ಪಣಂಬೂರು : ‘ನಗುವ ನಗಿಸುವ ಗೆಳೆಯರು ( ನನಗೆ) ಕುಳಾಯಿ ಪಣಂಬೂರು ವತಿಯಿಂದ ಆಯೋಜಿಸಿದ ಸಾಹಿತಿ ಪಿ. ರವಿಶಂಕರ್ ಅವರ ‘ಚಿವುಟುವ ಚುಟುಕಗಳು, ಕುಟು ಕುವ ಕವಿತೆಗಳು’ ಕೃತಿಗಳ ಲೋಕರ್ಪಣಾ ಸಮಾರಂಭವು ದಿನಾಂಕ 20 ಅಕ್ಟೋಬರ್ 2024ರ ರವಿವಾರದಂದು ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ರಾಜರತ್ನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ನಿವೃತ್ತ ಪ್ರೊಫೆಸರ್ ಹಾಗೂ ಸಾಹಿತಿ ಡಾ. ಎಂ. ಕೃಷ್ಣ ಗೌಡ ಮಾತನಾಡಿ “ಇಂದು ಬರೆಯುವ, ಓದುವ ಹವ್ಯಾಸ ಕಡಿಮೆಯಾಗುತ್ತಿರುವ ದಿನ ಮಾನಸದಲ್ಲಿ ಮತ್ತೆ ಪುಸ್ತಕದತ್ತ ಎಳೆಯುವ ರವಿಶಂಕರ ಕಾರಂತ ಅವರ ಪ್ರಯತ್ನ ಮೆಚ್ಚುವಂತಹುದು. ಕಾರಂತರ ಕವಿತೆಗಳು ಮನಸ್ಸಿಗೆ ಮುದ ನೀಡುತ್ತವೆ. ಜತೆಗೆ ಕಚಗುಳಿ ಸಹ ಇಡುತ್ತವೆ. ಕೆಲವೊಂದು ಹಾಸ್ಯ ಭರಿತವಾಗಿದ್ದರೆ, ದೇಶ – ಪ್ರೇಮ, ಮಕ್ಕಳಿಗೆ ಬುದ್ದಿವಾದ ಹೇಳುವ ಸಂದೇಶವೂ ಆಡಗಿದೆ. ಕವಿತೆಗಳು ಪ್ರಶ್ನಾರ್ಥಕವಾಗಿದ್ದಾಗ ಇತರರನ್ನು ಚಿಂತನೆಗೊಳಪಡಿಸುತ್ತವೆ ಅಂತಹ ಕವಿತೆಗಳು ಇವರಿಂದ ಮೂಡಿಬಂದಿದೆ.” ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಘಟಕದ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇ. ಮೂ. ಹರಿನಾರಾಯಣದಾಸ ಅಸ್ರಣ್ಣ ಆಶೀರ್ವಚನ ನೀಡಿದರು.
ಪಿ. ಕೃಷ್ಣಮೂರ್ತಿ ಐತಾಳ್, ಪಿ. ಸಂತೋಷ್ ಐತಾಳ್, ವಿಶ್ವೇಶ್ವರ ಭಟ್ ಬದವಿದೆ, ವಸಂತ ಮೋಹನ್, ವಿಷ್ಣುಮೂರ್ತಿ ವಾರಂಬಳ್ಳಿ, ಕನ್ನರ್ಪಾಡಿ ದೇವಸ್ಥಾನದ ಅಧ್ಯಕ್ಷ ರಾಘವೇಂದ್ರ ಭಟ್, ಡಾ. ಕಾರ್ತಿಕ್ ಐತಾಳ್, ವಿನೋದ್ ಪಣಂಬೂರು ಉಪಸ್ಥಿತರಿದ್ದರು. ಲೇಖಕ, ಸಾಹಿತಿ ಪಿ.ರವಿಶಂಕರ ಕಾರಂತ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಆನಂತರ ಡಾ. ಕೃಷ್ಣಗೌಡ ಅವರಿಂದ ಹಾಸ್ಯ ಚಟಾಕಿ ಕಾರ್ಯಕ್ರಮ ಜರಗಿತು.