Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಭಾರತೀ ಕಾಸರಗೋಡು ಇವರ ‘ಅಮ್ಮ ಬರುತ್ತಾಳೆ’
    Article

    ಪುಸ್ತಕ ವಿಮರ್ಶೆ | ಭಾರತೀ ಕಾಸರಗೋಡು ಇವರ ‘ಅಮ್ಮ ಬರುತ್ತಾಳೆ’

    June 13, 2024No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ‘ಅಮ್ಮ ಬರುತ್ತಾಳೆ’ ಎಂಬ ಕೃತಿಯು ಭಾರತೀ ಕಾಸರಗೋಡು ಅವರ ಹದಿನೈದು ಕತೆಗಳ ಸಂಕಲನವಾಗಿದೆ. ಆಯಾ ಕತೆಗಳಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು ಜೀವಂತಿಕೆಯಿಂದ ಕಂಗೊಳಿಸುತ್ತವೆ. ಸಾಮಾನ್ಯ ಕುಟುಂಬದ ಆಗುಹೋಗುಗಳ ಹಿನ್ನೆಲೆಯಲ್ಲಿ ವ್ಯಕ್ತಿಯ ಅಂತರಂಗದ ಭಾವನೆಗಳನ್ನು ಚಿತ್ರಿಸುವ ಲೇಖಕಿಯು ಮಹಾಭಾರತದ ದ್ರೌಪದಿ-ಗಾಂಧಾರಿಯರ ಮನಸ್ಸಿನ ವಿಷಾದವನ್ನು ಅಭಿವ್ಯಕ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಓದಿಸಿಕೊಂಡು ಹೋಗುವ ಭಾಷೆ, ಬಿಗಿಯಾದ ಬಂಧ, ಸಮರ್ಥವಾದ ಹೆಣಿಗೆ, ಗಹನವಾದ ವಿಚಾರಗಳನ್ನು ಸಹಜ ನೆಲೆಯಲ್ಲಿ ವಿಶ್ಲೇಷಿಸುತ್ತಾ ಸಾಗುವ ಪರಿಯು ಓದುಗನ ಮನಸ್ಸು ಪಾತ್ರಗಳ ಬಗ್ಗೆ ಚಿಂತಿಸುವಂತೆ ಮಾಡುತ್ತದೆ.

    ಬಾಲಕ ಹರಿನಾಥನ ಹೃದಯಲ್ಲಿ ಹೊಯ್ದಾಡುವ ಅಪಕ್ವ ಭಾವನೆಗಳು, ಜೊತೆಯಲ್ಲಿರದ ತಂದೆಯ ಕುರಿತಾದ ಕಲ್ಪನೆಗಳು, ಕೊನೆಗೆ ಅಪ್ಪನು ಕಾಣಿಸಿಕೊಂಡಾಗ ಅವನ ಮನದಲ್ಲಿ ಉಂಟಾಗುವ ಭಾವದ ಏರಿಳಿತಗಳನ್ನು ವಸ್ತುವಾಗಿ ಹೊಂದಿದ ‘ಹಾರಗುದರಿ ಬೆನ್ನಏರಿ’ ಎಂಬ ಕತೆಯು ಓದುಗರ ಗಮನ ಸೆಳೆಯುತ್ತದೆ. ತಂದೆಯ ಪ್ರೀತಿಗಾಗಿ ಹಂಬಲಿಸುವ ಹರಿನಾಥನು ತನ್ನ ತಾಯಿಯ ಮಡಿಲಲ್ಲಿ ಮಲಗಿ, ಮಾಸಿದ ಸೀರೆಯ ಘಮಲನ್ನು ಹೀರುತ್ತಾ ಬಿಕ್ಕುವ ಬಗೆಯು ಮಾರ್ಮಿಕವಾಗಿ ಮೂಡಿ ಬಂದಿದೆ. ತಂದೆಯ ಕುರಿತ ವಿಚಾರಗಳು ಅತಿರೇಕಕ್ಕೆ ತಲುಪಿದಾಗ,ತಾಯಿಯ ಕೈಗಳೇ ಹರಿನಾಥನೊಡನೆ ವ್ಯವಹರಿಸುವಾಗ ಮೌನದ ಚಿಪ್ಪಿನೊಳಗೆ ಅವಿತುಕೊಳ್ಳುವ ಇಂಥ ಜೀವಗಳ ಕುರಿತು ಕರುಣೆ ಮೂಡುತ್ತದೆ. ತನ್ನ ತಂದೆ ಕಾಣಿಸಿಕೊಂಡಾಗ ಸಂತಸದ ಹೊಳೆಯಲ್ಲಿ ತೇಲಾಡುವ ಹರಿಯ ಮುಗ್ಧತೆ ಆಪ್ತವೆನಿಸುತ್ತದೆ. ನಗು, ಉತ್ಸಾಹಗಳಲ್ಲಿ ಸುಖಿಸಿದ ಹರಿಗೆ ಅವೆಲ್ಲ ದೂರ ಸರಿದಾಗ ಹುಟ್ಟುವ ನಿರಾಸೆ ಆತನನ್ನು ನೋವಿನೆಡೆಗೆ ತಳ್ಳುತ್ತದೆ. ಪ್ರಶ್ನೆಯು ಪ್ರಶ್ನೆಯಾಗಿಯೇ ಉಳಿದು, ಭರವಸೆಗಳು ಇಲ್ಲವಾಗುವುದಕ್ಕೆ ಸಾಕ್ಷಿಯಾಗುವ ಹರಿನಾಥನ ಬದುಕಿನ ಎಳೆಗಳು ಅಚ್ಚುಕಟ್ಟಾಗಿ ಹೆಣೆದುಕೊಂಡಿವೆ.

    ಕಾಯ ಅಳಿದ ಬಳಿಕವೂ ಚೈತನ್ಯದಿಂದ ಮಿಡಿಯುವ ತಾಯ್ತನದ ನೆನಪನ್ನು ಪ್ರತಿಫಲಿಸುವ ‘ಅಮ್ಮ ಬರುತ್ತಾಳೆ’ ಎಂಬ ಕತೆಯಲ್ಲಿ ಜೀವಕ್ಕೆ ಜೀವವಾಗಿ, ಒಡಲಲ್ಲಿ ಹೊತ್ತು, ಹೆತ್ತು, ಪೋಷಿಸಿ, ಸ್ವಂತ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾದ ಅಮ್ಮ ತೀರಿಕೊಂಡ ವಿಚಾರವನ್ನು ಒಪ್ಪಿಕೊಳ್ಳಲಾರದ ಪರಿಸ್ಥಿತಿಯಲ್ಲಿ ತೊಳಲಾಡುತ್ತಿರುವ ಅನುವಿನ ಪ್ರಶ್ನೆ ಮುಖ್ಯವಾಗುತ್ತದೆ. ಅಮ್ಮನ ನೆನಪು ಜೀವಂತವಾಗಿರುವಾಗ, ನೆನಪಿನಲ್ಲೇ ಅಮ್ಮ ಮೂಡಿಬರುವಾಗ ಆಕೆ ತೀರಿಕೊಂಡಿದ್ದಾಳೆ ಎನ್ನುವುದು ಹೇಗೆ? ಹೆಂಗರುಳ ಶಕ್ತಿಯು ತಾಯ್ತನದ ಮೂಲಕ ಪ್ರತಿಫಲಿಸುವಾಗ, ಮಗುವಿನ ಕಣಕಣದಲ್ಲೂ ತುಂಬುವ ಮಮತೆಯ ಪ್ರತಿಫಲವೇ ಮಾತೃತ್ವದ ಅಸ್ತಿತ್ವವನ್ನು ಸದಾ ಜೀವಂತವಾಗಿರಿಸುತ್ತದೆ ಎಂಬ ದಿಟವನ್ನು ಅನಾವರಣಗೊಳಿಸಿದ ಬಗೆ ಮೆಚ್ಚುವಂತಿದೆ.

    ‘ಶ್ಯಾಮ’ ಎಂಬ ಕತೆಯು ಭಾವುಕ ನೆಲೆಯಲ್ಲಿ ಮೂಡಿಬಂದಿದೆ. ಸಣ್ಣಪುಟ್ಟ ಬರಹಗಳನ್ನು ಬರೆಯುವ ಶ್ಯಾಮಣ್ಣನವರಿಗೂ, ಬಾನುಲಿಯ ಉದ್ಘೋಷಕನಾಗಿರುವ ಸಂಜೀವನಿಗೂ ಭಾವನಾತ್ಮಕ ನಂಟು. ತೋರಿಕೆಯ ಸ್ವಭಾವದವರನ್ನು ದೂರವಿರಿಸಿದ್ದ ಶ್ಯಾಮಣ್ಣನವರಿಗೆ ಎಂದೋ ಭೇಟಿಯಾಗಿದ್ದ ಸಂಜೀವನ ಮುಂದೆ ಅತೀವ ಪ್ರೀತಿ. ಇದೇ ಕಾರಣಕ್ಕೆ ಸಂಜೀವನ ಭೇಟಿಯ ಕುರಿತು ಭರವಸೆ ಇಟ್ಟಿದ್ದರೂ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಶ್ಯಾಮಣ್ಣನವರ ಅಪ್ರಕಟಿತ ಬರಹಗಳು ಪುಸ್ತಕದ ರೂಪದಲ್ಲಿ ಹೊರಬರುವ ಸಂದರ್ಭದಲ್ಲಿ ಏರ್ಪಡುವ ಸಂಜೀವನ ಭೇಟಿ ಆತ್ಮೀಯತೆಯ ಕಡೆಗೆ ತಿರುಗುತ್ತದೆ. ಎಳೆಯ ಮಕ್ಕಳಂತೆ ಮಾತನಾಡುವ ಶ್ಯಾಮಣ್ಣನವರ ಮುಗ್ಧತೆ ಸಂಜೀವನನ್ನು ಮನೆಗೆ ಆಹ್ವಾನಿಸುವಷ್ಟರ ಮಟ್ಟಿಗೆ ಹತ್ತಿರವಾಗುತ್ತದೆ. ತಾವು ಮಲಗಿದ್ದ ದಿಂಬಿನಡಿಯಿಂದ ತಮ್ಮದೇ ಕೃತಿಯನ್ನು ಸಂಜೀವನಿಗೆ ನೀಡಿ, ನಾಳೆಗಳು ಹಸನಾಗಲಿ ಎಂದು ಹರಸಿ ಬೀಳ್ಕೊಟ್ಟ ಮರುದಿನವೇ ಶ್ಯಾಮಣ್ಣನವರ ನಿಧನದ ಸುದ್ದಿಯನ್ನು ಕೇಳಿದ ಸಂಜೀವನ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಗುತ್ತದೆ. ಅಂತಿಮ ದಿನದಲ್ಲೂ ತನಗೆ ಶುಭವನ್ನು ಹಾರೈಸಿದ ವಿಚಾರಗಳನ್ನು ಗೆಳೆಯರಿಂದ ತಿಳಿದ ಸಂಜೀವನ ಮಾನಸಿಕ ತುಮುಲ ಕೊನೆವರೆಗೂ ಉಳಿದುಬಿಡುತ್ತದೆ. ಅಭಿಮಾನ, ಪ್ರೀತಿ ಭಾವನೆಗಳ ನಂಟನ್ನು ಬೆಸೆದು ತಮ್ಮದೇ ಆದ ಚಿಂತೆಗಳಲ್ಲಿ ಬೆಂದು ಬಳಲಿ ಹೋದ ಶ್ಯಾಮಣ್ಣನವರ ಪಾತ್ರ ಹೃದಯ ಸ್ಪರ್ಶಿಯಾಗಿ ಮೂಡಿ ಬಂದಿದೆ.

    ಕಲಿಗಾಲದ ವಸ್ತುಸ್ಥಿತಿಗಳನ್ನು ಆಳವಾಗಿ ವಿಶ್ಲೇಷಿಸುತ್ತಾ ಸಾಗುವ ಕತೆಗಳು ದ್ವಾಪರಯುಗದ ಪಾತ್ರಗಳ ಕುರಿತು ಬೆಳಕು ಚೆಲ್ಲುವ ರೀತಿ ಮನಮುಟ್ಟುತ್ತದೆ. ಸಕಲ ಸಿರಿತನಗಳಿಗೆ ಸಾಮ್ರಾಜ್ಞಿಯಾದ ಪಾಂಚಾಲಿಯ ಮನದಲ್ಲಿ ಬೀಡುಬಿಟ್ಟ ನೋವುಗಳ ಕಿಡಿಯು ಜ್ವಾಲಾಮುಖಿಯಾಗಿ ಸ್ಪೋಟಗೊಳ್ಳುವ ಮೂಲಕ ತನ್ನ ಹೆಣ್ತನದ ರಕ್ಷಣೆಯನ್ನು ಮಾಡುವಲ್ಲಿ ವೀರರೈವರ ಪೌರುಷ ವಿಫಲವಾದದ್ದರ ಬಗ್ಗೆ ಅನಿಸಿಕೆಗಳನ್ನು ಹೊರಹಾಕುವ ಬಗೆ ಪುರುಷ ಪ್ರಧಾನ ಸಮಾಜದ ಹಿನ್ನಡೆಯನ್ನು ಧ್ವನಿಸುತ್ತದೆ. ನಂತರದ ಕತೆಯಲ್ಲಿ ಗಾಂಧಾರಿಯ ಮನದಳಲನ್ನು ಲೇಖಕಿಯು ಅಭಿವ್ಯಕ್ತಗೊಳಿಸಿದ ರೀತಿ ಮುಖ್ಯವಾಗುತ್ತದೆ. ಕಣ್ಣಿದ್ದೂ ಕುರುಡಳಾದ ಗಾಂಧಾರಿಯು ಎಲ್ಲ ವಿಚಾರಗಳಲ್ಲೂ ಕುರುಡಳಾಗಿದ್ದಳು ಎಂಬ ವಾಸ್ತವವನ್ನು ತಿಳಿಸುತ್ತಾ, ಕುರುಕ್ಷೇತ್ರದಲ್ಲಿ ನಡೆದ ಭೀಭತ್ಸ ಘಟನೆಗಳನ್ನು ಮೆಲುಕು ಹಾಕುತ್ತಾ, ತನ್ನನ್ನು ತಾನು ಜರೆಯುತ್ತಾ, ತನ್ನವರಿಗಾಗಿ ಮರುಗುತ್ತಾ, ಅವರ ಮರಣಕ್ಕೇ ತಾನೂ ಕಾರಣಳೆಂದು ಪಶ್ಚಾತ್ತಾಪ ಪಡುತ್ತಾ ನಾಳೆಗಳನ್ನು ಬೆಳಗುವ ಬಯಕೆಯನ್ನು ಹೊತ್ತ ಗಾಂಧಾರಿಯ ಮನಸ್ಸನ್ನು ಬಗೆದ ರೀತಿ ಮನೋಜ್ಞವಾಗಿದೆ.ಇವರಿಬ್ಬರನ್ನು ಮುಂದಿಟ್ಟುಕೊಂಡ ಲೇಖಕಿಯು ವಾಸ್ತವದಲ್ಲಿ ಉಸಿರಾಡುತ್ತಿರುವ ಹೆಣ್ಣಿನ ಮನದ ಅಳಲುಗಳಿಗೆ ಮುಕ್ತಿ ನೀಡಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

    ಸತ್ವಯುತ ಭಾಷೆ, ಸೊಗಸಾದ ಶೈಲಿ, ಭಾವನಾತ್ಮಕ ಜಗತ್ತಿನಲ್ಲಿ ವಿಹರಿಸುತ್ತಲೇ ಇರಬೇಕೆನಿಸುವಂತೆ ಮಾಡುವ ನಿರೂಪಣೆಗಳಿಂದ ಕೂಡಿದ ಸಂಕಲನದ ಇತರ ಕತೆಗಳಲ್ಲೂ ಜೀವಂತಿಕೆಯನ್ನು ಕಾಣುತ್ತೇವೆ. ಕಮರಿದ ಕನಸುಗಳ ಬೆನ್ನಲ್ಲೇ ಚಿಗುರುವ ಭರವಸೆಯ ನಾಳೆಗಳು, ಸಂಬಂಧಗಳನ್ನು ನಿಭಾಯಿಸುವಲ್ಲಿ ಹೆಣ್ಣಿನ ಸಮರ್ಪಣಾ ಭಾವ, ಭವಿಷ್ಯವನ್ನು ಗಟ್ಟಿಗೊಳಿಸುವ ಆತ್ಮವಿಶ್ವಾಸ, ಬದುಕೆಂಬ ಬಂಡಿಯನ್ನು ಎಲ್ಲೂ ನಿಲ್ಲಿಸದೆ ನಿತ್ಯ ನಿರಂತರವಾಗಿಸಲು ಬೇಕಾದ ಸಕಾರಾತ್ಮಕ ಧೋರಣೆಗಳನ್ನು ಈ ಕೃತಿಯು ಮನದಟ್ಟುಗೊಳಿಸುತ್ತದೆ.

    ಪುಸ್ತಕದ ಹೆಸರು : ಅಮ್ಮ ಬರುತ್ತಾಳೆ
    ಲೇಖಕರು : ಭಾರತೀ ಕಾಸರಗೋಡು
    ಪ್ರಕಾಶಕರು : ಹೇಮಂತ ಸಾಹಿತ್ಯ ಬೆಂಗಳೂರು

    ವಿಮರ್ಶಕರು : ನಯನ ಜಿ.ಎಸ್.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ವಾಸವಾಗಿದ್ದಾರೆ. ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲಿ, ಪಿ.ಯು.ಸಿ. ಶಿಕ್ಷಣವನ್ನು ಸರಕಾರಿ ಪದವಿ ಪರ್ವರ ಕಾಲೇಜು ಬೆಳ್ಳಾರೆ ಎಂಬಲ್ಲಿ ಪೂರೈಸಿರುತ್ತಾರೆ. ಇವರು ತಮ್ಮ ಬಿ.ಎ. ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಇಲ್ಲಿಂದ ಪಡೆದಿರುತ್ತಾರೆ. ಹವ್ಯಾಸಿ ಬರಹಗಾರ್ತಿಯಾಗಿರುವ ಇವರ ಅನೇಕ ಲೇಖನಗಳು, ಪ್ರವಾಸ ಕಥನಗಳು, ಕವನಗಳು, ಗಜಲ್ ಗಳು, ಲಲಿತ ಪ್ರಬಂಧಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ‘ಕುವೆಂಪು ಸಾಹಿತ್ಯ ಪ್ರತಿಷ್ಠಾನ (ರಿ) ಕುಪ್ಪಳ್ಳಿ ಇವರು ಆಯೋಜಿಸಿದ್ದ ‘ಕುವೆಂಪು ಅವರ ನಾಡು – ನುಡಿ ಚಿಂತನೆ’ ವಿಷಯದ ಬಗೆಗಿನ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. 2021-22ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ ಇವೆರಡರ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನೂ, 2022-23ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು ಇವರ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ ಇವರ ಕಥೆಗಳು ಮತ್ತು ಕವನಗಳು ಆಕಾಶವಾಣಿಯ ದನಿಯಲ್ಲಿ ಬಿತ್ತರಗೊಂಡಿದೆ.

    ಲೇಖಕಿ ಭಾರತೀ ಕಾಸರಗೋಡು

    ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಭಾರತೀ ಕಾಸರಗೋಡು ಇವರು ಕನ್ನಡ ನೆಲದ ಬರಹಗಾರ್ತಿ. ‘ವೀಣೆಯ ನೆರಳಲ್ಲಿ’ ಎಂಬುದು ಇವರ ಮೊದಲ ಕೃತಿಯಾಗಿದ್ದು, ಡಾ. ವಿ. ದೊರೆಸ್ವಾಮಿ ಅಯ್ಯಂಗಾರ್ ಅವರ ಜೀವನವನ್ನು ಕುರಿತದ್ದು. ಈ ಕೃತಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಆರ್ಯಭಟ ಪ್ರಶಸ್ತಿ’ ಮತ್ತು ‘ಅತ್ತಿಮಬ್ಬೆ ಬಹುಮಾನ’ಗಳು ದಕ್ಕಿವೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಭಾರತೀಯವರ ಇತರ ಪ್ರಕಟಿತ ಪುಸ್ತಕಗಳು ‘ಚಂದನ’ (ಪ್ರಬಂಧ ಸಂಕಲನ), ‘ರಾಸದರ್ಶನ’ (ತಂದೆ ಶ್ರೀ ಸಮೇತನಹಳ್ಳಿ ರಾಮರಾಯರಿಗೆ ಅರ್ಪಿಸಿದ ಅಭಿನಂದನ ಗ್ರಂಥ), ‘ಜೀವಿ: ಜೀವ-ಭಾವ’ (ವಿದ್ವಾಂಸ ಶ್ರೀ ಜಿ. ವೆಂಕಟಸುಬ್ಬಯ್ಯ ಅವರ ಸಂಕ್ಷಿಪ್ತ ಜೀವನ ಚರಿತ್ರೆ) ಮತ್ತು ಬಂಧಬಂಧುರ (ಸಂಪಾದಿತ ಪ್ರಬಂಧ ಸಂಕಲನ).

    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಗಾನ ಗುರುಗಳ ಸಮಾಲೋಚನಾ ಸಭೆ
    Next Article ಪ್ರತಿಮಾ ಹರೀಶ್ ರೈ ವಿರಚಿತ ‘ಅಂತರಗಂಗೆ’ ಕೃತಿ ಲೋಕಾರ್ಪಣೆ ಸಮಾರಂಭ
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.