ಮಂಗಳೂರು : ಬರಹಗಾರ್ತಿ ಅಕ್ಷತಾ ರಾಜ್ ಪೆರ್ಲ ಅವರ ‘ಮಂದಾರ ಮಲಕ’ ಮತ್ತು ಬರಹಗಾರ ಬಾಲಕೃಷ್ಣ ಕೊಡವೂರು ಅವರ ‘ಮಾಯದಪ್ಪೆ ಮಾಯಕಂದಾಲ್’ ತುಳು ನಾಟಕ ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮವು ದಿನಾಂಕ 05-01-2024ರ ಶುಕ್ರವಾರದಂದು ಮಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರು “ಗಂಭೀರ ನಾಟಕಗಳತ್ತ ಪ್ರೇಕ್ಷಕರು ಒಲವು ತೋರುತ್ತಿರುವ ಸಂದರ್ಭದಲ್ಲಿ ಇವೆರಡು ಕೃತಿಗಳು ಬಿಡುಗಡೆಯಾಗಿರುವುದು ಸಕಾಲಿಕವಾಗಿದೆ. ಕೃತಿಗಳ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಇವು ರಂಗಕ್ಕೆ ಇಳಿಯಲಿ” ಎಂದು ಆಶಿಸಿದರು.
‘ಮಂದಾರ ಮಲಕ’ ಕೃತಿ ಪರಿಚಯಿಸಿದ ಪ್ರೊ. ಮೀನಾಕ್ಷಿ ರಾಮಚಂದ್ರ ಅವರು ಮಾತನಾಡಿ “ತುಳುವಿನ ವಾಲ್ಮೀಕಿ ಎಂದೇ ಖ್ಯಾತರಾಗಿರುವ ಮಂದಾರ ಕೇಶವ ಭಟ್ ಅವರ 446 ಪುಟಗಳ ‘ಮಂದಾರ ರಾಮಾಯಣ’ ಕೃತಿಯನ್ನು ಅಕ್ಷತಾ ರಾಜ್ ಅವರು ನಾಟಕ ರೂಪಕ್ಕೆ ಇಳಿಸಿದ್ದಾರೆ. ಮೂಲ ರಾಮಾಯಣಕ್ಕೆ ಕುಂದುಬಾರದಂತೆ ನಾಟಕ ನಿರೂಪಣೆ ಮಾಡಲಾಗಿದೆ. ನಾಟಕದಲ್ಲಿ ಸ್ತ್ರೀ ಪಾತ್ರಗಳು ಹೆಚ್ಚು ಪ್ರಭಾವ ಬೀರಿವೆ. ಮಂಥರೆ, ಶೂರ್ಪನಖಿ, ಶಬರಿಯಂತಹ ಸ್ತ್ರೀ ಪಾತ್ರಗಳ ನಿರೂಪಣೆಯು ಓದುಗನಲ್ಲಿ ಹೊಸ ಹೊಳಹು ಮೂಡಿಸುವ ಮೂಲಕ ಸ್ತ್ರೀ ಸಂವೇದಿ ನಾಟಕಗಳ ಸಾಲಿಗೆ ಸೇರಲಿದೆ” ಎಂದರು.
‘ಮಾಯದಪ್ಪೆ ಮಾಯಕಂದಾಲ್’ ಕೃತಿ ಪರಿಚಯಿಸಿದ ವಕೀಲ ಶಶಿರಾಜ್ ಕಾವೂರು ಮಾತನಾಡಿ “ಪಾಡ್ದನ ಶೈಲಿಯ ಜನಪದ ನಾಟಕ ಇದಾಗಿದ್ದು, ಪ್ರತಿ ದೃಶ್ಯವೂ ರೋಚಕವಾಗಿದೆ. ತುಳು ಭಾಷೆಯ ಅಪೂರ್ವ ಪದಗಳು ಗಮನ ಸೆಳೆಯುತ್ತವೆ. ತುಳು ನಾಟಕ ಕೃತಿಗಳನ್ನು ಬರಹಗಾರರು ಸ್ವ ಆಸಕ್ತಿಯಿಂದ ಪ್ರಕಟಿಸುತ್ತಿದ್ದು, ತುಳು ನಾಟಕಗಳ ಪ್ರಕಟಣೆಗೆ ತುಳು ಸಾಹಿತ್ಯ ಅಕಾಡೆಮಿಗಳು, ಸಂಘಸಂಸ್ಥೆಗಳು ಒಲವು ತೋರಬೇಕಾಗಿದೆ” ಎಂದರು.
‘ಮಂದಾರ ಮಲಕ’ ನಾಟಕ ಕೃತಿಯ ಗೌರವ ಪ್ರತಿಗಳನ್ನು ಮಂದಾರ ರಾಜೇಶ್ ಭಟ್ಟರ ಸಮ್ಮುಖದಲ್ಲಿ ಮಂದಾರ ಟ್ರಸ್ಟ್ (ರಿ) ಇದರ ಪ್ರಧಾನ ಕಾರ್ಯದರ್ಶಿಗಳಾದ ಸಂಗೀತ ಸಂಯೋಜಕ ಪ್ರಮೋದ್ ಸಪ್ರೆ ಇವರಿಗೆ ಹಿರಿಯ ಸಾಹಿತಿ, ರಂಗಕರ್ಮಿ ಡಾ.ನಾ.ದಾಮೋದರ ಶೆಟ್ಟಿ ಹಸ್ತಾಂತರಿಸಿದರು.
ಅಕ್ಷತಾ ರಾಜ್ ಪೆರ್ಲ ಸ್ವಾಗತಿಸಿ, ವಿ.ಕೆ. ಕಡಬ ನಿರೂಪಿಸಿ, ಬಾಲಕೃಷ್ಣ ಕೊಡವೂರು ಕಾರ್ಯಕ್ರಮವನ್ನು ವಂದಿಸಿದರು.