ಮಂಗಳೂರು : ಬಹು ಓದುಗ ಬಳಗ ಮಂಗಳೂರು ಮತ್ತು ಆಕೃತಿ ಪ್ರಕಾಶನ ಮಂಗಳೂರು ಆಶ್ರಯದಲ್ಲಿ ದಿನಾಂಕ 15 ಜನವರಿ 2026ರಂದು ಶ್ರೀ ನಂದನೇಶ್ವರ ದೇವಸ್ಥಾನದ ರಜತಾಂಗಣದಲ್ಲಿ ಎನ್.ಎಂ.ಪಿ.ಟಿ. ಹೈಸ್ಕೂಲ್‌ನ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಎನ್. ಇವರ ‘ಹನಿಯಾಗಲೇ ಚಿಮ್ಮೊಳಗೆ’ ಕವನ ಸಂಕಲನವು ಲೋಕಾರ್ಪಣೆಗೊಂಡಿತು.
ಚೇಳ್ಯಾರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಸಾಹಿತಿ ಡಾ. ಜ್ಯೋತಿ ಚೇಳ್ಯಾರು ಇವರು ಕೃತಿ ಬಿಡುಗಡೆಗೊಳಿಸಿದರು. ಯಕ್ಷಗಾನ ಕಲಾ ಮಂಡಳಿ ನವ ಮಂಗಳೂರು ಇದರ ಅಧ್ಯಕ್ಷರಾದ ಕೆ. ಸದಾಶಿವ ಶೆಟ್ಟಿ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರಘು ಇಡ್ಕಿದು ಮಾತನಾಡಿದರು. ಕಾಸರಗೋಡು ಸರಕಾರಿ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ. ಆಶಾಲತಾ ಚೇವಾರ್ ಪುಸ್ತಕ ವಿಮರ್ಶೆ ನಡೆಸಿದರು. ಎನ್.ಎಂ.ಪಿ.ಟಿ. ಕಾರ್ಯದರ್ಶಿ ಜಿಜು ಥಾಮಸ್, ದೇವಸ್ಥಾನದ ಕಾಯನಿರ್ವಹಣಾಧಿಕಾರಿ ಶ್ರೀಧರ್ ಎಸ್.ಪಿ., ಪ್ರಕಾಶಕ ಆಕೃತಿ ಆಶಯ ಬಳಗದ ನಾಗೇಶ್ ಕಲ್ಲೂರು, ಬಹು ಓದುಗ ಬಳಗದ ಸಂಚಾಲಕ ಓಬನಾಥ ಸಾಲೆತ್ತೂರು ಉಪಸ್ಥಿತರಿದ್ದರು.
ಕೃತಿಕಾರ ಸುಬ್ರಹ್ಮಣ್ಯ ಎನ್. ಮಾತನಾಡಿ, “ಇದು ತನ್ನ ಪ್ರಥಮ ಕವನ ಸಂಕಲನ, ನನ್ನ ಸಾಹಿತ್ಯ ಬದುಕಿನಲ್ಲಿ ಇಂದು ಅವಿಸ್ಮರಣೀಯ ದಿನ” ಎಂದರು. ಸವಿತಾ ನ್ಯಾಕ್ ಸ್ವಾಗತಿಸಿ, ಶಂಕರನಾರಾಯಣ ಮೈರ್ಪಾಡಿ ನಿರೂಪಿಸಿದರು. ಕೃತಿಕಾರ ಸುಬ್ರಹ್ಮಣ್ಯ ಎನ್. ಇವರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎನ್.ಎಂ.ಪಿ.ಟಿ. ಪ್ರೌಢ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
