ಧರ್ಮಸ್ಥಳ : ಗಿನ್ನೆಸ್ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶ್ರೀ ಕ್ಷೇತ್ರ ಧರ್ಮಸ್ಥಳ ಶಾಂತಿವನ ಟ್ರಸ್ಟ್ (ರಿ.) ಆಡಳಿತಕ್ಕೊಳಪಟ್ಟ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ 30ನೇ ವರ್ಷದ ‘ಜ್ಞಾನ ದರ್ಶಿನಿ’ ಮತ್ತು ‘ಜ್ಞಾನ ವರ್ಷಿಣಿ’ 2024ನೇ ಸಾಲಿನ ನೈತಿಕ ಮೌಲ್ಯಾಧರಿತ ಪುಸ್ತಕಗಳ ಲೋಕಾರ್ಪಣೆ ಹಾಗೂ 21ನೇ ವರ್ಷದ ರಾಜ್ಯಮಟ್ಟದ ಅಂಚೆ ಕುಂಚ ವಿಜೇತರಿಗೆ ಪುರಸ್ಕಾರ ಸಮಾರಂಭವು ದಿನಾಂಕ 10 ಆಗಸ್ಟ್ 2024ರಂದು ಬೆಳಗ್ಗೆ 10.30ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಜರುಗಲಿದೆ.
ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಹಾವೇರಿ ಶ್ರೀ ಹುಕ್ಕೇರಿಮಠದ ಪರಮ ಪೂಜ್ಯ ಶ್ರೀಮನ್ ನಿರಂಜನ ಪ್ರಣವಸ್ವರೂಪಿ ಸದಾಶಿವ ಮಹಾಸ್ವಾಮೀಜಿ ಕೃತಿಗಳನ್ನು ಬಿಡುಗಡೆಗೊಳಿಸುವರು. ಕನ್ನಡದ ಚಲನಚಿತ್ರ ಸಂಗೀತ ನಿರ್ದೇಶಕ, ಗಾಯಕ ಶ್ರೀ ಅರ್ಜುನ್ ಜನ್ಯ ಅಂಚೆ ಕುಂಚ ವಿಜೇತರನ್ನು ಪುರಸ್ಕರಿಸುವರು.
ಶಾಂತಿವನದ ಟ್ರಸ್ಟಿ ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಶ್ರೀ ವೆಂಕಟೇಶ ಸುಬ್ರಾಯ ಪಟಗಾರ ಅಭ್ಯಾಗತರಾಗಿ ಭಾಗವಹಿಸುವರು. ಮಂಗಳೂರಿನ ಸನಾತನ ನಾಟ್ಯಾಲಯ ತಂಡದಿಂದ ಗಾಯನ ಮತ್ತು ನೃತ್ಯ, ರಾಷ್ಟ್ರೀಯ ಕಲಾವಿದ ಶ್ರೀ ಶಾಂತಯ್ಯ ಪರಡಿಮಠ ಇವರಿಂದ ಕುಂಚ ಕಾರ್ಯಕ್ರಮ ನಡೆಯಲಿದೆ ಎಂದು ಶಾಂತಿವನ ಟ್ರಸ್ಟಿನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ ಹಾಗೂ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ. ಐ. ಶಶಿಕಾಂತ ಜೈನ್ ತಿಳಿಸಿದ್ದಾರೆ.

