ಮಂಗಳೂರು : ವಿದ್ಯಾಪ್ರಕಾಶನ ಮಂಗಳೂರು ವತಿಯಿಂದ ಸಾಹಿತಿ ರಘು ಇಡ್ಕಿದು ಅವರ 29ನೇ ಕೃತಿ ‘ಎಲ್ಲವೂ ಬದಲಾಗುತ್ತದೆ’ ಬಿಡುಗಡೆ ಸಮಾರಂಭ ನಗರದ ಪತ್ರಿಕಾಭವನದಲ್ಲಿ ದಿನಾಂಕ 21-12-2023ರಂದು ನಡೆಯಿತು.
‘ಎಲ್ಲವೂ ಬದಲಾಗುತ್ತದೆ’ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, “ಪರಿವರ್ತನೆ ಜಗದ ನಿಯಮ ಎಂಬಂತೆ ಕಾವ್ಯ ಹಾಗೂ ಸಾಹಿತ್ಯವೂ ಕಾಲಕಾಲಕ್ಕೆ ಮಾರ್ಪಾಡನ್ನು ಹೊಂದಿ, ಪ್ರಸ್ತುತ ವಿಶೇಷ ಪ್ರಕಾರಗಳನ್ನು ಹೊಂದುತ್ತಿದೆ. ಅದೇ ರೀತಿ ಎಲ್ಲವೂ ಬದಲಾಗುತ್ತದೆ ಎನ್ನುವ ಕವನ ಸಂಕಲನ ಶ್ರೇಷ್ಠ ಮತ್ತು ವಿಭಿನ್ನ ರೀತಿಯಲ್ಲಿ ಮೂಡಿಬಂದಿದೆ” ಎಂದರು.
ಮುಖ್ಯ ಅತಿಥಿಯಾಗಿದ್ದ ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ, “ರಘು ಇಡ್ಕಿದು ಅವರು ಉಪನ್ಯಾಸಕರಾಗಿ, ಅಂಕಣಕಾರರಾಗಿ ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡು ಬರೆಯುವವರು ಮತ್ತು ಪ್ರಯೋಗಶೀಲರು ಆಗಿದ್ದಾರೆ. ಕನ್ನಡ ಮತ್ತು ತುಳು ಸಾಹಿತ್ಯ ಲೋಕಕ್ಕೆ ರಘು ಅವರು ನೀಡಿದ ಕೊಡುಗೆ ಮೆಚ್ಚುವಂತಹುದು” ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಉಡುಪಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕಾ.ವೀ. ಕೃಷ್ಣದಾಸ್, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರಿ, ಪ್ರಕಾಶಕಿ ವಿದ್ಯಾ ಯು. ಉಪಸ್ಥಿತರಿದ್ದರು. ಕೃತಿ ರಚನೆಕಾರ ಸಾಹಿತಿ ರಘು ಇಡ್ಕಿದು ಸ್ವಾಗತಿಸಿ, ಎನ್. ಸುಬ್ರಾಯ ಭಟ್ ನಿರೂಪಿಸಿದರು.