ಕಾಸರಗೋಡು : ಡಾ. ನಾ. ಮೊಗಸಾಲೆ ನೇತೃತ್ವದ ಕಾಂತಾವರ ಕನ್ನಡ ಸಂಘದ ಆಶ್ರಯದಲ್ಲಿ ದಿನಾಂಕ 1 ನವೆಂಬರ್ 2024ರಂದು ಕನ್ನಡ ಸಂಘದ ಬಯಲು ರಂಗ ಮಂದಿರದಲ್ಲಿ ನಡೆಯುವ ಕಾಂತಾವರ ಉತ್ಸವ – 2024 ಸಮಾರಂಭದಲ್ಲಿ ಕಾಸರಗೋಡಿನ ಮೂವರು ಸಾಹಿತಿಗಳ ನಾಲ್ಕು ಕೃತಿಗಳು ಲೋಕಾರ್ಪಣೆಯಾಗಲಿದೆ. ಕಾಂತಾವರದ ಕನ್ನಡ ಸಂಘವು ಪ್ರತೀ ವರ್ಷವೂ ಪ್ರಕಟಿಸುವ ‘ನಾಡಿಗೆ ನಮಸ್ಕಾರ’ ಗ್ರಂಥ ಮಾಲಿಕೆಯಲ್ಲಿ ಈ ನೂತನ ಕೃತಿಗಳು ಬಿಡುಗಡೆಯಾಗಲಿದೆ.
ಕಾಸರಗೋಡಿನ ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರು ರಚಿಸಿದ ‘ಕಾಸರಗೋಡಿನ ಕನ್ನಡ ಹೋರಾಟಗಾರ ಅಡೂರು ಉಮೇಶ ನಾಯಕ್’ ಮತ್ತು ‘ಹಾಸ್ಯ ಸಾಹಿತ್ಯದ (ನಿ)ರೂಪಕ ವೈ. ಸತ್ಯನಾರಾಯಣ ಕಾಸರಗೋಡು’ ಎಂಬ ಕೃತಿಗಳು, ಪತ್ರಕರ್ತ ಸಾಹಿತಿ ವಿರಾಜ್ ಅಡೂರು ಬರೆದ ‘ಮಕ್ಕಳ ಸಾಹಿತ್ಯ ಸಂಗಮದ ಜಂಗಮ ಶ್ರೀನಿವಾಸ ರಾವ್’ ಎಂಬ ಕೃತಿ ಹಾಗೂ ಶಿಕ್ಷಕಿ ಆಶಾ ದಿಲೀಪ್ ರೈ ಸುಳ್ಯಮೆ ಇವರು ಬರೆದ ‘ಸಾಹಿತ್ಯ ಶಿಕ್ಷಣ ಸಂಪನ್ನೆ ಸಾವಿತ್ರಿ ಎಸ್. ರಾವ್’ ಎಂಬ ಕೃತಿಗಳು ಬಿಡುಗಡೆಯಾಗಲಿವೆ. ಈ ಕೃತಿಗಳನ್ನು ಕಾಸರಗೋಡಿನ ಹಿರಿಯ ಸಾಹಿತಿ, ಸಂಘಟಕ ಪ್ರೊ. ಪಿ.ಎನ್. ಮೂಡಿತ್ತಾಯ ಲೋಕಾರ್ಪಣೆ ಮಾಡಲಿದ್ದು. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷ ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಉದ್ಘಾಟಿಸುವರು. ಕೃತಿಗಳ ಸಂಪಾದಕರಾದ ಖ್ಯಾತ ವಿಮರ್ಶಕ ಡಾ. ಬಿ. ಜನಾರ್ದನ ಭಟ್ ಬೆಳ್ಮಣ್ ಮತ್ತು ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಭಾಗವಹಿಸಲಿದ್ದು, ಕಾಸರಗೋಡಿನ ಲೇಖಕರ ನಾಲ್ಕು ಕೃತಿಗಳೂ ಸೇರಿದಂತೆ ಒಟ್ಟು ಹತ್ತು ಕೃತಿಗಳು ಕಾಂತಾವರ ಉತ್ಸವದಲ್ಲಿ ಲೋಕಾರ್ಪಣೆಯಾಗಲಿದೆ.