ಮಂಗಳೂರು : ಯುವ ಲೇಖಕಿ ಫಾತಿಮಾ ರಲಿಯಾ ಇವರ ಅನುಭವ ಕಥನ ‘ಕೀಮೋ’ ಪುಸ್ತಕದ ಲೋಕರ್ಪಣಾ ಸಮಾರಂಭವು ದಿನಾಂಕ 07 ಸೆಪ್ಟೆಂಬರ್ 2025ರ ಭಾನುವಾರದಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೇರಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಎಂದು ಹಿರಿಯ ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಮಾತನಾಡಿ “ಶಿಕ್ಷಣ, ಆರೋಗ್ಯ, ಸಾಹಿತ್ಯ, ರಂಗಭೂಮಿ, ಬ್ಯಾಂಕಿಂಗ್, ವೈದ್ಯಕೀಯ ಇತ್ಯಾದಿ ವಲಯಗಳಲ್ಲಿನ ಸಾಧನೆಗಳ ಮೂಲಕ ಬುದ್ಧಿವಂತರ ಜಿಲ್ಲೆ ಎಂದು ಹೇಳಿಕೊಳ್ಳುತ್ತಿದ್ದ ನಮ್ಮಲ್ಲೀಗ ಮತೀಯವಾದವು ತಾಂಡವಾಡುತ್ತಿದೆ. ದಿನನಿತ್ಯ ಕರಾವಳಿಯ ಈ ಜಿಲ್ಲೆಯಲ್ಲಿ ದಾಳಿ ಹೆಚ್ಚುತ್ತಿವೆ. ಇದರಿಂದ ನಮ್ಮನ್ನು ನಾವೇ ಚಿಕಿತ್ಸಕ ದೃಷ್ಟಿಯಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕರಾವಳಿಯ ಈ ರೋಗ ಶಮನಕ್ಕೆ ಮದ್ದು ಕಂಡು ಹಿಡಿಯಬೇಕಿದೆ. ವೈದ್ಯರು ರೋಗಿಗಳನ್ನು ಸಮಾನವಾಗಿ ಕಾಣಬೇಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವೈದ್ಯರಲ್ಲೂ ಮತೀಯವಾದ ವೃದ್ಧಿಸುತ್ತಿದೆ. ಇದೊಂದು ವಿಷವಾಗಿದ್ದು, ರೋಗಿಗಳ ಪಾಲಿಗೆ ಮಾತ್ರವಲ್ಲ ಸಾಮಾಜಿಕವಾಗಿಯೂ ಅಪಾಯಕಾರಿಯಾಗಿದೆ. ಹಾಗಾಗಿ ಎಲ್ಲಾ ರೀತಿಯ ಮತೀಯವಾದವನ್ನು ನಿರ್ಮೂಲನ ಮಾಡಲು ಪಣತೊಡಬೇಕಿದೆ” ಎಂದರು.
ಶಾಲಾ ಶಿಕ್ಷಕಿ ರಮ್ಯ ಕೆ. ಜಿ. ಮೂರ್ನಾಡು ಮತ್ತು ಮದ್ರಸ ಶಿಕ್ಷಕ ಶರೀಫ್ ಹಿಮಮಿ ಶೆಟ್ಟಿಕೊಪ್ಪಪುಸ್ತಕದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಲೇಖಕಿ ಫಾತಿಮಾ ರಲಿಯಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯೆ ಸಾರಾ ಅಲಿ ಪರ್ಲಡ್ಕ ಸ್ವಾಗತಿಸಿ, ಇರ್ಫಾನ್ ಹಕ್ ಕಾರ್ಯಕ್ರಮ ನಿರೂಪಿಸಿ, ಅಬ್ದುಲ್ ಅಝೀಝ್ ಹೆಜಮಾಡಿ ವಂದಿಸಿದರು.