ಭಾರತಿ ಕೇದಾರಿ ನಲವಡೆಯವರ ‘ಅವಕಾಶವೆಂಬ ಅಮೃತ ಘಳಿಗೆ’ ಎಂಬ ಈ ಲೇಖನಗಳ ಸಂಕಲನ ಒಟ್ಟು ಐವತ್ತು ಲೇಖನಗಳನ್ನೊಳಗೊಂಡಿದೆ. ಪುಸ್ತಕದ ಶೀರ್ಷಿಕೆಯೇ ಆಕರ್ಷವಾಗಿದ್ದು ಅರ್ಥಪೂರ್ಣವಾಗಿದೆ. ಈಗಾಗಲೇ ‘ಕಾವ್ಯ ಕನಸು’ ಎಂಬ ಒಂದು ಕವನ ಸಂಕಲನ ಹಾಗೂ ‘ಸಂಕಲ್ಪ’ ಅನ್ನೋ ಒಂದು ಮಕ್ಕಳ ಕವನ ಸಂಕಲನವನ್ನು ಪ್ರಕಟಿಸಿದ್ದು ಸೇರಿದಂತೆ ಇದು ಇವರ ಮೂರನೆಯ ಕೃತಿಯಾಗಿದೆ.
ಲೇಖನವು ಕಾಲ್ಪನಿಕ ಮತ್ತು ಮನರಂಜನೆಗಿಂತ ತಿಳಿವಳಿಕೆ ಅಥವಾ ಶೈಕ್ಷಣಿಕವಾಗಿರಬೇಕು. ಒಂದು ಲೇಖನವು ಪ್ರಧಾನವಾಗಿ ನಾಲ್ಕು ಅಂಗಗಳನ್ನು ಹೊಂದಿರುವುದು ಅಗತ್ಯ.
ಮೊದಲನೆಯದಾಗಿ ಶಿರೋನಾಮೆ :
ಶಿರೋನಾಮೆಗೆ ತಲೆಬರಹವೆಂದು ಪರ್ಯಾ ಯ ಪದವಿದೆ. ಯಾವುದೇ ಲೇಖನಕ್ಕೆ ತಲೆ ಬರಹ ಕೊಡುವುದು ಸುಲಭವಲ್ಲ. ಲೇಖನ ಪುಟ್ಟದಿರಲಿ, ಬೃಹದಾಗಿರಲಿ, ಲೇಖನದ ಮುನ್ನೋಟ ಶಿರೋನಾಮೆಯಲ್ಲೇ ಎದ್ದು ಕಾಣಬೇಕು. ಲೇಖನದ ಒಳ ಹರಿವನ್ನು ಶಿರೋನಾಮೆಯೇ ಧ್ವನಿಸಬೇಕು. ಶಿರೋನಾಮೆ ಮತ್ತು ಲೇಖನ ಪರಸ್ಪರ ಸರಪಣಿಯ ಕೊಂಡಿಗಳಂತಿರಬೇಕು. ಶಿರೋನಾಮೆಯು ಆಕರ್ಷವಾಗಿರಬೇಕು ಮತ್ತು ಅರ್ಥವತ್ತಾಗಿರಬೇಕು.
ನಂತರದಲ್ಲಿ ಶಿರೋನಾಮೆಗೆ ಪೂರಕವಾದ ಪೀಠಿಕೆಯಿರಬೇಕು. ಆರಂಭಿಕ ಮಾತು ಎಂದು ಹೇಳುವ ಪೀಠಿಕೆಯು ಬಹಳ ದೊಡ್ಡದಾಗಿರಬಾರದು. ಲೇಖನದ ಪುಟಗಳನ್ನು ಆಧರಿಸಿ ಪೀಠಿಕೆಯಿದ್ದರೆ ಒಳ್ಳೆಯದು. ಒಂದು ಪುಟದ ಲೇಖನವಾದರೆ ನಾಲ್ಕು ಸಾಲಿನ ಪೀಠಿಕೆ ಸಾಕು. ನಾಲ್ಕು ವಾಕ್ಯವೆಂದು ನಾನು ಹೇಳುವುದಿಲ್ಲ. ಕೆಲವರ ವಾಕ್ಯವೇ ಅರ್ಧ ಪುಟದಷ್ಟಿರುವುದಿದೆ. ಪೀಠಿಕೆಯೂ ಲೇಖನದ ಒಳ ಸುಳಿಗಳ ದಿಕ್ಕನ್ನು ಓದುಗನಿಗೆ ಮನವರಿಕೆ ಮಾಡುವಂತಿರಬೇಕು. ಪೀಠಿಕೆಯ ಸಾಲುಗಳು ಲೇಖನದ ಪ್ರಧಾನ ಸಾರವನ್ನೇ ಪ್ರತಿನಿಧಿಸಬೇಕು.
ಲೇಖನಗಳ ಕರಡು ರೂಪದ ರಚನೆಗಿಳಿಯುವ ಮೊದಲು ಬರವಣಿಗೆಯ ವಿಷಯದ ಸಂಪೂರ್ಣ ಜ್ಞಾನವನ್ನು ಎಲ್ಲಾ ಮೂಲಗಳಿಂದಲೂ ಸಂಗ್ರಹಿಸಬೇಕು. ಸಂಗ್ರಹಿಸಿದ್ದನ್ನು ಬರೆದಿಟ್ಟುಕೊಳ್ಳಬೇಕು. ನೀಡುವ ಉದಾಹರಣೆಗಳು, ಬಳಸಿದ ಪದ ಪ್ರಯೋಗಗಳು, ಘಟನಾವಳಿಗಳು, ಭಾಷಾ ಪ್ರಯೋಗ, ಸಮಂಜಸತೆ, ಮನಸೆಳೆಯುವಿಕೆ ಹೀಗೇ ಲೇಖನದ ಎಲ್ಲಾ ಮಜಲುಗಳೂ ಸಮರ್ಪಕವಾಗಿದ್ದರೆ ಅದು ಸುಂದರ ಬರಹವಾಗುವುದರಲ್ಲಿ ಸಂದೇಹವಿಲ್ಲ.
ಲೇಖನದಲ್ಲಿ ಪ್ರಮುಖವಾಗಿ ವಿಷಯಗಳನ್ನು ಪರಿಚ್ಛೇದಗಳಾಗಿ ವಿಭಜಿಸುವದೂ ಉತ್ತಮ ಲೇಖನದ ಲಕ್ಷಣವಾಗಿದೆ ಎಂದರೆ ಲೇಖನದ ಸಾಗುವಿಕೆಯಲ್ಲಿ ವಿಷಯದ ವಿವಿಧ ಭಾಗಗಳನ್ನು ಬೇರೆ ಬೇರೆ ಪ್ಯಾರಾಗಳಲ್ಲಿ ವಿವರಿಸುವುದು ಹೆಚ್ಚು ಅರ್ಥಪೂರ್ಣವಾಗಿದೆ. ಲೇಖನದ ಕೊನೆಗೆ ಉಪಸಂಹಾರ ಅಥವಾ ಮುಕ್ತಾಯದ ಭಾಗವಿರಬೇಕು. ಇದು ಬಹಳ ದೀರ್ಘವಾದುದಾಗಿರಬಾರದು. ಲೇಖನದ ಮುಖ್ಯ ಸಾರದ ಸಮರ್ಥನೆಯಾಗಿ ಒಂದೆರಡು ವಾಕ್ಯಗಳಿಂದಲೂ ಮುಕ್ತಾಯಗೊಳಿಸಬಹುದು. ಇದನ್ನೆಲ್ಲಾ ಗಮನಿಸಿದಾಗ ಭಾರತಿ ಕೇದಾರಿಯವರ ಲೇಖನಗಳಲ್ಲಿ ಅಂಥಾ ಕೆಲವು ಅಂಶಗಳನ್ನು ಗುರುತಿಸಬಹುದಾಗಿದೆ.
ಗುರಿ, ನಂಬಿಕೆ, ಮಾತು, ಭಯ, ನಗು, ಕ್ಷಮೆ, ಶಿಸ್ತು, ಮುಂತಾದ ವೈವಿಧ್ಯಮಯ ವಿಷಯಗಳು ಇವರ ಆಯ್ಕೆಯೂ ಆಗಿದ್ದು, ಮಕ್ಕಳ ವ್ಯಕ್ತಿತ್ವ ರೂಪಿಸಲು ಅನುವಾಗುವಂತೆ ಅನೇಕ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಮಕ್ಕಳು ಸನ್ಮಾರ್ಗದಲ್ಲಿ ನಡೆಯಬೇಕು ಹಾಗೂ ಪೋಷಕರ ಪ್ರೋತ್ಸಾಹವೂ ದೊರೆಯಬೇಕೆನ್ನುವುದು ಇವರ ಲೇಖನಗಳ ಮೂಲ ಸದುದ್ದೇಶವಾಗಿದೆ.
ಲೇಖಕಿಯು ‘ಗುರಿ’ ಎನ್ನುವ ತಮ್ಮ ಮೊದಲನೆಯ ಲೇಖನದಲ್ಲಿ ಗುರಿಯಷ್ಟೇ ಅದನ್ನು ಹೊಂದಿರುವ ಮಾರ್ಗದ ಕಡೆಗೂ ಗಮನ ಕೊಡಬೇಕೆಂಬ ಸ್ವಾಮಿ ವಿವೇಕಾನಂದರ ಉಕ್ತಿಯನ್ನು ಉಲ್ಲೇಖಿಸುತ್ತಾರೆ. ಅಂಕಗಳಿಕೆಗಿಂತ ಮಕ್ಕಳಲ್ಲಿ ಸಂಸ್ಕಾರ ಬೆಳೆಸುವುದು ಅವಶ್ಯಕ ಎಂದು ಪೋಷಕರಿಗೆ ಕಿವಿ ಮಾತನ್ನು ಹೇಳುತ್ತಾರೆ.
ಎರಡನೆಯ ಲೇಖನದಲ್ಲಿ ಯುಗಾದಿಯ ವೈಜ್ಞಾನಿಕ ವಿಶ್ಲೇಷಣೆಯನ್ನು ನೀಡುವುದರೊಂದಿಗೆ ಶಾಲಿವಾಹನ ಶಕೆ ಹೇಗೆ ಪ್ರಾರಂಭವಾಯಿತು ಎನ್ನುವ ಅಪರೂಪದ ಕಥೆಯನ್ನು ತಿಳಿಸುತ್ತಾರೆ. ಕುಂಬಾರನ ಮಗನಾದ ಶಾಲಿವಾಹನನು ಮಣ್ಣಿನ ಸೇನೆ ಮಾಡಿ ಅದರ ಮೇಲೆ ನೀರು ಚುಮುಕಿಸಿ ಅದಕ್ಕೆ ಜೀವ ತುಂಬಿದನು. ಆ ಸೈನ್ಯದ ಸಹಾಯದಿಂದ ಶತ್ರುಗಳನ್ನು ಸೋಲಿಸಿದನು. ಆ ವಿಜಯದ ಸಂಭ್ರಮದ ದಿನದಂದೇ ಶಾಲಿವಾಹನ ಶಕೆ ಪ್ರಾರಂಭವಾಯಿತು ಎನ್ನುವುದು ಆ ಕಥೆಯ ಸಾರಾಂಶ.
ಸಹಬಾಳ್ವೆಯ ಮಹತ್ವವನ್ನು ಉತ್ತಮ ಉದಾಹರಣೆಯೊಂದಿಗೆ ಪ್ರಾರಂಭಿಸಿ ಸರಳ ರೀತಿಯಲ್ಲಿ ಮುನ್ನಡೆದು ಕಾಗೆ ಇರುವೆಗಳ ನಿದರ್ಶನದೊಂದಿಗೆ ಮಕ್ಕಳಿಗೂ ಅರ್ಥವಾಗುವಂತೆ ವಿವರಿಸಿದ್ದಾರೆ.
‘ಕ್ಷೀಣಿಸುತ್ತಿದೆ ಮೌಲ್ಯಗಳ ನೆಲೆ’ ಲೇಖನದಲ್ಲಿ ಮಕ್ಕಳು ಮೌಲ್ಯಗಳನ್ನು ತಮ್ಮದಾಗಿಸಿಕೊಳ್ಳುವುದರಲ್ಲಿ ಹೇಗೆ ವಂಚಿತರಾಗುತ್ತಿದ್ದಾರೆ ಎನ್ನುವುದನ್ನು ವಿಷದ ಪಡಿಸುತ್ತಾ ತಂತ್ರಜ್ಞಾನದ ದುರುಪಯೋಗವೂ ಅದಕ್ಕೆ ಕಾರಣ ಎನ್ನುತ್ತಾರೆ. ಅಂತ್ಯದಲ್ಲಿ ಕೆಲವು ಸಲಹೆಗಳನ್ನು ನೀಡಿ ರಾಷ್ಟ್ರಕವಿ ಕುವೆಂಪು ಅವರ ‘ಮಗು ಹುಟ್ಟುತ್ತಾ ದೇವಮಾನವ, ಬೆಳೆಯುತ್ತಾ ಅಲ್ಪ ಮಾನವ, ಅವನನ್ನು ಮತ್ತೆ ವಿಶ್ವಮಾನವನನ್ನಾಗಿಸುವ ಮುಖ್ಯ ಕಾರ್ಯ ಶಿಕ್ಷಣದ್ದಾಗಿದೆ’ ಎಂಬ ಉಕ್ತಿಯ ಮೂಲಕ ಶಿಕ್ಷಣದ ಮಹತ್ತರ ಜವಾಬ್ದಾರಿಯನ್ನು ತಿಳಿಸುತ್ತಾರೆ.
‘ಬೆಳಗು-ಬೆಳಕು’ ಲೇಖನದಲ್ಲಿ ತಂದೆ ಮಗನನ್ನು ಬೆಳಿಗ್ಗೆ ಐದು ಗಂಟೆಗೇ ಏಳುವಂತೆ ಒತ್ತಾಯಿಸಿ ಏಳಲಿಲ್ಲವೆಂದು ಸಿಡಿಮಿಡಿಗೊಂಡರು ಎಂದು ಬರೆಯುತ್ತಾರೆ. ಮನೆಯವರೆಲ್ಲಾ ರಾತ್ರಿ ಹನ್ನೆರಡು ಗಂಟೆಗೆವರೆಗೂ ಎದ್ದಿರುತ್ತಿದ್ದುದರಿಂದ ಅವರೊಡನೆ ಮಲಗುತ್ತಿದ್ದ ಮಗು ಬೆಳಿಗ್ಗೆ ಐದಕ್ಕೆ ಏಳಲು ಹೇಗೆ ಸಾಧ್ಯ ಎಂದು ಕನಿಕರಿಸುತ್ತಾರೆ.
ಕೃತಿಯ ಶೀರ್ಷಿಕೆಯೇ ಆಗಿರುವ ಲೇಖನ ‘ಅವಕಾಶವೆಂಬ ಅಮೃತ ಘಳಿಗೆ’ಯಲ್ಲಿ ದೊರಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ವೀಯಾಗಬೇಕೆನ್ನುವ ಸಂದೇಶವಿದೆ. ಮಕ್ಕಳಿಗೆ ಮಾರ್ಗದರ್ಶಕ ಲೇಖನಗಳಲ್ಲದೆ ಹೆಣ್ಣುಮಕ್ಕಳ ಶಿಕ್ಷಣ, ಮಹಿಳೆಯ ಪ್ರಾಮುಖ್ಯತೆ, ಮಹಿಳೆಯು ಮೌಲ್ಯಗಳ ಸಾರಥಿಯಾಗಿರುವುದರ ಬಗ್ಗೆಯೂ ಲೇಖನಗಳಿವೆ. ಸ್ವಾಮಿ ವಿವೇಕಾನಂದರು, ಬಾಲಗಂಗಾಧರ ತಿಲಕರು, ಸಾವಿತ್ರಿಬಾಯಿ ಫುಲೆಯವರ ಕುರಿತಾದ ವ್ಯಕ್ತಿಚಿತ್ರಣಗಳನ್ನೂ ಲೇಖಿಸಿದ್ದಾರೆ.
ಬರಹವೊಂದು ತಾನಾಗಿಯೇ ಓದಿಸಿಕೊಳ್ಳಬೇಕು ಮತ್ತು ಓದುಗನ ಕೌತುಕವನ್ನು ಕೊನೆಯ ಪುಟದವರೆಗೂ ಹಿಡಿದಿರುವಂತಿರಬೇಕು. ಜೊತೆಗೆ, ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಮತೋಲಿತ ಸಮಾಜಕ್ಕೆ ಮಾದರಿಯಾಗಬಲ್ಲ ಸಂದೇಶಗಳನ್ನು ನೀಡುವಂತಿರಬೇಕು. ಈ ನಿಟ್ಟಿನಲ್ಲಿ ಇವರ ಪ್ರಸ್ತುತ ಕೃತಿಯು ತನ್ನದೇ ಪ್ರಯತ್ನದಲ್ಲಿದ್ದು ಉಪಯುಕ್ತವಾಗಿದೆ. ಈ ಕೃತಿಯಲ್ಲಿರುವ ಒಟ್ಟು ಐವತ್ತು ಲೇಖನಗಳಲ್ಲಿ ಕೆಲವು ಲೇಖನಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸಿದ್ದೇನೆ. ಉಳಿದವನ್ನು ನೀವೇ ಓದಿ ಲೇಖಕಿಯ ಅಂತರ್ಯವನ್ನು ಮನಗಾಣಬಹುದು.
ಈ ಕೃತಿಯು ನಮ್ಮ ಹಾಸನದ ಮಾಣಿಕ್ಯ ಪ್ರಕಾಶನದಿಂದ ಪ್ರಕಟಗೊಂಡಿದ್ದು, ಸದರಿ ಪ್ರಕಾಶನವು ಈಗಾಗಲೇ 76 ಪುಸ್ತಕಗಳನ್ನು ಹೊರತಂದಿದ್ದು ನೂರರತ್ತ ದಾಪುಗಾಲುಹಾಕುತ್ತಿರುವುದು ಶ್ಲಾಘನೀಯ. ಅದಕ್ಕಾಗಿ ದೀಪಾ ಕೊಟ್ರೇಶ್ ಮತ್ತು ಕೊಟ್ರೇಶ್ ದಂಪತಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ಭಾರತಿಯವರು ಇನ್ನೂ ಉತ್ತಮವಾದ ಮೌಲ್ಯಯುತ ಕೃತಿಗಳನ್ನು ನೀಡಿ ಅವು ಹೆಚ್ಚುಹೆಚ್ಚು ಓದುಗರನ್ನು ತಲುಪಲಿ, ಮತ್ತಷ್ಟು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಹಾಗೂ ಈ ಅಮೃತ ಘಳಿಗೆಯನ್ನು ತಮ್ಮದಾಗಿಸಿಕೊಂಡದ್ದಕ್ಕಾಗಿ ಲೇಖಕಿಗೆ ಪ್ರೀತಿಯ ಅಭಿನಂದನೆಗಳು.
ವಿಮರ್ಶಕರು : ಸಾಹಿತಿ ಎಚ್.ಡಿ. ಪ್ರಭಾಮಣಿ ನಾಗರಾಜ್ ಹಾಸನ
ಕೃತಿ : ಅವಕಾಶವೆಂಬ ಅಮೃತ ಘಳಿಗೆ
ಲೇಖಕಿ : ಭಾರತಿ ಕೇದಾರಿ ನಲವಡೆ
ಪುಟಗಳು : 166
ಮುಖಬೆಲೆ : 180 /-
ಪ್ರಕಟಣೆ : 2024
ಪ್ರಕಾಶನ : ಮಾಣಿಕ್ಯ ಪ್ರಕಾಶನ (ರಿ.) ಹಾಸನ
ಕೃತಿ ವಿಮರ್ಶೆ : ಎಚ್.ಡಿ. ಪ್ರಭಾಮಣಿ ನಾಗರಾಜ್ ಹಾಸನ