ಲಿಂಗ ವ್ಯತ್ಯಾಸದ ಹೆಸರಿನಲ್ಲಿ ಸಮಾಜವು ಅನ್ಯಾಯ, ತಾರತಮ್ಯ ಹಾಗೂ ಅಸಮಾನ ಅವಕಾಶಗಳ ನೆಲೆವೀಡು ಆಗಬಾರದು ಅನ್ನುವುದು ಸ್ತ್ರೀವಾದಿ ಹೋರಾಟದ ಮುಖ್ಯ ಉದ್ದೇಶ. ಈ ಅಸಮಾನತೆಯ ಬೇರುಗಳನ್ನು ಕಿತ್ತೊಗೆದು ಹೊಸದೊಂದು ವ್ಯವಸ್ಥೆಯನ್ನು ಹುಟ್ಟು ಹಾಕುವ ಉದ್ದೇಶವನ್ನಿಟ್ಟುಕೊಂಡು ಕಳೆದ ಶತಮಾನದಿಂದೀಚೆಗೆ ಜಗತ್ತಿನ ಎಲ್ಲ ಮೂಲೆಗಳಲ್ಲೂ ಹೋರಾಟಗಳು ನಡೆದಿವೆ. ಸ್ತ್ರೀಪುರುಷರಾದಿಯಾಗಿ ಅನೇಕರು ಈ ಬಗ್ಗೆ ಚಿಂತನೆಗಳನ್ನು ಮಾಡಿದ್ದಾರೆ. ಲೇಖನಗಳನ್ನು ಬರೆದಿದ್ದಾರೆ. ಚರ್ಚೆಗಳನ್ನು ನಡೆಸಿದ್ದಾರೆ. ಇವುಗಳ ಹೊರತಾಗಿ ನಮ್ಮ ಜನಪದರು ಹೋರಾಟದ ಯಾವ ಅರಿವೂ ಇಲ್ಲದೆಯೇ ರಚಿಸಿದ ಮೌಖಿಕ ಸಾಹಿತ್ಯಗಳನ್ನೂ ಬೆಳಕಿಗೆ ತರುವ ಪ್ರಯತ್ನಗಳಾಗಿವೆ. ಅಲ್ಲದೆ ಸ್ತ್ರೀಯರಿಗೆ ಪ್ರಾಮುಖ್ಯ ಕೊಟ್ಟಿದ್ದ ಮಾತೃಮೂಲೀಯ ಪದ್ಧತಿಯ ಬಗ್ಗೆ ಮರು ಚಿಂತನೆಗಳಾಗಿವೆ.
ಪಾಶ್ಚಾತ್ಯರಲ್ಲಿ ಆರಂಭವಾದ ಸ್ತ್ರೀವಾದಿ ಚಳುವಳಿಯು ಭಾರತದಲ್ಲೂ ತನ್ನ ನೆಲೆಗಳನ್ನು ಸ್ಥಾಪಿಸಿಕೊಂಡಾಗ ಸ್ತ್ರೀಯರ ಪರವಾಗಿ ದೇಶದಲ್ಲಿ ಒಂದು ಹೊಸ ಜಾಗೃತಿಯ ಅಲೆಯುಂಟಾದದ್ದು ಇಂದು ಇತಿಹಾಸ. ಇದರ ಪರಿಣಾಮವಾಗಿ ಸ್ತ್ರೀಯರ ಪರವಾಗಿ ಅವರ ರಕ್ಷಣೆಗೋಸ್ಕರ ಕಾನೂನುಗಳು ಹುಟ್ಟಿಕೊಂಡವು. ಅವರಿಗೆ ಹತ್ತಾರು ಬಗೆಯಲ್ಲಿ ಸೌಕರ್ಯ-ಸವಲತ್ತುಗಳಿಗಾಗಿ ಸರಕಾರವು ಅವಕಾಶಗಳನ್ನು ರೂಪಿಸಿತು. ಅವುಗಳ ಸದ್ವಿನಿಯೋಗಗಳ ಜತೆಗೇ ದುರ್ವಿನಿಯೋಗವೂ ಅಲ್ಲಲ್ಲಿ ಆಗತೊಡಗಿದವು. ಪರಿಣಾಮವಾಗಿ ಸ್ತ್ರೀಸಮಾನತೆಯ ಬಗ್ಗೆ ಮಾತನಾಡುವವರನ್ನೇ ಸಂದೇಹದ ದೃಷ್ಟಿಯಿಂದ ನೋಡುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಒಂದೆಡೆ ಸಾಂಪ್ರದಾಯಿಕ ನಂಬಿಕೆಗಳಿಂದ ಇನ್ನೂ ಬಿಡುಗಡೆಯಾಗದ ಪಿತೃ ಪ್ರಧಾನ ಸಂಸ್ಕೃತಿಗೆ ಆತುಕೊಂಡ ಸಮಾಜವಾದರೆ, ಇನ್ನೊಂದೆಡೆ ಹೋರಾಟವನ್ನು ಆದಷ್ಟು ಹಿಮ್ಮೆಟ್ಟಿಸಲು ನೋಡುತ್ತಿರುವ ಯಥಾಸ್ಥಿತ ಜನವರ್ಗ – ಹೀಗೆ ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡ ಹೋರಾಟ ವರ್ಗ. ಈ ಸಂದರ್ಭದಲ್ಲಿ ಇದುವರೆಗೆ ನಡೆದ ಸ್ತ್ರೀಪರ ಚಿಂತನೆಗಳ ಕೋಶದ ಹಿಂಬದಿಯ ಕಿಟಕಿಗಳನ್ನು ತೆರೆದು ಒಂದು ತಿರುಗು ನೋಟ ಹಾಯಿಸಿ ಎಲ್ಲವನ್ನೂ ದಾಖಲಿಸುವ ಇಂಥ ಒಂದು ಕೃತಿಯ ತುರ್ತು ನಮ್ಮ ಮುಂದಿದೆ.
ಅಂತೆಯೇ ಈ ಕೃತಿಯನ್ನು ರಚಿಸುವ ಆಲೋಚನೆ ತಮಗೆ ಹೇಗೆ ಬಂತು ಎಂಬುದನ್ನು ಪ್ರಧಾನ ಸಂಪಾದಕದ್ವಯರು ತಮ್ಮ ಪ್ರಸ್ತಾವನೆಯಲ್ಲಿ ಹೀಗೆ ಹೇಳಿಕೊಳ್ಳುತ್ತಾರೆ : “ಈ ಸಂಕಲನವನ್ನು ಹೊರತರಲು ಪ್ರಸ್ತುತ ಸಂದರ್ಭದ ಸಾಮಾಜಿಕ/ಸಾಂಸ್ಕೃತಿಕ ಪಲ್ಲಟಗಳು ಪ್ರಮುಖ ಕಾರಣವಾಗಿವೆ. ಇಲ್ಲಿಯವರೆಗೆ ಸಾರ್ವಜನಿಕ ಅವಕಾಶದಲ್ಲಿ ಕಾಪಿಟ್ಟುಕೊಂಡು ಬಂದಿರುವ ಸಮಾನತೆಯ ಅವಕಾಶಗಳು ಇದೀಗ ಪ್ರಶ್ನೆಗೊಳಗಾಗುತ್ತಿವೆ, ಸಮಾಜ ಅಸೂಕ್ಷ್ಮವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜನಪರ ಚಿಂತನೆಗಳನ್ನು ಮರುಸಂಘಟಿಸುವ ಕೆಲಸ ಅನಿವಾರ್ಯವಾಗಿ ಆಗಬೇಕಾಗುತ್ತದೆ.” (ಪು.32 – 33)
ಈ ಕೃತಿಗೆ ಬಹಳ ದೀರ್ಘವಾದ ಮುನ್ನುಡಿಯನ್ನು ಬರೆದಿರುವ ಚಿಂತಕಿ ಸುಮಾ ಬಿ.ಯು. ಇವರು ಕೃತಿಯ ಆಳ, ವಿಸ್ತಾರ ಮತ್ತು ವ್ಯಾಪ್ತಿಗಳ ಬಗ್ಗೆ ಈ ಮಾತುಗಳನ್ನು ಹೇಳುತ್ತಾರೆ : “ಇಲ್ಲಿನ ಪ್ರತಿನಿಧಿತ್ವ ಮತ್ತು ಭಿನ್ನತೆಗಳ ಕಥನಗಳು ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕಾರಣದ ಬಹುಮುಖಿ ಸಂಕಥನಗಳನ್ನು ಸೃಷ್ಟಿಸುತ್ತವೆ. ಪ್ರತಿನಿಧಿತ್ವದ ನಿರೂಪಣೆಗಳು ಪ್ಯಾನ್ ಇಂಡಿಯನ್, ವಿಶ್ವಾತ್ಮಕವಾಗುವುದರತ್ತಲೂ ತುಡಿಯುತ್ತವೆ. ಹಾಗೆಯೇ ಅವಿಭಜಿತ ದಕ್ಷಿಣ ಕನ್ನಡದ ವಿಶಿಷ್ಟತೆ ಮತ್ತು ಭಿನ್ನತೆಯ ನಿರೂಪಣೆಗಳು, ಭಾರತದ ಅಥವಾ ಕರ್ನಾಟಕದ ಸಮಕಾಲೀನ ಮಹಿಳಾ ಚಿಂತನೆಗಳ ಹಾಗೂ ಬದುಕುಗಳ ಬಹಳ ಮುಖ್ಯವಾದ ಸಮಸ್ಯೆ ಮತ್ತು ಸವಾಲುಗಳನ್ನು ಅರಿವಿಗೆ ದಕ್ಕಿಸಿಕೊಳ್ಳುತ್ತಲೇ ಹೊಸ ದಾರಿಗಳನ್ನು ಶೋಧಿಸುತ್ತವೆ ಇಲ್ಲವೇ ಪ್ರಶ್ನೆ ಮತ್ತು ಆತಂಕಗಳನ್ನು ಮುಂದಿಡುತ್ತವೆ” (ಪು.10)
57 ಮಂದಿ ಲೇಖಕಿಯರು ಮತ್ತು ಲೇಖಕರುಗಳ ಬರಹಗಳಿಂದ ಸಮೃದ್ಧವಾದ ಈ ಬೃಹತ್ ಕೃತಿಯ ಹಿಂದೆ ಇಬ್ಬರು ಪ್ರಧಾನ ಸಂಪಾದಕರು ಮತ್ತು ಎಂಟು ಮಂದಿ ಸಂಪಾದಕರುಗಳನ್ನೊಳಗೊಂಡಂತೆ ಹಲವರ ಅವಿರತ ಶ್ರಮವಿದೆ ಮತ್ತು ಇದು ಪರೋಕ್ಷವಾಗಿ ಪ್ರಾದೇಶಿಕ ಮಟ್ಟದಲ್ಲಿ ಅಲ್ಲಲ್ಲಿ ಎಲ್ಲೆಡೆ ಇಂಥ ಕೃತಿಗಳು ಬರಬೇಕಾದ ಅಗತ್ಯವನ್ನೂ ಸೂಚ್ಯವಾಗಿ ಹೇಳುತ್ತದೆ.
ಕೃತಿಯ ಶೀರ್ಷಿಕೆ : ಅವಿಭಜಿತ ದಕ್ಷಿಣ ಕನ್ನಡದ ಮಹಿಳಾ ಚಿಂತನೆ (ಸಂಪಾದಿತ)
ಸಂಪಾದಕರು : ಸತೀಶ್ ಚಿತ್ರಾಪು & ಸೋಮಶೇಖರ ಹಾಸನಡ್ಕ
ಪ್ರ : ಆಕೃತಿ ಆಶಯ ಪಬ್ಲಿಕೇಷನ್ಸ್
ಪ್ರ.ವರ್ಷ : 2024
ಪುಟಗಳು : 636 ಬೆಲೆ : ರೂ.630
ವಿಮರ್ಶಕಿ ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.