ದಲಿತೋತ್ತರ ಕಾವ್ಯದ ದಿನಗಳ ಭರವಸೆಯ ಕವಿಯಾಗಿರುವ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರು ತೀವ್ರಗೊಳ್ಳುತ್ತಿರುವ ಸಾಮಾಜಿಕ ಕೋಲಾಹಲಗಳ ನಡುವೆ ಹೆಚ್ಚು ಅಬ್ಬರಿಸದೆ, ತಮ್ಮೊಳಗಿನ ಪ್ರತಿಭಟನೆಯ ಕಾವನ್ನು ಆರಲೂ ಬಿಡದೆ ಮೆಲುನುಡಿಗಳ ಅಲಗಿನ ಮೇಲೆ ಕವಿತೆಗಳನ್ನು ರಚಿಸುತ್ತಿರುವ ಕವಿ. ಕನಸುಗಾರ ಕವಿಗಳು ಎಚ್ಚರ ತಪ್ಪಿದರೆ ಕವಿತೆಗಳು ಬೀದಿ ಬದಿಯ ಭಾಷಣಗಳಾಗಿಯೋ ಬಣಗು ಕವಿಗಳ ಆತ್ಮಪ್ರತ್ಯಯದ ಕವಿತೆಗಳಾಗುವ ಅಪಾಯವಿರುತ್ತದೆ. ಸಾಮಾಜಿಕ ಮತ್ತು ಧಾರ್ಮಿಕ ಅಸಹನೆಗಳು ಯಾವ ಸಭ್ಯತೆಯೂ ಇಲ್ಲದೆ ಬಹಿರಂಗವಾಗಿ ವ್ಯಕ್ತಗೊಳ್ಳುವ ನಂಜು ಮುಸುಕಿದ ಈ ವಾತಾವರಣದಲ್ಲಿ ಉಗ್ರವಾದಿಗಳಂತೆ ಅಥವಾ ಧರ್ಮಭೀರುಗಳಂತೆ ಎಲ್ಲವನ್ನೂ ಸರಳಗೊಳಿಸಿ ಪರಿಹಾರವನ್ನು ಸೂಚಿಸುವ ಕವಿತೆಗಳನ್ನು ಬರೆಯುವುದು ಸುಲಭ. ಇಂಥ ಕವಿತೆಗಳಲ್ಲಿ ಕನ್ನಡವೂ ಬಳಲುತ್ತಿರುವುದನ್ನು ಕಾಣಬಹುದು. ಅಂತೆಯೇ ಜನಪ್ರಿಯ ಮಾರ್ಗಗಳ ರೂಪನಿಷ್ಠೆಯನ್ನು ಮುರಿದು ಹೊಸ ದಾರಿಯ ಹುಡುಕಾಟದೆಡೆಗೆ ಹೊರಳುವ ಕಾವ್ಯವು ಆಳದಲ್ಲಿ ಕಲಾತ್ಮಕ ಸಿದ್ಧಿಯನ್ನು ಪಡೆದುಕೊಳ್ಳದೆ ಹಾಗೆಯೇ ಮುಂದುವರಿದರೆ ತನ್ನ ರೆಕ್ಕೆಗಳನ್ನು ತಾನೇ ಕಡಿದುಕೊಂಡಂತೆ ಎಂಬುದನ್ನು ಎಂಬತ್ತರ ದಶಕದಲ್ಲಿ ಹೊರಬಂದ ಕಾವ್ಯಗಳ ಅಧ್ಯಯನದ ಮೂಲಕ ಅರ್ಥ ಮಾಡಿಕೊಳ್ಳಬಹುದು. ಈ ಎಲ್ಲಾ ತೊಡಕುಗಳ ಬಗ್ಗೆ ಎಚ್ಚರವಿರುವ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರ ‘ಅರ್ಧಸತ್ಯದ ಬೆಳಕು’ ಸಂಕಲನದ ಕವಿತೆಗಳು ಹೆಚ್ಚು ಸಂಯಮದಿಂದ ತಮ್ಮನ್ನು ತಾವು ಪ್ರಕಟಪಡಿಸಿಕೊಂಡಿವೆ.
ಬೆಳಕು ಹಿಡಿದವರು
ಬೆಳದಿಂಗಳಲ್ಲಿ ಸುಖ ಪಡುವುದಿಲ್ಲ
ಹಗಲೆಲ್ಲ ಮರಳ ತಡಿಯಲ್ಲಿ ಕಾದು
ಬಸವಳಿದ ಜೀವಗಳಿಗೆ ನೀರುಣಿಸುತ್ತಾರೆ (ಬೆಳಕು ಹಿಡಿದವರು)
ನಾಗರಿಕರ ಕಣ್ಣುಗಳಿಗೆ ಅಷ್ಟೇನೂ ತೆರೆದುಕೊಳ್ಳದ ಸಮುದಾಯವೊಂದರ ಅಗೋಚರ ಪ್ರಪಂಚದ ಅನುಭವಗಳನ್ನು ತಕ್ಕೈಸಿಕೊಂಡು ಜೀವ ತಳೆದಿರುವ ಈ ಸಂಕಲನದಲ್ಲಿರುವ ಕವಿತೆಗಳ ಓದಿಗೆ ಒಗ್ಗಿಕೊಂಡಿರುವ ಕಣ್ಣುಗಳಿಗೆ ಇಲ್ಲಿನ ಕವಿತೆಗಳು ತಮ್ಮೊಳಗಿನ ಕುದಿತಗಳನ್ನು ಪ್ರತೀಕಾರ ಮತ್ತು ದ್ವೇಷವಾಗಿ ಬದಲಿಸದೆ ಸಾಮರಸ್ಯದ ನೆಲೆಯಲ್ಲಿ ಬಿಚ್ಚಿಡುತ್ತವೆ. ಸಮಾನತೆಯ ಮೌಲ್ಯಗಳನ್ನು ಸಮಾಜದ ನಡುವೆ ಅದರ ಪರಿಶುದ್ಧ ರೂಪದಲ್ಲಿ ಪುನಶ್ಚೇತನಗೊಳಿಸಲು ಬಯಸುವ ಇವರ ಕವಿತೆಗಳು ನಮ್ಮ ಓದಿನ ಮೂಲಕ ಅರಳುತ್ತವೆ.
ಬೀದಿಯಲಿ ಪವಡಿಸಿದ ಸೂರು ಕಳೆದುಕೊಂಡವರು
ದಿನವೆಲ್ಲ ದುಡಿದುಡಿದು ಬೆನ್ನು ಬಾಗಿ
ರಣದ ಲೀಲೆಯ ನಡುವೆ ರಾಶಿ ಹೆಣಗಳ ಕಂಡು
ಮರುಗುವರು ಮುಖಹೀನ ಸಂತಾನವಾಗಿ (ಕಾಲಚಕ್ರ)
ಸಾಮಾಜಿಕ ಅಸ್ತಿತ್ವವೇ ಇಲ್ಲದ ಸಮುದಾಯವೊಂದರ ಒಡಲಿನಿಂದ ಮೂಡಿದ ಕವಿತೆಗಳು ಯಾತನೆಯ ಬದುಕಿನ ಕಡೆಗೆ ಬೆಳಕು ಬೀರಿವೆ. ದೈನ್ಯತೆಯಿಲ್ಲದೆ ಆತ್ಮವಿಶ್ವಾಸದಿಂದ ಕಾರ್ಮಿಕ ವರ್ಗದೊಳಗಿನ ಛಿದ್ರಗೊಂಡ ಬದುಕನ್ನು ಹೆಚ್ಚಿನ ಕಾಠಿಣ್ಯವಿಲ್ಲದೆ ಪ್ರಕಟಿಸಿದೆ. ಬೆಚ್ಚಿಬೀಳಿಸುವ ಕೆಟ್ಟ ಕನಸಿನಂಥ ಚರಿತ್ರೆಯನ್ನು ಬೆನ್ನಿಗೆ ಕಟ್ಟಿಕೊಂಡಿರುವ ಇಂಥ ವರ್ಗದವರಿಗೆ ವರ್ತಮಾನ ಕೂಡ ಕಣ್ಣಿಗಿರಿಯುವ ಸೂಜಿಯಂತೆ. ಪ್ರಜಾಪ್ರಭುತ್ವ ವ್ಯವಸ್ಥೆಯ ವೈಫಲ್ಯಗಳನ್ನು ಮುಚ್ಚುಮರೆಯಿಲ್ಲದೆ ಬಯಲುಗೊಳಿಸುವ ಕವಿತೆಗಳು ಇಲ್ಲಿ ಸಾಕಷ್ಟಿವೆ.
ಗದ್ಯದ ಭಾರವನ್ನು ಕಡಿಮೆ ಮಾಡಿಕೊಂಡು ರೂಪಕಗಳಲ್ಲಿ ಆಕಾರ ಪಡೆದಿರುವ ಕವಿತೆಗಳು ಬಿಡುಗಡೆಯ ರೆಕ್ಕೆಗಳಾಗಿ ಪರಿತ್ಯಕ್ತರ ಬದುಕಿನ ಕಲೆಗಳಾಗಿ ಅರಳಿವೆ. ಅಂತರ್ಮುಖಿಯಲ್ಲದ ಕವಿತೆಗಳು ಹೆಚ್ಚು ವಾಚಾಳಿಯಾಗದೆ ಮಂದಶ್ರುತಿಯಲ್ಲಿದ್ದು ಅಸಾಧ್ಯತೆಯನ್ನು ಸಾಧ್ಯವಾಗಿಸುವ ತುಡಿತವನ್ನು ವ್ಯಕ್ತಪಡಿಸುತ್ತವೆ. ಮೇಲ್ನೋಟಕ್ಕೆ ಸರಳೀಕರಣದಂತೆ ಕಂಡರೂ ಪರಿಧಿಯ ಆಚೆಗೆ ಉಳಿದು ನಲುಗಿರುವ ಸಮುದಾಯವೊಂದರ ದನಿಯಾಗಿ ಇಂಥ ಕವಿತೆಗಳನ್ನು ಗುರುತಿಸಿದಾಗ ಅವುಗಳ ಆಳದಲ್ಲಿರುವ ಮಾನವಪ್ರೀತಿ, ಸಮಾನತೆಯ ದಾಹ ಮುಖ್ಯವಾಹಿನಿಯಿಂದ ದೂರವುಳಿದವರ ಬದುಕನ್ನು ಚರಿತ್ರೆಗೆ ಜೋಡಿಸುವ ಹಂಬಲ ಮತ್ತು ಎಲ್ಲ ಬಗೆಯ ಸಾಮಾಜಿಕ ಅಸಮಾನತೆಗಳಿಂದ ಬಿಡುಗಡೆಯನ್ನು ಪಡೆಯಲು ಬಯಸುವ ತುಡಿತ ಅರಿವಿಗೆ ಬರುತ್ತದೆ.
ಇಲ್ಲಿ ಕವಿಯ ತವಕತಲ್ಲಣಗಳು ಅಭಿವ್ಯಕ್ತಗೊಂಡಿವೆ. ಸಿಟ್ಟು ವಿಷಾದಗಳನ್ನು ಒಳಗೊಂಡೂ ಜೀವಪರವಾಗಿರುವುದರಿಂದ ಕವಿತೆಗಳ ಹೊಳಪು ಹೆಚ್ಚಿದೆ. ಸಮುದಾಯದ ನೋವಿನ ಚರಿತ್ರೆ ಮತ್ತು ಅದರಿಂದ ಹೊರಬರುವ ಹಂಬಲ ಒಳಗೊಂಡಿದೆ. ಎಂದೂ ಕೇಳುವ ತುಂಡು ರೊಟ್ಟಿ/ತುಂಡು ಬಟ್ಟೆ/ತುಂಡು ಭೂಮಿ/ತುಂಡು ಶಬ್ದಗಳ ಕೇಳಿ ಸಾಕಾಗಿದೆ/ಕವಿತೆಗಳಲ್ಲೂ ಇದೇ ಧ್ವನಿ/ಹಿನ್ನೆಲೆಯಿಲ್ಲದವರು/ ಬೆನ್ನೆಲುಬಿಲ್ಲದವರು/ಕೆಂಪು ಮಸಿಯಲ್ಲಿ ಬರೆಯುತ್ತಾರೆ/ಕ್ರಾಂತಿಯ ಬಗ್ಗೆ ಕೊರೆಯುತ್ತಾರೆ (ಸದ್ದಿಲ್ಲದೆ ಬೆಳೆದವರು) ಎನ್ನುವ ಕವಿಗೆ ಸದ್ದಿನಲಿ ಬೆಳೆದು/ಸದಾ ಸುದ್ದಿಯಲ್ಲಿದ್ದರೇನು/ಸದ್ದಿಲ್ಲದೆ ಬೆಳೆದವರು/ಸತ್ತ ಮೇಲೂ ಬದ್ಧರಾಗಿರುತ್ತಾರೆ ಎಂಬ ಸ್ಪಷ್ಟ ಅರಿವಿದೆ. ‘ಪೂರ್ಣಾಹುತಿ’ ಎಂಬ ಕವಿತೆಯು ತನ್ನ ಸಮುದಾಯದ ಬದುಕಿನ ಮೇಲೆ ನಾಗರಿಕ ಸಮಾಜ ಮತ್ತು ಪ್ರಭುತ್ವಗಳು ಏಕಕಾಲದಲ್ಲಿ ಎಸಗಿರುವ ದಾಳಿಯನ್ನು ಹೇಳುವುದರೊಂದಿಗೆ ನಯವಂಚಕ ಸಮಾಜವು ಪ್ರಭುತ್ವದ ಕಣ್ಗಾವಲಿನಲ್ಲಿ ವರ್ತಿಸುವ ದ್ವಿಮುಖ ರೀತಿಯ ಬದುಕನ್ನು ವ್ಯಕ್ತಪಡಿಸುತ್ತದೆ.
ಅಸಮಾನತೆಗಳ ಎದುರು
ಎದೆಯೊಡ್ಡಿ ನಿಂತಾಗ
ಸಿಡಿಯುತ್ತಿವೆ ಬಾಂಬುಗಳು
ಯಾವುದೋ ಹಕ್ಕಿಗಾಗಿ
ಮುಖವಾಡ ಧರಿಸಿ ಬರುತ್ತಾರೆ
ಹತ್ತಿರ ಸರಿದು ಮೆತ್ತಗೆ
ಮಾತನಾಡಿಸಿದರೆ ಹಲ್ಲುಗಿಂಜುತ್ತಾರೆ (ಸಂಬಂಧಗಳು)
ರಾಧಾಕೃಷ್ಣ ಉಳಿಯತ್ತಡ್ಕ ಅವರಿಗೆ ಕವಿತೆಯೆನ್ನುವುದು ಜಾನಪದದಂತೆ ಸಮಷ್ಟಿಯ ಎಲ್ಲ ಅನುಭವಗಳನ್ನು ಬದುಕಿನ ಒಡನಾಟ ಮತ್ತು ಸಂಕಟಗಳೊಂದಿಗೆ ನವಿರಾಗಿ ಹೇಳುವ ಅಭಿವ್ಯಕ್ತಿಯಾಗಿದೆ. ಈ ಸಂಕಲನದಲ್ಲಿರುವ ಪ್ರತಿಮೆಗಳು ನೆಲದ ಸಂಪರ್ಕವಿರುವ ವೈಯಕ್ತಿಕ ಅನುಭವಗಳಿಂದ ರೂಪು ಪಡೆದು ಕವಿತೆಯ ಅರ್ಥಲೋಕವನ್ನು ಹಿಗ್ಗಿಸಿವೆ. ಸಾಮಾಜಿಕ ಅಸ್ತಿತ್ವವಿಲ್ಲದೆ ದಿಕ್ಕೆಟ್ಟವರ ಸಂಕೇತವಾಗಿ ಮೂಡಿಬಂದಿರುವ ಈ ಸಂಕಲನದಲ್ಲಿ ಕವಿತೆಯನ್ನು ಕಟ್ಟುವ ಮತ್ತು ಅದನ್ನು ಸಾಮಾಜಿಕ ನೆಲೆಗೆ ಕೊಂಡೊಯ್ಯುವ ಶ್ರಮವಿದೆ. ಪಸರಿಸಲಿ ಗಂಧ, ಅರ್ಥದ ಹುಡುಕಾಟ, ಪ್ರೀತಿ-ಭೀತಿ, ಪ್ರತಿಬಿಂಬ, ಬೆಡಗಿನೊಳಗಿನ ಬೆರಗು ಮುಂತಾದ ಕವಿತೆಗಳು ತಮ್ಮೊಳಗಿನ ಉತ್ಕಟತೆಗಳಿಂದ ಸೆಳೆಯುತ್ತವೆ. ಇಲ್ಲಿನ ಕವಿತೆಗಳ ಅಂತರಾಳದಲ್ಲಿ ಕರುಣೆಯ ಹೊನಲು ಜೀವನದಿಯಂತೆ ಹರಿದಿದೆ. ಆದ್ದರಿಂದಲೇ ಇಲ್ಲಿನ ಕವಿತೆಗಳು ಮಾತಿನ ಅಬ್ಬರದಿಂದ ಸುಡುವುದಿಲ್ಲ. ಹರಿಯುವ ನೀರಿನಂತೆ ತಣಿಸುತ್ತವೆ. ತಮ್ಮ ಗ್ರಹಿಕೆಯನ್ನು ವಿಸ್ತೃತಗೊಳಿಸುವ ಮತ್ತು ಕಟ್ಟುವಿಕೆಯ ಕೌಶಲದ ಸಣ್ಣ ಪ್ರಮಾಣದ ಕೊರತೆಯನ್ನು ಅನುಭವಿಸುತ್ತಿರುವ ಕವಿತೆಗಳ ಮೆಲುದನಿ ಓದುಗನನ್ನು ಹತ್ತಿರಕ್ಕೆ ಸೆಳೆದುಕೊಳ್ಳುತ್ತದೆ. ಪ್ರತ್ಯೇಕತೆ, ತಿರಸ್ಕಾರ ಮತ್ತು ಅವಕಾಶಹೀನತೆಯ ಕತ್ತಲಿನಿಂದ ಹೊರಬಂದು ಸಮಾನತೆ ಮತ್ತು ಘನತೆಯುಕ್ತ ಬದುಕಿಗಾಗಿ ತುಡಿಯುವ ಸಮುದಾಯಗಳ ಒಡಲ ದನಿಯು ಈ ಸಂಕಲನದ ಸ್ಥಾಯಿಭಾವವಾಗಿದೆ.
ಡಾ. ಸುಭಾಷ್ ಪಟ್ಟಾಜೆ :
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.
ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
ಲೇಖಕ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರು ಕಾಸರಗೋಡಿನ ‘ತುಳುನಾಡು ಟೈಮ್’ ದೈನಿಕದ ಸುದ್ದಿ ಸಂಪಾದಕರಾಗಿದ್ದು, ಸಾಹಿತ್ಯ ರಚನೆ, ಸಂಘಟನಾ ಕಾರ್ಯದಲ್ಲಿ ಸಕ್ರಿಯರಾಗಿರುವವರು. ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಕನ್ನಡ ಲೇಖಕರ ಸಂಘದ ಕಾರ್ಯದರ್ಶಿಯಾಗಿ, ಹಲವು ಸಾಂಸ್ಕೃತಿಕ ಸಂಘಟನೆಗಳ ನಿರ್ದೇಶಕರಾಗಿ, ಸದಸ್ಯರಾಗಿರುವ ರಾಧಾಕೃಷ್ಣ ಉಳಿಯತ್ತಡ್ಕರ ಪ್ರಕಟಿತ ಕೃತಿಗಳು ‘ಸರಳ ಗೀತೆಗಳು’, ‘ಈ ನನ್ನ ಶಬ್ದಗಳು’, ‘ನೋವ ಜಿನುಗುವ ಜೀವ’, ‘ಬೆಂಕಿ ನುಂಗುವ ಹುಡುಗ’, ‘ಹದಿಯರೆಯದ ಹನಿಗಳು’, ಮತ್ತು ‘ಅರ್ಧ ಸತ್ಯದ ಬೆಳಕು’ (ಕವನ ಸಂಕಲನಗಳು); ‘ಕುತ್ಯಾಳ ಸಂಪದ’, ‘ನೆಲದ ಧ್ಯಾನ’, ‘ಮಧೂರು’, ‘ಕಯ್ಯಾರ’, ‘ಕಯ್ಯಾರ ಗದ್ಯ ಸೌರಭ’, ‘ಗುರು-ಕವಿ’, ‘ಲಕ್ಷ್ಮಿ ಕುಂಜತ್ತೂರು’, ‘ಡಾ. ವಸಂತಕುಮಾರ್ ಪೆರ್ಲ’ ಮತ್ತು ‘ಶ್ರೀ ಕ್ಷೇತ್ರ ಮಧೂರು’ ಇತ್ಯಾದಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಉಳಿಯತ್ತಡ್ಕ ಅವರಿಗೆ ಸಾಧನೆಗಾಗಿ ಇಪ್ಪತ್ತೈದಕ್ಕಿಂತಲೂ ಹೆಚ್ಚಿನ ಪ್ರಶಸ್ತಿ ಹಾಗೂ ಸನ್ಮಾನಗಳು ಸಂದಿವೆ.