ಕನ್ನಡದಲ್ಲಿ ಕಾದಂಬರಿಯು ಅತ್ಯಂತ ಹುಲುಸಾಗಿ ಬೆಳೆದ ಸಾಹಿತ್ಯ ಪ್ರಕಾರವಾಗಿದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಅದು ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಅದರ ಬೆಳವಣಿಗೆಯನ್ನು ಸ್ಥೂಲವಾಗಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಯುಗಗಳೆಂದು ಗುರುತಿಸಲಾಗುತ್ತದೆ. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯ ಈ ಹಂತಗಳನ್ನು ಕಾಲಕ್ರಮದಲ್ಲಿ ಒಂದು ಮುಗಿದ ನಂತರ ಇನ್ನೊಂದು ಆರಂಭವಾಯಿತು ಎನ್ನುತ್ತಿದ್ದರೂ ಅವುಗಳೆಲ್ಲ ಏಕಕಾಲದಲ್ಲಿ ಅಸ್ತಿತ್ವದಲ್ಲಿರುವುದನ್ನು ಅಲ್ಲಗೆಳೆಯುವಂತಿಲ್ಲ. ಈಗ ಬಂಡಾಯ ಯುಗ ಮುಗಿದರೂ ಅದರ ಸೂಕ್ಷ್ಮ ದನಿಯನ್ನು ಹೊಂದಿದ ಅನೇಕ ಕಾದಂಬರಿಗಳು ಬರುತ್ತಿವೆ. ನವ್ಯ ಮಾರ್ಗದ ಕೃತಿಗಳೂ ಬೆಳಕು ಕಾಣುತ್ತಿವೆ.
ಡಾ. ಲಲಿತಾ ಎಸ್.ಎನ್. ಭಟ್ ಅವರ ‘ಅಪರಾಜಿತಾ’ ಎಂಬ ಕಾದಂಬರಿಯು ನವ್ಯ ಮತ್ತು ಬಂಡಾಯದ ಸತ್ವವನ್ನು ಹೀರಿಕೊಂಡು ರೂಪು ತಾಳಿದೆ. ಮಧ್ಯಂತರದಲ್ಲೇ ಆರಂಭಗೊಂಡು ಹಿನ್ನೋಟ ತಂತ್ರದ ಮೂಲಕ ವಿಷಯಗಳನ್ನು ನಿರೂಪಿಸುತ್ತಾ ಉದ್ಯೋಗಸ್ಥ ಮಹಿಳೆಯ ಜೀವನಕ್ರಮವನ್ನು ಹಿಡಿದಿಡುವ ಕೃತಿಯು ಮೀರಾ ಎಂಬ ವೈದ್ಯೆಯ ದೃಷ್ಟಿಕೋನದಿಂದ ಬದುಕನ್ನು ಅವಲೋಕಿಸುತ್ತದೆ. ಆಕೆಯ ಆತ್ಮಶೋಧನೆ, ದ್ವಂದ್ವ, ಸ್ವಗತಗಳಿಂದ ಆರಂಭಗೊಳ್ಳುವ ಕಾದಂಬರಿಯು ಆಪ್ತವಾದ ನಿರೂಪಣೆಯೊಂದಿಗೆ ಬದುಕಿನ ಸಂಕೀರ್ಣ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತದೆ. ಮಾನವೀಯ ಸಂಬಂಧಗಳ ಸೂಕ್ಷ್ಮ ರೂಪವನ್ನು ಹಿಡಿದಿಡುತ್ತದೆ. ಬದುಕಿನ ಸಂಘರ್ಷದಲ್ಲಿ ಸಿಲುಕಿದಾಗ ಹೆಣ್ಣೊಬ್ಬಳು ಸ್ವೀಕರಿಸುವ ದಿಟ್ಟ ನಿಲುವು, ಸಮಸ್ಯೆಯನ್ನು ಎದುರಿಸುವ ರೀತಿ ಮುಖ್ಯವಾಗುತ್ತದೆ. ಹಿರಿಯರ ಒತ್ತಡಕ್ಕೆ ಕಟ್ಟುಬಿದ್ದು ಮೀರಳನ್ನು ಮದುವೆಯಾದ ಕೃಷ್ಣನು ಅವಳನ್ನು ಬಿಟ್ಟು ಹೋದರೂ ಆಕೆ ತನ್ನ ದುರದೃಷ್ಟವನ್ನು ಹಲುಬುತ್ತಾ ಕೂರುವುದಿಲ್ಲ. ಬದುಕುವ ಛಲವನ್ನು ಬಿಡುವುದಿಲ್ಲ. ಕೃಷ್ಣನ ತಿರಸ್ಕಾರವು ಆಕೆಯೊಳಗೆ ಸುಪ್ತವಾಗಿದ್ದ ತೀವ್ರ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತದೆ. ತನ್ನ ಹೆಣ್ತನ ಅವಮಾನಿತವಾಗಿದೆ ಎಂಬ ಅರಿವು ಎಚ್ಚರಗೊಂಡದ್ದರಿಂದ ಆಕೆಯೊಳಗೆ ಹೂತುಕೊಂಡಿದ್ದ ಬೇರೆಯದೇ ಆದ ಉತ್ಕಟ ಸಂವೇದನೆ ಪುಟಿದೇಳುತ್ತದೆ. ಆಕೆ ಬಲಿಪಶು ಎನ್ನುವುದು ನಿಜವಾದರೂ ಕ್ರಿಯಾಹೀನಳಲ್ಲ. ಬದುಕಿನ ಬಗ್ಗೆ ಅಪಸ್ವರವೆತ್ತದೆ, ನೋವಿಗೆ ಕಾರಣರಾದವರನ್ನು ದೂರದೆ ಕಷ್ಟಪಟ್ಟು ಓದಿ ವೈದ್ಯಕೀಯ ಪರೀಕ್ಷೆಯನ್ನು ಮುಗಿಸಿ ಪ್ರಸೂತಿ ತಜ್ಞೆಯಾಗುವ ಮೂಲಕ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಾಳೆ. ಅನುಭವದ ಆಧಾರದಿಂದ ಕಂಡುಕೊಂಡ ಮೌಲ್ಯಗಳನ್ನು ಅಡಿಗಲ್ಲಾಗಿಟ್ಟುಕೊಂಡು ಗೌರವಯುತವಾಗಿ ಬಾಳುತ್ತಾಳೆ.
ಕಾದಂಬರಿಯ ಕೇಂದ್ರವಾದ ಮೀರಾ ಸಾಮಾನ್ಯ ವೈದ್ಯೆಯಾದರೂ ಲೇಖಕಿಯು ಅವಳಲ್ಲಿನ ಅಸಾಧಾರಣ ಮಾನವೀಯ ಗುಣಗಳನ್ನು ಗುರುತಿಸಿದ್ದಾರೆ. ಅನುಭವಕ್ಕೆ ಅಧಿಕೃತತೆಯನ್ನು ಸಾಧಿಸಲು ಇಬ್ಬರು ನಿರೂಪಕರನ್ನು ಬಳಸಿಕೊಂಡಿದ್ದಾರೆ. ಕಾದಂಬರಿಯುದ್ದಕ್ಕೂ ವ್ಯಕ್ತವಾಗುವ ಮೀರಾ ಮತ್ತು ಕೃಷ್ಣನ ಮನೋಧರ್ಮವು ಬದುಕನ್ನು ಮತ್ತು ಅದರ ಅರ್ಥವನ್ನು ಜೊತೆಯಾಗಿ ಒದಗಿಸಲು ಸಹಾಯ ಮಾಡುತ್ತದೆ. ಕೃತಿಯಲ್ಲಿ ಮೂಡಿದ ಜೀವನದರ್ಶನವನ್ನು ಒಪ್ಪಿಕೊಳ್ಳುವ ಮನೋಭೂಮಿಕೆಯನ್ನು ಸಿದ್ಧಗೊಳಿಸುತ್ತದೆ. ತನ್ನ ಗಂಡನಾಗಿದ್ದ ಕೃಷ್ಣ ತನಗೆ ಎರಡು ಬಗೆದರೂ ಸಹಜ ಭಾವನೆಗಳಾದ ದ್ವೇಷ ಅಸೂಯೆಗಳನ್ನು ಮೀರಿ ಅವನ ಹೆಂಡತಿ ಅಚಲಾಳ ಸಂತಾನಕ್ಕಾಗಿ ತನ್ನ ಅಂಡಾಣುವನ್ನು ಕೃಷ್ಣನ ವೀರ್ಯಾಣುವಿನೊಂದಿಗೆ ಇನ್‌ವಿಟ್ರೋ ಫರ್ಟಿಲೈಸೇಶನ್ (ಗರ್ಭಕೋಶದ ಹೊರಗೆ ಭ್ರೂಣೋತ್ಪತ್ತಿ) ಮಾಡಿ ಆಕೆಗೆ ಹೆರಿಗೆಯಾಗುವಂತೆ ಮಾಡುವ ಹೃದಯವಂತಿಕೆಯೇ ಕಾದಂಬರಿಯ ತಿರುಳು. ಪ್ರೀತಿಪ್ರೇಮ ಮೊದಲಾದ ಮೃದುಭಾವನೆಗಳ ಮೂಲಕವೇ ನಿಜವಾದ ಬದಲಾವಣೆ ಸಾಧ್ಯ ಎಂದು ನಂಬುವ ಮೀರಾಳ ಉದಾತ್ತ ಮನೋಭಾವವು ಮಾನವ ಸಮುದಾಯದ ಅಸ್ತಿತ್ವದ ಆಧಾರವಾದ ಪ್ರೀತಿ ನಂಬುಗೆಗಳ ಪ್ರತೀಕವಾಗಿದೆ. ಪರಿಸ್ಥಿತಿಯ ಒತ್ತಡಕ್ಕೆ ಕಟ್ಟುಬಿದ್ದು ಮೀರಳನ್ನು ಮದುವೆಯಾಗಿ ಅವಳನ್ನು ಬಿಟ್ಟುಹೋದವನಾದರೂ ಮುಂದೆ ಆಕೆಯ ಆದರ್ಶ ವ್ಯಕ್ತಿತ್ವಕ್ಕೆ ಮಾರುಹೋಗಿ ಅದರಲ್ಲಿ ದೈವೀಭಾವವನ್ನು ಕಂಡ ಕೃಷ್ಣನ ಪಾತ್ರವೂ ಉಜ್ವಲವಾಗಿದೆ. ಅವನ ಹೆಂಡತಿ ಅಚಲಾ ಸಮಸ್ಯಾತ್ಮಕ ಪಾತ್ರವಾಗಿದ್ದು ಆತನ ಸೋಲಿಗೆ ಅವಳೊಂದಿಗಿನ ವೈವಾಹಿಕ ವಿರಸವೇ ಕಾರಣವಾಗುತ್ತದೆ. ಮೀರಳಿಗೆ ಔದಾರ್ಯದ ತಿಳುವಳಿಕೆ ತನ್ನ ಅನುಭವದಿಂದಲೇ ದೊರಕಿದರೆ ಕೃಷ್ಣನಿಗೆ ಲೇಖಕಿಯ ಸಹಾನುಭೂತಿಪರವಾದ ವಿಶ್ಲೇಷಣೆಯ ಅಗತ್ಯ ಕಂಡುಬರುತ್ತದೆ. ತಾಳಿಕಟ್ಟಿದ ಹೆಣ್ಣಿನ ಮುಖವನ್ನೇ ನೋಡದೆ, ಅವಳ ಬದುಕಿಗೆ ಎರಗಬಹುದಾದ ದುರಂತವನ್ನೂ ಲೆಕ್ಕಿಸದೆ ತಿರಸ್ಕರಿಸಿದ ಕೃಷ್ಣ, ಅನಾಥಳಾದ ಮೀರಾಳಿಗೆ ಆಸರೆಯಿತ್ತು ತಂದೆಯಂತೆ ಕಾಪಾಡಿದ ಡಾ. ಪತಂಜಲಿ, ಸಹೋದ್ಯೋಗಿ ಮನು, ಅಚಲಾ ಹೀಗೆ ಪ್ರತಿಯೊಂದು ಪಾತ್ರವೂ ಮಾನವನ ನಾನಾ ಸ್ವಭಾವಗಳನ್ನು ಪ್ರತಿನಿಧಿಸುತ್ತವೆ. ಕೃಷ್ಣನ ವೈಫಲ್ಯ ಅವನ ಅಹಂಕಾರದ ನಾಶಕ್ಕೆ ಕಾರಣವಾಗುವುದರಿಂದ ಆತನ ಸೋಲು ಸ್ವಾಗತಾರ್ಹ. ತನ್ನ ಬಾಳಸಂಗಾತಿಯಾಗಲು ಕೇಳಿಕೊಂಡ ಮನುವಿನ ಆಹ್ವಾನವನ್ನು ತಿರಸ್ಕರಿಸುವ ಮೀರಾಳ ಮೂಲಕ ಗಂಡು ಹೆಣ್ಣಿನ ಸಂಬಂಧಗಳು ಕೇವಲ ವಿವಾಹದ ಆಧಾರದ ಮೇಲೆ ನಿಂತಿವೆಯೇ? ಎಂಬ ಪ್ರಶ್ನೆಯನ್ನು ಎತ್ತುವ ಕಾದಂಬರಿಯು ಪರಸ್ಪರ ತಿಳುವಳಿಕೆಯ ಆಧಾರದಲ್ಲಿ ಸಂಬಂಧವಿರಿಸುವ ಆಶಯವನ್ನು ವ್ಯಕ್ತಪಡಿಸುತ್ತದೆ. ಹಾಗೆಂದು ಆಕೆ ಲೌಕಿಕ ಬದುಕಿನ ಕಡೆ ಆಸಕ್ತಿ ಇಲ್ಲದವಳೂ ಅಲ್ಲ. ಪದೇ ಪದೇ ಕಾಡುವ ಕೃಷ್ಣನ ನೆನಪು, ಆಸ್ಪತ್ರೆಯ ಗೋಡೆಗಳಲ್ಲಿ ತೂಗುಹಾಕಿದ ಬೇಬಿಶಾಲಿನಿಯ ಚಿತ್ರವನ್ನು ಕಾಣುವಾಗ ಅವಳ ಮನದಲ್ಲಿ ಏಳುವ ತಾಯ್ತನದ ತುಡಿತ ಲೌಕಿಕ-ಅಲೌಕಿಕ ಬದುಕುಗಳ ನಡುವೆ ತೂಗಾಡುವ ಆಕೆಯ ಪ್ರಜ್ಞೆಗೆ ಮೂರ್ತರೂಪವನ್ನು ನೀಡುತ್ತದೆ. ಮೀರಳ ನಿರ್ಲಿಪ್ತತೆ ಉದಾಸೀನದಿಂದ ಮೂಡಿದ್ದಲ್ಲ. ಬದುಕನ್ನು ಇಡಿಗಣ್ಣಾಗಿ ನೋಡುವ ಧೈರ್ಯದಿಂದ ವಿಶ್ಲೇಷಣಾತ್ಮಕ ಮನೋಭಾವದಿಂದ ಹುಟ್ಟಿದ್ದು.
ಇಲ್ಲಿ ಹೆಣ್ಣು ತನ್ನ ಅಸ್ಮಿತೆಯ ಅರಿವು, ಸಾಧನೆಗಳಲ್ಲಿ ಸಾಧಿಸಿದ ಪ್ರಗತಿ ಮತ್ತು ಕ್ರಿಯಾಶಕ್ತಿಯ ಆವಿಷ್ಕಾರಗಳ ನಿದರ್ಶನಗಳಿವೆ. ಅವಳ ಸಾಮಾಜಿಕ ಪರಿಸರಗಳಲ್ಲಿ ನಡೆದ ಶಿಕ್ಷಣದ ಪ್ರಸಾರ ಸಾಮಾಜಿಕ ಸಮಾನತೆಯ ಸ್ವೀಕಾರ ಮತ್ತು ಡಾ. ಪತಂಜಲಿ, ಮನು ಮುಂತಾದ ಗಂಡಸರ ಪ್ರೋತ್ಸಾಹ ಈ ಬದಲಾವಣೆಯ ಹಿಂದಿನ ಪ್ರೇರಣೆಯಾಗಿದೆ. ತನ್ನ ಅಂತರಂಗದಲ್ಲಿ ನಡೆದ ಮಹತ್ವದ ಬದಲಾವಣೆಯಿಂದಾಗಿ ಅವಳು ತನ್ನ ವ್ಯಕ್ತಿತ್ವದ ವಿಕಾಸದೆಡೆಗೆ ಗಮನ ಕೊಡುವಂತಾಗಿದೆ. ಮೊದಲು ಮೂಕ ಸ್ವರೂಪವನ್ನು ಹೊಂದಿದ್ದ ಪ್ರತಿಕ್ರಿಯೆ ಕೃತಿಗಳ ಮೂಲಕ ಆಕಾರ ಪಡೆದಿರುವ ಸೂಚನೆ ಇದೆ. ಇದರಿಂದ ಅವಳ ಬದುಕು ದುರಂತವಾಗುವುದು ಕಡಿಮೆಯಾದರೂ ಅಸಹನೀಯವಾಗುವುದು ತಪ್ಪಿಲ್ಲ ಎಂಬುದಕ್ಕೆ ಹೆರಿಗೆಗಾಗಿ ಬಂದ ನಾಗಮ್ಮನನ್ನು ಉಳಿಸಲಾರದೆ ಹೋದುದಕ್ಕೆ ಪ್ರತಿಭಟನಕಾರರ ಕಲ್ಲೆಸೆತಕ್ಕೆ ಗುರಿಯಾಗುವ ಪ್ರಸಂಗವು ಉತ್ತಮ ನಿದರ್ಶನವಾಗಿದೆ. ಮೈಮೂನಾ ಮತ್ತು ಅವಳ ಅತ್ತೆಯವರ ಸಂಬಂಧದಲ್ಲಿ ಕಾಣಿಸಿಕೊಳ್ಳುವ ವ್ಯಂಗ್ಯ ಕೂಡ ಪರಿಣಾಮಕಾರಿ. ಗಂಡಸರನ್ನು ಶೋಷಕರನ್ನಾಗಿಯೂ ಹೆಂಗಸರನ್ನು ಶೋಷಿತರನ್ನಾಗಿಯೂ ಕಲ್ಪಿಸಿ ಅಭ್ಯಾಸವಾದ ಹೊತ್ತಿನಲ್ಲಿ ಹೆಣ್ಣು ಕೂಡಾ ಹೆಣ್ಣನ್ನು ಅದೆಷ್ಟು ಕ್ರೂರವಾಗಿ ಶೋಷಿಸಬಲ್ಲಳು ಎಂಬುದನ್ನು ಧ್ವನಿಸುವ ಮೂಲಕ ಲೇಖಕಿಯು ವಸ್ತುಸ್ಥಿತಿಯ ಎರಡೂ ಮಗ್ಗುಲಿಗೆ ಕಣ್ಣುಹಾಯಿಸಿದ್ದು ಕಂಡುಬರುತ್ತದೆ.
ಮೀರಾಳ ಸಂವೇದನೆಯ ಮೂಲಕ ತನ್ನ ಧೋರಣೆಯನ್ನು ಪ್ರಕಟಿಸುವ ಲೇಖಕಿಯ ವಾಸ್ತವವಾದಿ ಶೈಲಿಯು ಕಠೋರವಾದ ನೋವು ಮತ್ತು ಮಿತಿಯಿಲ್ಲದ ದುಃಖಗಳಿಂದ ಕೂಡಿದ ಮನುಷ್ಯ ಪ್ರಪಂಚದ ಸ್ಥಿತಿಗಳನ್ನು ಕರಾರುವಾಕ್ಕಾಗಿ ವಿವರಿಸುತ್ತದೆ. ವ್ಯವಸ್ಥೆಯೊಳಗಿನ ಕ್ರೌರ್ಯ, ಮನುಷ್ಯತ್ವದ ಸೆಲೆ ಇಲ್ಲದಂತೆ ಹೊಗೆಯಾಡುತ್ತಿರುವ ಸ್ವಾರ್ಥ, ಸಣ್ಣತನ, ಕ್ಷುದ್ರ ಕ್ಷುಲ್ಲಕತೆಗಳು ನೆಮ್ಮದಿಯ ಉಸಿರಿಗೆ ಆಸ್ಪದವಿಲ್ಲದ ನರಕದ ಮುಖಗಳನ್ನು ಅನಾವರಣಗೊಳಿಸುತ್ತವೆ. ವ್ಯವಸ್ಥೆಯೊಳಗೆ ಹೆಣ್ಣು ನಲುಗುವ ರೀತಿ, ಅದನ್ನು ಮೆಟ್ಟಿ ನಿಲ್ಲುವ ಮೀರಾಳ ಘನತೆ, ಸ್ವಾಭಿಮಾನಗಳನ್ನು ವಿವೇಚಿಸುವ ಲೇಖಕಿಯ ಮಾನವೀಯ ದೃಷ್ಟಿಕೋನವು ಮನುಷ್ಯರಲ್ಲಿನ ಉತ್ತಮಿಕೆಯ ಸಾಧ್ಯತೆಗಳೆಡೆಗೆ ಗಮನ ಹರಿಸುತ್ತದೆ. ಅನುಭವ ಮತ್ತು ತತ್ವಗಳನ್ನು ಅಳವಡಿಸಿಕೊಂಡ ಬಾಳುವೆಯೇ ಮಿಗಿಲು ಎಂದು ಸಾರುವ ಕಾದಂಬರಿಯು ಔಪಚಾರಿಕ ಧೋರಣೆ, ವ್ಯವಸ್ಥೆಗಳನ್ನು ಬದಿಗೆ ಸರಿಸಿ ಬದುಕಿಗೆ ಕಣ್ಣಾಗುವ ಮೌಲ್ಯಗಳತ್ತ ತುಡಿಯುತ್ತವೆ. ಬದುಕಿನ ಅಧ್ಯಯನದ ಮೂಲಕ ಶಾಶ್ವತವಾದ ಜೀವನಸೂತ್ರಗಳನ್ನು ಕಂಡುಕೊಂಡಿರುವ ಕೃತಿಯು ಆಧುನಿಕ ಸಮಾಜವನ್ನು ಅತ್ಯಂತ ಕಾಳಜಿಯಿಂದ, ನಿಷ್ಠೆಯಿಂದ ಚಿತ್ರಿಸುತ್ತಾ ಅದರಲ್ಲಿನ ಒಳಿತನ್ನು ಸ್ವೀಕರಿಸುವುದರೊಂದಿಗೆ ಜಡತ್ವವನ್ನು ಪ್ರಶ್ನಿಸುತ್ತದೆ. ವೃತ್ತಿಯಿಂದ ವೈದ್ಯೆಯಾಗಿದ್ದ ಲೇಖಕಿಯು ಜೀವನವನ್ನು ನೋಡುವ ಧಾಟಿ, ಅದನ್ನು ಬರವಣಿಗೆಯಲ್ಲಿ ಮೂರ್ತಗೊಳಿಸುವ ರೀತಿ, ಜೀವನಮೌಲ್ಯಗಳ ಮೇಲಿನ ಕಾಳಜಿ, ಅನುಭವಗಳನ್ನು ಸಂಯಮದಿಂದ ದುಡಿಸಿಕೊಳ್ಳುವ ಬುದ್ಧಿವಂತಿಕೆ ವ್ಯಕ್ತವಾಗುತ್ತದೆ. ಮೀರಾ ವ್ಯವಸ್ಥೆಯ ವಿರುದ್ಧ ಬಂಡೇಳದಿದ್ದರೂ ಅದನ್ನು ಸಮರ್ಥಿಸದೆ ಬದುಕಿನೊಡನೆ ಹೋರಾಡಿ ಗೆಲ್ಲುತ್ತಾಳೆ. ಇಲ್ಲಿ ಒತ್ತು ಇರುವುದು ಅವರ ವಿವೇಕ, ವಾಸ್ತವ ಪ್ರಜ್ಞೆ, ಬದುಕುಳಿಯುವ ಸಾಹಸ, ಹೃದಯವಂತಿಕೆ ಮತ್ತು ವ್ಯಕ್ತಿತ್ವ ನಿರ್ಮಾಣದ ಮೇಲೆ.
ಕೃತಿಯ ಯಶಸ್ಸಿಗೆ ಅದರ ತಾಂತ್ರಿಕ ಕೌಶಲ್ಯವೂ ಕಾರಣ ಎನ್ನಬಹುದಾದರೂ ಉತ್ತಮ ಪುರುಷ ನಿರೂಪಣೆಯನ್ನು ಮೀರಾ ಮತ್ತು ಕೃಷ್ಣನ ದೃಷ್ಟಿಕೋನಗಳೆಂಬಂತೆ ವಿಂಗಡಿಸುವಾಗ ಹುಟ್ಟಿಕೊಳ್ಳುವ ಘಟನೆಗಳ ಪುನರಾವರ್ತನೆಯು ಏಕತಾನತೆಯನ್ನು ಉಂಟು ಮಾಡುತ್ತದೆ. ಕಥನವು ಉತ್ತಮ ಪುರುಷದಲ್ಲಿದ್ದರೂ ನಾಯಕಿಯ ದೃಷ್ಟಿಕೋನವಲ್ಲದೆ ಕೃಷ್ಣ, ಪತಂಜಲಿ, ಅಚಲಾ ವೈದೇಹಿಯವರ ದೃಷ್ಟಿಕೋನಗಳೂ ಮುಖ್ಯವಾಗುತ್ತವೆ. ಇವರ ಜಗತ್ತು ಮಾನವೀಯ ಆಶಯಗಳಿಂದ ತುಂಬಿಕೊಂಡ ಜಗತ್ತು. ಪಾತ್ರಗಳ ಹರಹೂ ದೊಡ್ಡದು. ಗಂಡು ಹೆಣ್ಣು ಸಂಬಂಧದ ಹಲವು ಮಾದರಿಗಳು, ಉಚ್ಚ-ನೀಚ ತಾರತಮ್ಯಗಳನ್ನು ಮೀರುವ ದುಃಖ ಯಾತನೆಗಳು, ತ್ಯಾಗ ಶರಣಾಗತಿಗಳ ಮೂಲಕ ದೊರಕುವ ಶಾಂತಿ, ಮನುಷ್ಯನ ಒಳ್ಳೆಯತನದ ನಿದರ್ಶನಗಳು, ಸೋಲು ಗೆಲುವುಗಳು ಕಾದಂಬರಿಗೆ ಸಾಮಾಗ್ರಿಯನ್ನೊದಗಿಸಿವೆ. ಮೀರಾ, ಕೃಷ್ಣ ಮತ್ತು ಅಚಲಾರ ನಡುವಿನ ಸಂಪರ್ಕಕ್ಕೆ ಕಾದಂಬರಿಯ ಶರೀರದಲ್ಲೇ ಅನೇಕ ನೆಲೆಗಳನ್ನು ಸೃಷ್ಟಿಸುವ ಮೂಲಕ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಸ್ವರೂಪವನ್ನು ಗ್ರಹಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮನ್ನು ತಾವು ಅಪೂರ್ಣವೆಂದು ತಿಳಿದುಕೊಂಡ ಮೀರಾ ಮತ್ತು ಅಚಲಾ ಪರಸ್ಪರ ಭೇಟಿಯ ಬಳಿಕ ಪೂರ್ಣತೆಯನ್ನು ಅನುಭವಿಸುವ ದನಿ ಇಲ್ಲಿದೆ. ಸ್ಪರ್ಧಿಗಳೆನಿಸಿಕೊಂಡವರು ಸಮಾನದುಃಖಿಗಳು ಎಂಬ ಅರಿವಿನಲ್ಲಿ ಒಂದಾಗುತ್ತಾರೆ. ಕೃತಿಯೊಂದು ನಿಜವೆನಿಸಿಕೊಳ್ಳುವುದು ಇಂಥ ಮುಹೂರ್ತದಲ್ಲಿ. ವ್ಯವಸ್ಥೆಯ ದೌರ್ಜನ್ಯವನ್ನು ಮೆಟ್ಟಿ ನಿಲ್ಲುವ ಆತ್ಮಚೈತನ್ಯದಲ್ಲಿ. ಬರೇ ಗೋಳಿನ ಕಥನವಾಗಬಹುದಾಗಿದ್ದ ಕತೆಯನ್ನು ಲೇಖಕಿಯು ಹೆಣ್ಣಿನ ಚೈತನ್ಯದ ಪ್ರತೀಕವಾಗಿಸುವ ಪರಿ ಸೊಗಸಾಗಿದೆ. ತಮ್ಮ ವಿಚಾರಗಳಿಗೆ ತಾವೇ ಜವಾಬ್ದಾರರಾಗುವ ಆತ್ಮವಿಮರ್ಶೆಯ ಎಚ್ಚರವನ್ನು ಉಳಿಸಿಕೊಂಡ ಇಬ್ಬರು ಮಹಿಳೆಯರು ವಾಸ್ತವದ ಕಹಿಯಲ್ಲಿ, ಪಾಪಪ್ರಜ್ಞೆಯಿಲ್ಲದ ದಿಟ್ಟತನದಿಂದ ಎದುರಿಸುವ, ವಸ್ತುಸ್ಥಿತಿಯನ್ನು ಒಪ್ಪಿಕೊಳ್ಳುವ ತೀರ್ಮಾನಕ್ಕೆ ಬರುವ ಸನ್ನಿವೇಶವು ಹೆಣ್ಣಿನ ವ್ಯಕ್ತಿತ್ವಕ್ಕೆ ಬರೆದ ಹೊಸ ಭಾಷ್ಯವಾಗಿದೆ.
ಪುಸ್ತಕದ ಹೆಸರು : ಅಪರಾಜಿತಾ (ಕಾದಂಬರಿ)
ಲೇಖಕರು : ಡಾ. ಲಲಿತಾ ಎಸ್.ಎನ್. ಭಟ್
ಪ್ರಕಾಶಕರು : ಡಾ. ಎಸ್.ಎನ್. ಭಟ್, ಪ್ರಶಾಂತಿ ನರ್ಸಿಂಗ್ ಹೋಮ್, ಕಾಸರಗೋಡು
ಪ್ರಕಟವಾದ ವರ್ಷ : 1994
ಪುಟಗಳು : 168
ಬೆಲೆ ರೂ : 35 ರೂಪಾಯಿಗಳು
ಡಾ. ಸುಭಾಷ್ ಪಟ್ಟಾಜೆ :
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.
ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
ಲೇಖಕಿ ಡಾ. ಲಲಿತಾ ಎಸ್.ಎನ್. ಭಟ್ ಸುಪ್ರಸಿದ್ಧ ಪ್ರಸೂತಿ ತಜ್ಞೆ. ಅಪ್ಪಟ ಕನ್ನಡಾಭಿಮಾನಿಯಾದ ಅವರು ಭಾಷೆ, ಕಲೆ, ಸಾಹಿತಿ, ಸಂಸ್ಕೃತಿಯ ಆರಾಧಕರೂ, ಸಂವರ್ಧಕರೂ ಆಗಿದ್ದರು. ಕಾಸರಗೋಡಿನ ‘ಅಮ್ಮಾ’ ಎಂದೇ ಗುರುತಿಸಿ ಗೌರವಿಸಲ್ಪಡುತ್ತಿದ್ದ ಅವರು ಅಪಾರ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಾ ಬಿಡುವಿಲ್ಲದ ಅಲ್ಪ ಸಮಯದಲ್ಲಿಯೂ ಕಾದಂಬರಿ, ವಿವಿಧ ಲೇಖನಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದರು. ಸಮಾಜಮುಖೀ ಚಿಂತಕರಾದ ಡಾ. ಲಲಿತಾ ಭಟ್ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅಹರ್ನಿಶಿ ದುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆಯೂ, ಹಲವು ಸಂಘಟನೆಗಳ ರೂವಾರಿಯೂ, ಯುವ ಪೀಳಿಗೆಗೆ ಸಮರ್ಥ ಮಾರ್ಗದರ್ಶಕಿಯೂ ಆಗಿದ್ದ ಅವರು ಹಗಲಿರುಳೆನ್ನದೆ ಕನ್ನಡದ ಸಂರಕ್ಷಣೆಗೆ, ಕಲೆ ಸಾಹಿತ್ಯ ಪುರೋಗತಿಗೆ ಮನಸಾ ದುಡಿಯುತ್ತಿದ್ದ ಕರ್ಮಯೋಗಿಯಾಗಿದ್ದರು.