ಮಂಗಳೂರಿನವರಾದ ಮೀನಾ ಹರೀಶ್ ಕೋಟ್ಯಾನ್ ಅವರ ‘ನಿನ್ನೊಲುಮೆ ನನಗಿರಲಿ’ ಎಂಬ ಕಾದಂಬರಿಯು ಪ್ರೀತಿ ಪ್ರೇಮಗಳಿಗೆ ಬರೆದ ಭಾಷ್ಯವೆಂಬಂತೆ ಹೊರನೋಟಕ್ಕೆ ಕಂಡು ಬಂದರೂ ಕತೆಯ ಒಡಲಲ್ಲಿ ಭಾವನಾತ್ಮಕವಾಗಿ ಚಲಿಸುವ ಪಾತ್ರಗಳು ಈ ಕೃತಿಯನ್ನು ಪರಿಪೂರ್ಣ ನೆಲೆಯತ್ತ ಕೊಂಡೊಯ್ಯುತ್ತವೆ. ಬದುಕಿನ ವಿವಿಧ ಮಜಲುಗಳಲ್ಲಿ ಏರ್ಪಡುವ ಸಂಬಂಧಗಳು ಮುಖ್ಯವಾಗುತ್ತವೆ. ಈ ಮೂಲಕ ಕಾದಂಬರಿಯು ಸಾಮಾಜಿಕ ಕೌಟುಂಬಿಕ ವಿಚಾರಗಳನ್ನು ಪ್ರತಿಬಿಂಬಿಸುವತ್ತ ಗಮನ ಹರಿಸುತ್ತದೆ.
ಅನುರಾಗದೆಡೆಗೆ ತುಡಿಯುವ ಹೃದಯ, ಹರೆಯದ ಬಯಕೆಗೆ ತಾನೂ ಹೊರತಲ್ಲ ಎಂಬುದನ್ನು ಪ್ರತಿನಿಧಿಸುವ ಪಾವನಿಯನ್ನು ನಾಯಕಿಯನ್ನಾಗಿರಿಸಿಕೊಂಡ ಕಾದಂಬರಿಯು ಪ್ರೀತಿ, ಪ್ರೇಮ ಪ್ರಣಯಗಳಲ್ಲಿ ಮಾತ್ರ ತಲ್ಲೀನವಾಗದೆ, ಕೌಟುಂಬಿಕ ವ್ಯವಸ್ಥೆಯಲ್ಲಿ ಸಡಿಲಗೊಳ್ಳುವ ನಂಟುಗಳನ್ನು ಹೊಸೆಯುವ ಮೂಲಕ ಬದುಕಿನಲ್ಲಿ ಸಾರ್ಥಕ್ಯವನ್ನು ಗಳಿಸುವ ಜವಾಬ್ದಾರಿಯುತ ನೆಲೆಯನ್ನು ತಲುಪುತ್ತದೆ. ಪ್ರಸನ್ನ ಮತ್ತು ಜಯಂತಿ ದಂಪತಿಗಳ ಮುದ್ದಿನ ಮಗಳು ಪಾವನಿಯ ಕಡೆಗೆ ಮಮತೆಯನ್ನು ತೋರುವ ಹಿರಿಯಣ್ಣ ಪ್ರಭಾಸ್, ತರಲೆ ತುಂಟಾಟಗಳಿಂದ ಗೋಳು ಹೊಯ್ಯುವ ಅಂಕಿತ್, ಇವರ ನಡುವೆ ಮೊಂಡುತನ, ಸಿಡುಕುತನದ ಪ್ರತಿರೂಪವಾಗಿರುವ ವಿಕ್ರಾಂತನ ಅಸಹನೀಯ ವರ್ತನೆಗಳಿಂದ ಕುಗ್ಗಿಹೋದರೂ ಜೀವನದ ಕೊನೆಯಲ್ಲಾದರೂ ಅವನ ಅಕ್ಕರೆಯನ್ನು ಪಡೆಯಬೇಕು ಎಂದು ಹವಣಿಸುವ ಪಾವನಿಯ ಮಾನಸಿಕ ತುಮುಲಗಳು ಮತ್ತು ಅದಕ್ಕೆ ಸಂಬಂಧಿಸಿದ ಘಟನಾವಳಿಗಳು ಕತೆಯ ಹಂದರವನ್ನು ನೇಯುತ್ತವೆ.
ಅನಿರೀಕ್ಷಿತವಾಗಿ ಏರ್ಪಡುವ ಕುಶಾಲನ ಭೇಟಿ ಪಾವನಿಯ ಜೀವನದ ತಿರುವಿಗೆ ಕಾರಣವಾಗುತ್ತದೆ. ಕುಶಾಲನ ಪ್ರೇಮ ಆಕೆಯ ಹೃದಯವನ್ನು ತುಂಬುತ್ತಿದ್ದರೂ ಎದೆಯಲ್ಲಿ ಬೆಳಗುತ್ತಿರುವ ಮನೆಯವರ ಕಾಳಜಿ, ಹರಿದು ಬರುತ್ತಿರುವ ಅಕ್ಕರೆಯ ಸವಿಯನ್ನು ಕಳೆದುಕೊಳ್ಳಲು ಇಷ್ಟಪಡದ ಪಾವನಿ ದ್ವಂದ್ವಕ್ಕೆ ಸಿಲುಕಿದಾಗ ಹುಟ್ಟುವ ವೈಮನಸ್ಸು-ವಿರಸಗಳನ್ನು ಪಕ್ಕಕ್ಕೆ ಸರಿಸುವಲ್ಲಿ ಆಕೆ ಸಫಲಳಾಗುವಳೇ ಎಂಬ ಪ್ರಶ್ನೆಯನ್ನು ಓದುಗರ ಮನದಲ್ಲೆಬ್ಬಿಸಿ ಕುತೂಹಲಕಾರಿ ಜಾಡಿನಲ್ಲಿ ಕಾದಂಬರಿಯನ್ನು ಮುಂದುವರಿಸಿದ ಬಗೆಯು ಲೇಖಕಿಯ ನಿರೂಪಣಾ ಕೌಶಲ್ಯಕ್ಕೆ ಸಾಕ್ಷಿಯಾಗಿದೆ.
ವಾತ್ಸಲ್ಯಕ್ಕೆ ಹಿಡಿದ ಕೈಗನ್ನಡಿಯಂತೆ ವ್ಯವಹರಿಸುವ ಪ್ರಭಾಸ್ ಮತ್ತು ಅಂಕಿತ್ ಇವರ ನಡುವೆ ಕೋಪದ ಬೆಂಕಿಯಲ್ಲಿ ಉರಿಯುವ ವಿಕ್ರಾಂತ ಮುಗ್ಧೆಯಾದ ಪಾವನಿಯ ಪಾಲಿಗೆ ಯಕ್ಷಪ್ರಶ್ನೆಯಂತೆ ಕಾಡುವ ಪರಿ, ಕತೆಯನ್ನು ಭಾವನಾತ್ಮಕ ನೆಲೆಯಲ್ಲಿ ಕೊಂಡೊಯ್ಯುವುದರೊಂದಿಗೆ ಇದೇಕೆ ಹೀಗೆ ಎಂಬ ಪ್ರಶ್ನೆಗೆ ಉತ್ತರ ಸಿಗದೆ ಆಕೆ ಕಂಗೆಡುತ್ತಿದ್ದಂತೆ ದಿವ್ಯಾಳ ಪಾತ್ರವು ಭರವಸೆಯ ಬೆಳಕಾಗಿ ಗೋಚರಿಸುತ್ತದೆ. ಎಲ್ಲರಂತೆ ಬದುಕು ಕಟ್ಟಿಕೊಳ್ಳಲಾಗದ ದಿವ್ಯಾಳ ಪಾಲಿಗೆ ನೋವು ಕಟ್ಟಿಟ್ಟ ಬುತ್ತಿಯಾಗಿದ್ದರೂ ಆಕೆಯ ದಿಟ್ಟತನ ಪಾವನಿಯ ಬದುಕಿಗೆ ಸ್ಫೂರ್ತಿಯನ್ನು ನೀಡುತ್ತದೆ. ಮೌನಕ್ಕೆ ಮಾತಿನ ರೂಪವನ್ನು ಕೊಡಲಾರದೆ, ಪರನಿಂದೆಗಳಿಗೆ ಕಿವಿಯಾಗಲಾರದೆ ಚಡಪಡಿಸುವ ದಿವ್ಯಾ ಪರಕೀಯಳಾದರೂ ಅವಳೆಡೆಗೆ ವಿಕ್ರಾಂತ್ ತೋರುವ ಸಹಾನುಭೂತಿ ಪಾವನಿಯ ಮನದಲ್ಲಿ ಗೊಂದಲಗಳನ್ನು ಎಬ್ಬಿಸುತ್ತದೆ. ತುಂಬು ಸಂಸಾರವಿದ್ದೂ ಅನ್ಯರಂತೆ ನಗರದಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿರುವ ವಿಕ್ರಾಂತ್, ಹೊಟ್ಟೆಪಾಡಿಗಾಗಿ ರಾತ್ರಿ ಪಾಳಿಯಲ್ಲೂ ದುಡಿಯುವ ಪ್ರಸನ್ನ ದಂಪತಿಗಳು ಒಂದೆಡೆಯಾದರೆ ಈ ಸ್ಥಿತಿಗೆ ಪ್ರತ್ಯಕ್ಷ ಅಥವಾ ಪರೋಕ್ಷ ಕಾರಣ ತಾನಾಗಿರಬಹುದೇ ಎಂಬ ಗೊಂದಲವನ್ನು ಮನಸ್ಸಿಗೆ ಹಚ್ಚಿಕೊಂಡು ರಹಸ್ಯದ ಜಾಡು ಹಿಡಿದು ಸಾಗುವ ಪಾವನಿ ಇನ್ನೊಂದೆಡೆ. ಪಾವನಿಯು ಅನಾಥಳಾಗಿದ್ದು ಪ್ರಸನ್ನ ದಂಪತಿಗಳು ಮಗಳಂತೆ ಸಾಕುತ್ತಿದ್ದಾರೆ ಎಂಬ ಕಟುಸತ್ಯವನ್ನು ಬಿಟ್ಟುಕೊಡಬಾರದೆಂಬ ಕುಟುಂಬಸ್ಥರ ತೀರ್ಮಾನದ ವಿರುದ್ಧ ಸಿಡಿದೇಳುವ ವಿಕ್ರಾಂತ್ ತಾನು ವ್ಯವಹರಿಸುವ ಬಗೆಯಿಂದ ಪಾವನಿಯ ಬದುಕು ದಿಕ್ಕೆಟ್ಟರೂ ಪರವಾಗಿಲ್ಲ ಎಂದುಕೊಳ್ಳುತ್ತಾನೆ. ದಿವ್ಯಾಳ ಪ್ರೀತಿಗೆ ಪಾತ್ರಳಾಗುವ ಪಾವನಿ ವಿಕ್ರಾಂತನ ಕೋಪದಿಂದ ತಾತ್ಕಾಲಿಕವಾಗಿ ಹೊರಗುಳಿದರೂ ಆಗಾಗ ಅವನ ಕೋಪಕ್ಕೆ ಬಲಿಯಾಗುವುದರಿಂದ ಹೊಯ್ದಾಡುವ ಮನಸ್ಸನ್ನು ನಿಯಂತ್ರಣಕ್ಕೆ ತರಲಾರದೆ ಒದ್ದಾಡುತ್ತಾಳೆ. ವಿಕ್ರಾಂತ್ ನೆಲೆಸಿದ ಪಟ್ಟಣಕ್ಕೆ ಕುಟುಂಬಸ್ಥರ ಭೇಟಿ, ವಿದ್ಯುತ್ ಆಘಾತಕ್ಕೆ ಬಲಿಯಾದ ವಿಕ್ರಾಂತನನ್ನು ಪಾರು ಮಾಡುವ ಪಾವನಿಯ ನಿಸ್ವಾರ್ಥ ಮನೋಭಾವ ಪಾವನಿಯ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತದೆ. ತಾನು ನೋವನ್ನೇ ನೀಡಿದ್ದರೂ ಆಕೆಯು ಆ ಬಗ್ಗೆ ಯೋಚಿಸದೆ ತನ್ನನ್ನು ಕಾಪಾಡಿದ್ದನ್ನು ಮನಗಂಡ ವಿಕ್ರಾಂತನು ಪಶ್ಚಾತ್ತಾಪದಿಂದ ಕೊರಗುತ್ತಾನೆ. ಈ ನಡುವೆ ಪ್ರಸನ್ನ ಮತ್ತು ಕುಶಾಲನ ತಂದೆಯ ನಡುವೆ ಹುಟ್ಟಿದ ವೈಷಮ್ಯ ಪಾವನಿಯ ಪ್ರೇಮವನ್ನು ಭಗ್ನಗೊಳಿಸುತ್ತದೆ. ಮನೆಯವರ ಭರವಸೆಯನ್ನು ಹುಸಿಗೊಳಿಸಲು ಒಲ್ಲದ ಆಕೆಯು ತನ್ನ ಪ್ರೇಮವನ್ನು ಕೊನೆಗೊಳಿಸಲು ಮುಂದಾದರೂ ವೈರಾಗ್ಯ ಮತ್ತು ಮನಸ್ಸಿನ ಕಹಿ ಅವಳ ಕನಸುಗಳನ್ನು ಕಮರಿಸದೆ ಇರಲಾರದು.
ಕೃತಿಯಲ್ಲಿ ಕಾಣಸಿಗುವ ಸುಭಾಷಿಣಿ, ಕುಸುಮಾ, ಶೈಲಿ, ಸುನಂದ ಮುಂತಾದ ಪಾತ್ರಗಳು ಪಾವನಿಯ ಮಾನಸಿಕ ತುಮುಲ, ಗೊಂದಲಗಳ ಸಿಕ್ಕುಗಳನ್ನು ಬಿಡಿಸವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಪಾವನಿ ಮತ್ತು ಕುಶಾಲನ ಪ್ರೇಮದ ಬಗ್ಗೆ ತಂದೆಯ ಆಕ್ಷೇಪ ಪಾವನಿಯ ಹೃದಯಕ್ಕೆ ನೋವನ್ನುಂಟು ಮಾಡಿದರೂ, ಕುಶಾಲನ ವಿವಾಹದ ವಿಚಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ವಿಫಲಳಾದರೂ ಆಕೆ ಸಂಪ್ರದಾಯಬದ್ಧ ಯುವತಿಯಾಗಿ ಕಾಣಿಸಿಕೊಳ್ಳುವುದು ಪಾತ್ರದ ವಿಶೇಷತೆಯಾಗಿದೆ. ವೈವಾಹಿಕ ಬದುಕಿಗೆ ಸಂಬಂಧಿಸಿದಂತೆ ತಂದೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಸಮ್ಮತಿಸುವ ಪಾವನಿಯಲ್ಲಿ ಅಳಲು ಕಾಣಿಸಿಕೊಳ್ಳದಿದ್ದರೂ ಏಕಮುಖೀ ಭಾವವನ್ನು ಗ್ರಹಿಸಿಕೊಳ್ಳುವಲ್ಲಿ ಸಫಲನಾದ ವಿಕ್ರಾಂತ್ ಮೊದಲ ಬಾರಿಗೆ ಪಾವನಿಯ ಪಾಲಿಗೆ ಅಣ್ಣನೆನಿಸಿಕೊಳ್ಳಲು ಮನಸ್ಸು ಮಾಡುತ್ತಾನೆ. ತನ್ನ ಅಸ್ತಿತ್ವದ ಕುರಿತು ಪರಿವೆಯಿಲ್ಲದ ಪಾವನಿಯ ದುಃಖತಪ್ತ ಬದುಕಿಗೆ ಸಂತಸದ ಮಳೆಗೆರೆಯುವಲ್ಲಿ ವಿಕ್ರಾಂತ್ ಬಳಸಿಕೊಳ್ಳುವ ಪಥವನ್ನು ವಿಶ್ಲೇಷಿಸುವಲ್ಲಿ ಲೇಖಕಿಯ ಕೈಚಳಕ ಪ್ರಶಂಸನೀಯ. ಪಾವನಿಯ ಬಗೆಗಿನ ರಹಸ್ಯವನ್ನು ಕಾಪಿಡುವ ಉದ್ದೇಶ ಕಾದಂಬರಿಯ ಆರಂಭದಿಂದ ನಾಜೂಕಾಗಿ ಬಿಂಬಿತವಾಗಿದೆ. ಪಾವನಿಯ ಜನ್ಮರಹಸ್ಯವನ್ನು ತಿಳಿಸಿ ಆಕೆಯ ಬದುಕನ್ನು ದುರ್ಬಲಗೊಳಿಸುವ ಇರಾದೆಯನ್ನು ಹೊಂದಿದ್ದ ವಿಕ್ರಾಂತನು ಅದೇ ಸತ್ಯವನ್ನು ಬಳಸಿ ಆಕೆಯ ಬದುಕಿಗೆ ಸಾರ್ಥಕತೆಯನ್ನು ತಂದುಕೊಟ್ಟು ಜವಾಬ್ದಾರಿಯುತ ಅಣ್ಣನಾಗಿ ಕಾಣಿಸಿಕೊಳ್ಳುವ ಸನ್ನಿವೇಶವು ಕಾದಂಬರಿಯ ಸುಖಾಂತ್ಯಕ್ಕೆ ಪೂರಕವಾಗಿ ಬಂದಿದೆ.
ಆಧುನಿಕತೆಯೆಡೆಗಿನ ಧಾವಂತದಲ್ಲಿ ಕಳೆದು ಹೋಗುತ್ತಿರುವ ಕೌಟುಂಬಿಕ ವ್ಯವಸ್ಥೆಯಲ್ಲಿ ಕಾಣಸಿಗುವ ಭಾವನಾತ್ಮಕ ಅಂಶಗಳನ್ನು ಬೆಸೆಯುವ ಉದ್ದೇಶವನ್ನು ಹೊಂದಿರುವ ಕಾದಂಬರಿಯು ಮಾನವೀಯ ಸಂಬಂಧಗಳು ಮತ್ತು ಉದಾತ್ತ ಭಾವನೆಗಳಿಗೆ ಯಾವುದೂ ಸಾಟಿಯಾಗಿಲ್ಲ ಎಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ.
ಪುಸ್ತಕದ ಹೆಸರು : ನಿನ್ನೊಲುಮೆ ನನಗಿರಲಿ
ಲೇಖಕರು : ಮೀನಾ ಹರೀಶ್ ಕೋಟ್ಯಾನ್
ವರ್ಷ : 2017
ಪ್ರಕಾಶಕರು : ಜಾಗೃತಿ ಪ್ರಿಂಟರ್ಸ್ ಬೆಂಗಳೂರು
ವಿಮರ್ಶಕರು : ನಯನ ಜಿ.ಎಸ್.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ವಾಸವಾಗಿದ್ದಾರೆ. ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲಿ, ಪಿ.ಯು.ಸಿ. ಶಿಕ್ಷಣವನ್ನು ಸರಕಾರಿ ಪದವಿ ಪರ್ವರ ಕಾಲೇಜು ಬೆಳ್ಳಾರೆ ಎಂಬಲ್ಲಿ ಪೂರೈಸಿರುತ್ತಾರೆ. ಇವರು ತಮ್ಮ ಬಿ.ಎ. ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಇಲ್ಲಿಂದ ಪಡೆದಿರುತ್ತಾರೆ. ಹವ್ಯಾಸಿ ಬರಹಗಾರ್ತಿಯಾಗಿರುವ ಇವರ ಅನೇಕ ಲೇಖನಗಳು, ಪ್ರವಾಸ ಕಥನಗಳು, ಕವನಗಳು, ಗಜಲ್ ಗಳು, ಲಲಿತ ಪ್ರಬಂಧಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ‘ಕುವೆಂಪು ಸಾಹಿತ್ಯ ಪ್ರತಿಷ್ಠಾನ (ರಿ) ಕುಪ್ಪಳ್ಳಿ ಇವರು ಆಯೋಜಿಸಿದ್ದ ‘ಕುವೆಂಪು ಅವರ ನಾಡು – ನುಡಿ ಚಿಂತನೆ’ ವಿಷಯದ ಬಗೆಗಿನ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. 2021-22ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ ಇವೆರಡರ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನೂ, 2022-23ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು ಇವರ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ ಇವರ ಕಥೆಗಳು ಮತ್ತು ಕವನಗಳು ಆಕಾಶವಾಣಿಯ ದನಿಯಲ್ಲಿ ಬಿತ್ತರಗೊಂಡಿದೆ.
ಲೇಖಕಿ ಮೀನಾ ಹರೀಶ್ ಕೋಟ್ಯಾನ್ :
ಮೂಲತಃ ಮಂಗಳೂರಿನವರಾದ ಮೀನಾ ಹರೀಶ್ ಕೋಟ್ಯಾನ್ ಇವರು ಜನ್ನಪೂಜಾರಿ ಮತ್ತು ಭವಾನಿ ದಂಪತಿಗಳ ಸುಪುತ್ರಿ. ಮೈಸೂರಿನಲ್ಲಿ ಶಿಕ್ಷಣ ಪೂರೈಸಿದ ಇವರು ಸುಮಾರು 34 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೇ ನಾಡಿನ ಹಲವು ಪತ್ರಿಕೆಗಳಲ್ಲಿ ಇವರ ಕಾದಂಬರಿಗಳು ಪ್ರಕಟಗೊಂಡು ಅಪಾರ ಜನಮನ್ನಣೆ ಪಡೆದಿವೆ.