಿಯಾಗುವುದು. ಹಾಗಾಗಿ ಹೆಣ್ತನದ ಕುರಿತು ಒಂದಷ್ಟು ಬರವಣಿಗೆಯನ್ನು ನಾನು ಮಾಡಲು ಸಾಧ್ಯವಾಯಿತು.” ಎಂದು ಹೇಳಿದರು.
ನಂತರದಲ್ಲಿ ಇದೇ ವೇದಿಕೆಯಲ್ಲಿ ʻಕನ್ನಡದ್ದೇ ಚಿಂತನ ಕ್ರಮ ಇದೆಯೇʼ? ಗೋಷ್ಠಿ ನಡೆದಿದ್ದು, ಎಲ್. ಹನುಮಂತಯ್ಯ, ವಿ.ಬಿ. ತಾರಕೇಶ್ವರ್, ಕಮಲಾಕರ್ ಭಟ್, ಎನ್.ಎಸ್. ಗುಂಡೂರ್ ಇವರು ಈ ಗೋಷ್ಠಿಯಲ್ಲಿ ಭಾಗವಹಿಸಿದ್ದರು. ಗೋಷ್ಠಿಯ ಕುರಿತು ವಿ.ಬಿ. ತಾರಕೇಶ್ವರ್ ಇವರು ಮಾತನಾಡಿ, “ಭಾಷೆಯ ಆಧಾರದ ಮೇಲೆಯೇ ನಮ್ಮ ಸಂಸ್ಕೃತಿ ರೂಪುಗೊಂಡಿರುವುದು. ಎಲ್ಲಾ ಭಾರತೀಯ ಭಾಷೆಗಳಿಗೆ ತನ್ನದೇ ಆದ ಚಿಂತನ ಕ್ರಮವಿದೆ. ಚಿಂತನ ಕ್ರಮವನ್ನು ಭಾಷೆಯ ಆಧಾರದ ಮೇಲೆ ವಿಂಗಡಿಸುತ್ತೇವೆ. ಕಾಲದಿಂದ ಕಾಲಕ್ಕೆ ಕನ್ನಡ ಚಿಂತನ ಕ್ರಮ ಬದಲಾಗುತ್ತಿದೆ. ಯಾಕೆಂದರೆ ಕನ್ನಡ ಭಾಷೆ ನಿಂತ ನೀರಲ್ಲ. ಇದು ಸದಾ ಹರಿಯುತ್ತಿರುತ್ತದೆ. ಕನ್ನಡ ಭಾಷೆ ತನ್ನ ಆಯಾಮಕ್ಕೆ ತಕ್ಕಂತೆ ಬದಲಾಗುವುದರ ಜೊತೆಗೆ, ಹಲವು ಭಾಷೆಯ ಸಂಸ್ಕೃತಿ ಪರಿಕರಗಳನ್ನು ಅನುಸರಿಸುತ್ತದೆ. ಪ್ರಜಾ ಪ್ರಭುತ್ವದ ಪರಿಕಲ್ಪನೆ ಭಾರತದ ಎಲ್ಲಾ ಭಾಷೆಗಳಿಗೆ ಬಂತು. ಆದರೆ ನಾವು ಇಲ್ಲಿ ಬಳಸಿರುವ ಪರಿಕಲ್ಪನೆಗಳು ಬೇರೆ ಬೇರೆ ಆಯಾಮಗಳಿಂದ ಕೂಡಿದೆ. ಯಾವುದೇ ಒಂದು ಚಿಂತನೆಯನ್ನು ಇದು ಕನ್ನಡಕ್ಕೆ ಮಾತ್ರ ಸೀಮಿತವಾದ ಚಿಂತನೆ ಅಂತ ನಿರ್ಧಾರ ಮಾಡಲು ಸಾಧ್ಯವಿಲ್ಲ,” ಎಂದು ತಿಳಿಸಿದರು.
ಮುಂದುವರಿದಂತೆ ಈ ವೇದಿಕೆಯು ವಸುಧೇಂದ್ರ, ಚಾಂದಿನಿ, ದಾದಾಪೀರ್ ಜೈಮನ್, ಭರತ್ ಸಾವಿತ್ರಿ ದಿವಾಕರ್ ಅವರ ʻಕನ್ನಡದ ಕ್ವಿಆರ್ ಬರವಣಿಗೆಯ ಸ್ವರೂಪʼ, ಅಮರೇಶ್ ಗಿಣಿವಾರ, ಕಪಿಲಾ ಹುಮನಾಬಾದೆ, ಚಾಂದ್ ಕವಿಚಂದ್ರ, ಅಜಯ್ ವರ್ಮಾ ಅಲ್ಲೂರಿ ಅವರ ʻಈಶಾನ್ಯ ಸೀಮೆಯ ಹೊಸ ಫಸಲುʼ, ಯೋಗರಾಜ ಭಟ್, ಕೀರ್ತಿ ನಾರಾಯಣ್, ಕಾವ್ಯ ಷ, ಜೋಗಿ ಅವರ ʻರೀಲ್ಸ್ ಅಂಡ್ ರೀಲ್ಸ್: ಬದಲಾದ ಮನರಂಜನೆಯ ಪರಿಭಾಷೆʼ, ಶಿವರಾಮ್ ಅರುಣಿ, ವಿಜಯ್ ತಂಬಂದ, ಅಶೋಕ್ ಶೆಟ್ಟರ್, ರಾಜೇಶ್ ಹಂಗು ಅವರ ʻಬದಲಾಗುತ್ತಿರುವ ಚರಿತ್ರೆಯ ಪುಟಗಳುʼ ಗೋಷ್ಠಿಗಳಿಗೆ ಸಾಕ್ಷಿಯಾದವು. ಈ ಸಂದರ್ಭದಲ್ಲಿ ಓದುಗರೊಂದಿಗೆ ಚರ್ಚೆಗಳು ಕೂಡ ನಡೆದವು.
ಉತ್ಸವದ ಮುಖ್ಯ ಆಕರ್ಷಣೆ ಮುಖಾ-ಮುಖಿ ಗೋಷ್ಠಿಯಲ್ಲಿ ಸಾಹಿತಿ ದಿಗ್ಗಜರಾದ ಬಾನು ಮುಷ್ತಾಕ್, ದಾಮೋದರ ಮೌಜೊ, ಎನ್.ಎಸ್ ಮಾಧವನ್, ಕೆ.ಆರ್ ಮೀರಾ, ಲಕ್ಷ್ಮಣ್ ಗ್ವಾಯಕವಾಡ್, ನೇಮಿಚಂದ್ರ, ಪೆರುಮಲ್ ಮುರುಗನ್, ಮಕರಂದ್ ಸಾತೆ, ವಸುಧೇಂದ್ರ, ಶರಣಕುಮಾರ್ ಲಿಂಬಾಲೆ, ಜೋಗಿ ಹಾಗೂ ಕೊಳಕಾಲೂರಿ ಯೆಂವ್ಕ್ ಅವರೊಂದಿಗೆ ಸಾಹಿತ್ಯಾಸಕ್ತರ ಮಾತು ಕತೆ ಹಾಗೂ ಚರ್ಚೆ ನಡೆಯಿತು. ಅನಾವರಣ ವೇದಿಕೆಯು Penguin- whatʼs your priçe mr shivaswamy? ಎಂ.ಆರ್ ದತ್ತಾತ್ರಿ, ಛಾಯ ಪಬ್ಲಿಕೇಷನ್ಸ್ ನ ಅನಿಲ್ ಎಸ್ ಕುಮಾರ್ ಮತ್ತು ಎ. ಭಾಸ್ಕರ್ ಅವರು ಅನುವಾದಿಸಿರುವ ʻThella Yenugu jeymohanʼ, Kalachuvadu publications – kavitai maamaruntu – perumal murugan, ಮನೋಹರ ಗ್ರಂಥಮಾಲಾ ಪ್ರಕಾಶನದ ಕುರ್ತಕೋಟಿ ಅವರ ʻವಾಗರ್ಥʼ, ಪೆಂಗ್ವಿನ್ ಪ್ರಕಾಶನದ ʻBride in the Hillś, ಬಂಡಾರ ಪ್ರಕಾಶನದ ʻಸುಂಕವಿಲ್ಲದ ದಾವತಿʼ. ಹರಿವು ಬುಕ್ಸ್ ಪ್ರಕಾಶನದ ʻಆಪರೇಷನ್ ಶಿಶಿರ ಋತುʼ, ಭಾರತಿ ಪ್ರಕಾಶನದ ರವಿ ಬಳೆ ಅವರ ಅನುವಾದಿತ ʻಚಂದಿರನಿಲ್ಲ ಇರುಳುಗಳುʼ, ನವಕರ್ನಾಟಕ ಪ್ರಕಾಶನದಿಂದ ಪ್ರಕಟಿಸಿದ ʻಬುದ್ಧಯಾನʼ ಕೃತಿಗಳ ಲೋಕಾರ್ಪಣೆಗೆ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ಲೇಖಕ ಮತ್ತು ಉಪಸ್ಥಿತರಿದ್ದ ಅತಿಥಿಗಳು ಹಾಗೂ ಓದುಗರ ನಡುವೆ ಚರ್ಚೆಗಳು ಜೋರಾಗಿತ್ತು.
ಪುಸ್ತಕ, ಮಥನ, ಅಕ್ಷರ ವೇದಿಕೆಗಳಲ್ಲೂ ತೆಲುಗು, ತಮಿಳು, ಮಲಯಾಳಂ ಸಾಹಿತ್ಯ ದಿಗ್ಗಜರ ಹಲವು ಗೋಷ್ಠಿಗಳಿದ್ದವು. ʻಚಿನ್ನರ ಲೋಕʼ ಸಭಾಂಗಣವು ಮಕ್ಕಳ ಕಲರವ ಹಾಗೂ ಮಕ್ಕಳ ಸಾಹಿತ್ಯದೊಂದಿಗೆ ತುಂಬಿದ್ದು, ಪಿಕಾ ನಾನಿ ಯೊಂದಿಗೆ ʻಮೋಜಿನ ರಸಪ್ರಶ್ನೆʼ, ʻಕಥೆ ಕೇಳು ಕಂದ: ಲಾವಣ್ಯ ಪ್ರಸಾದ್ ಹೇಳುವ ತಮಿಳು ಕಥೆಗಳುʼ, ʻಭರತನಾಟ್ಯ ʻಮುದ್ರೆʼ: ಒಂದು ಕಾರ್ಯಾಗಾರ, ʻಚಿತ್ರಗಳಲ್ಲಿ ದಿನಚರಿ: ಶೈಲಜಾ ಎಸ್, ಸಂಜೆಯ ಮನರಂಜನೆ : ʻತಾಯ್ನುಡಿʼ ಕೃತಿಕಾ ಶ್ರೀನಿವಾಸನ್ ತಂಡದಿಂದ ನಡೆದವು. ಬಿ. ಸ್ಟುಡಿಯೋ ಪ್ರಸ್ತುತಪಡಿಸಿದ ರಾಮೇಶ್ವರಂ ಕಾಕುಲ, ಬೆಂಗಳೂರು ಕಥಕ್ಕಳಿ ಕ್ಲಬ್ ಮತ್ತು ಕಲಾ ಸಂಸ್ಥೆ ಪ್ರಸ್ತುತಪಡಿಸಿದ ʻಕಥಕ್ಕಳಿʼ ಸಾಂಸ್ಕೃತಿಕ ಕಾರ್ಯಕ್ರಮವು ನೋಡುಗರನ್ನು ಮನಸೂರೆಗೊಳಿಸಿತು.