ಒಡಿಯೂರು : ಶ್ರೀಕ್ಷೇತ್ರ ಒಡಿಯೂರಿನಲ್ಲಿ ದಿನಾಂಕ 06 ಫೆಬ್ರವರಿ 2025ರಂದು ಜರಗಿದ 25ನೇ ವರ್ಷದ ಬೆಳ್ಳಿಹಬ್ಬದ ತುಳು ಸಾಹಿತ್ಯ ಸಮ್ಮೇಳನದಲ್ಲಿ ಪ್ರಸಿದ್ಧ ಕವಿ-ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರ ‘ಮಾಯಿಪ್ಪಾಡಿದ ವೀರಪುರುಷೆ ಪುಳ್ಕೂರುದ ಬಾಚೆ’ ಎಂಬ ಐತಿಹಾಸಿಕ ತುಳು ಕೃತಿಯನ್ನು ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಬಿಡುಗಡೆಗೊಳಿಸಿದರು. “ಹೆಚ್ಚು ಹೆಚ್ಚು ತುಳು ಕೃತಿಗಳು ಪ್ರಕಟವಾದಷ್ಟೂ ತುಳು ಭಾಷೆ – ಸಾಹಿತ್ಯ ಶ್ರೀಮಂತವಾಗುತ್ತದೆ” ಎಂದು ಸ್ವಾಮೀಜಿ ಈ ಸಂದರ್ಭದಲ್ಲಿ ನುಡಿದರು.
ಸುಮಾರು ಮುನ್ನೂರು ವರ್ಷಗಳ ಹಿಂದೆ ಕುಂಬಳೆ ರಾಜ್ಯದ ಮಾಯಿಪ್ಪಾಡಿ ಸಂಸ್ಥಾನದಲ್ಲಿ ಜಟ್ಟಿಯಾಗಿದ್ದ, ಸೇನಾ ದಂಡನಾಯಕನೂ ಆಗಿದ್ದ ವೀರಪುರುಷ ಪುಳ್ಕೂರು ಬಾಚೆ ತುಳುನಾಡಿನ ಓರ್ವ ಕಟ್ಟಾಳು ಆಗಿದ್ದ. ಕಲ್ಲಾಟದ ಬಾಚೆ ಎಂದೇ ಪ್ರಸಿದ್ಧನಾಗಿದ್ದ ಈ ಐತಿಹಾಸಿಕ ವ್ಯಕ್ತಿ ದೊಡ್ಡ ದೊಡ್ಡ ಕಲ್ಲುಬಂಡೆಗಳನ್ನು ಹೊತ್ತು ಸಾಗಿಸುವ ಹೊಂತಗಾರಿಯೂ ಆಗಿದ್ದ. ಆತನ ಬದುಕಿನ ಬಗೆಗಿನ ಸ್ವಾರಸ್ಯಕರ ಘಟನೆಗಳನ್ನು ಐತಿಹ್ಯಗಳ ಆಧಾರದಿಂದ ಕಲೆಹಾಕಿ ಡಾ. ಪೆರ್ಲರು ಈ ಕೃತಿ ರಚನೆ ಮಾಡಿದ್ದಾರೆ. ಜೊತೆಗೆ ಸುಮಾರು ಸಾವಿರದ ಐನೂರು ವರ್ಷಗಳ ಇತಿಹಾಸವಿರುವ, ಕದಂಬರಾಜರ ಕವಲಾಗಿರುವ ಮಾಯಿಪ್ಪಾಡಿಯ ಅರಸರ ಚರಿತ್ರೆಯನ್ನೂ ತಿಳಿಸಿದ್ದಾರೆ.
ಈಗ ಕೇರಳಕ್ಕೆ ಸೇರಿ ಹೋಗಿ ತುಳುನಾಡಿನ ಸಂಪದ್ಭರಿತ ಐತಿಹಾಸಿಕ ಪರಂಪರೆ ಕಣ್ಮರೆಯಾಗುತ್ತಿರುವ ಮತ್ತು ನಷ್ಟಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಪುಳ್ಕೂರು ಬಾಚೆ ಕೃತಿಯು ತುಳುನಾಡಿನ ಹಲವು ಐತಿಹಾಸಿಕ ಸಂಗತಿಗಳನ್ನು ಮತ್ತೆ ನಮಗೆ ನೆನಪಿಸುತ್ತದೆ. ಬಾಚನ ಇತಿಹಾಸವನ್ನು ತಿಳಿಸುವ ಜೊತೆಗೆ ತುಳುನಾಡಿನ ಆ ಕಾಲದ ಹಲವು ಅಪರೂಪದ ಸಾಂಸ್ಕೃತಿಕ ಸಂಗತಿಗಳನ್ನು ಈ ಕೃತಿಯಲ್ಲಿ ಅನಾವರಣಗೊಳಿಸಲಾಗಿದೆ.
ಭಾಸ್ಕರ ರೈ ಕುಕ್ಕುವಳ್ಳಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ತುಳುಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ತುಳುನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತುಳು ಸಾಹಿತ್ಯ ಸಮ್ಮೇಳನದ ಪ್ರಧಾನ ಸಂಚಾಲಕ ಡಾ. ವಸಂತಕುಮಾರ ಪೆರ್ಲ, ಇನ್ನೋರ್ವ ಸಂಚಾಲಕ ಕದ್ರಿ ನವನೀತ ಶೆಟ್ಟಿ ವೇದಿಕೆಯಲ್ಲಿದ್ದರು.