ಮಂಗಳೂರು : ಕರಾವಳಿ ಲೇಖಕಿಯರ – ವಾಚಕಿಯರ ಸಂಘದ ಆಶ್ರಯದಲ್ಲಿ ಸಂಘದ ಕಾರ್ಯದರ್ಶಿ ಯಶೋದಾ ಮೋಹನ್ ಇವರ ಎರಡು ಕೃತಿಗಳ ಅನಾವರಣ ಕಾರ್ಯಕ್ರಮವು ಸಂಘದ ಸಭಾಂಗಣ ‘ಸಾಹಿತ್ಯ ಸದನ’ದಲ್ಲಿ ದಿನಾಂಕ 05 ಜನವರಿ 2025ರಂದು ನಡೆಯಿತು.
ಸಂಘದ ಅಧ್ಯಕ್ಷರಾದ ಶಕುಂತಳಾ ಟಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ‘ಇಳಿ ಹಗಲಿನ ತೇವಗಳು’ ಕನ್ನಡ ಕಥಾ ಸಂಕಲನವನ್ನು ಹಿರಿಯ ಸಾಹಿತಿ ಶ್ರೀ ಮುದ್ದು ಮೂಡುಬೆಳ್ಳೆಯವರು ಬಿಡುಗಡೆ ಮಾಡಿದರು. ಕೃತಿಯನ್ನು ಪರಿಚಯಿಸಿದ ಡಾ. ಸುಧಾರಾಣಿಯವರು “ಈ ಸಂಕಲನದಲ್ಲಿ ಲೇಖಕಿ ತನ್ನ ಅಸ್ಮಿತೆಯನ್ನು ಹುಡುಕಿಕೊಳ್ಳುತ್ತಲೇ ಮನುಷ್ಯ ಸಂಬಂಧಗಳ ತೇವವನ್ನು ಅರಸ ಬಯಸಿದ್ದಾರೆ. ಇಲ್ಲಿನ ಕಥೆಗಳು ಹೆಣ್ಣು ಕೇಂದ್ರಿತ ಮತ್ತು ಹೆಣ್ಣು ನೋಟವೇ ಆಗಿದ್ದರೂ ಸೀಮಿತ ಚೌಕಟ್ಟಿನದ್ದಲ್ಲ. ಆಧುನಿಕ ಕಾಲಘಟ್ಟದ ಮಾನವ ಸಂಬಂಧಗಳ ಬಿರುಕು, ಇಕ್ಕಟ್ಟು, ಬಿಕ್ಕಟ್ಟುಗಳನ್ನು ನಿರೂಪಿಸುವ ಈ ಕತೆಗಳು ನಿಜ ಅರ್ಥದಲ್ಲಿ ಇಳಿ ಹಗಲಿನ ತೇವಗಳು.” ಎಂದು ಅಭಿಪ್ರಾಯಪಟ್ಟರು.
‘ತಡ್ಯ ಕಡಪುನಗ’ ತುಳು ಕವಿತೆಗಳ ಸಂಕಲನವನ್ನು ಅನಾವರಣ ಮಾಡಿದ ಡಾ. ಜ್ಯೋತಿ ಚೇಳಾಯ್ರು ಮಾತನಾಡಿ “ಹೆಣ್ಣು ಮಕ್ಕಳು ಅವಕಾಶ ಸಿಗದ ಕಾಲದಲ್ಲಿ ಆ ಸಾಧ್ಯತೆಗಳನ್ನು ಅರಸಿಕೊಂಡು ಹೊರಟವರು. ಯಶೋದಾ ಮೋಹನ್ ತಾನು ಮನೆಯಲ್ಲೇ ಇರುವ ಅಂಜಿಕೆಯಿಂದ ಹೊರಬಂದು ಒಮ್ಮೆಲೇ ಎರಡು ಕೃತಿಗಳನ್ನು ಹೊರತಂದಿದ್ದಾರೆ. ಅವರು ಈ ಕೃತಿಯಲ್ಲಿ ಬಳಸಿದ ಪದಗಳ ಬಗೆಗೆ ಅವರಿಗಿರುವ ಸೂಕ್ಷ್ಮತೆ ಮತ್ತು ಗ್ರಹಿಕೆಗಳ ನಡುವೆ ಈ ಸಂಕಲನವು ತುಂಬಾ ಸುಂದರವಾಗಿದೆ.” ಅಂದರು.
ಡಾ. ಆಶಾಲತಾ ಚೇವಾರ್ ಅವರು ಈ ಕೃತಿಯನ್ನು ಪರಿಚಯಿಸುತ್ತಾ “ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಶಕ್ತವಾದ ಭಾಷೆಯಲ್ಲಿ ಕಟ್ಟಿಕೊಟ್ಟ ಕವನಗಳು ಪರಂಪರೆ ಮತ್ತು ಆಧುನಿಕತೆಯ ನಡುವಿನ ಕೊಂಡಿಯಾಗಿವೆ. ಗತಕಾಲದ ಬದುಕಿನ ದ್ಯೋತಕವಾಗಿ ತೆರೆದುಕೊಳ್ಳುವ ಈ ಕವನಗಳು ತುಳುನಾಡಿನ ಸಾಂಸ್ಕೃತಿಕ ಪಲ್ಲಟಗಳನ್ನು ಸ್ಪಷ್ಟವಾಗಿ ಗುರುತಿಸಿದೆ” ಅಂದರು.
ಕಾರ್ಯಕ್ರಮದ ನಡುವೆ ಖ್ಯಾತ ಸುಗಮ ಸಂಗೀತ ಗಾಯಕಿ ಸಂಗೀತ ಬಾಲಚಂದ್ರ ಇವರು ಕವನ ಸಂಕಲನದಲ್ಲಿರುವ ಕೆಲವೊಂದು ಕವಿತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಮೋಹನ್ ಸುವರ್ಣ ಉಪಸ್ಥಿತರಿದ್ದರು. ಮೋನಿಷಾ ಮುಕೇಶ್ ಆಶಯಗೀತೆಯನ್ನು ಪ್ರಸ್ತುತ ಪಡಿಸಿದರು. ಲೇಖಕಿ ಯಶೋದಾ ಮೋಹನ್ ಅತಿಥಿಗಳನ್ನು ಸ್ವಾಗತಿಸಿ, ಸುಧಾ ನಾಗೇಶ್ ವಂದನಾರ್ಪಣೆ ಮಾಡಿದರು. ಸುಖಲಾಕ್ಷಿ ವೈ. ಸುವರ್ಣ, ಮಂಜುಳಾ ಸುಕುಮಾರ್, ದೇವಿಕಾ ನಾಗೇಶ್, ಸರಿತಾ ಶೆಟ್ಟಿ, ಅಕ್ಷತಾ ಅನಿಕೇತ್ ಮತ್ತು ರೇಖಾ ಶಂಕರ್ ಸಹಕರಿಸಿದರು. ರೂಪಕಲಾ ಆಳ್ವ ಕಾರ್ಯಕ್ರಮವನ್ನು ನಡೆಸಿಕೊಟ್ಟರು.