ಕಿನ್ನಿಗೋಳಿ : ಸಚ್ಚೇರಿಪೇಟೆ ಸೇತುವೆ ಬಳಿಯ ಶಾಂಭವಿ ನದಿ ತಟದಲ್ಲಿರುವ ಆಳಗುಂಡಿ ಬ್ರಹ್ಮಸ್ಥಾನದಲ್ಲಿ ದಿನಾಂಕ 15 ಫೆಬ್ರವರಿ 2026ರಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದ ವತಿಯಿಂದ ಡಾ. ಬಿ. ಜನಾರ್ದನ ಭಟ್ ಬರೆದ ‘ತುಳುನಾಡಿನ ಬೆರ್ಮರು’ ಹಾಗೂ ‘ಹೊಸಹೊಳಲು’ ಕೃತಿಗಳ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.
ಸಂವಾದದಲ್ಲಿ ಭಾಗವಹಿಸಿದ ಖ್ಯಾತ ಸಾಹಿತಿ ಡಾ. ಬಿ. ಜನಾರ್ದನ ಭಟ್ “ತುಳುನಾಡಿನ ದೈವಾರಾಧನೆಯ ಕ್ಷೇತ್ರಗಳಲ್ಲಿ ಪ್ರಧಾನ ದೈವವಾಗಿ ಆರಾಧನೆಗೊಳ್ಳುವ ದೈವಿಕಶಕ್ತಿಯಾದ ಬೆರ್ಮರು ಚತುರ್ಮುಖ ಬ್ರಹ್ಮನಲ್ಲ. ಬೆರ್ಮರು ಎನ್ನುವ ಪದ ತಮಿಳು ಭಾಷೆಯ ಪೆರುಮಾಳ್ ಪದದ ಹಾಗೆ ದೇವರು ಎಂಬ ಅರ್ಥ ಕೊಡುವ ರೂಢನಾಮವಾಗಿದೆ. ‘ಬೆರ್ಮರು’ ಪದವನ್ನು ‘ಬ್ರಹ್ಮ’ ಎಂದು ಬರೆಯುವ ಕ್ರಮ ತುಳುಪದಗಳನ್ನು ಕನ್ನಡದಲ್ಲಿ ಬರೆಯುವ ಕ್ರಮದಂತೆ ಬಂದಿದೆ. ತುಳುವರ ಪ್ರಧಾನ ದೈವ ಬೆರ್ಮರು ಅಂದರೆ ಶಾಸ್ತಾವು ಅಥವಾ ಶಾತವಾಹನ. ಜೈನರ ಬ್ರಹ್ಮ ಯಕ್ಷನೂ ತುಂಬಾ ಕಾರಣಿಕದ ದೈವವಾಗಿದ್ದಾನೆ. ಮೊದಲು ಕೆಂಪುಕಲ್ಲು, ಆಮೇಲೆ ಗ್ರಾನೈಟ್ ಕಲ್ಲು, ಪದ್ಮಕಲ್ಲುಗಳಲ್ಲಿ ನಾಗಬೆರ್ಮರನ್ನು ನಂಬುವುದನ್ನು ಕಾಣುತ್ತೇವೆ. ಬೆರ್ಮರಿಗೆ ಸಾಂಕೇತಿಕವಾಗಿ ಪ್ರಧಾನ ದೈವವೆಂದು ಆರಾಧನೆ ಇರುತ್ತದೆ. ದೇವಸ್ಥಾನಗಳಲ್ಲಿ ನೈಋತ್ಯ ಭಾಗದಲ್ಲಿ ಶಾಸ್ತಾವು ಬೆರ್ಮರ ಆರಾಧನೆ ಇದೆ ಎನ್ನುವುದನ್ನು ಗುರುತಿಸಬಹುದು. ಚಿತ್ತಾರಿ ಹೆಸರಿನ ದೇವಸ್ಥಾನ ಅಥವಾ ದೈವಸ್ಥಾನಗಳು ಉಡುಪಿ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇವು ಬೆರ್ಮೆರ್ ದೈವದ ಮೂಲ ಆರಾಧನಾ ಸ್ಥಳವಾಗಿರಬೇಕು. ಕೆಲವು ಕಡೆ ಬೆರ್ಮರಿಗೆ ದೈವಕ್ಕೆ ಸಲ್ಲುವಂತಹ ಕೋಲ ಅಥವಾ ಕೋಲಬಲಿ ನಡೆಯುತ್ತದೆ” ಎಂದು ಬೆರ್ಮೆರ್ ಕುರಿತಾಗಿ ತನ್ನ ಕ್ಷೇತ್ರಕಾರ್ಯ, ಅಧ್ಯಯನ ಆಧರಿಸಿ ಅನೇಕ ಸಂಗತಿಗಳನ್ನು ಹೇಳಿದರು.

‘ತುಳುನಾಡಿನ ಬೆರ್ಮರು’ ಕೃತಿಯನ್ನು ಪೊಸ್ರಾಲು ದೇವಳ ಅರ್ಚಕ ರಾಘವೇಂದ್ರ ಭಟ್, ಮುಂಡ್ಕೂರು ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಗದೀಶ ಶೆಟ್ಟಿ ನಡಿಗುತ್ತು ಬಿಡುಗಡೆಗೊಳಿಸಿದರು. ಜನಾರ್ದನ ಭಟ್ಟರ ‘ಹೊಸಹೊಳಲು’ ಪುಸ್ತಕವನ್ನು ಬಿಡುಗಡೆಗೊಳಿಸಿದ ಇತಿಹಾಸ ತಜ್ಞ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಮಾತನಾಡಿ, “ಜನಾರ್ದನ ಭಟ್ಟರು ಕಾದಂಬರಿ, ಕಥಾಗಾರರಾಗಿಯೂ ಅಲ್ಲದೆ, ಇತಿಹಾಸದ ಕುರಿತಾಗಿ ವಿಶೇಷ ಆಸಕ್ತಿ ವಹಿಸಿ ಕೃತಿಗಳನ್ನು ರಚಿಸಿರುವುದು ಅಭಿನಂದನೀಯ” ಎಂದರು.

ಮುಂಡ್ಕೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸತ್ಯಶಂಕರ ಶೆಟ್ಟಿ “ಬೆರ್ಮಸ್ಥಾನದಲ್ಲಿ ಪ್ರಕೃತಿಯೊಂದಿಗೆ ಕೃತಿ ಬಿಡುಗಡೆ, ಸಂವಾದ ಕಾರ್ಯಕ್ರಮ ವಿಶಿಷ್ಟ ಅನುಭೂತಿ ಕೊಡುತ್ತಿದೆ. ಕೃತಿ ಕೊಂಡು ಓದಿ, ಹೊಸವಿಚಾರ ತಿಳಿದುಕೊಂಡು ನಮ್ಮನ್ನು ನಾವು ಎತ್ತರಿಸಿಕೊಳ್ಳೋಣ” ಎಂದರು. ಬಳಿಕ ಸಂವಾದ ನಡೆಯಿತು. ಕ.ಸಾ.ಪ. ಮೂಲ್ಕಿ ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು, ಪದಾಧಿಕಾರಿಗಳಾದ ವೀಣಾ ಶಶಿಧರ್, ಹೆರಿಕ್ ಪಾಯಸ್, ಪ್ರಕಾಶ್ ಆಚಾರ್, ಸ್ವರಾಜ್ ಶೆಟ್ಟಿ, ದೇವದಾಸ ಮಲ್ಯ, ಕೃಷ್ಣರಾಜ ಭಟ್, ಮಾಧವ ಕೆರೆಕಾಡು, ಪಂ.ಸದಸ್ಯ ಜಿತೇಂದ್ರ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.


ಪುಸ್ತಕದ ಪ್ರತಿಗಳಿಗಾಗಿ ಡಾ. ಬಿ. ಜನಾರ್ದನ ಭಟ್ ಇವರ 9481145775 ಮೊಬೈಲ್ ನಂಬ್ರವನ್ನು ಸಂಪರ್ಕಿಸಿರಿ.
