ಉಡುಪಿ : ಯಕ್ಷಗಾನ ಕಲಾರಂಗದ ನೂತನ ಐ.ವೈ.ಸಿ. ಸಭಾಂಗಣದಲ್ಲಿ ದಿನಾಂಕ 29-06-2024ರಂದು ಕೀರ್ತಿಶೇಷ ಮಲ್ಪೆ ಶಂಕರನಾರಾಯಣ ಸಾಮಗರ ಜೀವನ ದರ್ಶನ ಪರಿಚಯಿಸುವ ‘ದೊಡ್ಡ ಸಾಮಗರ ನಾಲ್ಮೊಗ’ ಕೃತಿ ಲೋಕಾರ್ಪಣೆಗೊಂಡಿತು.
ಕೃತಿ ಲೋಕಾರ್ಪಣೆಗೊಳಿಸಿ ಅಶೀರ್ವಚನ ನೀಡಿದ ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು “ಶಂಕರನಾರಾಯಣ ಸಾಮಗರು ಮಠದೊಂದಿಗೆ ನಿಕಟಸಂಪರ್ಕ ಹೊಂದಿದ್ದರು. ಅವರು ಕಲಾವಿದ, ವಿದ್ವಾಂಸ ಮಾತ್ರವಲ್ಲದೆ ಸಂಸ್ಕಾರದ ಪ್ರತೀಕವಾಗಿದ್ದರು. ಹಿರಿಯ ವ್ಯಕ್ತಿಯ ಸರಳತೆ ಯುವ ಕಲಾವಿದರಿಗೆ ಅದರ್ಶಪ್ರಾಯವಾಗಿದೆ. ಹಿರಿಯ ಕಲಾವಿದರ ಬಗೆಗಿನ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಓದುಗರಿಗೆ ಲಭಿಸಬೇಕು. ಇದರಿಂದ ಯುವ ಪೀಳಿಗೆಗೆ ಸಾಧಕರ ಪರಿಚಯವಾಗಲು ಸಾಧ್ಯವಿದೆ. ಯಕ್ಷಗಾನದ ಪರಂಪರೆಗೆ ಸೇವೆ ಸಲ್ಲಿಸಿ, ಮಹನೀಯರ ಮಾಹಿತಿ ಪಡೆಯಲು ಸಹಕಾರಿಯಾಗುತ್ತದೆ” ಎಂದು ಹೇಳಿದರು.
ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಶಿ ಶುಭಾಶಂಸನೆಗೈದರು. ಹಿರಿಯ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಪುಸ್ತಕ ಪರಿಚಯಿಸಿದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಹೆ ಸಹಕುಲಾಧಿಪತಿ ಡಾ. ನಾರಾಯಣ ಸಭಾಹಿತ್, ಮಣಿಪಾಲ ಯುನಿವರ್ಸಲ್ ಪ್ರೆಸ್ ನ ಸಂಪಾದಕಿ ಪ್ರೊ. ನೀತಾ ಇನಾಂದಾರ್, ದಕ್ಷಿಣ ಕನ್ನಡ ಜಿಲ್ಲೆ ಕ.ಸಾ.ಪ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹಿರಿಯ ಕಲಾವಿದ ಡಾ. ಕೋಳ್ಯೂರು ರಾಮಚಂದ್ರ ರಾವ್, ಸಾಹಿತಿ ಭಾಮ ಸಾಮಗ, ಕೃತಿಕಾರ ದಿನೇಶ್ ಉಪ್ಪೂರ ಉಪಸ್ಥಿತರಿದ್ದರು. ಪ್ರೊಫೆಸರ್ ಎಂ.ಎಲ್. ಸಾಮಗ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರಾದ ರವಿಚಂದ್ರ ಕನ್ನಡಿಕಟ್ಟೆ, ಚೈತನ್ಯಕೃಷ್ಣ ಪದ್ಯಾಣ, ಪುತ್ತಿಗೆ ಕೌಶಿಕ್ ರಾವ್, ಡಾ. ಎಂ. ಪ್ರಭಾಕರ ಜೋಶಿ, ಸರ್ಪಂಗಳ ಈಶ್ವರ ಭಟ್ ಮತ್ತು ವಿ. ಹಿರಣ್ಯ ವೆಂಕಟೇಶ ಭಟ್ ಇವರಿಂದ “ಶಲ್ಯ ಸಾರಥ್ಯ” ಯಕ್ಷಗಾನ ತಾಳಮದ್ದಳೆ ನಡೆಯಿತು.