ಬೆಂಗಳೂರು : ‘ಉಪಾಸನ ಬುಕ್ಸ್’ ಪ್ರಕಾಶನ ಸಂಸ್ಥೆಯ ವತಿಯಿಂದ ಆಶಾ ರಘು ಇವರ ರಚನೆಯ ‘ಮಾರ್ಕೋಲು’ ಕಾದಂಬರಿ ಹಾಗೂ ಸಂಪಾದನೆಯ 58 ಕಥೆಗಾರರ ಕಥೆಗಳನ್ನು ಒಳಗೊಂಡ ‘ನೂತನ ಜಗದಾ ಬಾಗಿಲು’ ಕಥಾ ಸಂಕಲನವು ದಿನಾಂಕ 21 ಜುಲೈ 2025ರಂದು ಬೆಂಗಳೂರಿನ ಮಲ್ಲೇಶ್ವರದ ‘ಗಾಂಧಿ ಸಾಹಿತ್ಯ ಸಂಘ’ದಲ್ಲಿ ಲೋಕಾರ್ಪಣೆಗೊಂಡಿತು.
ಹಿರಿಯ ನಟರೂ ಲೇಖಕರೂ ಆದ ಶ್ರೀ ಶ್ರೀನಿವಾಸ ಪ್ರಭು ಇವರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಶ್ರೀ ಲಿಂಗರಾಜ ಸೊಟ್ಟಪ್ಪನವರು ‘ಮಾರ್ಕೋಲು’ ಕಾದಂಬರಿಯನ್ನು ಪರಿಚಯಿಸಿದರೆ, ಶ್ರೀಮತಿ ಸುಮಾ ಸತೀಶ್ ಅವರು ‘ನೂತನ ಜಗದಾ ಬಾಗಿಲು’ ಕಥಾ ಸಂಕಲನದ ಕುರಿತು ಮಾತನಾಡಿದರು. ಡಾ. ಎಚ್.ಎಸ್.ಎಂ. ಪ್ರಕಾಶ್ ಇವರೂ ಬಿಡುಗಡೆಯ ವೇಳೆ ಉಪಸ್ಥಿತರಿದ್ದರು.
ಉಪಾಸನ ಬುಕ್ಸ್ ಪ್ರಕಟಣೆಯ ಆಶಾ ರಘು ಅವರ ‘ಮಾರ್ಕೋಲು’ (ಕಾದಂಬರಿ) ಮತ್ತು ಆಶಾ ರಘು ಸಂಪಾದನೆಯ 58 ಕಥೆಗಾರರ ಕಥಾ ಸಂಕಲನ ‘ನೂತನ ಜಗದಾ ಬಾಗಿಲು’ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಹಿರಿಯ ನಟ ಮತ್ತು ಸಾಹಿತಿ ಶ್ರೀನಿವಾಸ ಪ್ರಭು “ಈ ಕಾಲಘಟ್ಟದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ದಿನದಿನವೂ ಹೊಸಬರ ಪ್ರವೇಶವಾಗುತ್ತಿದೆ. ಅವರುಗಳು ಬರೆಯಲು ಆಯ್ದುಕೊಳ್ಳುತ್ತಿರುವ ವಸ್ತುಗಳು ಮತ್ತು ಓಘ ಗಮನಿಸಿದರೆ ವಚನಕಾರರ ಸ್ವರ್ಣಯುಗದಂತೆಯೇ ಈ ದಿನಗಳೂ ಕನ್ನಡ ಸಾಹಿತ್ಯದ ಸ್ವರ್ಣಯುಗವಾಗುತ್ತಿದೆ ಎನ್ನಬಹುದು” ಎಂದು ಅಭಿಪ್ರಾಯಪಟ್ಟರು.
“ವಚನಕಾರರು ಕೊಟ್ಟ ಅಂಗ-ಸಂಗದ, ಲಿಂಗದ ಪರಿಕಲ್ಪನೆಯಂತೆಯೇ, ಮಾರ್ಕೋಲು ಕಾದಂಬರಿಯಲ್ಲಿಯೂ ಸಹ ವಿಧಿಯಮ್ಮನ ಹಸ್ತಕ್ಷೇಪದ ನಡುವೆಯೂ ಸ್ತ್ರೀ ಚಾರಿತ್ರ್ಯಕ್ಕೆ ಎಲ್ಲೂ ಘಾಸಿಯಾಗದಂತೆ ಮನ್ನಣೆ ತಂದುಕೊಡಲಾಗಿದೆ. ಭಾರತದ ಹಲವು ಭಾಷೆಗಳಲ್ಲಿ ಪ್ರಸ್ತಾಪವಾಗಿರುವ ಹಲವಾರು ವಿಧಿಗೆ ಸಂಬಂಧಿಸಿದ ಜನಪದ ಕಥೆಗಳನ್ನು ಅಧ್ಯಯನ ಮಾಡಿ ಜಾಣ್ಮೆಯಿಂದ ತಮ್ಮ ಕಥಾವಸ್ತುವಿಗೆ ಕಾದಂಬರಿಕಾರರು ಒಗ್ಗಿಸಿಕೊಂಡಿದ್ದಾರೆ” ಎಂದು ಸಾಹಿತಿ ಲಿಂಗರಾಜ ಸೊಟ್ಟಪ್ಪನವರ ಹೇಳಿದರು.
ಸಾಹಿತಿ ಸುಮಾ ಸತೀಶ್ ಮಾತನಾಡಿ “ಹೊಸ ಅನುಭವಿ ಕತೆಗಾರರ ಒಂದೊಂದು ಕತೆಯೂ ಬದುಕಿನ, ಸಂಬಂಧಗಳ ವಿಸ್ತಾರವನ್ನು ತೆರೆದಿಡುತ್ತದೆ. ಸುತ್ತಲಿನ ಸಮಾಜವನ್ನು ಸೂಕ್ಷ್ಮವಾಗಿ ನೋಡುವ, ತೀಕ್ಣವಾಗಿ ಪ್ರಶ್ನಿಸುವ ‘ನೂತನ ಜಗದಾ ಬಾಗಿಲು’ ಕೃತಿಯು ಒಂದು ಅಧ್ಯಯನ ಯೋಗ್ಯ ಆಂಥಾಲಜಿ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ ವಾಸುದೇವ ನಾಡಿಗ್, ಶ್ರೀ ಸಂಪಿಗೆ ತೋಂಟದಾರ್ಯ, ಶ್ರೀಮತಿ ರಂಜನಿ ಪ್ರಭು, ಶ್ರೀ ಅನಂತ ಹರಿಸ್ತಾ, ಶ್ರೀ ಹರೀಶ್ ಎಸ್., ಶ್ರೀ ಚಂದ್ರಶೇಖರ ಕುಲಗಾಣ, ಶ್ರೀಮತಿ ಶಾಂತಾ ಜಯಾನಂದ ಮೊದಲಾದವರೊಂದಿಗೆ ಸಂಕಲನದ ಕೆಲವು ಕಥೆಗಾರರೂ ಹಾಜರಿದ್ದರು. ಹಲವು ಮಂದಿ ಸಾಹಿತ್ಯಾಸಕ್ತರು, ಬಂಧುಮಿತ್ರರಿಂದ ಸಭಾಂಗಣ ತುಂಬಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.