ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಇದರ ಆಶ್ರಯದಲ್ಲಿ 49ನೆಯ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪತ್ರಿಕಾ ಭವನದಲ್ಲಿ ದಿನಾಂಕ 10 ಜನವರಿ 2026ರಂದು ನಡೆಯಿತು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಬಿ. ಸತ್ಯವತಿ ಎಸ್. ಭಟ್ ಕೊಳಚಪ್ಪು ಇವರ ಹನ್ನೆರಡನೆಯ ಕೃತಿ ‘ಹೆಜ್ಜಾಲದ ಬಿಳಲುಗಳು’ ಕೌಟುಂಬಿಕ ಕಥಾ ಹಂದರವನ್ನು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಇಂಜಿನಿಯರ್ ಬಿ. ಮಹಾಬಲ ತಿಲಕ ಮಂಗಳೂರು ಇವರು ಬಿಡುಗಡೆಗೊಳಿಸಿ ಅಮ್ಮನ ಸಾಹಿತ್ಯ ಸಾಧನೆಗೆ ಅತೀವ ಸಂತಸ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ಇವರು ಕೃತಿಯ ಪರಿಚಯಗೈದು “ಕೃತಿಗಾರ್ತಿ ಸತ್ಯವತಿ ಭಟ್ ಕೊಳಚಪ್ಪು ಇವರಲ್ಲಿ ಕೌಟುಂಬಿಕ ಕಥೆಯನ್ನು ಹೆಣೆಯುವ ಸಾಮರ್ಥ್ಯ ರಕ್ತಗತವಾಗಿದೆ. ಯಾವ ರೀತಿ ಕಥೆಗಳು ಓದುಗರ ಮನಸ್ಸನ್ನು ಸೆಳೆಯಬೇಕು ಎನ್ನುವುದನ್ನು ಚೆನ್ನಾಗಿ ಅರಿತುಕೊಂಡು ವಿವಿಧ ರೀತಿಯ ಕಥೆಗಳನ್ನು ವಿಭಿನ್ನವಾಗಿ ಜೋಡಿಸಿರುವುದು ನಿಜಕ್ಕೂ ವಿಶೇಷವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಎಂಭತ್ತೊಂದರ ಹರೆಯದಲ್ಲಿ ಅತ್ಯಂತ ಹುರುಪಿನಿಂದ, ಎಲ್ಲರಿಗೂ ಸ್ಫೂರ್ತಿಯಂತಿರುವ ಬಿ. ಸತ್ಯವತಿ ಎಸ್. ಭಟ್ ಕೊಳಚಪ್ಪು ಇವರು ವಿವಿಧ ಪ್ರಕಾರಗಳ ಸಾಹಿತ್ಯದಲ್ಲಿ ಕೈಯಾಡಿಸಿರುವ ರೀತಿ ನಿಜಕ್ಕೂ ಶ್ಲಾಘನೀಯ. ‘ಹೆಜ್ಜಾಲದ ಬಿಳಲುಗಳು’ ಇದರಲ್ಲಿರುವ ಒಟ್ಟು 23 ಕಥೆಗಳು ತಾಯಿ ಸರಸ್ವತಿಯ ಕೊರಳನ್ನು ಅಲಂಕರಿಸುವ ‘ಮುತ್ತಿನ ಹಾರ’ಗಳಂತಿವೆ” ಎಂದು ಸಭಾಧ್ಯಕ್ಷತೆ ವಹಿಸಿದ ಡಾ. ಅರುಣಾ ನಾಗರಾಜ್ ಪ್ರಶಂಸೆಗೈದರು.
ತಾಯಿ ಸರಸ್ವತಿಯ ಅನುಗ್ರಹದಿಂದ ಮತ್ತು ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳ ಪ್ರೋತ್ಸಾಹದಿಂದ ಇದುವರೆಗೆ ಒಟ್ಟು ಹನ್ನೆರಡು ಕೃತಿಗಳನ್ನು ಪ್ರಕಟಿಸಲು ಸಾಧ್ಯವಾಯಿತು. ಕೃತಿ ಬಿಡುಗಡೆಯ ಇಂದಿನ ದಿನ ನನ್ನ ಜೀವನದಲ್ಲಿ ಅವಿಸ್ಮರಣೀಯವಾಗಿ ಮೂಡಿಬಂದಿದೆ ಎಂದು ಸಹಕರಿಸಿದ ಸರ್ವರಿಗೆ ಕೃತಿಕಾರರು ಬಿ. ಸತ್ಯವತಿ ಎಸ್. ಭಟ್ ಕೊಳಚಪ್ಪು ಧನ್ಯವಾದ ಸಲ್ಲಿಸಿದರು. ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಯುವ ಲೇಖಕ ಲತೀಶ್ ಎಂ. ಸಂಕೋಳಿಗೆ ಉಪಸ್ಥಿತರಿದ್ದರು. ಕವಯಿತ್ರಿ ಶಿಕ್ಷಕಿ ಸುರೇಖಾ ಯಳವಾರ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.
