ಸುರತ್ಕಲ್ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಬಿಲ್ಲವ ಸಮಾಜ ಸೇವಾ ಸಂಘ (ರಿ.) ಇಡ್ಯಾ ಸುರತ್ಕಲ್ ಇವರ ವತಿಯಿಂದ ಮನು ಇಡ್ಯಾ ಇವರ ‘ಗಂಧದ ಕೊರಡ್’ ಮತ್ತು ‘ತಾಂಗ್ ನಿರೆಲ್’ ಎರಡು ನಾಟಕಗಳ ಪುಸ್ತಕ ಬಿಡುಗಡೆ ಮತ್ತು ಚಾವಡಿ ತಮ್ಮನ ಕಾರ್ಯಕ್ರಮವನ್ನು ದಿನಾಂಕ 13 ನವೆಂಬರ್ 2025ರಂದು ಸಂಜೆ 4-00 ಗಂಟೆಗೆ ಸುರತ್ಕಲ್ ಇಡ್ಯಾ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುರತ್ಕಲ್ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಇಡ್ಯಾ ಸುರತ್ಕಲ್ ಬಿಲ್ಲವ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ದಿನಾಂಕ 13 ನವೆಂಬರ್ 2025ರಂದು ಆಯೋಜಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಮನು ಇಡ್ಯಾರ ‘ಗಂಧದ ಕೊರಡ್’ ಮತ್ತು ‘ತಾಂಗ್ ನಿರೆಲ್’ ನಾಟಕಗಳ ಪುಸ್ತಕ ಬಿಡುಗಡೆ ಮತ್ತು ಮನು ಇಡ್ಯಾರಿಗೆ ಚಾವಡಿ ತಮ್ಮನ ಸಮಾರಂಭ ನಡೆಯಿತು.

ಈ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ವಿಜಯ ಕರ್ನಾಟಕದ ನಿವೃತ್ತ ಸ್ಥಾನೀಯ ಸಂಪಾದಕ ಯು.ಕೆ. ಕುಮಾರನಾಥ “ತುಳು ರಂಗ ಭೂಮಿಗೆ ಅಪಾರ ಕೊಡುಗೆ ನೀಡಿದ ಹಿರಿಯರ ಕೃತಿಗಳು ಪ್ರಕಟಣೆ ಆಗಬೇಕಾಗಿವೆ ತುಳು ಸಾಹಿತ್ಯ ಕ್ಷೇತ್ರಕ್ಕೆ ತುಳು ನಾಟಕಗಾರರ ಕೊಡುಗೆ ಅಪಾರವಾಗಿದ್ದು, ಕನ್ನಡ ನಾಟಕ ಸಾಹಿತ್ಯಕ್ಕೆ ಸರಿ ಮಿಗಿಲು ಎಂಬಂತೆ ತುಳು ನಾಟಕಗಳು ಬಂದಿವೆ. ತುಳು ರಂಗ ಭೂಮಿಯ ಅನನ್ಯತೆಯನ್ನು ಗುರುತಿಸುವ ಕಾರ್ಯ ನಡೆಯಬೇಕು. ಹೊಸ ಅಲೆಯ ತುಳು ನಾಟಕಗಳನ್ನು ನೀಡಿದ ಮನು ಇಡ್ಯಾರ ನಾಟಕಗಳ ಅಧ್ಯಯನ ಮತ್ತು ರಂಗ ಪ್ರದರ್ಶನಗಳು ನಡೆಯುವ ಅಗತ್ಯವಿದೆ. ಅಕಾಡೆಮಿಯು ತುಳುನಾಡ ಸಂಸ್ಕೃತಿ, ಸಾಹಿತ್ಯ, ಜಾನಪದಕ್ಕೆ ಸಂಬಂಧ ಪಟ್ಟಂತೆ ವಿನೂತನ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದು ಶ್ಲಾಘನೀಯ. ತುಳು ಸಾಹಿತ್ಯದ ಪ್ರಸರಣ ವಿವಿಧ ಆಯಾಮಗಳಲ್ಲಿ ನಡೆಯಬೇಕು” ಎಂದು ನುಡಿದರು.
ಮನು ಇಡ್ಯಾರಿಗೆ ಚಾವಡಿ ತಮ್ಮನ ಮಾಡಿ ಅಭಿನಂದಿಸಲಾಯಿತು. ಚಾವಡಿ ತಮ್ಮನದ ಅಭಿನಂದನಾ ನುಡಿಗಳನ್ನಾಡಿದ ಹಿರಿಯ ರಂಗ ನಟಿ ಗೀತಾ ಸುರತ್ಕಲ್ “ಮನು ಇಡ್ಯಾರ ನಾಟಕಗಳ ವಸ್ತು ದೇಸಿಯ ತನದಿಂದ ಕೂಡಿದ್ದು ಭಾಷೆಯ ಪ್ರೌಡಿಮೆ, ರಂಗ ನಡೆಗಳಿಂದ ವಿಶಿಷ್ಟತೆಯನ್ನು ಪಡೆದಿವೆ” ಎಂದರು.
ಸಿಂಗಾರ ಸುರತ್ಕಲ್ ಕಲಾ ಸಂಸ್ಥೆಯ ಕಾರ್ಯದರ್ಶಿ ಪ್ರೊ. ಕೃಷ್ಣ ಮೂರ್ತಿ ಮಾತನಾಡಿ “ಮನು ಇಡ್ಯಾರ ಐದು ದಶಕದ ರಂಗ ಪಯಣದಲ್ಲಿ ಪ್ರಯೋಗಶೀಲತೆಯ ಮೂಲಕ ಪ್ರಬುದ್ಧ ನಾಟಕಗಳನ್ನು ನೀಡಿದ್ದು ಅವರು ರಚಿಸಿದ ನಾಟಕಳು ನಿರ್ಲಕ್ಷಿತ ಮತ್ತು ಶೋಷಿತ ಸಮಾಜದ ಧ್ವನಿಯಾಗಿ ಚಿತ್ರಿತವಾಗಿದೆ” ಎಂದರು.
ಇಡ್ಯಾ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷೆ ಯಮುನಾ ಶೇಖರ್ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ “ತುಳು ರಂಗಭೂಮಿ ವಿವಿಧ ಮಗ್ಗಲುಗಳ ದಾಟಿ ಮುನ್ನಡೆಯುತ್ತಿರುವ ಇಂದಿನ ಸಂದರ್ಭದಲ್ಲಿ ಮನು ಇಡ್ಯಾರ ಕೊಡುಗೆ ನೆನಪಿಸುವ ಮತ್ತು ಅವರ ನಾಟಕಗಳನ್ನು ಪ್ರದರ್ಶನ ಮಾಡುವ ಕಾರ್ಯಗಳು ನಡೆಯಬೇಕಾಗಿದೆ. ತುಳು ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಕಲೆಗಳಿಗೆ ಶ್ರಮಿಸಿದ ಹಿರಿಯರನ್ನು ಗೌರವಿಸುವ, ಕೃತಿಗಳನ್ನು ಪ್ರಕಟಿಸುವ ಕಾರ್ಯವನ್ನು ಅಕಾಡೆಮಿ ಮಾಡುತ್ತಿದೆ. ತುಳುವಿನ ಕೃತಿಗಳನ್ನು ಇನ್ನಿತರ ಭಾಷೆಗಳಿಗೆ ಅನುವಾದ ಮಾಡಿ ಪ್ರಕಟಿಸುವ ಯೋಜನೆಗಳಿವೆ” ಎಂದರು.

ಶ್ರೀ ನಾರಾಯಣ ಗುರು ಮಂದಿರ ಮತ್ತು ವಿಠೋಭ ರುಕುಮಾಯಿ ದೇಗುಲದ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷ ಚಂದ್ರಶೇಖರ ನಾನಿಲ್ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿ ಘಟಕದ ಅಧ್ಯಕ್ಷೆ ಗುಣವತಿ ರಮೇಶ್ ಅಭಿನಂದನಾ ಪತ್ರ ವಾಚಿಸಿದರು. ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಮಧುಸೂದನ ಇಡ್ಯಾ ವಂದಿಸಿದರು. ಸುಶೀಲ ಮನು ಇಡ್ಯಾ ಉಪಸ್ಥಿತರಿದ್ದರು. ಸದಸ್ಯರ ಸಂಚಾಲಕ ಮತ್ತು ರಂಗ ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
