ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಹಾಗೂ ಬೆಂಗಳೂರಿನ ಸಪ್ನ ಬುಕ್ ಹೌಸ್‌ನ ಸಹಯೋಗದಲ್ಲಿ ನಡೆದ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾದ ಡಾ. ಎಂ. ವೀರಪ್ಪ ಮೊಯಿಲಿಯವರ ‘ವಿಶ್ವಸಂಸ್ಕೃತಿ ಮಹಾಯಾನ’ – ಸಂಪುಟ-2, ಗದ್ಯ ಮಹಾಕಾವ್ಯ ಲೋಕಾರ್ಪಣೆ ಸಮಾರಂಭವು ದಿನಾಂಕ 12 ಜನವರಿ 2025ರಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿ ಆವರಣದ ಡಾ. ವಿ.ಎಸ್. ಆಚಾರ್ಯ ಸಭಾಭವನದಲ್ಲಿ ಜರುಗಿತು.
ಮಹಾಕಾವ್ಯವನ್ನು ಲೋಕಾರ್ಪಣೆಗೊಳಿಸಿದ ಮೈಸೂರು ವಿವಿಯ ನಿವೃತ್ತ ಆಂಗ್ಲ ಪ್ರಾಧ್ಯಪಕ ಹಾಗೂ ಖ್ಯಾತ ವಿಮರ್ಶಕ ಪ್ರೊ. ನಾಗಣ್ಣ ಇವರು ಮಾತನಾಡಿ “ಮೊಯಿಲಿಯವರ ಸಂಕಲ್ಪಕ್ಕೂ ಅದರ ಸಾಕ್ಷಾತ್ಕರಕ್ಕೂ ಅಂತರವೇ ಇರಲಿಲ್ಲ. ಇದಕ್ಕೆ ಮುಖ್ಯ ಕಾರಣ ಅವರು ಬರ್ಹಿಲೋಕದಲ್ಲಿ ಜನಕಲ್ಯಾಣದಲ್ಲಿ ತೊಡಗಿರುವಂತೆ, ಅಂತರಂಗದಲ್ಲಿ ಹಲವಾರು ವಿಚಾರಗಳಿಗೆ ಅಕ್ಷರ ರೂಪ ಕೊಡುವಲ್ಲಿ ಧ್ಯಾನಸ್ಥರಾಗಿರುತ್ತಾರೆ. ಇವರು ಅಪರೂಪದ ಚೈತನ್ಯವೇ ಸರಿ. ವೀರಪ್ಪ ಮೊಯಿಲಿಯವರ ‘ವಿಶ್ವಸಂಸ್ಕೃತಿ ಮಹಾಯಾನ’ದ ಹೋಲಿಕೆ ಏನಾದರೂ ಇದ್ದರೆ, ಅಮೇರಿಕಾದ ಇತಿಹಾಸತಜ್ಞ ವಿಲ್ ಡ್ಯೂರಾಂಟ್ ಬರೆದಿರುವ ‘ನಾಗರೀಕತೆಯ ಕಥೆ’ ಎನ್ನುವ 11 ಸಂಪುಟಕ್ಕೆ ಸರಿಹೊಂದಬಲ್ಲದು. ಪ್ರಾಚ್ಛ ಪರಂಪರೆಯಿಂದ ಹಿಡಿದು ನೆಪೋಲಿಯನ್ ಯುಗದವರೆಗೆ ಡ್ಯೂರಾಂಟ್‌ರು ನಾಗರೀಕತೆಯ ಕಥೆಯನ್ನು ಬರೆದಿದ್ದಾರೆ. ಅದೇ ಬಗೆಯ ಕಾಳಜಿಯಿಂದ ಹಾಗೂ ಬೌದ್ಧಿಕ ಜವಾಬ್ದಾರಿಯಿಂದ ತಮ್ಮ ಸಂಪುಟವನ್ನು ರಚಿಸಿದ್ದಾರೆ. ಮೊಯಿಲಿಯವರು ಸಂಕಲ್ಪವನ್ನು ಸಿದ್ಧಿಸಿಕೊಳ್ಳುವ ಜಾಯಮಾನದವರು” ಎಂದು ಹೇಳಿದರು.
ಗ್ರಂಥಕರ್ತನ ನೆಲೆಯಲ್ಲಿ ಮಾತನಾಡಿದ ಡಾ. ವೀರಪ್ಪ ಮೊಯಿಲಿ “ತನ್ನ ಇಂದಿನ ಏಳಿಗೆಗೆ ಹಲವಾರು ಜನರ ಮಾರ್ಗದರ್ಶನ ಹಾಗೂ ಸ್ಪೂರ್ತಿಯೆ ಕಾರಣ. ಅವರಲ್ಲಿ ಪ್ರಮುಖರನ್ನ ಇಂದು ನಾನು ಸ್ಮರಿಸಿಕೊಳ್ಳಲು ಬಯಸುತ್ತೇನೆ ಎಂದು ಹೇಳಿ, ಕೃಷ್ಣಮೂರ್ತಿ ಭಟ್, ಭುಜಬಲಿ ಶಾಸ್ತ್ರಿ ಹಾಗೂ ಅವರ ಮೊಮ್ಮಗ ಅವಿನಾಶ, ವಿಮಲ್ ಕುಮಾರ್ ಶೆಟ್ಟಿ, ಪೌಲ್ ವರ್ಗೀಸ್, ಧರ್ಮಪಾಲ ದೇವಾಡಿಗ, ಕೆ.ಎಂ. ನಾಗರಾಜರವರನ್ನು ವೇದಿಕೆಗೆ ಕರೆಸಿ ಗುರುತಿಸಿ ಸನ್ಮಾನಿಸಿದರು. ತನ್ನ ವಿಶ್ವ ಸಂಸ್ಕೃತಿಯ ಮಹಾಯಾನ ಸಂಪುಟ 2 ಇದು ಪ್ರಶ್ನೋತ್ತರದ ರೀತಿಯಲ್ಲಿ ಅನಾವರಣಗೊಳ್ಳುತ್ತಿರುವಲ್ಲಿ ಇಂದಿನ ಶೈಕ್ಷಣಿಕ ಆವರಣಕ್ಕೊಂದು ಸಂದೇಶವಿದೆ. ಯಾಕೆಂದರೆ ಇಂದಿನ ಉನ್ನತ ಶಿಕ್ಷಣದಲ್ಲಿ ಈ ಪ್ರಶ್ನೋತ್ತರ- ವಿಚಾರ ವಿನಿಮಯ ಪರಂಪರೆ ಮರೆಯಾಗುತ್ತಿದೆ. ವಾಸ್ತವದಲ್ಲಿ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ನೀಡಬೇಕಿರುವುದು ಪ್ರಶ್ನೆಗಳನ್ನು ಕೇಳುವ ಪರಿಣತಿ. ಈ ಪರಿಣತಿಯನ್ನು ಗಳಿಸುವುದು ಜ್ಞಾನ. ವಿಜ್ಞಾನದ ಒಳಧ್ವನಿ ಏನು ಹೇಳುತ್ತಿದೆ ಎಂಬ ಪಿಸು ಮಾತನ್ನು ಕೇಳಲು ನಾವು ಸಿದ್ಧರಿಲ್ಲ. ಭೂಮಿಯನ್ನು ಮತ್ತು ಆಕಾಶವನ್ನು ನಮ್ಮ ವಿಜ್ಞಾನದಿಂದ ಜಯಿಸಿದ್ದೇವೆ ಎಂಬ ಹಮ್ಮಿನಿಂದ ಬಿಗುತ್ತಿದ್ದೇವೆ. ಬಾಲ್ಯದಲ್ಲಿ ನೋಡುತ್ತಿರುವ ಯಕ್ಷಗಾನದಲ್ಲಿ ಬರುವ, ಎಲ್ಲವನ್ನು ಗೆದ್ದಿದ್ದೇವೆ ಎಂದು ಬೀಗುವ ರಾಕ್ಷಸರಿಗೂ ಮನುಷ್ಯತ್ವ ಇಲ್ಲದೆ ವರ್ತಿಸುವ ಮನುಷ್ಯರಿಗೂ ಯಾವುದೇ ವ್ಯತ್ಯಾಸವಿಲ್ಲ. ಸಾಹಿತ್ಯವನ್ನು ಓದಿದಾಗ ಜನರು ಸಂಸ್ಕಾರವಂತರಾಗಿ ಬದಲಾಗಬೇಕು, ಸಂಸ್ಕೃತಿ ಸಾಹಿತ್ಯ ಇವೆರಡು ಜೊತೆಯಾದರೆ ಜಾಗತಿಕ ಸಂಸ್ಕೃತಿಯನ್ನು ಒಂದುಗೂಡಿಸಲು ಸಾಧ್ಯ ಎಂದರು. ಯೋಚನಾ ಶಕ್ತಿ, ನೈತಿಕ ಮೌಲ್ಯ, ಆಚರಣೆಗಳು, ಜಾಗೃತಿ, ತಾಳ್ಮೆ, ನ್ಯಾಯ, ಛಲ, ಇವುಗಳ ಬಗ್ಗೆ ತಿಳುವಳಿಕೆಯನ್ನು ಜನರು ಪಡೆದುಕೊಂಡಾಗ ಮಾತ್ರ ಕೆಟ್ಟದ್ದು ನಶಿಸಬಹುದು” ಎಂದರು.
ಆಶಯ ನುಡಿಗಳನ್ನಾಡಿದ ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿಗಳಾದ ಡಾ. ವಿವೇಕ್ ರೈ “ಮೊಯಿಲಿಯವರ ಮಹಾಸಂಪುಟವು ಬಹುಶಿಸ್ತೀಯ ಜ್ಞಾನವನ್ನು ಸಂವಾದದ ಮೂಲಕ ಹೇಳಿದ ಶ್ರೇಷ್ಠ ಗ್ರಂಥ. ಇಂತಹ ಗ್ರಂಥಗಳು ನಿಜವಾದ ಅರ್ಥದಲ್ಲಿ ನಮ್ಮನ್ನು ನಾಗರೀಕರನ್ನಾಗಿ ಮಾಡುತ್ತವೆ. ಇದು ಜ್ಞಾನದ ಜಾಲವಾಗಿ ನಮ್ಮನ್ನುಇನ್ನಷ್ಟು ಮಾನವೀಯಗುಣಗನ್ನು ಜಾಗೃತಿಗೊಳ್ಳಲು ಸಹಕರಿಸುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಮೋಹನ್ ಆಳ್ವ, “ಮೊಯಿಲಿಯವರು ಜೀವನದಲ್ಲಿ ಮಾಡಿದಂತ ಸಾಧನೆ, ಅವರ ಸಮಾಜದ ಪರಿಕಲ್ಪನೆ, ನ್ಯಾಯದ ಪರವಾಗಿ ಹೋರಾಟ, ವಿದ್ಯಾರ್ಥಿಗಳ ಮೇಲಿರುವ ಪ್ರೀತಿ, ಮೇಲು ಕೀಳು ಎನ್ನುವ ಭಾವನೆ ಇಲ್ಲದಿರುವುದು ನಿಜವಾದ ಮನುಷ್ಯಗುಣದ ಸಹಕಾರ ರೂಪ ಅವರು. ಆಳ್ವಾಸ್ ಸಂಸ್ಥೆಯ ಏಳ್ಗೆಗೂ ನೀಡಿದ ಸಹಕಾರವನ್ನು ಇದೇ ಸಂಧರ್ಭದಲ್ಲಿ ಸ್ಮರಿಸಿಕೊಂಡರು. ಮುಂದಿನ ದಿನಗಳಲ್ಲಿ ವೀರಪ್ಪ ಮೊಯಿಲಿ ಹೆಸರನ್ನು ಆಳ್ವಾಸ್‌ನಲ್ಲಿ ಹೊಸದಾಗಿ ಪ್ರಾರಂಭವಾದ ಕಾನೂನು ಕಾಲೇಜಿನ ನೂತನ ಕಟ್ಟಡಕ್ಕೆ ಇಡುವ ಇಂಗಿತವನ್ನು ವ್ಯಕ್ತಪಡಿಸಿದರು. ಜೊತೆಯಲ್ಲಿ ಮೊಯಿಲಿಯವರ 90ರ ಹುಟ್ಟುಹಬ್ಬವನ್ನು ತನ್ನ ಮುಂದಾಳತ್ವದಲ್ಲಿ ಮೂಡುಬಿದಿರೆಯಲ್ಲಿ ವಿಜೃಂಭಣೆಯಿಂದ ಮಾಡುವ ಅವಕಾಶ ದೇವರು ಒದಗಿಸಲಿ” ಎಂದು ಆಶಿಸಿದರು.
ಖ್ಯಾತ ಸಾಹಿತಿ ಹಾಗೂ ಸಂಶೋಧಕ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ ಮಾತನಾಡಿ “ಇಂದು ಯುದ್ಧಭೀತಿ ಎನ್ನುವಂತದ್ದು ಇಡೀ ಜಗತ್ತನ್ನು ಆವರಿಸಿದೆ ಪ್ರತಿವರ್ಷ 2.5 ಸಾವಿರ ಬಿಲಿಯನ್ ಡಾಲರ್ ಯುದ್ಧಕ್ಕಾಗಿ ಸೋರುತ್ತಿದೆ. ಸಂಸ್ಕೃತಿಯ ಕುರಿತಾಗಿ ಆಲೋಚನೆ ಮಾಡದೇ ಇರುವುದು ಇದಕ್ಕೆ ಕಾರಣ” ಎಂದು ಖೇದ ವ್ಯಕ್ತ ಪಡಿಸಿದರು.
ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಮಾತನಾಡಿ, “ವಿಕೃತಿಯ ಮನೋಭಾವ ಸಂಸ್ಕೃತಿಯನ್ನು ಕುಗ್ಗಿಸುತ್ತಿದೆ. ಬುದ್ಧಿವಂತರಾಗಿ, ಮನಸ್ಸಿನಿಂದ ಯೋಚಿಸಿದರೆ ಮಾತ್ರ ವಿಕೃತಿಯ ಮನೋಭಾವವನ್ನು ತೊರೆದು ಸಂಸ್ಕಾರಯುತ ಮನುಷ್ಯನಾಗಲು ಸಾಧ್ಯ. ಮುಂದಿನ ದಿನಗಳಲ್ಲಿ ಮೊಯಿಲಿಯವರ ಮುಂದಾಳತ್ವದಲ್ಲಿ ತತ್ವಶಾಸ್ತ್ರದ ಅಧ್ಯಯನಕ್ಕಾಗಿ ಕರ್ನಾಟಕದಲ್ಲಿ ನಾಲ್ಕು ಕೇಂದ್ರಗಳು ನಿರ್ಮಾಣವಾಗಿ, ಅವುಗಳಲ್ಲಿ ಒಂದನ್ನು ಮೂಡುಬಿದಿರೆಯಲ್ಲಿ ತೆರೆಯುವಂತಾಗಲಿ, ಆ ಮೂಲಕ ಜಗದಗಲ ಶಾಂತಿ ನೆಮ್ಮದಿಯ ಬಾಳು ನಮ್ಮದಾಗಲಿ” ಎಂದು ಆರ್ಶಿವದಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಪರಿಷತ್ ಸದಸ್ಯ ಐವನ್ ಡಿಸೋಜಾ, ಸಪ್ನ ಬುಕ್ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ, ಮೊಯಿಲಿಯವರ ಅಪಾರ ಅಭಿಮಾನಿ ಬಳಗ, ಊರ ಪರವೂರ ಹಿತೈಷಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರೊ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ನಿರೂಪಿಸಿದರು.