ಮುಂಬೈ : ಮುಂಬೈಯ ಹಿರಿಯ ಲೇಖಕ, ಅನುವಾದಕ, ಉದ್ಯಮಿ, ಚಿತ್ರ ಕಲಾವಿದ ವೆಂಕಟ್ರಾಜ ರಾವ್ ಅವರ ಚೊಚ್ಚಲ ಕನ್ನಡ ಕೃತಿ ‘ಪಟೇಲರ ಹುಲಿ ಬೇಟೆ’ ಕಥಾ ಸಂಕಲನವು ದಿನಾಂಕ 19 ಅಕ್ಟೋಬರ್ 2024ರ ಶನಿವಾರ ಮಧ್ಯಾಹ್ನ 2-00 ಗಂಟೆಗೆ ಮುಂಬೈ ವಿಶ್ವವಿದ್ಯಾಲಯದ ಜೆ.ಪಿ. ನಾಯಕ ಭವನದಲ್ಲಿ ಬಿಡುಗಡೆಯಾಗಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಪ್ರೊ. ಜಿ.ಎನ್. ಉಪಾಧ್ಯ ಇವರು ವಹಿಸಲಿದ್ದು, ಈ ಕೃತಿಯ ಕುರಿತು ಲೇಖಕರಾದ ಸವಿತಾ ಅರುಣ್ ಶೆಟ್ಟಿಯವರು ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕಲಾವಿದ, ಲೇಖಕ ಕೋಲ್ಯಾರು ರಾಜು ಶೆಟ್ಟಿ ಹಾಗೂ ಹಿರಿಯ ಸಾಹಿತಿ ಮಿತ್ರಾ ವೆಂಕಟ್ರಾಜ ಇವರುಗಳ ಕೃತಿಗಳು ಕೂಡಾ ಬಿಡುಗಡೆ ಕಾಣಲಿದೆ. ಈ ಕೃತಿಯನ್ನು ಶ್ರೀರಾಮ ಮಂಡ್ಯ ಪ್ರಕಟಿಸಿದೆ.
ವೆಂಕಟ್ರಾಜ ರಾವ್ :
ಮುಂಬೈಯಲ್ಲಿ ನೆಲೆಸಿ ಲೇಖಕರಾಗಿ, ಉದ್ಯಮಿಯಾಗಿ, ಚಿತ್ರ ಕಲಾವಿದರಾಗಿ, ಸಮಾಜಸೇವಕರಾಗಿ ಹೆಸರು ಮಾಡಿರುವ ವೆಂಕಟ್ರಾಜ ರಾವ್ ಅವರು ಹೊನ್ನಾವರದಲ್ಲಿ 1941ರಲ್ಲಿ ಜನಿಸಿದರು. ಅವರ ವಿದ್ಯಾಭ್ಯಾಸ ಬಿ.ಎಸ್ಸಿ. ತನಕ ಉಡುಪಿಯಲ್ಲಾಯಿತು. ಬಳಿಕ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಬಿ.ಇ. ಪದವಿ ಮತ್ತು ಮುಂಬಯಿಯ ಐ.ಐ.ಟಿ.ಯಿಂದ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಮುಗಿಸಿದರು. ಮುಂಬಯಿಯಲ್ಲಿ ಇಂಡೋ-ಜರ್ಮನ್ ಕಂಪೆನಿಯಲ್ಲಿ ಸ್ವಲ್ಪ ವರ್ಷಗಳ ಕಾಲ ಕೆಲಸ ಮಾಡಿ, ತಮ್ಮ ಸ್ವಂತ ಇಂಜಿನಿಯರಿಂಗ್ ಕಂಪೆನಿಯನ್ನು ಆರಂಭಿಸಿದರು. ಈ ಕಂಪೆನಿಯು ಮೆಟಲ್ಲರ್ಜಿಕಲ್ ಇಂಡಸ್ಟ್ರಿಗಳಿಗೆ ಬೇಕಾದ ಸಾಧನ-ಸಲಕರಣೆಗಳ ವಿನ್ಯಾಸ ಮತ್ತು ತಯಾರಿಕೆ ಮಾಡುವುದರಲ್ಲಿ ಸಶಕ್ತವಾಗಿತ್ತು. ಸುಮಾರು ಐವತ್ತು ವರ್ಷಗಳ ಕಾಲ ದೇಶದಲ್ಲೂ, ವಿದೇಶಗಳಲ್ಲೂ ಔದ್ಯೋಗಿಕ ಉಪಕರಣಗಳನ್ನು ಕಟ್ಟಿ-ನಡೆಸಿದ ಮೇಲೆ, ಯುರೋಪಿನ ಕಂಪನಿಯೊಂದಕ್ಕೆ ಉದ್ಯೋಗವನ್ನು ವಹಿಸಿಕೊಟ್ಟು ವೆಂಕಟ್ರಾಜ ನಿವೃತ್ತರಾದರು. ಪ್ರಸಿದ್ಧ ಸಾಹಿತಿ ಮಿತ್ರಾ ವೆಂಕಟ್ರಾಜ್ ಇವರ ಧರ್ಮಪತ್ನಿ.
ರಾವ್ ಇವರಿಗೆ ಚಿಕ್ಕಂದಿನಿಂದಲೂ ಸಾಹಿತ್ಯ, ಕಲೆ, ಸಂಗೀತ ಇತ್ಯಾದಿಗಳಲ್ಲಿ ಆಸಕ್ತಿಯಿದ್ದು, ಕನ್ನಡ ಮತ್ತು ಇಂಗ್ಲೀಷ್ ಪುಸ್ತಕಗಳನ್ನು ಓದುವ ಹಾಗೂ ಲೇಖನಗಳನ್ನು ಬರೆಯುವ ಹವ್ಯಾಸವನ್ನು ಬೆಳಸಿಕೊಂಡಿದ್ದರು. ಇವರು ಬರೆದ ಲೇಖನಗಳು ಉದಯವಾಣಿ, ಸುಧಾ, ಸಂಕಲನ, ಕಾಲನಿರ್ಣಯ, ಗೋಕುಲವಾಣಿ, ಇಕಾನಾಮಿಕ್ ಟೈಮ್ಸ್ ಮುಂತಾದವುಗಳಲ್ಲಿ ಪ್ರಕಟವಾಗಿವೆ. ಟೈಮ್ಸ್ ಆಫ್ ಇಂಡಿಯಾ ಬ್ಲಾಗ್ ಇವರ ಹಲವು ಇಂಗ್ಲೀಷ್ ಲೇಖನಗಳನ್ನು ಪ್ರಕಟಿಸಿದೆ.
ಮಿತ್ರಾ ಅವರ ಕಾದಂಬರಿ ‘ಪಾಚಿಕಟ್ಟಿದ ಪಾಗಾರ’ ಮತ್ತು ಕೆಲವು ಸಣ್ಣ ಕತೆಗಳನ್ನು ಇಂಗ್ಲೀಷಿಗೆ ಅನುವಾದ ಮಾಡಿದ್ದು ‘ಎ ವಾರ್ಪಡ್ ಸ್ಪೇಸ್’, ‘ದಿ ವೈಟ್ ಸಿಫಾನ್ ಸಾರಿ’ ಎಂಬ ಹೆಸರುಗಳಲ್ಲಿ ಪ್ರಕಟವಾಗಿವೆ. ಚಿತ್ರಕಲೆಯಲ್ಲೂ ಪಳಗಿದ ಇವರು ಅನೇಕ ಕೃತಿಗಳಿಗೆ ಮುಖ ಪುಟ ವಿನ್ಯಾಸ ಮಾಡಿದ ಹಿರಿಮೆ ಇವರದ್ದು. ಇವರಿಗೆ ಇಬ್ಬರು ಮಕ್ಕಳು ಮೈಥಿಲಿ ಮತ್ತು ಜಯದೇವ. ಪ್ರಸ್ತುತ 83 ವರ್ಷ ಪ್ರಾಯದ ಇವರು ಸಕ್ರಿಯವಾಗಿ ಓದು, ಅಧ್ಯಯನ, ಬರವಣಿಗೆ ಕೆಲಸದಲ್ಲಿ ನಿರತರಾಗಿದ್ದಾರೆ.