ಮಡಿಕೇರಿ : ರೆಡ್ ಬ್ರಿಕ್ಸ್ ಇನ್‌ನ ಸತ್ಕಾರ್ ಸಭಾಂಗಣದಲ್ಲಿ ಆಯೋಜಿತ, ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ವಿರಚಿತ ವೈವಿಧ್ಯಮಯವಾದ 82 ಲೇಖನ ಗಳುಳ್ಳ 320 ಪುಟಗಳ ‘ಅಂತರಗಂಗೆ’ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 09-06-2024ರಂದು ನಡೆಯಿತು. ವೈಚಾರಿಕ ಬರಹಗಳು, ಮಹಿಳಾ ಪರವಾದ ಲೇಖನಗಳು, ಸಾಧಕರು ಹಾಗೂ ವಿಶೇಷ ದಿನಗಳನ್ನು ಕುರಿತ ಲೇಖನಗಳಿರುವ ಈ ಪುಸ್ತಕದ ಕುರಿತು ಎಲ್ಲರೂ ಮೆಚ್ಚುಗೆಯ ನುಡಿಗಳನ್ನಾಡಿದರು.
ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ “ಮಹಿಳಾ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2002ರಿಂದ ಕನ್ನಡ ಸಾಹಿತ್ಯ ಪರಿಷತ್ ಕೊಡಗಿನ ಗೌರಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿನಿಧಿಗೆ ಈವರೆಗೂ 21 ಲೇಖಕಿಯರು ಅರ್ಹರಾಗಿದ್ದಾರೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಕ್ಕಅಳುವಾರದಲ್ಲಿನ ಕನ್ನಡ ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮದ್ ಮಾತನಾಡಿ “ಸಾಮಾಜಿಕ ಹೊಣೆಗಾರಿಕೆ ಹೆಚ್ಚಿಸುವಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದಾಗಿದ್ದು, ಬಾಲ್ಯದಿಂದಲೇ ಮಕ್ಕಳಲ್ಲಿ ಉತ್ತಮ ಸಂಸ್ಕಾರ ರೂಪಿಸುವ ನಿಟ್ಟಿನಲ್ಲಿ ಒಳ್ಳೆಯ ಮಾಹಿತಿಯುಳ್ಳ ಕೃತಿಗಳು ತಮ್ಮದೇ ಕೊಡುಗೆ ನೀಡುತ್ತವೆ. ಬಾಲ್ಯದಿಂದಲೇ ಪುಸ್ತಕ ಓದುವ ಹವ್ಯಾಸ ಬೆಳೆಸುವುದರಿಂದ ಮಕ್ಕಳಲ್ಲಿ ಸೂಕ್ತ ಸಂಸ್ಕಾರ ಬೆಳೆಸುವಲ್ಲಿ ಶಿಕ್ಷಕ ವರ್ಗ ಮತ್ತು ಪೋಷಕರು ಗಮನ ನೀಡಬೇಕು” ಎಂದು ಹೇಳಿದರು.
ಪ್ರತಿಮಾ ಹರೀಶ್ ರೈ ಇವರ ಚೊಚ್ಚಲ ಕೃತಿ ‘ಅಂತರಗಂಗೆ ಕೃತಿಯನ್ನು ಲೋಕಾರ್ಪಣೆ ಮಾಡಿದ ಶನಿವಾರಸಂತೆಯ ಉಪನ್ಯಾಸಕಿ, ಸಾಹಿತಿ ಶ.ಗ. ನಯನತಾರಾ ಮಾತನಾಡಿ “ನಿತ್ಯದ ಜೀವನದಲ್ಲಿ ಅನುಭವಿಸುವಂಥ ವಿಚಾರಗಳೊಂದಿಗೆ ವೈಚಾರಿಕ ಚಿಂತನೆಗಳ ಬರಹಗಳು ‘ಅಂತರಗಂಗೆ’ ಕೃತಿಯಲ್ಲಿ ಇದ್ದು, ಎಲ್ಲಾ ವಯಸ್ಸಿನವರ ಓದಿಗೂ ಸೂಕ್ತವಾಗಿದೆ” ಎಂದು ಹೇಳಿದರು.
ಮಡಿಕೇರಿ ಅನಿಲ್ ಎಚ್.ಟಿ. ಮಾತನಾಡಿ “ಕೊಡಗು ಜಿಲ್ಲೆಯಲ್ಲಿ ಸಾಹಿತ್ಯಪರ ಒಲವಿನ ಗಾಳಿ ಬಲವಾಗಿ ಬೀಸುತ್ತಿದ್ದು, ಪ್ರತಿ 15 ದಿನಕ್ಕೊಮ್ಮೆ ಹೊಸ ಕೃತಿಗಳು ಲೋಕಾರ್ಪಣೆಯಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಲೇಖಕ, ಲೇಖಕಿಯರು ತಮ್ಮ ಕೃತಿ ಪ್ರಕಾಶನಕ್ಕೆ ಮುಂದಾಗುತ್ತಿದ್ದರೂ ಓದುಗರಿಗೆ ಕೃತಿಗಳನ್ನು ತಲುಪಿಸಲು ಸೂಕ್ತ ವ್ಯವಸ್ಥೆ ಇಲ್ಲದಾಗಿದೆ. ಸಂಘ ಸಂಸ್ಥೆಗಳು ಮೂರು ತಿಂಗಳಿಗೊಮ್ಮೆ ಜಿಲ್ಲೆಯ 5 ತಾಲೂಕಿನಲ್ಲಿ ಪುಸ್ತಕ ಸಂತೆ ಆಯೋಜಿಸುವ ಮೂಲಕ ಪುಸ್ತಕಗಳನ್ನು ಓದುಗರು, ಸಂಶೋಧಕರು, ಶಿಕ್ಷಕ ವೃಂದಕ್ಕೆ ತಲುಪಿಸುವ ಯೋಜನೆ ರೂಪಿಸುವಂತಾಗಬೇಕು” ಎಂದರು. ಮಡಿಕೇರಿ ಆಕಾಶವಾಣಿಯ ಉದ್ಘೋಷಕ ಸುಬ್ರಾಯ ಸಂಪಾಜೆ, ಕೊಡಗು ಬಂಟರ ಸಂಘದ ಅಧ್ಯಕ್ಷ ಜಗದೀಶ್ ರೈ, ಮಂಜೇಶ್ವರ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಅರವಿಂದಾಕ್ಷ ಭಂಡಾರಿ, ಶಕ್ತಿ ಪತ್ರಿಕೆಯ ಪ್ರದಾನ ಸಂಪಾದಕರಾದ ಜಿ. ರಾಜೇಂದ್ರ, ಲೇಖಕಿ ಪ್ರತಿಮಾ ಹರೀಶ್ ರೈ ಹಾಗೂ ಮತ್ತಿತತರು ಉಪಸ್ಥಿತರಿದ್ದರು.
ಶಿಕ್ಷಕಿ ಕಾವೇರಮ್ಮ ಸ್ವಾಗತಿಸಿ, ಸೋನಿ ರೈ ಅತಿಥಿ ಪರಿಚಯ ಮಾಡಿದರು. ಸೌಮ್ಯ ಸತೀಶ್ ರೈ ವಂದಿಸಿ, ಉಪನ್ಯಾಸಕಿ ಕೆ. ಜಯಲಕ್ಷ್ಮಿ ನಿರೂಪಿಸಿ, ಪ್ರತಿಭಾ ಮಧುಕರ್ ಪ್ರಾರ್ಥಿಸಿದರು. ನಮಿತಾ ಶೆಣೈ ಮತ್ತು ಅಕ್ಷರಾ ಇವರಿಂದ ಸ್ವಾಗತ ನೃತ್ಯ ಗಮನ ಸೆಳೆಯಿತು. ಬಿ.ಬಿ. ಹರೀಶ್ ರೈ ಕಾರ್ಯಕ್ರಮದಲ್ಲಿದ್ದರು. ಗಾಯತ್ರಿ ದೇವಿ ನಿರೂಪಣೆಯಲ್ಲಿ ಮೂಡಿ ಬಂದ ‘ಗಾನ ಕಾವೇರಿ ತಂಡ’ದ ಸಂಗೀತ ಕಾರ್ಯಕ್ರಮದಲ್ಲಿ ಜಿಲ್ಲೆಯ ಗಾಯಕ ಗಾಯಕಿಯರಾದ ಅನ್ವಿತ್, ಟಿ.ಡಿ. ಮೋಹನ್, ಅಜಿತ್, ಅಮೃತ್ ರಾಜ್, ಅನಿತ್ ರಾಜ್ಯ, ಸ್ನೇಹಾ ಮಧುಕರ್, ರಚನ್ ಪೊನ್ನಪ್ಪ, ಬಿ.ಜಿ. ಅನಂತಶಯನ ಇವರಿಂದ ವೈವಿಧ್ಯಮಯ ಹಾಡುಗಾರಿಕೆ ಜನಮನ ಸೆಳೆಯಿತು.