ಕಿನ್ನಿಗೋಳಿ : ಯುಗಪುರುಷ ಕಿನ್ನಿಗೋಳಿ ಹಾಗೂ ಮಂಗಳೂರಿನ ಕಥಾಬಿಂದು ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ‘ಕನ್ನಡ ಸಾಹಿತ್ಯೋತ್ಸವ’ ಮತ್ತು ನೂತನ ಕೃತಿಗಳ ಬಿಡುಗಡೆ ಸಮಾರಂಭವು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ದಿನಾಂಕ 25-02-2024ರಂದು ಯಶಸ್ವಿಯಾಗಿ, ಅವಿಸ್ಮರಣೀಯ ರೀತಿಯಲ್ಲಿ ನಡೆಯಿತು. ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಉದ್ಘಾಟಿಸಿ ಶುಭ ಹಾರೈಸಿದರು.
ರತ್ನಾ ಟಿ.ಕೆ. ಭಟ್ ಅವರ ರಾಘವೇಂದ್ರ ಚರಿತ್ರೆ (ಮೊದಲ ಕೃತಿ), ಹೊನ್ನ ರಶ್ಮಿ (ಕವನಗಳು), ಹನಿ ಹನಿಗಳ ನಡುವೆ (ಹಾಯ್ಕು, ಟಂಕಾ, ಅಬಾಬಿ, ಚುಟುಕು, ರುಬಾಯಿ, ಶಿಶುಗೀತೆ ಮತ್ತು ಮಿನಿ ಕವನಗಳು), ಮುಂಜಾವಿನ ಧ್ವನಿ (ಗಝಲ್ ಗಳು), ವಚನ ಬಿಂದು (ಆಧುನಿಕ ವಚನಗಳು) ಎಂಬ ಐದು ಕೃತಿಗಳು ಮತ್ತು ಹಾ.ಮ. ಸತೀಶರ ಕೊನೆಯ ನಿಲ್ದಾಣ (ಕವನಗಳು), ಪ್ರಕೃತಿ ಪ್ರೀತಿ ಬದುಕು (ಗಝಲ್ ಗಳು) ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ಕೃತಿಗಳು. ‘ಕೊನೆಯ ನಿಲ್ದಾಣ’ ಹಾ.ಮ. ಸತೀಶರ ಹತ್ತನೇ ಕೃತಿಯಾಗಿರುವುದು ಒಂದು ವಿಶೇಷ. ‘ಪ್ರಕೃತಿ ಪ್ರೀತಿ ಬದುಕು’ ಹನ್ನೊಂದನೇ ಕೃತಿ. ಮೂಡಬಿದ್ರೆಯ ಹಿರಿಯ ಉದ್ಯಮಿ ಶ್ರೀಪತಿ ಭಟ್ ಹಾಗೂ ಉಳೆಪಾಡಿ ಶ್ರೀದುರ್ಗಾಪರಮೇಶ್ವರೀ ಮಹಮ್ಮಾಯೀ ದೇವಸ್ಥಾನದ ಧರ್ಮದರ್ಶಿ ಮತ್ತು ಸಾಹಿತ್ಯ ಸಂಘಟಕ, ಅನುವಾದಕರಾದ ಮೋಹನದಾಸ ಸುರತ್ಕಲ್ ಇವರು ಕೃತಿಗಳನ್ನು ಬಿಡುಗಡೆ ಮಾಡಿದರು.
ಖ್ಯಾತ ವೈದ್ಯರೂ, ಹಿರಿಯ ಸಾಹಿತಿಗಳೂ ಆದ ಡಾ. ಸುರೇಶ್ ನೆಗಳಗುಳಿ, ಖ್ಯಾತ ಯಕ್ಷಗಾನ ಕಲಾವಿದರಾದ ಸೀತಾರಾಮ ಕುಲಾಲ್ ಕಟೀಲು, ರಾಜೇಂದ್ರ ಕಟೀಲು, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಖ್ಯಾತ ಕಲಾವಿದೆ ಶ್ರೀಮತಿ ಪದ್ಮಶ್ರೀ ಭಟ್, ಬಾಲಕೃಷ್ಣ ಉಡುಪ, ರಾಜೇಶ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಸುರೇಶ್ ನೆಗಳಗುಳಿಯವರು ಬಿಡುಗಡೆಯಾದ ಕೃತಿಗಳನ್ನು ಸಂಕ್ಷಿಪ್ತವಾಗಿ ಅತ್ಯಂತ ಸಮರ್ಥವಾಗಿ ಪರಿಚಯಿಸಿದರು. ಕೃತಿಕಾರರಾದ ರತ್ನಾ ಭಟ್ ಹಾಗೂ ಹಾ.ಮ. ಸತೀಶರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಸನ್ಮಾನ ಸ್ವೀಕರಿಸಿ, ಕೃತಜ್ಞತಾ ನುಡಿಗಳೊಂದಿಗೆ, ತಮ್ಮ ಬದುಕು – ಬರಹ – ಸಾಧನೆಗಳ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು. ಕಥಾಬಿಂದು ಪ್ರಕಾಶನದ ಸಂಚಾಲಕರೂ, ಪ್ರಕಾಶಕರೂ, ಪ್ರಸಿದ್ಧ ಕಾದಂಬರಿಕಾರರೂ ಆದ ಪಿ.ವಿ. ಪ್ರದೀಪ್ ಕುಮಾರ್ ಅವರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ದಯಾಮಣಿ ಎಕ್ಕಾರು ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಟಿಯೂ ನಡೆಯಿತು. ರೇಮಂಡ್ ಡಿಕುನ್ಹಾ ತಾಕೊಡೆ, ಜೊಸ್ಸಿ ಪಿಂಟೋ, ಕೃಷ್ಣಾನಂದ ಶೆಟ್ಟಿ ಐಕಳ, ಸುಭಾಷಿಣಿ ಚಂದ್ರ ಬೇಕೂರು, ದೀಪ್ತಿ ರೋಹಿತ್, ಬಿ.ಆರ್. ಕಬಕ ಕಲ್ಲಡ್ಕ ಮೊದಲಾದವರು ಸ್ವರಚಿತ ಕವನಗಳನ್ನು ವಾಚಿಸಿದರು. ದಯಾಮಾಣಿ ಎಕ್ಕಾರು ಅವರಿಂದ ಕವಿಗೋಷ್ಟಿಯ ಅಧ್ಯಕ್ಷ ಭಾಷಣ ಹಾಗೂ ಸುಭಾಷಿಣಿ ಚಂದ್ರ ಅವರಿಂದ ಸ್ವರಚಿತ ಕವನ ವಾಚನ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಶ್ರೀಮತಿ ಪದ್ಮಶ್ರೀ ಭಟ್ ಇವರ “ವಾಯ್ಸ್ ಆಫ್ ಆರಾಧನಾ” ತಂಡದ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಮಧ್ಯಾಹ್ಮ 2 ಗಂಟೆಯವರೆಗೂ ನಿರಂತರವಾಗಿ ನಡೆದ ಕಾರ್ಯಕ್ರಮಗಳನ್ನು ಸಾಹಿತ್ಯಾಸಕ್ತರು, ಕಲಾರಸಿಕರು ಆಸಕ್ತಿ ಮತ್ತು ಅಭಿಮಾನದಿಂದ ಆಲಿಸುತ್ತಾ ವೀಕ್ಷಿಸಿದ್ದು, ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.