ಮಂಗಳೂರು : ಗಾಂಧಿ ವಿಚಾರ ವೇದಿಕೆ ನೇತೃತ್ವದಲ್ಲಿ ಆರ್. ಜಿ. ಫೌಂಡೇಶನ್ ಮತ್ತು ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಇವರ ಸಹಯೋಗದಲ್ಲಿ ದಿನಾಂಕ 22 ಸೆಪ್ಟೆಂಬರ್ 2024ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಲೇಖಕ, ಅಂಕಣಕಾರ ಎಂ.ಜಿ. ಹೆಗಡೆ ಇವರ ಆತ್ಮಕಥೆ ‘ಚಿಮಣಿ ಬೆಳಕಿನಿಂದ’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪುಸ್ತಕ ಬಿಡುಗಡೆಯನ್ನು ಮಾಡಲಿರುವರು. ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷರಾದ ಶ್ರೀಧರ ಜಿ. ಭಿಡೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಲೇಖಕಿ ಶ್ರೀಮತಿ ಭುವನೇಶ್ವರಿ ಹೆಗಡೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಚಿಂತಕ ಅರವಿಂದ ಚೊಕ್ಕಾಡಿಯವರು ಪುಸ್ತಕ ಪರಿಚಯವನ್ನು ಮಾಡಲಿದ್ದಾರೆ. ಸಭಾ ಕಾರ್ಯಕ್ರಮಕ್ಕಿಂತ ಮೊದಲು ಭಾನುಮತಿ ಹೆಗಡೆ, ಸಹನಾ ಭಟ್, ಹುಸೇನ್ ಕಾಟಿಪಳ್ಳ ಇವರಿಂದ ಎಂ.ಜಿ. ಹೆಗಡೆಯವರು ರಚಿಸಿದ ಭಾವಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.
ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್. ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಪ್ಯಾನಿ ಜೋಕಿಂ, ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಉದಯ ಕುಮಾರ್ ಇರ್ವತ್ತೂರು, ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪ ಕುಲಸಚಿವ ಡಾ. ಪ್ರಭಾಕರ ನೀರುಮಾರ್ಗ, ಸಿ.ಐ.ಎಲ್.ನ ನಿರ್ದೇಶಕ ನಂದಗೋಪಾಲ, ಪುಸ್ತಕದ ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ, ನಾಗವೇಣಿ, ಸೀತಾರಾಮ ಹೆಗಡೆ, ಪ್ರಭಾಕರ ಹೆಗಡೆ ಹಸಲ್ಮನೆ, ಲಾತವ್ಯ ಆಚಾರ್ಯ, ಲಕ್ಷ್ಮೀ ಹೆಗಡೆ, ಕುಮಾರ ಗಹನ ಹೆಗಡೆ ಅವರು ಉಪಸ್ಥಿತರಿರುವರು.