ಪುತ್ತೂರು : ಅಕ್ಷತಾರಾಜ್ ಪೆರ್ಲರವರು ಬರೆದ ‘ಅವಲಕ್ಕಿ ಪವಲಕ್ಕಿ’ ಲೇಖನಗಳ ಸಂಗ್ರಹ ಅತ್ಯದ್ಭುತವಾಗಿ ಮೂಡಿಬಂದಿದೆ. ಇದು ಬರಿಯ ಲೇಖನವಷ್ಟೇ ಅಲ್ಲ .. ! ವಾಸ್ತವಿಕತೆಯ ಬೊಟ್ಟು ಮಾಡಿ ಬದಲಾವಣೆಗೆ ಮುನ್ನುಡಿ ಬರೆವ ಟಾನಿಕ್ ನಂತಿದೆ. ಇದರಲ್ಲಿರುವ ಸುಮಾರು 55 ಲೇಖನಗಳೂ ಕೂಡಾ ಒಂದಿಲ್ಲೊಂದು ಹೊಸತನದೊಂದಿಗೆ ಓದುಗರ ಮನ ತಲುಪಲು ಪ್ರಯತ್ನಿಸಿದೆ. ಇಲ್ಲಿ ಲೇಖಕಿ ಅಕ್ಷತರಾಜ್ ಪೆರ್ಲ ಅವರ ಆಂತರ್ಯದ ದನಿಯೊಂದು ಸದ್ದಿಲ್ಲದೆ ಸಹೃದಯದೊಂದಿಗೆ ಮಾತನಾಡುತ್ತಾ ಹೋಗುತ್ತದೆ. ಪ್ರತೀ ಲೇಖನಗಳೂ ತೀರಾ ಸಾಮಾನ್ಯವಾಗಿ ಆರಂಭಗೊಂಡು ಕೊನೆಯ ಒಂದು ಭಾಗದಲ್ಲಂತೂ ಒಮ್ಮೆ ನಮ್ಮೊಳಗೆ ‘ಇದು ಹೌದಲ್ಲವೇ ?’ ಎಂದು ಯೋಚಿಸುವಂತೆ ಮಾಡುವಲ್ಲಿ ಯಶಸ್ಸು ಕಂಡಿದೆ. ಇಲ್ಲಿ ಅಂಗಳದಲ್ಲಿ ಆಡುವ ಪುಟ್ಟ ಮಗುವಿನಿಂದ ಹಿಡಿದು, ಮನೆಯೊಳಗೆ ಕುಳಿತು ಹಳೆಯ ನೆನಪುಗಳನ್ನು ಮೆಲುಕು ಹಾಕುವ ಅಜ್ಜಿ, ಮನೆಯ ಅಡುಗೆ ಕೋಣೆ, ಹೆಂಡತಿಯ ಸತ್ಕಾರ, ಗಂಡನ ಆರ್ಡರ್ ಭಾವ, ಸಾಫ್ಟ್ ವೇರ್ ಬದುಕು, ಅಂಶದ ಬದುಕಿನಲ್ಲಿ ಸುಖ ಕಾಣುವ ಲೇಟೆಸ್ಟ್ ಅಪ್ಪ–ಅಮ್ಮ .. ಹೀಗೆ ಇನ್ನೂ ಹಲವು ಗಂಭೀರವಾಗಿ ನಾವು ಯೋಚಿಸಲೇಬೇಕಾದ ವಾಸ್ತವ ವಿಚಾರಗಳು ಪುಸ್ತಕ ತುಂಬಾ ತೇಲಿವೆ. ಈ ಪುಸ್ತಕದ ಪುಟ ತೆರೆದಂತೆ ಲೇಖಕಿಯ ನೋವು, ತಲ್ಲಣಗಳ ಅರಿವಾಗುತ್ತದೆ. ಮನದ ಬಹಳಷ್ಟು ತುಮುಲ, ಗೊಂದಲ, ರೋಷಗಳಿಗೆ ವೇದಿಕೆಯಾದಂತಿದೆ.
ವಾಸ್ತವ ಜಗತ್ತನ್ನು ಕಟ್ಟಿ ಕೊಡುವ ಜೊತೆಜೊತೆಗೆ ಅಲ್ಲಲ್ಲಿ ಹೆಣ್ಣಿನ ಗಟ್ಟಿ ನಿಲುವನ್ನು ಸ್ವಲ್ಪ ಗಟ್ಟಿಯಾಗಿಯೇ ಹೇಳುವ ಪ್ರಯತ್ನ ನಡೆದಿದೆ. ಪ್ರತಿನಿತ್ಯ ಬದುಕಿನಲ್ಲಿ ಕಾಣುವ ಸಾಮಾನ್ಯ ಸಮಸ್ಯೆಗಳನ್ನು ಓದುಗರಿಗೆ ಮನದಟ್ಟು ಮಾಡಿದ ಪ್ರಯತ್ನವಂತೂ ಗ್ರೇಟ್. ಇಂತಹ ಸಣ್ಣ ಸಣ್ಣ ವಿಚಾರಗಳನ್ನು ಇಟ್ಟುಕೊಂಡು ಪುಟಗಟ್ಟಲೆ ವಿಚಾರ ವಿನಿಮಯ ಮಾಡುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಈ ವಿಚಾರದಲ್ಲಿ ಪೆರ್ಲರವರು ಒಂದಷ್ಟು ಭಿನ್ನವಾಗಿಯೇ ಕಾಣುತ್ತಾರೆ. ಲೇಖನಗಳ ಉದ್ದಕ್ಕೂ ಎಲ್ಲಿಯೂ ಉಪದೇಶವಿಲ್ಲ. ಆದರೆ ಓದುಗರನ್ನು ಜಾಗೃತಗೊಳಿಸುವ ಕೆಲಸ ಸದ್ದಿಲ್ಲದೆ ನಡೆದಿದೆ. ಮೂರ್ನಾಲ್ಕು ಲೇಖನಗಳಲ್ಲಿ ಸಣ್ಣ ಪುಟ್ಟ ಮುದ್ರಣ ದೋಷ ಕಂಡು ಬಂದರೂ, ಉಳಿದಂತೆ ಎಲ್ಲಿಯೂ ಸಹೃದಯನಿಗೆ ಆಭಾಸವಾಗದ ಹಾಗೆ ಓದಿಸಿಕೊಂಡು ಹೋಗುತ್ತದೆ ಎಂಬುದು ಗಮನಿಸಬೇಕಾದ ವಿಚಾರ. ಈಗಿನ ಫಾಸ್ಟೆಸ್ಟ್ ಯುಗದಲ್ಲಿ ಕ್ಷಣ ಮಾತ್ರದಲ್ಲಿ ಓದಿ ಮುಗಿಸಬಹುದಾದ ‘ಅವಲಕ್ಕಿ ಪವಲಕ್ಕಿ’ ಸಾಹಿತ್ಯ ಲೋಕದಲ್ಲಿ ಒಂದಷ್ಟು ಸಹೃದಯದ ಮನದಾಳದಲ್ಲಿ ಅಚ್ಚಳಿಯದೇ ಉಳಿಯುವುದರಲ್ಲಿ ಸಂದೇಹವೇ ಇಲ್ಲ.
- ಶ್ರೀ ಗಣೇಶ್ ನಾಯಕ್, ಪುತ್ತೂರು