ಕೊಡಗು : ಕೊಡಗಿನ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಕೊಡವ ಸಮಾಜದಲ್ಲಿ ದಿನಾಂಕ 19 ಜನವರಿ 2025ರಂದು ಚೆಕ್ಕೇರ ಕುಟುಂಬದ ಆತಿಥ್ಯದ 23ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಪಂಚಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ಇವರು ಕೊಡವ ಭಾಷೆಯಲ್ಲಿ ರಚಿಸಿರುವ ಹನ್ನೊಂದು ಪ್ರಕಾರದ ಕವನವನ್ನು ಒಳಗೊಂಡಿರುವ ‘ಪಾನೆಲ್ಚಿಲ್ ಪೊನ್ನೆಳ್ತ್’ ಎಂಬ ಕವನ ಸಂಕಲನವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣರು ಲೋಕಾರ್ಪಣೆ ಮಾಡಿದರು.
ಚೆಕ್ಕೇರ ಕಪ್ಪ್ ಪಂದ್ಯಾವಳಿ ಅಧ್ಯಕ್ಷರಾದ ಚಂದ್ರಪ್ರಕಾಶ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಸರಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರಾದ ತೀತಿರ ರೋಷನ್ ಅಪ್ಪಚ್ಚು, ಕೊಡವ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾದ ಕೀರ್ತಿಯಂಡ ಕಾರ್ಸನ್ ಕಾರ್ಯಪ್ಪ, ಅಂಜಿಗೇರಿ ನಾಡ್ ತಕ್ಕರಾದ ಚೆಕ್ಕೇರ ರಾಜೇಶ್, ಚೆಕ್ಕೇರ ಕುಟುಂಬದ ಅಧ್ಯಕ್ಷರಾದ ಕಾಶಿ ಕಾಳಯ್ಯ ಮತ್ತು ಪುಸ್ತಕ ದಾನಿ ಉಳುವಂಗಡ ಕಮಲಾಕ್ಷಿ ತರುಂಬಯ್ಯ ಉಪಸ್ಥಿತರಿದ್ದರು. ಲೇಖಕಿ ಉಳುವಂಗಡ ಕಾವೇರಿ ಉದಯಯವರ 29ನೇ ಕೃತಿ ಇದಾಗಿದ್ದು ‘ಸಿಪಾಯಿ ಮಾದಪ್ಪ’ ಎಂಬ ಮೂವತ್ತನೇ ಕೃತಿ (ಕಾದಂಬರಿ) ಬಿಡುಗಡೆಗೆ ಸಿದ್ದವಾಗಿರುತ್ತದೆ.
ಉಳುವಂಗಡ ಕಾವೇರಿ ಉದಯ :
ಕೊಡಗಿನಲ್ಲಿ ವಾಸಿಸುತ್ತಿರುವ ಗೃಹಿಣಿಯಾದ ಇವರು ಬಹುಭಾಷಾ ಸಾಹಿತಿ, ಕವಯಿತ್ರಿ, ಮುಕ್ತಕ ಕವಿ ಮತ್ತು ಚಿತ್ರಕಲಾವಿದೆಯಾಗಿರುವರು. ಟಿ. ಶೆಟ್ಟಿಗೇರಿ ನಿವಾಸಿ ಚಂಗುಲಂಡ ಸಿ. ಮಾದಪ್ಪ ಸರಸ್ವತಿ ದಂಪತಿಗಳ ಪುತ್ರಿಯಾಗಿ ಇಬ್ಬರು ಅಣ್ಣಂದಿರ ತಂಗಿಯಾಗಿ 1969ರಲ್ಲಿ ಜನಿಸಿದರು. ಪುತ್ತೂರಿನಲ್ಲಿ ಶಿಕ್ಷಣ ಮುಗಿಸಿ 1990ರಲ್ಲಿ ಉಳುವಂಗಡ ಯು. ಉದಯರವರನ್ನು ವಿವಾಹವಾದ ಇವರಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಸೊಸೆಯಂದಿರು ಇರುವರು.
ಕನ್ನಡ, ಕೊಡವ, ಇಂಗ್ಲೀಷ್, ಹಿಂದಿ ಮತ್ತು ಮಲಯಾಳಂ ಒಟ್ಟು ಐದು ಭಾಷೆಗಳಲ್ಲಿ ಇವರು ಬರೆದ ಒಟ್ಟು ಇಪ್ಪತ್ತೆಂಟು ಪುಸ್ತಕಗಳು ಲೋಕಾರ್ಪಣೆ ಆಗಿದ್ದು, ಆರು ಬಾಷೆಯಲ್ಲಿ ಕವನ ವಾಚನ ಮಾಡಿರುವರು. ಮೈಸೂರು ದಸರಾ ಕವಿಗೋಷ್ಟಿಯಲ್ಲಿ ಎರಡು ಬಾರಿ ಕವನ ವಾಚಿಸಿದ್ದು, ಹಲವಾರು ಕವಿಗೋಷ್ಟಿಯಲ್ಲಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿರುವರು. ಮೂರು ರಾಜ್ಯ ಪ್ರಶಸ್ತಿಗಳನ್ನು ಮೂರು ಜಿಲ್ಲಾ ಪ್ರಶಸ್ತಿಗಳನ್ನು ಮತ್ತು ಹತ್ತೊಂಬತ್ತು ಸನ್ಮಾನಗಳನ್ನು ಪಡೆದಿರುವ ಇವರು ಕನ್ನಡ ಸಾಹಿತ್ಯ ಪರಿಷತ್ತು ಶ್ರೀಮಂಗಲ ಹೋಬಳಿ ಅಧ್ಯಕ್ಷೆಯಾಗಿರುವರು. ಸಿರಿಗನ್ನಡ ವೇದಿಕೆ ಕೊಡಗು ಜಿಲ್ಲೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ, ಗುರುಕುಲ ಕಲಾಪ್ರತಿಷ್ಟಾನ ಕೊಡಗು ಜಿಲ್ಲಾ ಘಟಕದ ಗೌರವಾಧ್ಯಕ್ಷೆ ಹಾಗೂ ಕರ್ನಾಟಕ ಲೇಖಕಿಯರ ಸಂಘ ಕೊಡಗು ಶಾಖೆಯ ಉಪಾಧ್ಯಕ್ಷೆಯಾಗಿರುವರು. ಇವರು ಬರೆದ ಒಂದು ಕಾದಂಬರಿ ಕೊಡವ ಸಿನೆಮಾ ಆಗಿ ಯಶಸ್ವಿ ಪ್ರದರ್ಶನ ಕಂಡಿದ್ದು, ಒಂದು ಸಣ್ಣ ಕತೆ ಕಿರುಸಿನೆಮಾ ಆಗಿರುವುದು. ಇವರು ಬರೆದ ಕೊಡವ ಭಕ್ತಿಗೀತೆ ಮಡಿಕೇರಿ ಆಕಾಶವಾಣಿಯ ಸುಪ್ರಭಾತದಲ್ಲಿ ನಿರಂತರ ಪ್ರಸಾರ ಆಗುತ್ತಿರುವುದು.
ಇವರ ವಿಳಾಸ : ಉಳುವಂಗಡ ಕಾವೇರಿ ಉದಯ, ಟಿ. ಶೆಟ್ಟಿಗೇರಿ ಗ್ರಾಮ ಅಂಚೆ, ಪೊನ್ನಂಪೇಟೆ ತಾಲೂಕು, ಕೊಡಗು 571249. ಮೊ. 9591366296