ಕಾಸರಗೋಡು : ಸಿರಿಬಾಗಿಲು ಪ್ರತಿಷ್ಠಾನದ ಪ್ರಕಾಶನದಲ್ಲಿ ಕರ್ನಾಟಕ ಸಂಗೀತ ಪಿತಾಮಹರೆನಿಸಿದ ಶ್ರೀ ಪುರಂದರದಾಸರು ರಚಿಸಿದ ಯಕ್ಷಗಾನ ಪ್ರಸಂಗ ವಿಶೇಷ ಕೃತಿ ಅನಸೂಯಾ ಚರಿತ್ರೆ” ಇದರ ಲೋಕರ್ಪಣಾ ಸಮಾರಂಭವು ದಿನಾಂಕ 18 ಅಕ್ಟೋಬರ್ 2025ರ ಶನಿವಾರದಂದು ಬೆಳಗ್ಗೆ ಘಂಟೆ 10.00ಕ್ಕೆ ಕಾಸರಗೋಡಿನ ಸಿರಿಬಾಗಿಲಿನಲ್ಲಿರುವ ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.
ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಇವರ ಸಂಪಾದಕತ್ವದ ಈ ಅಪೂರ್ವ ಕೃತಿಯನ್ನು ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು, ಸಂಪುಟ ನರಸಿಂಹ ಸ್ವಾಮಿ, ಶ್ರೀ ಸುಬ್ರಹ್ಮಣ್ಯ ಮಠ ಇವರ ದಿವ್ಯ ಹಸ್ತದಲ್ಲಿ ಲೋಕಾರ್ಪಣೆಗೊಳಿಸಲಿದ್ದು, ಸಂಪಾದಕರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಮೈಸೂರು ಕೃತಿ ಪರಿಚಯವನ್ನು ಮಾಡಲಿದ್ದಾರೆ. ಡಾ. ಪಿ ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯದ ನಿರ್ದೇಶಕರಾಗಿರುವ ಡಾ. ಧನಂಜಯ ಕುಂಬಳೆ ಅಧ್ಯಕ್ಷತೆ ವಹಿಸಲಿದ್ದು, ಯಕ್ಷಗಾನದ ಹಿರಿಯ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ ಶುಭಾಶಂಸನೆ ಮಾಡಲಿದ್ದಾರೆ. ವಿಶ್ರಾಂತ ಮುಖ್ಯೋಪಾಧ್ಯಾಯರಾದ ಶ್ರೀ ಕೃಷ್ಣಶರ್ಮ ಉಪಸ್ಥಿತರಿರುತ್ತಾರೆ. ಲೋಕಾರ್ಪಣೆ ಕಾರ್ಯಕ್ರಮದ ನಂತರ ಹಿರಿಯ -ಕಿರಿಯ ಕಲಾವಿದರಿಂದ ಈ ಪ್ರಸಂಗದ ಯಕ್ಷ-ಗಾನ ಪ್ರಸ್ತುತಿ ನಡೆಯಲಿದೆ.
ಸಂಜೆ 4 ಗಂಟೆಗೆ ಸರಿಯಾಗಿ ಶ್ರೀ ಪ್ರಶಾಂತ್ ಕುಂಜಾಲು ಮೈಸೂರು ಮತ್ತು ಮನೆಯವರ ಪ್ರಾಯೋಜಕತ್ವದಲ್ಲಿ “ಯಕ್ಷಗಾನ ಪೂರ್ವ ರಂಗ- ಬಯಲಾಟ- ಸನ್ಮಾನ” ನಡೆಯಲಿದೆ .ನಾಲ್ಕು ಗಂಟೆಗೆ ಸಿರಿಬಾಗಿಲು ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಪೂರ್ವರಂಗ, ಬಳಿಕ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ,ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀಮದ್ ಎಡನೀರು ಮಠ ಇವರ ಆಶೀರ್ವಚನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ, ಕಾಸರಗೋಡಿನ ಹಿರಿಯರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರಾದ ಶ್ರೀ ಕಾಸರಗೋಡು ಚಿನ್ನ, ಎನ್. ಎಂ. ಪಿ. ಎ. ಪಣಂಬೂರು ಇದರ ಸಹಾಯಕ ಮೆಟೀರಿಯಲ್ ಮ್ಯಾನೇಜರ್ ಆಗಿರುವ ಶ್ರೀ ವಿನಯರಾಜ ಶೆಟ್ಟಿ ಚಿಪ್ಪಾರುಗುತ್ತು, ಕುದ್ರಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸುಬ್ರಹ್ಮಣ್ಯ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ರಾಮಚಂದ್ರ ಪೆಜತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಸತತ 50 ವರ್ಷಗಳ ನಿರಂತರ ಯಕ್ಷಗಾನ ಸೇವೆ ಮಾಡುತ್ತಿರುವ ಹಿರಿಯ ಕಲಾವಿದರಾದ ಶ್ರೀ ವಸಂತಗೌಡ ಕಾಯರ್ತಡ್ಕ ಇವರಿಗೆ ಸನ್ಮಾನ ಹಾಗೂ ಶ್ರೀ ಮಾಧವ ಪಾಟಾಳಿ ನೀರ್ಚಾಲು ಇವರಿಗೆ ಕಲಾ ಗೌರವ ನಡೆಯಲಿದೆ. ತೆಂಕುತಿಟ್ಟಿನ ಹಿರಿಯ ಕಲಾವಿದರ ಕೂಡುವಿಕೆಯಿಂದ ಸಂಜೆ 6:00 ಗಂಟೆಯಿಂದ ಕವಿ ಸೀತಾನದಿ ಗಣಪಯ್ಯ ಶೆಟ್ಟಿ ವಿರಚಿತ “ಶನೀಶ್ವರ ಮಹಾತ್ಮೆ” ಎಂಬ ಯಕ್ಷಗಾನ ಬಯಲಾಟವು ನಡೆಯಲಿದೆ. ಇಡೀ ದಿನ ನಡೆಯುವ ಈ ಕಾರ್ಯಕ್ರಮಕ್ಕೆ ಕಲಾ ಬಂಧುಗಳು ಹೆಚ್ಚಿನ ರೀತಿಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ಸಿರಿಬಾಗಿಲು ಪ್ರತಿಷ್ಠಾನವು ತಿಳಿಸಿದೆ.