ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್, ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಹಯೋಗದಲ್ಲಿ 20ನೇ ವರ್ಷದ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆ ವಿಜೇತರಿಗೆ ಪುರಸ್ಕಾರ ಹಾಗೂ 29ನೇ ವರ್ಷದ ‘ಜ್ಞಾನಶರಧಿ’ ಮತ್ತು ‘ಜ್ಞಾನವಾರಿಧಿ’ 2023ನೇ ಸಾಲಿನ ನೈತಿಕ ಮೌಲ್ಯಾಧರಿತ ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಪ್ರಯುಕ್ತ ‘ಕುಂಚ-ಗಾನ-ನೃತ್ಯ ವೈಭವ’ವು ದಿನಾಂಕ 19-08-2023ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾ ಭವನದಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿದ ಖ್ಯಾತ ವಾಗ್ಮಿ ಮೈಸೂರಿನ ಪ್ರೊ. ಕೃಷ್ಣೇ ಗೌಡ ಇವರು “ಜ್ಞಾನ ಸಂಪಾದನೆಗೆ ನಾನಾ ಮಾರ್ಗಗಳಿದ್ದು, ಕಲಿಯುವ ಮನಸ್ಸಿದ್ದಲ್ಲಿ ನಮ್ಮ ಸುತ್ತಲಿನ ಪ್ರಕೃತಿಯಿಂದಲೇ ಅಪಾರ, ಜ್ಞಾನ ಸಂಪಾದನೆ ಮಾಡಬಹುದು. ಪ್ರತಿಯೊಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ, ಬೌದ್ಧಿಕ ವಿಕಸನವಾಗಬೇಕು, ವ್ಯಕ್ತಿಯ ಪರಿಪೂರ್ಣತೆಯೇ ಶಿಕ್ಷಣದ ಗುರಿ. ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶ ಇವತ್ತು ಎಲ್ಲರಿಗೂ ಇದೆ. ಶಿಕ್ಷಣ ಸಂಪಾದನೆಯ ಜತೆಯಲ್ಲಿ ಕೌಶಲ್ಯ ಮತ್ತು ಜ್ಞಾನಗಳನ್ನೂ ತಮ್ಮದಾಗಿಸಿಕೊಳ್ಳಬೇಕು. ಇವೆರಡನ್ನೂ ವಿವೇಕದಿಂದ ಬಳಸಿಕೊಂಡು ಲೋಕ ಕಲ್ಯಾಣದತ್ತ ಚಿತ್ತ ಹರಿಸಬೇಕು” ಎಂದು ಹೇಳಿದರು.
‘ಅಂಚೆ-ಕುಂಚ’ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ವಿತರಿಸಿದ ಚಲನಚಿತ್ರ ನಟ ಸಿಹಿಕಹಿ ಚಂದ್ರು ಮಾತನಾಡಿ “ಬದುಕಿನಲ್ಲಿ ಹಾಸ್ಯ ಪ್ರಜ್ಞೆ ರೂಢಿಸಿಕೊಂಡರೆ ಯಾವುದೇ ಪರಿಸ್ಥಿತಿಯಲ್ಲೂ ಒತ್ತಡರಹಿತರಾಗಿ ಬದುಕಬಹುದು. ನಿರ್ದಿಷ್ಟ ಗುರಿ, ತ್ಯಾಗ, ದೃಢಸಂಕಲ್ಪ ಮತ್ತು ಶಿಸ್ತಿನ ಮೂಲಕ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ಕಂಡುಕೊಳ್ಳಬೇಕು” ಎಂದು ಹೇಳಿದರು.
ಶುಭಾಶಂಸನೆ ಮಾಡಿದ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೇಶಕಿ ಸುಮಂಗಲಾ ಮಾತನಾಡಿ “ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಧನಾತ್ಮಕ ಚಿಂತನೆಯೊಂದಿಗೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಶಾಂತಿವನ ಟ್ರಸ್ಟಿನ ಕಾರ್ಯಕ್ರಮಗಳಿಗೆ ಶಿಕ್ಷಣ ಇಲಾಖೆಯಿಂದ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು”. ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಕುಂಚ-ಗಾನ-ನೃತ್ಯ ವೈಭವ ನಡೆಯಿತು. ಕುಂಚದಲ್ಲಿ ಶ್ರೀ ಬಾಬಲೇಶ್ವರ, ಗಾನದಲ್ಲಿ ವಿದುಷಿ ಶ್ರೇಯಾ ಕೊಳತ್ತಾಯ ಮತ್ತು ಸಂಗಡಿಗರು, ನೃತ್ಯದಲ್ಲಿ ಮಂಗಳೂರು ಸನಾತನ ನಾಟ್ಯಾಲಯದ ವಿದುಷಿ ಶಾರದಾ ಮಣಿಶೇಖರ್ ಇವರ ಶಿಷ್ಯ ವೃಂದದವರಿಂದ ಪ್ರದರ್ಶನ ನಡೆಯಿತು.
ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ.ಐ.ಶಶಿಕಾಂತ್ ಜೈನ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶಾಂತಿವನ ಟ್ರಸ್ಟಿನ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ವಂದಿಸಿದರು. ರಾಜ್ಯ ಯೋಗ ಸಂಘಟಕ ಶೇಖರ್ ಕಡ್ತಲ ವಿಜೇತರ ಪಟ್ಟಿ ವಾಚಿಸಿದರು. ಕಾರ್ಕಳ ಶ್ರೀ ಭುವನೇಂದ್ರ ಪ್ರೌಢಶಾಲೆ ಶಿಕ್ಷಕ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ, ಶಾಂತಿವನ ಟ್ರಸ್ಟಿನ ಡಾ.ಪ್ರಶಾಂತ್ ಶೆಟ್ಟಿ, ಧರ್ಮಸ್ಥಳದ ಶ್ರದ್ಧಾ ಅಮಿತ್, ಡಾ.ಶಿವಪ್ರಸಾದ್ ಶೆಟ್ಟಿ, ಧರ್ಮಸ್ಥಳ ಕ್ಷೇತ್ರದ ನಾನಾ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು ಉಪಸ್ಥಿತರಿದ್ದರು.
ರಾಜ್ಯಮಟ್ಟದ ಅಂಚೆ ಕುಂಚ ಸ್ಪರ್ಧೆ ವಿಜೇತರ ವಿವರ:
ಪ್ರಾಥಮಿಕ ಶಾಲಾ ವಿಭಾಗ: 1. ರವಿರಾಜ ಕಿರಣ ನಾಯ್ಕ, ದಿನಕರ ದೇಸಾಯಿ ಪ್ರಾಥಮಿಕ ಶಾಲೆ ಅಂಕೋಲಾ, 2. ಕುಶಿತ್ ಮಲ್ಲಾರ, ಕುಮಾರಸ್ವಾಮಿ ಹಿ.ಪ್ರಾ.ಶಾಲೆ ಸುಬ್ರಹ್ಮಣ್ಯ, 3. ನಿಹಾಲಿ, ಕುಮಾರಸ್ವಾಮಿ ಆಂಗ್ಲಮಾಧ್ಯಮ ಹಿ.ಪ್ರಾ.ಶಾಲೆ ಸುಬ್ರಹ್ಮಣ್ಯ.
ಪ್ರೌಢಶಾಲಾ ವಿಭಾಗ: 1. ಪೂರ್ವಿ ದಯಾನಂದ ಶೇಟ್, ಮಾರಿಕಾಂಬಾ ಸರಕಾರಿ ಪ.ಪೂ.ಕಾಲೇಜು ಶಿರಸಿ, 2. ಸಾತ್ವಿ ಕಿಣಿ, ಎಸ್.ವಿ.ಎಸ್. ಟೆಂಪಲ್ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ, 3. ಅನ್ವಿತ್ ಎಚ್.ಕೆನರಾ ಹಿ.ಪ್ರಾ.ಶಾಲೆ ಉರ್ವ ಮಂಗಳೂರು.
ಕಾಲೇಜು ವಿಭಾಗ: 1. ಪ್ರಸಾದ ಶ್ರೀಧರ ಮೇತ್ರಿ, ಟಾಗೋರ್ ಸ್ಕೂಲ್ ಆಫ್ ಆರ್ಟ್ ಅಂಕೋಲಾ, 2. ಅಖಿಲೇಶ ನಾಗೇಶ ನಾಯ್ಕ, ಕಾಮಧೇನು ಕಾಲೇಜು ಕಾರವಾರ, 3. ಸಂದೀಪ್ ಆರ್. ಪೈ, ವಿದ್ಯೋದಯ ಪ.ಪೂ.ಕಾಲೇಜು ಉಡುಪಿ.
ಸಾರ್ವಜನಿಕ ವಿಭಾಗ: 1. ಪೂರ್ಣಿಮಾ ಜಿ.ಎಸ್. ನಾಗರಕೊಡಿಗೆ ಹೊಸನಗರ, 2. ಸಿದ್ಧಲಿಂಗಪ್ಪ ಕುರುಬರ, ಗುಡ್ಡದಮತ್ತಿಹಳ್ಳಿ ಹಾನಗಲ್ ತಾಲೂಕು, 3. ಅಕ್ಷಯ ವಾಸುದೇವ ನಾಯ್ಕ, ಆವರ್ಸಾ ಅಂಚೆ ಅಂಕೋಲ.