ಮಂಗಳೂರು : ಕನ್ನಡದ ಹಿರಿಯ ಸಂಶೋಧಕ, ವಿಮರ್ಶಕ ಪ್ರೊ. ಬಿ.ಎ. ವಿವೇಕರ ರೈ ಇವರ ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಬಿಡುಗಡೆ ಸಮಾರಂಭವು ದಿನಾಂಕ 11 ಫೆಬ್ರವರಿ 2026ರಂದು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆಯಿತು.
ಆಕೃತಿ ಆಶಯ ಪಬ್ಲಿಕೇಶನ್ಸ್ ಇದರ ವತಿಯಿಂದ ಪ್ರಕಟಿಸಲಾದ ಕೃತಿ ಬಿಡುಗಡೆ ಸಮಾರಂಭದಲ್ಲಿ ಹಿರಿಯ ವಿದ್ವಾಂಸರು, ಲೇಖಕರು, ಕೃತಿಕಾರರಾದ ಡಾ. ಚಿನ್ನಪ್ಪ ಗೌಡ, ಚಂದ್ರಕಲಾ ನಂದಾವರ, ಡಾ. ನಾ. ದಾಮೋದರ ಶೆಟ್ಟಿಯವರು ಗದ್ಯ ಹಾಗೂ ಕಾವ್ಯಗಳ ಮೂಲಕ ಕೃತಿಯ ವೈಶಿಷ್ಟ್ಯವನ್ನು ವಿವರಿಸಿದರು. ಈ ವೇಳೆ ಚಂದ್ರಕಲಾ ನಂದಾವರ ಮಾತನಾಡಿ, “ವ್ಯಕ್ತಿ ಚಿತ್ರಣಕ್ಕೆ ಭಿನ್ನವಾದ ಮಾದರಿಯಾಗಿ ಮುಂದಿನವರಿಗೆ ಏನನ್ನು ದಾಟಿಸಬಹುದು, ಹಿರಿಯರು ಮಾಡಿದ್ದನ್ನು ಮುಂದಿನವರಿಗೆ ದಾಟಿಸಿದರೆ ಹೇಗೆ ಒಳ್ಳೆಯದನ್ನು ಕಾಣಬಹುದು ಎಂಬುದನ್ನು ದಾರಿಯಾಗಿದೆ ಈ ಪುಸ್ತಕ” ಎಂದು ಬಣ್ಣಿಸಿದರು.

ಹಿರಿಯ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಮಾತನಾಡಿ, “80ರ ಹರೆಯದ ಡಾ. ಬಿ.ಎ. ವಿವೇಕ ರೈಯವರು ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಸರಣಿ- 1ರ ಈ ಕೃತಿಯ ಮೂಲಕ ಮತ್ತಷ್ಟು ಸರಣಿಗಳನ್ನು ಬರೆಯುವ ಕುತೂಹಲ ಮೂಡಿಸಿದ್ದಾರೆ. ಮನಸ್ಸು ಓದುತ್ತಿದ್ದರೆ, ಬರೆಯುತ್ತಿದ್ದರೆ ಸ್ವಾಸ್ಥ್ಯದ ಲಕ್ಷಣ ಎಂಬುದನ್ನು ವಿವೇಕ ರೈ ತೋರ್ಪಡಿಸಿದ್ದಾರೆ. ತುಳು ಸಂಸ್ಕೃತಿ, ಭಾಷೆ, ನೆಲ, ಬದುಕು ಎಲ್ಲವನ್ನೂ ಸೇರಿಸಿ ಹೆಣೆಯುವ ಕೆಲಸವನ್ನು ಇಲ್ಲಿನ ಲೇಖಕರು ಗಂಭೀರವಾಗಿ ಮಾಡಿಕೊಂಡು ಬಂದಿದ್ದಾರೆ. ಬಹುತ್ವದಲ್ಲಿ ಏಕತೆ, ಭಾವೈಕ್ಯ, ಚಿಂತನೆ, ಸಮಗ್ರತೆಯನ್ನು ಬೆಸೆಯುವ ಕಾರ್ಯವನ್ನು ಮಾಡಿದ್ದಾರೆ. ಇಂತಹ ಬಹುತ್ವವನ್ನು ಅವಲೋಕಿಸುತ್ತಾ, ವಿಶ್ಲೇಷಿಸುವ ಮೂಲಕ ಹೊಸತೊಂದನ್ನು ಈ ಕೃತಿಯ ಮೂಲಕ ಕಟ್ಟಿಕೊಡುವ ಕಾರ್ಯ 240 ಪುಟಗಳ ಕೃತಿಯ ಮೂಲಕ ಮಾಡಲಾಗಿದೆ” ಎಂದರು.

“ಕುದ್ಮುಲ್ ರಂಗರಾವ್, ಪಂಜೆ ಮಂಗೇಶರಾವ್, ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಡಾ. ಕೆ. ಶಿವರಾಮ ಕಾರಂತ, ಸೇಡಿಯಾಪು ಕೃಷ್ಣ ಭಟ್ಟ, ಕಡೆಂಗೋಡ್ಲು ಶಂಕರ ಭಟ್ಟ, ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ, ನಾಡೋಜ ಕಯ್ಯಾರ ಕಿಞ್ಞಣ್ಣ ರೈ, ಪ್ರೊ. ಎಂ. ಗೋಪಾಲಕೃಷ್ಣ ಅಡಿಗ, ಬಿ.ಎಂ. ಇದಿನಬ್ಬ, ಪ್ರೊ. ಕು.ಶಿ. ಹರಿದಾಸ ಭಟ್ಟ, ನಿರಂಜನ, ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಪ್ರೊ. ಎಂ. ರಾಮಚಂದ್ರ, ಎಂ. ಮನೋರಮಾ ಭಟ್, ಡಾ. ವಾಮನ ನಂದಾವರ, ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರನ್ನೊಳಗೊಂಡ ಕರಾವಳಿಯ ಹಿರಿಯ ಲೇಖಕರ ಕುರಿತಾದ ಕೃತಿಯು ಕೂಡಾ ಗದ್ಯದೊಂದಿಗೆ ಕಾವ್ಯಗಳಿಂದ ಹೆಣೆಯಲಾಗಿದೆ.
ಗತಿಸಿಹೋದ ಕರಾವಳಿಯ ಹಿರಿಯ ಸಾಹಿತಿಗಳು, ಸಮಾಜ ಸುಧಾರಕರು, ಶಿಕ್ಷಕರು, ಕವಿಗಳು, ಸಂಶೋಧಕರ ಈ ಕೃತಿಯಲ್ಲಿ ಅವರ ಕವನಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಕಾವ್ಯ ಎನ್ನುವ ಜಗತ್ತು ನಮ್ಮನ್ನು ಮುನ್ನಡೆಸಿಕೊಂಡು ಸಾಗಬೇಕೆಂಬ ಸಂದೇಶವನ್ನು ಈ ಪುಸ್ತಕದ ಮೂಲಕ ಸಾರಲಾಗಿದೆ” ಎಂದು ಕೃತಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ. ಬಿ.ಎ. ವಿವೇಕ ರೈ ಹೇಳಿದರು.

ಹಿರಿಯ ಲೇಖಕ ಡಾ. ನಾ. ದಾಮೋದರ ಶೆಟ್ಟಿ ಮಾತನಾಡಿ “ದಾಖಲೆ ರೂಪದಲ್ಲಿ ಮರೆತು ಹೋಗುವ ವಿಚಾರಗಳನ್ನು ಮುಂದಿನ ಪೀಳಿಗೆಗೆ ನೀಡುವ ಕೃತಿ ಇದಾಗಿದೆ. ಹಿರಿಯರ ಹೃದಯಾಂತರಾಳದಿಂದ ಹೊರಡುವ ವಿಚಾರಗಳನ್ನು ದಾಖಲಿಸಿಕೊಂಡು ರಚಿಸಲಾಗಿರುವ ಈ ಕೃತಿಯು ವಿವೇಕ ರೈ ಅವರು ತಮ್ಮ ಜೀವಿತಕಾಲದಲ್ಲಿ ನೀಡಿದ ಅಮೂಲ್ಯ ಕೊಡುಗೆ” ಎಂದು ಹೇಳಿದರು
ಆರಂಭದಲ್ಲಿ ಮೈಮ್ ರಾಮ್ ದಾಸ್ ಇವರು ಕಡೆಂಗೋಡ್ಲು ಶಂಕರ ಭಟ್ ಅವರ ‘ಕನ್ನಡ ನಾಡಿನ ಕಾರ್ಗಾಲದ ವೈಭವವೇನು’ ಹಾಗೂ ಗೋಪಾಲ ಕೃಷ್ಣ ಅಡಿಗರ ‘ನಾವೆಲ್ಲರೂ ಒಂದೇ ಜಾತಿ ಒಂದೇ ಮತ, ಒಂದೇ ಕುಲ’ ಹಾಡಿನ ಮೂಲಕ ಕೃತಿ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿದರು. ಕಯ್ಯಾರ ಕಿಞ್ಞಣ್ಣ ರೈ ಇವರ ‘ಸಾರೊ ಎಸಲ್ದ ತಾಮರೆ’ ತುಳು ಹಾಡನ್ನು ಹಾಡುವ ಮೂಲಕ ರತ್ನಾವತಿ ಜೆ. ಬೈಕಾಡಿಯವರು ಕೃತಿ ಬಿಡುಗಡೆ ಸಮಾರಂಭಕ್ಕೆ ತೆರೆ ಎಳೆದರು.
