ಬೆಂಗಳೂರು : ನಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸಿ ನಮ್ಮಲ್ಲಿ ಅರಿವಿನ ಆತ್ಮ ಶಕ್ತಿಯನ್ನು ಹೆಚ್ಚಿಸುವ ಪುಸ್ತಕದ ಓದು ಸಮಾಜದ ಸರ್ವರೂ ರೂಢಿಸಿಕೊಳ್ಳಲೇಬೇಕಾದ ಉತ್ತಮ ಹವ್ಯಾಸ. ಸಾಮಾಜಿಕ ಮಾಧ್ಯಮದ ಹಾವಳಿಯಲ್ಲಿ ಯುವಜನತೆಯಲ್ಲಿ ಓದು ಕ್ಷೀಣಿಸಿದೆ ಎಂಬ ಅಪವಾದವನ್ನು ತಗ್ಗಿಸಿ ಮನೆ ಮನಗಳಲ್ಲಿ ಪುಸ್ತಕ ಓದಿನ ರುಚಿ ಹತ್ತಿಸಬೇಕು, ಈ ಕಾರ್ಯಕ್ಕಾಗಿ ಪುಸ್ತಕ ಓದುವ, ಬರೆಯುವ ಹಾಗೂ ತಲುಪಿಸುವ ವಿಧಾನಕ್ಕೆ ಇನ್ನಷ್ಟು ನಾವಿನ್ಯತೆಯನ್ನು ನೀಡಿ, ಆಧುನಿಕ ತಂತ್ರಜ್ಞಾನದ ಸ್ಪರ್ಶವಿಟ್ಟು ಕನ್ನಡ ಸಾಹಿತ್ಯದ ಔನ್ನತ್ಯಕ್ಕೆ ಶ್ರಮಿಸಬೇಕೆಂಬ ಮಹಾದಾಸೆಯಿಂದ ಪ್ರಾರಂಭವಾದ ಸಂಸ್ಥೆ ‘ಕ್ರಿಯೇಟಿವ್ ಪುಸ್ತಕ ಮನೆ’.
ಪ್ರತಿಭಾವಂತ ಯುವ ಬರಹಗಾರರಿಗೆ ಒಂದೊಳ್ಳೆ ವೇದಿಕೆಯನ್ನು ಒದಗಿಸುವ ಜೊತೆಗೆ ಖ್ಯಾತ ಬರಹಗಾರರ ವಿವಿಧ ಸಾಹಿತ್ಯ ಪ್ರಕಾರದ ಕೃತಿಗಳನ್ನು ಪ್ರಕಟಿಸುವ ಮೂಲಕ ಅಕ್ಷರ ಅಭಿಮಾನಿಗಳಿಗೆ ಜ್ಞಾನದ ಹೂರಣ ನೀಡಬೇಕೆನ್ನುವ ಕಲ್ಪನೆಯೊಂದಿಗೆ
ವಿಧವಿಧವಾದ ಪುಸ್ತಕಗಳನ್ನು ಪ್ರಕಟಿಸುತ್ತಿದೆ. 1 ಜುಲೈ 2024ರಂದು ಏಕಕಾಲದಲ್ಲಿ ನಾಡಿನ ಹೆಸರಾಂತ ಸಾಹಿತಿಗಳ 15 ಪುಸ್ತಕಗಳನ್ನು ಖ್ಯಾತ ಬರಹಗಾರ ಜೋಗಿ ನಾಮಂಕಿತ ಗಿರೀಶ್ ರಾವ್ ಹತ್ವಾರ್ ಬಿಡುಗಡೆಗೊಳಿಸಿದ್ದರು.
15 ಡಿಸೆಂಬರ್ 2024ರಂದು ಬೆಂಗಳೂರಿನ ಕ. ಸಾ. ಪ ಇದರ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ 6 ಖ್ಯಾತ ಬರಹಗಾರರ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಜೋಗಿ, ನಾಡಿನ ಪ್ರಸಿದ್ಧ ಕವಿಗಳಾಗಿರುವ ಬಿ. ಆರ್. ಲಕ್ಷ್ಮಣ್ ರಾವ್ ಇನ್ನು ಹಲವಾರು ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಕೆ. ಸತ್ಯನಾರಾಯಣ ಇವರ ‘ಅಂಪೈರ್ ಮೇಡಂ’, ನರೇಂದ್ರ ಪೈಇವರ ‘ಕಾವ್ಯ ಸಂಭವ’, ಡಾ. ಲಕ್ಷ್ಮಣ್ ವಿ. ಎ. ಇವರ ‘ಕವಲುಗುಡ್ಡ’, ಬಾಳಾ ಸಾಹೇಬ್ ಲೋಕಾಪುರ ಇವರ ‘ದೇಹಿ’, ಡಿ. ಎಸ್. ಚೌಗಲೆ ಇವರ ‘ವಾರಸಾ’ ಮತ್ತು ನರೇಂದ್ರ ರೈ ದೇರ್ಲ ಇವರ ‘ಹಸಿರು ಅಧ್ಯಾತ್ಮ’. ಪುಸ್ತಕಗಳು ಲೋಕಾರ್ಪಣೆಗೊಳ್ಳಲಿದೆ.
ಪ್ರಕಟಣೆ ಮತ್ತು ಮಾರಾಟದಲ್ಲಿ ಜನಪ್ರಿಯವಾಗಿರುವ ‘ಕ್ರಿಯೇಟಿವ್ ಪುಸ್ತಕ ಮನೆ’ ತನ್ನ ಮೊದಲ ವರ್ಷದ `ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ’ಯನ್ನು ಘೋಷಿಸಿದ್ದು, ಪ್ರಸಿದ್ಧ ಬರಹಗಾರರು ಹಾಗೂ ಖ್ಯಾತ ಪತ್ರಕರ್ತರಾಗಿರುವ ಪದ್ಮರಾಜ ದಂಡಾವತಿಯವರ ‘ಉಳಿದಾವ ನೆನೆಪು’ ಕೃತಿಯನ್ನು `ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ – 2024’ಕ್ಕೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ರೂಪಾಯಿ 5,000 ನಗದು, ಪ್ರಮಾಣ ಪತ್ರಗಳನ್ನು ಒಳಗೊಂಡಿದೆ. ರಾಜ್ಯದ ಹಲವು ಸಾಹಿತಿಗಳನ್ನೊಳಗೊಂಡ ಆಯ್ಕೆ ಸಮಿತಿ ಪ್ರಶಸ್ತಿಗಾಗಿ ಒಟ್ಟು 78 ಕೃತಿಗಳಲ್ಲಿ 10 ಕೃತಿಗಳನ್ನು ಅಂತಿಮ ಸುತ್ತಿಗೆ ಪರಿಗಣಿಸಿತ್ತು. ಅವುಗಳಲ್ಲಿ ‘ಉಳಿದಾವ ನೆನೆಪು’ ಕೃತಿಯು ಪ್ರಶಸ್ತಿಗೆ ಆಯ್ಕೆಯಾಗಿದೆ.
ಸಾಹಿತ್ಯ ಅಭಿಮಾನಿಗಳು, ಪುಸ್ತಕ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕನ್ನಡ ನಾಡು ನುಡಿಯ ರಸದೌತಣ ಸವಿಯಬೇಕೆಂದು ಈ ಮೂಲಕ ಕ್ರಿಯೇಟಿವ್ ಪುಸ್ತಕ ಮನೆ ಸವಿನಯವಾಗಿ ಆಮಂತ್ರಿಸುತ್ತಿದೆ.
Subscribe to Updates
Get the latest creative news from FooBar about art, design and business.
ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ‘ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ -2024’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ | ಡಿಸೆಂಬರ್ 15
Previous Articleಲೋಕಾರ್ಪಣೆಗೊಂಡ’ವಾಸ್ತವ’ ಕಥಾ ಪುಂಜ
Next Article ‘ಚಿಲ್ಲಾ’ ಕಥಾ ಸಂಕಲನ ಬಿಡುಗಡೆ | ಡಿಸೆಂಬರ್ 22