ಮಂಗಳೂರು : ಕಲ್ಲಚ್ಚು ಪ್ರಕಾಶನದ 99 ಮತ್ತು 100ನೇ ಕೃತಿ ಆಗಿ ಮಹೇಶ ಆರ್. ನಾಯಕ್ ಅವರ ‘ಕೂದಲಿಗೆ ಡೈ ಮಾಡುವಾಗ’ ಕವನ ಸಂಕಲನ ಹಾಗೂ ‘ರಾವಣ ವೀಣೆ’ ಕಥಾಸಂಕಲನದ ಲೋಕಾರ್ಪಣೆ ಸಮಾರಂಭವು ದಿನಾಂಕ 09-04-2024ರ ಮಂಗಳವಾರದಂದು ಮಂಗಳೂರಿನ ಹೊಟೇಲ್ ವುಡ್ ಲ್ಯಾಂಡ್ಸ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ವಿಜಯ ಕರ್ನಾಟಕ ಪತ್ರಿಕೆಯ ವಿಶ್ರಾಂತ ಸ್ಥಾನಿಯ ಸಂಪಾದಕ ಯು. ಕೆ. ಕುಮಾರನಾಥ್ “ಪ್ರಸ್ತುತ ದಿನಗಳಲ್ಲಿ ನಾನ ರೂಪಗಳಲ್ಲಿ ಚಂಚಲವಾಗಿರುವ ಸಮಾಜದಲ್ಲಿ ಜನರ ಮಾನಸಿಕ ದೃಢತೆ ಹೆಚ್ಚಿಸುವಲ್ಲಿ ಮಾಧ್ಯಮ ಕ್ಷೇತ್ರ ಸಕಾರಾತ್ಮಕ ಸ್ಪಂದನೆ ನೀಡಿ ಅಂತಹ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವ ಅಗತ್ಯ ಇದೆ ಹಾಗೂ ಪತ್ರಿಕೆಗಳು ಸಾಹಿತ್ಯ ಸಂಬಂಧಿ ಬರಹಗಳಿಗೆ ಮತ್ತಷ್ಟು ಪ್ರಾಮುಖ್ಯತೆ ಕೊಡುವ ಅಗತ್ಯವಿದೆ.” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕವಯಿತ್ರಿಯರಾದ ಅಕ್ಷಯ ಆರ್. ಶೆಟ್ಟಿ ಮತ್ತು ಅಕ್ಷತ ರಾಜ್ ಪೆರ್ಲ ಕೃತಿ ಪರಿಚಯ ನೀಡಿದರು. ಮುಖ್ಯ ಅತಿಥಿಗಳಾಗಿ ಕೊಡಿಯಾಲ್ ಬೈಲ್ ಪ್ರೆಸ್ ಇದರ ಮುಖ್ಯಸ್ಥರಾದ ವಂದನೀಯ ವಿನ್ಸೆಂಟ್ ಸಲ್ಡಾನ್ಹಾ, ವೆರಿಟೋ ಮಾಧ್ಯಮ ಸಂಸ್ಥೆಯ ಮುಖ್ಯಸ್ಥ ಶ್ರೀನಿವಾಸ್ ಪೆಜತ್ತಾಯ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಈ ಹಿಂದಿನ ಕಲ್ಲಚ್ಚು ಪ್ರಶಸ್ತಿ ಪುರಸ್ಕೃತರಾಗಿ ಈಗ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಉಮರ್ ಯು. ಎಚ್. ಇವರನ್ನು ಅಭಿನಂದಿಸಲಾಯಿತು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಪೊ. ಕೃಷ್ಣಮೂರ್ತಿ, ರಘು ಇಡ್ಕಿದು, ಮಾರ್ಷಲ್ ಡಿ’ಸೋಜ, ಎನ್. ವಿ. ಪೌಲೊಸ್, ನೇಮಿರಾಜ್ ಶೆಟ್ಟಿ, ಸುಧನ್ ಉರ್ವ, ಪ್ರದೀಪ ರೈ, ಇಕ್ಬಾಲ್ ಕುತ್ತಾರ್, ಗಂಗಾಧರ ಪಿಲಿಯೂರ್ ಮತ್ತು ಅನೇಕ ಗಣ್ಯರು ಭಾಗವಹಿಸಿದ್ದರು.