ಮಂಗಳೂರು : ಕೆನರಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ಸಾಹಿತಿ ರಘು ಇಡ್ಕಿದು ಇವರ 31ನೇ ಕೃತಿ ‘ಅರಿಮುಡಿ’ ನಗರದ ಪ್ರೆಸ್ ಕ್ಲಬ್‌ನಲ್ಲಿ ದಿನಾಂಕ 04 ನವೆಂಬರ್ 2024ರಂದು ಲೋಕಾರ್ಪಣೆಗೊಂಡಿತು. ಕೃತಿ ಬಿಡುಗಡೆಗೊಳಿಸಿದ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಎಂ. ರಂಗನಾಥ್ ಭಟ್ ಈ ವೇಳೆ ಮಾತನಾಡಿ “ಬರಹಗಾರರಲ್ಲಿ ವಿನಮ್ರತೆ ಮತ್ತು ಸರಿಯಾದ ವಿಚಾರ ಇದ್ದ ಸಂದರ್ಭದಲ್ಲಿ ಜನರಿಗೆ ಇಷ್ಟವಾಗುತ್ತದೆ” ಎಂದರು.
ಕೃತಿ ಬಗ್ಗೆ ಮಾತನಾಡಿದ ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ, “ಈ ಕೃತಿಗೆ ‘ಅರಿಮುಡಿ’ ಎನ್ನುವ ಶೀರ್ಷಿಕೆ ವಿಶಿಷ್ಟವಾಗಿದೆ. ತುಳುವಿಗೆ ಸಂಬಂಧಿಸಿದ ವಿಷಯಗಳು ಕೃತಿಯಲ್ಲಿದ್ದು, ಕನ್ನಡದಲ್ಲಿ ಕೃತಿ ರಚಿಸಲಾಗಿದೆ” ಎಂದರು. ಅತಿಥಿಗಳಾಗಿದ್ದ ಕೆನರಾ ಪದವಿ ಪೂರ್ವ ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಕೆ.ಎಂ. ಹಾಗೂ ಪ್ರಾಂಶುಪಾಲೆ ಲತಾ ಮಹೇಶ್ವರಿ ಕೆ.ಬಿ. ಇವರುಗಳು ಶುಭ ಹಾರೈಸಿದರು. ಪ್ರಕಾಶಕಿ ವಿದ್ಯಾ ಯು. ಮತ್ತು ಕೃತಿಕಾರ ರಘು ಇಡ್ಕಿದು ಉಪಸ್ಥಿತರಿದ್ದರು.