ಗೋಣಿಕೊಪ್ಪಲು : ನಿವೃತ್ತ ಪ್ರಾಂಶುಪಾಲರು ಡಾ. ಕಮಲಾಕ್ಷ .ಕೆ ಅವರ ವಿನೂತನ ಕೃತಿ ‘ಭೂಮಿಯಿಂದ ಮೊಳೆತು ಬಂದ ಪಾಟ್ ಕಥೆಗಳು’ ಇದರ ಲೋಕರ್ಪಣಾ ಸಮಾರಂಭವು ದಿನಾಂಕ 12 ಅಕ್ಟೋಬರ್ 2024ರಂದು ಗೋಣಿಕೊಪ್ಪಲಿನ ಬಳಿಯ ಅರವತ್ತೊಕ್ಕಲಿನ ಲಕ್ಷ್ಮೇಶ್ವರ ಎಸ್ಟೇಟ್ ಇದರ ‘ಬೆಳದಿಂಗಳು’ ಕಾರೆಕಾಡು ಇಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪಿ. ಕೇಶವ ಕಾಮತ್ “ಜನಪದ ಕಲೆ ಹಾಗೂ ಸಂಸ್ಕೃತಿ ತುಂಬಾ ಅನನ್ಯವಾದದ್ದು. ಪ್ರಾಚೀನ ಜನಪದ ಬದುಕಿನ ಆಳಕ್ಕಿಳಿದು ಅಧ್ಯಯನ ಮಾಡಿದರೆ ಅನೇಕ ಮಹತ್ವದ ವಿಚಾರಗಳು ನಮ್ಮ ಅರಿವಿಗೆ ದಕ್ಕುತ್ತದೆ. ವಿವಿಧ ಪ್ರದೇಶಗಳ ಜಾನಪದೀಯ ಅಂಶಗಳನ್ನು ಕಲೆಹಾಕಿ ಪ್ರಸ್ತುತ ಕಾಲಘಟ್ಟಕ್ಕೆ ಇವನ್ನು ಸಮನ್ವಯ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಡಾ. ಕೆ. ಕಮಲಾಕ್ಷ ಇವರ ಕಾರ್ಯ ಅಭಿನಂದನೀಯ. ಡಾ. ಕಮಲಾಕ್ಷ. ಕೆ ಇವರು ಈ ಹಿಂದೆ ಬರೆದ “ಕೇರಳದ ಜನಪದ ವೀರ ತಚ್ಚೋಳಿ ಒದೆನನ್” ಹಾಗೂ “ಅಂಕ ಕಲಿಗಳ ವೀರಗಾಥೆ” ಅನುವಾದಿತ ಕೃತಿಗಳು ಸಂಗ್ರಹ ಯೋಗ್ಯ ಪುಸ್ತಕಗಳಾಗಿವೆ. ಸಾಹಿತ್ಯ ಕೃತಿಗಳ ಅನುವಾದ ಸುಲಭ ಸಾಧು ಅಲ್ಲ ಎರಡು ಭಾಷೆಗಳ ಹಿಡಿತ, ಜೊತೆಗೆ ಮೂಲ ಕೃತಿ ರಚನಕಾರರ ರಚನೆ ಕುರಿತ ಮನಸ್ಥಿತಿ ಇವೆಲ್ಲದರ ಮೇಲೆ ಹಿಡಿತ ಬೇಕಾಗಿದ್ದು ಡಾ.ಕೆ ಕಮಲಾಕ್ಷ ಅವರು ಈ ಬಗ್ಗೆ ನುರಿತರಿದ್ದು ಕೃತಿ ರಚನೆ ಮಾಡಿದ್ದಾರೆ.” ಎಂದು ಹೇಳಿದರು.
ಕೃತಿ ಲೋಕಾರ್ಪಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬೆಂಗಳೂರಿನ ‘ದೃಶ್ಯ’ ರಂಗತಂಡದ ಸಂಸ್ಥಾಪಕಿ ಹಾಗೂ ನಿರ್ದೇಶಕಿ ಡಾ. ದಾಕ್ಷಾಯಿಣಿ ಭಟ್ ಇವರು ಕೃತಿಯ ಕುರಿತು ಒಳನೋಟ ಬೀರಿದರು. ರಂಗಕಲೆಯಲ್ಲಿ ಜನಪದ ಕಥೆಗಳನ್ನು ಬಳಸಿಕೊಳ್ಳುವಲ್ಲಿನ ಅಗತ್ಯತೆಗಳನ್ನು ವಿವರಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಬೆಂಗಳೂರು ವಲಯ ನಿವೃತ್ತ ಕಾರ್ಯದರ್ಶಿ ಮಹಾಲಿಂಗೇಶ್ವರ ಎಸ್.ಪಿ ಅವರು ಲೇಖಕರ ಬರವಣಿಗೆಗಳ ಕುರಿತು ಮಾತನಾಡಿ ಶುಭ ಹಾರೈಸಿದರು.
ಸುಳ್ಯದ ಉಪನ್ಯಾಸಕ ಹಾಗೂ ಲೇಖಕರಾದ ಡಾ.ಸುಂದರ ಕೆನಾಜೆ ಇವರು ಜಾನಪದ ವೈವಿಧ್ಯ, ಭಾಷಾ ವೈವಿಧ್ಯ, ವಿವಿಧ ಸಾಂಸ್ಕೃತಿಕ ಮಜಲುಗಳು ಎಲ್ಲವೂ ಸೇರಿ ಹೇಗೆ ನಮ್ಮ ಸಮಾಜವನ್ನು ಆರೋಗ್ಯವಂತವಾಗಿಡಲು ಸಾಧ್ಯ ಎಂಬುದರ ಕುರಿತು ಸವಿವರವಾಗಿ ತಿಳಿಸಿದರು. ಲಕ್ಷ್ಮೇಶ್ವರ ಎಸ್ಟೇಟ್ ಇದರ ಮಾಲೀಕ ಹಾಗೂ ಕೃತಿಗೆ ಆರ್ಥಿಕ ಸಹಾಯ ನೀಡಿದ್ದ ಪಿ. ಆರ್. ಗಾಂಧಿರಾವ್ ಕೃತಿ ಲೋಕಾರ್ಪಣೆಗೊಳಿಸಿದರು. ಬಂಧು ಮಿತ್ರರು, ಸಾಹಿತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇತ್ತೀಚಿನ ಪ್ರಶಸ್ತಿ ಪುರಸ್ಕೃತ ಕನ್ನಡ ಚಲನಚಿತ್ರ “ಡೇರ್ ಡೆವಿಲ್ ಮುಸ್ತಫಾ” ಚಿತ್ರ ತಂಡದ ನಾಯಕ ನಟ, ನಿರ್ದೇಶಕ ಮತ್ತು ಇತರ ಕಲಾವಿದರು ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಿದರು. ಜಯಶ್ರೀ ಗಣೇಶ ಕಾರ್ಯಕ್ರಮ ನಿರ್ವಹಿಸಿದರು. ಚಲನಚಿತ್ರ ಸಂಗೀತ ಶಬ್ದ ಸಂಯೋಜಕ ಸ್ವಸ್ತಿಕ್ ಕಾರೆಕಾಡು ಮತ್ತು ಬಳಗದವರಿಂದ ಸಂಗೀತ ಸಂಭ್ರಮ ನಡೆಯಿತು. ಸುಭಾಷ್ ಕಾರೆಕಾಡ್ ಆತಿಥ್ಯ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Previous Articleಸದಾಶಿವ ಸೊರಟೂರು ಇವರ ಕವನ ಸಂಕಲನಕ್ಕೆ ‘ದಿನಕರ ದೇಸಾಯಿ ಪ್ರಶಸ್ತಿ’
Next Article ಪರಿಚಯ ಲೇಖನ | ‘ಪ್ರಜ್ವಲ ನಾದ ಪ್ರತಿಭೆ’ ಪ್ರಜ್ವಲ್ ಮುಂಡಾಡಿ