ಮಂಗಳೂರು : ಕಳೆದ 24 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ‘ಕಲ್ಲಚ್ಚು ಪ್ರಕಾಶನ’ ಇದರ 99 ಮತ್ತು 100ನೇ ಕೃತಿ ಬಿಡುಗಡೆ, 2024ರ 100ನೇಯ ದಿನವಾದ ದಿನಾಂಕ 09-04-2024ರ ಚಾಂದ್ರಮಾನ ಯುಗಾದಿಯಂದು ಸಂಜೆ 4.00 ಗಂಟೆಗೆ ಮಂಗಳೂರಿನ ಹೋಟೆಲ್ ವುಡ್ ಲ್ಯಾಂಡ್ಸ್ ಸಭಾಂಗಣದಲ್ಲಿ ನಡೆಯಲಿದೆ. ಮಹೇಶ ಆರ್. ನಾಯಕ್ ಅವರ ‘ಕೂದಲಿಗೆ ಡೈ ಮಾಡುವಾಗ’ ಕವನ ಸಂಕಲನ ಮತ್ತು ‘ರಾವಣ ವೀಣೆ’ ಕಥಾಸಂಕಲನ ಬಿಡುಗಡೆಗೊಳ್ಳಲಿರುವ ಕೃತಿಗಳು.
ವಿಜಯ ಕರ್ನಾಟಕ ಪತ್ರಿಕೆಯ ವಿಶ್ರಾಂತ ಸ್ಥಾನೀಯ ಸಂಪಾದಕ ಯು.ಕೆ. ಕುಮಾರನಾಥ್ ಕೃತಿ ಬಿಡುಗಡೆಗೊಳಿಸಲಿದ್ದು, ಅಕ್ಷಯ ಆರ್. ಶೆಟ್ಟಿ ಹಾಗೂ ಅಕ್ಷತಾ ರಾಜ್ ಪೆರ್ಲ ಕೃತಿ ಪರಿಚಯ ಮಾಡಲಿದ್ದಾರೆ. ವಂದನೀಯ ವಿನ್ಸೆಂಟ್ ವಿನೋದ್ ಸಲ್ಡಾನ್ಹಾ ಮತ್ತು ಶ್ರೀನಿವಾಸ ಪೆಜತ್ತಾಯ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ವಾರ್ತಭಾರತಿಯ ಪತ್ರಿಕೆ ಸುದ್ದಿ ಸಂಪಾದಕ ಬಿ.ಎಂ. ಬಶೀರ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಪ್ರಕಾಶನದ ಲೇಖಕ ಬಳಗ ಮತ್ತು ಈ ಹಿಂದಿನ ಆವೃತ್ತಿಗಳ ಕಲ್ಲಚ್ಚು ಪ್ರಶಸ್ತಿ ಪುರಸ್ಕೃತರು ಗೌರವ ಆತಿಥಿಗಳಾಗಿ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಈ ಹಿಂದಿನ ‘ಕಲ್ಲಚ್ಚು ಪ್ರಶಸ್ತಿ’ ಪುರಸ್ಕೃತರಾಗಿ ಪ್ರಸ್ತುತ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಉಮರ್ ಯು.ಎಚ್. ಮತ್ತು ಪ್ರಕಾಶನದ ಲೇಖಕಿಯಾಗಿ ಇದೀಗ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಸದಸ್ಯೆಯಾಗಿ ಆಯ್ಕೆ ಆದ ವಿಜಯಲಕ್ಷ್ಮಿ ನಾಯಕ್ ಅವರನ್ನು ಅಭಿನಂದಿಸಲಾಗುವುದು.