ಅಗ್ರಾಳ ಪುರಂದರ ರೈಯವರ ಪುತ್ರನಾಗಿ ಅವರ ಒಡನಾಡಿಯಾಗಿದ್ದ ಸಾಹಿತ್ಯಲೋಕದ ದಿಗ್ಗಜ ಶಿವರಾಮ ಕಾರಂತರು ಸೂಚಿಸಿದ ‘ವಿವೇಕ’ ಎಂಬ ನಾಮಧೇಯವನ್ನು ಪಡೆದ, ಡಾ. ಬಿ.ಎ. ವಿವೇಕ ರೈಯವರು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗವನ್ನು ಮುನ್ನಡೆಸಿ, ಹಂಪಿ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಮುಕ್ತವಿಶ್ವವಿದ್ಯಾಲಯದಲ್ಲೂ ಸೇವೆ ಸಲ್ಲಿಸಿದ್ದು ಮಾತ್ರವಲ್ಲ ವಿದೇಶದ ವಿದ್ಯಾಸಂಸ್ಥೆಗಳಲ್ಲೂ ಬೋಧಕರಾಗಿ ತಮ್ಮ ಛಾಪನ್ನು ಊರಿ ಕನ್ನಡದ ಬೋಧನೆಗೆ ವಿಶೇಷ ಗೌರವವನ್ನು ಹುಟ್ಟುಹಾಕಿ ಪ್ರಸ್ತುತ ನಿವೃತ್ತರಾಗಿದ್ದಾರೆ. ಈ ಸುದೀರ್ಘ ಮತ್ತು ಸಾರ್ಥಕ ಪಯಣದಲ್ಲಿ ಒಡನಾಡಿದ ವ್ಯಕ್ತಿಗಳು, ಮರೆಯಲಾಗದ, ಮರೆಯಬಾರದ ಸಾಂಸ್ಕೃತಿಕ ಮಹತ್ವದ ಸಂಗತಿಗಳು, ನೆನಪಿನ ಸಂಸ್ಕೃತಿಯ ಬರಹಗಳ ಸಂಪುಟವಾಗಿ ‘ಬದುಕು ಕಟ್ಟಿದ ಬಗೆಗಳು’ ಎಂಬ ಅರ್ಥಪೂರ್ಣ ಶೀರ್ಷಿಕೆಯೊಂದಿಗೆ ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ.
ಈ ಸಂಪುಟದ ಬರಹಗಳನ್ನೋದುತ್ತಿದ್ದಂತೆ ಒಂದು ಕಾಲಘಟ್ಟದ ವಿಶೇಷವಾಗಿ ದ.ಕ. ಜಿಲ್ಲೆಯ ಸಾಂಸ್ಕೃತಿಕ ಚರಿತ್ರೆಯ ಅನೇಕ ಪುಟಗಳು ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತವೆ. ವಿಸ್ಮೃತಿಗೆ ಸಂದುಹೋಗುವ ಸಾಧಕರ ಬದುಕಿನ ಹೆಜ್ಜೆಗಳನ್ನು ಮತ್ತು ಬದುಕನ್ನು ಸುಂದರವಾಗಿಸಿದ ಅವರ ಕೊಡುಗೆಗಳನ್ನು ಹೀಗೆ ದಾಖಲಿಸುವುದು ಕಾಲದ ಅಗತ್ಯವೂ ಹೌದು. ಈ ಪುಸ್ತಕವನ್ನು ಅವರು ಕರಾವಳಿ ಕರ್ನಾಟಕದ ಸಾಂಸ್ಕೃತಿಕ ರೂವಾರಿ ಹಾಗೂ ಬದುಕು ಕಟ್ಟುವ ಬಗೆಗಳನ್ನು ತೋರಿಸಿದ ಪ್ರೊ. ಕು.ಶಿ. ಹರಿದಾಸ ಭಟ್ಟರ ಜನ್ಮಶತಮಾನೋತ್ಸವದ ನೆನಪಿಗೆ ಅರ್ಪಣೆ ಮಾಡಿರುವುದು ತುಂಬ ಔಚಿತ್ಯಪೂರ್ಣ.
ವಿವೇಕ ರೈಯವರು ಹೇಳುತ್ತಾರೆ “ನನ್ನ ಅನುಭವಕ್ಕೆ ಬಾರದ ಯಾವುದರ ಬಗ್ಗೆಯೂ ಯಾರ ಬಗ್ಗೆಯೂ ಬರೆಯಲು ನನಗೆ ಸಾಧ್ಯವಿಲ್ಲ. ‘ಬದುಕು ಕಟ್ಟಿದ ಬಗೆಗಳು’ ಎನ್ನುವ ಪದಪುಂಜ ಇಲ್ಲಿನ ಬರಹಗಳಲ್ಲಿ ಪ್ರಸ್ತಾಪಿತವಾದ ವ್ಯಕ್ತಿಗಳಿಗೆ ಅನ್ವಯ ಆಗುವಷ್ಟೇ ನನಗೂ ಅನ್ವಯ ಆಗುತ್ತದೆ. ನನಗೆ ಬದುಕಿನಲ್ಲಿ ದೊರೆತ ಅವಕಾಶಗಳು, ವ್ಯಕ್ತಿಗಳ ಸಂಸರ್ಗಗಳು ಅಪಾರ, ಅಸಾಮಾನ್ಯ ಆಕಸ್ಮಿಕ. ಅವುಗಳ ದಾಖಲೆಗಳ ತುಣುಕುಗಳು ಇಲ್ಲಿ ಬರಹರೂಪದಲ್ಲಿ ಒಟ್ಟು ಸೇರಿವೆ. ” ಹಾಗಾಗಿ ಒಂದು ಬಗೆಯಲ್ಲಿ ಈ ಕೃತಿಯು ರೈಯವರ ಆತ್ಮಕಥನದ ಸಾಮಾಜಿಕ ಹಾಗೂ ಶೈಕ್ಷಣಿಕ ವಲಯದ ಅನೇಕ ಮುಖಗಳನ್ನು ಪರಿಚಯಿಸುತ್ತದೆ. ಮತ್ತೊಂದು ನೆಲೆಯಲ್ಲಿ ಇದು ಸಾಮಾಜಿಕ ಋಣ ಸಂದಾಯದ ಪ್ರತೀಕ.
ಬದುಕು ಕಟ್ಟುವುದು ಎಂಬ ನುಡಿಗಟ್ಟು ಇಲ್ಲಿ ಅರ್ಥಪೂರ್ಣವಾದುದು ನಮ್ಮ ನಾಗರಿಕತೆ ಮತ್ತು ಸಂಸ್ಕೃತಿಯ ವಿಕಾಸ ಹೀಗೆ ಹಲವರು ಹಲವು ನೆಲೆಗಳಲ್ಲಿ ಬದುಕು ಕಟ್ಟಿದ್ದರಿಂದಲೇ ಸಾಧ್ಯವಾಗುತ್ತಾ ಹೋಯಿತು. ಹೊಸ ಕನಸುಗಳನ್ನು ಕಾಣುವುದು, ಹೊಸ ಸಂಕಲ್ಪವನ್ನು ಹೂಡುವುದು, ಅದನ್ನು ಅನುಷ್ಠಾನಗೊಳಿಸುವುದು ಇದರಿಂದ ಬದುಕಿನ ಗತಿಯಲ್ಲಿ ಜರಗುವ ಬದಲಾವಣೆಗಳು ನಮ್ಮ ಬದುಕನ್ನು ಮುಂದಕ್ಕೆ ಕೊಂಡೊಯ್ಯುತ್ತಿರುತ್ತದೆ. ಪ್ರತಿಯೊಂದು ಕಾಲಘಟ್ಟದಲ್ಲೂ ಇದರ ಫಲಾನುಭವಿಗಳಿಗೆ ಮುಂದಿನ ಭವಿತವ್ಯದ ಬದುಕನ್ನು ಸಮೃದ್ಧಗೊಳಿಸುವ ಹೊಣೆ ಇರುತ್ತದೆ. ಇತಿಹಾಸದಲ್ಲಿ ನಡೆದ ಬೆಳವಣಿಗಳನ್ನು ಕಾರ್ಯಕಲಾಪಗಳನ್ನು ತಿಳಿದುಕೊಳ್ಳುವುದು ಮುಂದಿನ ಹೆಜ್ಜೆಗೆ ಪ್ರೇರಣೆಯಾಗುತ್ತದೆ. ವಿವೇಕ ರೈಗಳ ಒಂದು ಕೃತಿಯ ಹೆಸರೇ ‘ಹಿಂದಣಹೆಜ್ಜೆ’. ಪ್ರಸ್ತುತ ಕೃತಿಯನ್ನು ಕೂಡ ಮುಂದಿನ ಪೀಳಿಗೆ ಮರೆಯದೆ ಪ್ರೇರಣೆ ಪಡೆಯಬೇಕಾದ ಸ್ಫೂರ್ತಿಯ ಸೆಲೆ ಎಂಬ ನೆಲೆಯಿಂದ ಕಟ್ಟಿಕೊಟ್ಟಿದ್ದಾರೆ.
ಇದರಲ್ಲಿ ಒಟ್ಟು ಮೂವತ್ತೊಂಬತ್ತು ಬರಹಗಳಿವೆ. ಭಾಷೆ-ಸಾಹಿತ್ಯ-ಸಂಸ್ಕೃತಿ ಸಂಬಂಧಿ ಬರಹಗಳು ಮೊದಲ ಭಾಗದಲ್ಲಿದ್ದರೆ ಎರಡನೆಯ ಭಾಗದಲ್ಲಿ ಅಗಲಿದವರ ನೆನವರಿಕೆ ಇದೆ. ಈ ಲೇಖನಗಳಲ್ಲಿ ಹಲವು ಪತ್ರಿಕೆಗಳಲ್ಲಿ, ಸ್ಮರಣ ಸಂಪುಟಗಳಲ್ಲಿ, ಅಭಿನಂದನಾ ಗ್ರಂಥಗಳಲ್ಲಿ ಪ್ರಕಟವಾದವು. ಇನ್ನು ಕೆಲವು ಸಾಂಧರ್ಭಿಕವಾಗಿ ಮಾಡಿದ ಉಪನ್ಯಾಸಗಳ ಲಿಖಿತರೂಪಗಳು. ಈ ಸಂದರ್ಭಗಳನ್ನು, ಆಕರಗಳನ್ನು ಅವರು ಕಾಲ ಸಮೇತ ಅಲ್ಲಲ್ಲಿಯೇ ಸೂಚಿಸಿದ್ದಾರೆ. ಈ ಬರಹಗಳಿಗೆಲ್ಲ ಸಾಂಧರ್ಭಿಕ ಅಗತ್ಯವಿದ್ದಷ್ಟೇ ಸಾರ್ವಕಾಲಿಕ ಪ್ರಸ್ತುತಿಯೂ ಇದೆ.
ಮೊದಲ ಎರಡು ಬರಹಗಳು ‘ಬಹುಭಾಷಿಕ ಕನ್ನಡಿಗರ ಕೊಡುಗೆ’ ಮತ್ತು ‘ದಕ್ಷಿಣ ಕನ್ನಡ ಎಂಬ ಭಾಷಾ ಬಾಂಧವ್ಯದ ಪ್ರಯೋಗ ಶಾಲೆ’- ಒಂದಕ್ಕೊಂದು ಪೂರಕವಾಗಿ ದ.ಕ. ಜಿಲ್ಲೆಯ ಪ್ರಾದೇಶಿಕ ಸತ್ವದ ಹಿರಿಮೆಯನ್ನು ಕನ್ನಡದ ಸಂದರ್ಭದಲ್ಲಿಟ್ಟು ಮನಗಾಣಿಸುತ್ತವೆ. ಇಲ್ಲಿನ ಬಹುಭಾಷಿಕ ಪರಿಸರ ಬಹುತ್ವದ ಸಂವಹನಕ್ಕೆ ಪರಸ್ಪರ ಕೊಳುಕೊಡುಗೆಗೆ ಅಡಿಪಾಯ ಹಾಕಿರುವುದನ್ನು ಸರಿಯಾಗಿ ಗುರುತಿಸಿದ್ದಾರೆ. ‘ಕನ್ನಡ ಶಾಸ್ತ್ರೀಯ ಭಾಷೆ : ಸವಾಲುಗಳು ಮತ್ತು ಸಾಧ್ಯತೆಗಳು’ ಎಂಬ ಲೇಖನವು ಶಾಸ್ತ್ರೀಯ ಭಾಷೆಯಾಗಿ ಕನ್ನಡ ಗುರುತಿಸಲ್ಪಟ್ಟರೂ ಆಗಬೇಕಾದ ಕೆಲಸ ಎಷ್ಟು ಅಗಾಧವಾಗಿದೆ ಮತ್ತು ಅನಿವಾರ್ಯವಾಗಿದೆ ಎಂಬ ರೈಯವರ ಕಾಳಜಿಯನ್ನು ಚೆನ್ನಾಗಿ ನಿರೂಪಿಸುತ್ತದೆ. ನಮ್ಮ ಪ್ರಾಚೀನ ಸಾಹಿತ್ಯ ಸಂಪತ್ತನ್ನು ಅದರ ವಿಶೇಷ ಗುಣಗಳನ್ನು ದೇಶದ ಒಳಗೂ ಹೊರಗೂ ಅನ್ಯಭಾಷಿಕರಿಗೆ ಸಮರ್ಥವಾಗಿ ಪರಿಚಯಿಸುವ, ಗಮನ ಸೆಳೆಯುವ ಕೆಲಸ ದೊಡ್ಡಮಟ್ಟದಲ್ಲಿ ಜರಗಬೇಕಾದ ಅಗತ್ಯವನ್ನು ಅವರು ಪ್ರತಿಪಾದಿಸುತ್ತಾರೆ. ರೈಯವರು ಪ್ರೊ. ಸಿ.ಎನ್. ರಾಮಚಂದ್ರನ್ ಅವರ ಜೊತೆಗೂಡಿ ಪಂಪನನ್ನು ಇಂಗ್ಲೀಷಿಗೆ ಅನುವಾದಿಸುವ ಮೂಲಕ ಈ ನಿಟ್ಟಿನಲ್ಲಿ ಶ್ರಮಿಸಿದವರೇ. ಅಲ್ಲದೆ ಅಂತರ್ಜಾಲದಲ್ಲಿ ಶಾಸ್ತ್ರೀಯ ಕನ್ನಡದ ಪ್ರಸರಣ ತುಂಬ ದುರ್ಬಲವಾಗಿರುವುದರ ಬಗ್ಗೆ ಕೂಡ ಅವರು ಖೇದ ವ್ಯಕ್ತಪಡಿಸುತ್ತಾರೆ. ಆದರೆ ಕನ್ನಡದ ಸ್ಥಿತಿಗತಿಯನ್ನು ಗಮನಿಸಿದರೆ 2014ರಲ್ಲಿ ಅವರು ಬರೆದ ಈ ಬರಹವು ಇಂದಿಗೂ ಅಷ್ಟೇ ಪ್ರಸ್ತುತವಾಗಿದೆ.
‘ಯುರೋಪಿನಲ್ಲಿ ಹರಡಿದ ಕನ್ನಡದ ಕಂಪು’ ಬರಹವನ್ನು ಓದಿದರೆ ಜರ್ಮನಿಯಲ್ಲಿ ಕನ್ನಡದ ಕಂಪನ್ನು, ಪ್ರಾಚೀನ ಕನ್ನಡ ಸಾಹಿತ್ಯದ ಪೆಂಪನ್ನು ಪಸರಿಸಲು ರೈಯವರು ವಹಿಸಿದ ಶ್ರಮದ ಪರಿಚಯವಾಗಿ ಅಭಿಮಾನವೆನಿಸುತ್ತದೆ. ಮತ್ತೊಂದು ಬರಹದಲ್ಲಿ ಅಕಾಡಮಿಕ್ ನೆಲೆಯಲ್ಲಿ ವಿದ್ಯಾರ್ಥಿ ದೆಸೆಯಿಂದ ಹಿಡಿದು ಪ್ರಾಧ್ಯಾಪಕನಾಗಿ, ವಿಭಾಗ ಮುಖ್ಯಸ್ಥನಾಗಿ, ಉಪಕುಲಪತಿಯಾಗಿ ಮತ್ತೆ ಜರ್ಮನಿಯ ವೂತ್ಸ್ ಬರ್ಗ್ ನಲ್ಲಿ ಕನ್ನಡದ ಬೋಧನೆಯ ಪ್ರೊಫೆಸರ್ ಆಗಿ ಪಡೆದ ಅನುಭವಗಳ ತುಣುಕುಗಳನ್ನು ಹೇಳುವಾಗ ತಾವು ಪಡೆದ ಒಡನಾಟ ಅನುಭವ ಸಂಪತ್ತಿನ ಕುರಿತಾದ ಧನ್ಯತೆಯ ಭಾವ ಇದೆ ಹೊರತು ತನ್ನ ಕೊಡುಗೆಯ ಬಗ್ಗೆ ಅಹಂಕಾರ ಇಲ್ಲದಿರುವುದು ವಿಶೇಷ. ಈಗ ಉನ್ನತ ಶಿಕ್ಷಣದಲ್ಲಿ ವಿದ್ವತ್ ಸಮಾಲೋಚನೆಯ ಕೊರತೆ ಇರುವುದನ್ನು ಅವರು ಬಹಳ ವಿಷಾದದಿಂದ ಗಮನಿಸುತ್ತಾರೆ.
‘ಪೋಲೆಂಡ್ ನಲ್ಲಿ ಪಂಪನ ಧ್ಯಾನ’, ‘ಮತ್ತೆಮತ್ತೆ ಪಂಪ : ಕಡಲಿನಂಥ ಕಾವ್ಯ’-ಇವು ಆದಿಕವಿ ಪಂಪನ ಕಾವ್ಯದ ಬಗ್ಗೆ ರೈಯವರಿಗಿದ್ದ ವಿಶೇಷವಾದ ಒಲವನ್ನು ಸಾರುತ್ತವೆ. ಮೊದಲ ಬರಹ ಪಂಪನ ಹಿರಿಮೆಯನ್ನು ಪೋಲೆಂಡ್ ದೇಶದ ವಿದ್ವಾಂಸರಿಗೆ ಪರಿಚಯಿಸಲು ನಿಮಿತ್ತವಾದ ಸನ್ನಿವೇಶವನ್ನು ನೆನಪಿಸುತ್ತದೆ. ಎರಡನೆಯ ಬರಹವು ಪಂಪಭಾರತದ ಪ್ರಧಾನ ಆಶಯಗಳನ್ನು ತಲಸ್ಪರ್ಶಿಯಾದ ಹಾಗೂ ವಿಶಿಷ್ಟವಾದ ನೋಟದಿಂದ ಗುರುತಿಸಿ ದಾಖಲಿಸುತ್ತದೆ.
ರೈಯವರ ಮೇಲೆ ಶಿವರಾಮ ಕಾರಂತರ ಬದುಕು ಬರಹಗಳ ಪ್ರಭಾವ ವಿಶೇಷವಾದದ್ದು. ಅವರ ನೇತೃತ್ವದಲ್ಲಿ ಮಂಗಳ ಗಂಗೋತ್ರಿಯಲ್ಲಿ ಶಿವರಾಮ ಕಾರಂತರ ಅಧ್ಯಯನ ಪೀಠವೊಂದನ್ನು ಸ್ಥಾಪಿಸಿದ್ದು, ಆ ಮೂಲಕ ನಡೆದ ಕೆಲಸಗಳು ಮಹತ್ವದ್ದು. ಈ ಕೃತಿಯಲ್ಲಿ ಕಾರಂತ ಸಂಬಂಧಿ ಬರಹಗಳು ಮಿಗಿಲಾಗಿವೆ. ಕಾರಂತರ ಹುಚ್ಚು ಮನಸ್ಸಿನ ಹತ್ತುಮುಖಗಳು ಹಾಗೂ ಸ್ಮೃತಿಪಟಲದಿಂದ ಸಂಪುಟಗಳು- ಈ ಆತ್ಮಕಥನಗಳನ್ನು ಸಂಕ್ಷಿಪ್ತವಾಗಿ ಆದರೆ ಸಮಗ್ರವಾಗಿ ಅವಲೋಕನ ಮಾಡಿ ಅದರಿಂದ ಹೊಮ್ಮುವ ಕಾರಂತರ ವ್ಯಕ್ತಿತ್ವದ ವಿಶೇಷ ಅಂಶಗಳನ್ನು ರೈಯವರು ದಾಖಲಿಸಿದ್ದಾರೆ. ಅಲ್ಲದೆ ಕಾರಂತರ ಲೇಖನಗಳ ಸಂಪುಟಗಳು ಬಿಡುಗಡೆಯಾದ ಸಂದರ್ಭದಲ್ಲಿ ರೈಯವರು ಮಾಡಿದ ಭಾಷಣಗಳು ಮಾಲಿನಿ ಮಲ್ಯರ ಸಂಪಾದಕತ್ವದ ಈ ಸಂಪುಟಗಳಿಗಿರುವ ಚಾರಿತ್ರಿಕ ಮಹತ್ವವನ್ನು ಹಾಗೂ ಈ ಬರಹಗಳು ತೋರುವ ಕಾರಂತರ ಸಾಮಾಜಿಕ ಕಾಳಜಿಯನ್ನು ವಿಶೇಷವಾಗಿ ಗುರುತಿಸುತ್ತವೆ.
ತುಳುಭಾಷೆ, ತುಳು ಜಾನಪದ ಸಂಬಂಧಿಯಾದ ಬರಹಗಳು ಕೂಡ ಈ ಸಂಗ್ರಹದಲ್ಲಿ ಗಮನ ಸೆಳೆಯುತ್ತವೆ. ವಾರ್ತಾಭಾರತಿ ವಾರ್ಷಿಕ ವಿಶೇಷಾಂಕ (2017)ಕ್ಕಾಗಿ ಸಿದ್ಧಪಡಿಸಿದ ಲೇಖನ ‘ಬದಲಾಗುತ್ತಿರುವ ತುಳುಭಾಷೆಯ ಅನನ್ಯತೆಯ ನೆಲೆಗಳು’. ಇದರಲ್ಲಿ ರೈಯವರು ತುಳು ಭಾಷೆ, ದೇಶ, ಮೌಖಿಕ ಸಾಹಿತ್ಯ, ಅಭಿಜಾತ ಸಾಹಿತ್ಯ, ತುಳುಭಾಷೆಯನ್ನು ತಮ್ಮದಾಗಿಸಿಕೊಂಡ ಜನರು, ತುಳುಭಾಷೆಯಲ್ಲಿ ಆಧುನಿಕ ಸಾಹಿತ್ಯ, ಶಿಕ್ಷಣದಲ್ಲಿ ತುಳುವನ್ನು ಅಳವಡಿಸುವ ಪ್ರಯತ್ನಗಳು, ಅಧಿಕೃತ ಭಾಷೆಯಾಗಿ ತುಳುವನ್ನು ಗುರುತಿಸಲು ಮಾಡುತ್ತಿರುವ ಹಕ್ಕೊತ್ತಾಯದ ಚಳವಳಿಗಳು, ತುಳು ಸಾಹಿತ್ಯ ಅಕಾಡಮಿಯ ಹೆಜ್ಜೆಗಳು, ತುಳುವಿನ ಪ್ರಸರಣಕ್ಕೆ ಅಂತರ್ಜಾಲದ ಬಳಕೆ- ಹೀಗೆ ಹಲವು ನೆಲೆಗಳಿಂದ ಬಹಳ ಸಮಗ್ರವಾದ ನೋಟವನ್ನು ಬೀರಿದ್ದಾರೆ.
ಅಮೃತ ಸೋಮೇಶ್ವರರ ಅಭಿನಂದನಾ ಗ್ರಂಥಕ್ಕಾಗಿ ಬರೆದ ‘ಪ್ರಾದೇಶಿಕ ಸಂಸ್ಕೃತಿಯ ಪರಿಕಲ್ಪನೆಯಲ್ಲಿ ತುಳುನಾಡು’ (1995) ತುಳುವಿಗೆ ಸಂಬಂಧಿಸಿ ಅಕಾಡಮಿಕ್ ಅಧ್ಯಯನದ ಮೊದಮೊದಲ ಕಾಲಘಟ್ಟದಲ್ಲಿ ಬಂದ ಬರಹವಾಗಿ ಬಹಳ ಮಹತ್ವದ್ದು. ಅಧ್ಯಯನಕ್ಕೆ ಒಂದು ಶಿಸ್ತಿನ ಮಾರ್ಗವನ್ನು ಈ ಬರಹ ಶೋಧಿಸುತ್ತದೆ. ಬೀಸು ಹೇಳಿಕೆಗಳನ್ನು ಮೇಲು ನೋಟದ ಅವಲೋಕನವನ್ನು ಮಾಡುವುದಕ್ಕಿಂತ ತಲಸ್ಪರ್ಶಿಯಾಗಿ, ಪೂರ್ವಾಗ್ರಹಗಳನ್ನು ಮೀರಿ ಅಧ್ಯಯನ ಕೈಗೊಳ್ಳಬೇಕಾದ ಅಗತ್ಯವನ್ನು ಅವರು ಇದರಲ್ಲಿ ಪ್ರತಿಪಾದಿಸಿದ್ದಾರೆ. ದಕ್ಷಿಣ ಕನ್ನಡದ ಬಿ.ಸಿ.ರೋಡಿನಲ್ಲಿ ಸ್ಥಾಪಿತವಾಗಿರುವ ಪ್ರೊ. ತುಕಾರಾಮ ಪೂಜಾರಿ ಹಾಗೂ ಡಾ. ಆಶಾಲತಾ ದಂಪತಿಯ ಕನಸಿನ ಕೂಸು, ಪರಿಶ್ರಮದ ಫಲ ‘ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ’ದ ವೈಶಿಷ್ಟ್ಯ ಮತ್ತು ಪ್ರಸ್ತುತತೆಯನ್ನು ರೈಯವರು ನಿರೂಪಿಸುವಾಗ ಈ ವಸ್ತುಸಂಗ್ರಹದ ಆವರಣದಲ್ಲಿ ನಾವಿದ್ದೇವೆ ಅನಿಸಿಬಿಡುತ್ತದೆ. ಉಳಿದ ಮ್ಯೂಸಿಯಂಗಳಿಗಿಂತ ಭಿನ್ನವಾಗಿ ತುಳುನಾಡಿನ ಇತಿಹಾಸ ಪುನಾರಚನೆಯಲ್ಲಿ ಇದು ಪಡೆದಿರುವ ಪಾತ್ರದ ಮಹತ್ವದ ಬಗ್ಗೆ ಹೇಳುತ್ತ ಅಲ್ಲಿ ಸಂಗ್ರಹವಾಗಿರುವ ಭೌತಿಕ ಪರಿಕರಗಳನ್ನು ಅವರು ಉದ್ಧರಿಸುತ್ತಾರೆ.
ಕು.ಶಿ. ಹರಿದಾಸಭಟ್ಟರ ತುಳು ಜಾನಪದ ಕೊಡುಗೆಯ ಕುರಿತಾದ ಬರಹವು ತುಳು ಭಾಷೆಯ ಅಸ್ತಿತ್ವ, ಅಭಿವೃದ್ಧಿಯ ಕುರಿತಾಗಿ ಹಾಗೂ ತುಳು ಜಾನಪದ ಸಂಗ್ರಹ ಸಂರಕ್ಷಣೆ ಮತ್ತು ಅಧ್ಯಯನದ ನಿಟ್ಟಿನಲ್ಲಿ ಕು.ಶಿ.ಯವರು ಕೈಗೊಂಡ ಮಹತ್ವದ ಕ್ರಮಗಳನ್ನು, ದೂರಗಾಮಿ ಪರಿಣಾಮವುಳ್ಳ ಯೋಜನೆಗಳನ್ನು ಉಲ್ಲೇಖಿಸುತ್ತಾರೆ. ಗಾಂಧಿಜಯಂತಿಯ ದಿನವಾದ ಅಕ್ಟೋಬರ್ ಎರಡರಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ತುಳು ದಿನಾಚರಣೆಯನ್ನು ಹಮ್ಮಿಕೊಂಡು ಅದನ್ನು ನಿಯತವಾಗಿ ಪ್ರತಿವರ್ಷ ಮುಂದುವರಿಸಿಕೊಂಡು ಹೋದದ್ದು, ‘ತುಳುವ’ ಪತ್ರಿಕೆಯ ಪ್ರಕಟಣೆ, ತುಳು ನಿಘಂಟಿನ ಬೃಹದ್ಯೋಜನೆ, ಜಾನಪದ ಆರ್ಕೈವ್ಸ್, ತುಳುಜಾನಪದ ಅಧ್ಯಯನಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ-ಇವುಗಳೆಲ್ಲ ಕರಾವಳಿ ಪರಿಸರದಲ್ಲಿ ಅಧ್ಯಯನ, ಸಂಶೋಧನೆ, ದಾಖಲೀಕರಣ-ಹೀಗೆ ವಿವಿಧ ನೆಲೆಗಳಲ್ಲಿ ಬೀರಿದ ಪ್ರಭಾವವನ್ನು, ನೀಡಿದ ಪ್ರೇರಣೆಯನ್ನು ರೈಯವರು ಗಮನಿಸಿದ್ದಾರೆ. ಫಿನ್ಲಾಂಡ್‌ನ ಕಲೇವಾಲ ಮತ್ತು ತುಳು ಪಾಡ್ದನಗಳನ್ನು ಜೊತೆಯಲ್ಲಿಟ್ಟು ತೌಲನಿಕ ಅಧ್ಯಯನ ಮಾಡುವ ದಾರಿ ತೆರೆದುಕೊಂಡದ್ದು ಹಾಗೂ ಮುಂದೆ ಈ ತೌಲನಿಕ ಅಧ್ಯಯನದ ದಾರಿ ಕರಾವಳಿಗೆ ಸೀಮಿತವಾಗದೆ ಕರ್ನಾಟಕದ ಇತರೆಡೆಗಳಿಗೂ ನೆರೆಯ ರಾಜ್ಯಗಳ ಜಾನಪದ ಅಧ್ಯಯನಕ್ಕೂ ವಿಸ್ತರಿಸಿಕೊಂಡದ್ದನ್ನು ನೆನೆದರೆ- ಕು.ಶಿ.ಯವರ ಕೊಡುಗೆಯನ್ನು ರೈಯವರು 1989ರಲ್ಲಿ ಅವರ ಸನ್ಮಾನ ಸಮಾರಂಭದ ವಿಚಾರಗೋಷ್ಠಿಯಲ್ಲಿ ಮಂಡಿಸಿದ ಉಪನ್ಯಾಸದಲ್ಲಿ ಗುರುತಿಸಿದ್ದರ ಮಹತ್ವ ಮನದಟ್ಟಾಗುತ್ತದೆ.
ವಿವೇಕ ರೈಯವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾದ ‘ಮಂಗಳೂರು ದರ್ಶನ’ ಕೃತಿಗೆ ಬರೆದ ಪ್ರಸ್ತಾವನೆಯು ಈ ಸಂಗ್ರಹದಲ್ಲಿ ಸೇರಿದ್ದು ಮಂಗಳೂರು ಎಂಬ ಬಂದರಿನ ಊರು ನಗರವಾದ ಕಥನವನ್ನು ಸಂಕ್ಷಿಪ್ತವಾಗಿ ನಿರೂಪಿಸುವುದರ ಮೂಲಕ ಉಪಯುಕ್ತ ಮಾಹಿತಿಯನ್ನು ನೀಡುತ್ತದೆ. ಇತಿಹಾಸ ಕಾಲದಿಂದ ವಾಣಿಜ್ಯ ಮತ್ತು ವ್ಯಾಪಾರ ಕೇಂದ್ರವಾಗಿದ್ದ ಮಂಗಳೂರು ಪಟ್ಟಣ ಅನೇಕ ವಲಸಿಗರಿಗೆ ಆಸರೆಯಾಗಿ ಇದು ಬಹುಭಾಷಿಕತೆ ಮಾತ್ರವಲ್ಲ ಹಲವು ಧರ್ಮ, ಜಾತಿಗಳ, ಸಂಸ್ಕೃತಿಗಳ ಬಹುರೂಪಿ ನಗರವಾಗಿ ವಿಕಾಸಗೊಂಡದ್ದನ್ನು ಅವರು ಉಲ್ಲೇಖಿಸುತ್ತಾರೆ. ಕಾಲಾನುಕ್ರಮದಲ್ಲಿ ಪಟ್ಟಣದ ಭೌತಿಕ ಚಹರೆ, ಆಡಳಿತ ವ್ಯವಸ್ಥೆ, ಇತ್ಯಾದಿಗಳಲ್ಲಿ ನಡೆದ ಬದಲಾವಣೆ ಹಾಗೂ ಬೆಳವಣಿಗೆಗಳನ್ನು ಈ ಬರಹವು ದಾಖಲಿಸಿದ್ದು ಸ್ವಾತಂತ್ರ್ಯ ಪೂರ್ವದ ಮಂಗಳೂರಿನ ಕೆಲವು ಮಾಹಿತಿಗಳನ್ನು ಒದಗಿಸುತ್ತದೆ. ಸಂಶೋಧಕರಿಗೆ ಇದು ಉತ್ತಮ ಆಕರವಾಗಿ ಒದಗುತ್ತದೆ.
ದೇರಾಜೆ ಸೀತಾರಾಮಯ್ಯ ಮತ್ತು ಹೊಸ್ತೋಟ ಮಂಜುನಾಥ ಭಾಗವತರ ಕುರಿತಾದ ಎರಡು ಪ್ರತ್ಯೇಕ ಬರಹಗಳು ತಮ್ಮದೇ ನೆಲೆಯಲ್ಲಿ ಯಕ್ಷಗಾನ ಕಲೆಯ ಯುಗ ನಿರ್ಮಾಪಕರಂತಿದ್ದ ಎರಡು ಮೇರುವ್ಯಕ್ತಿತ್ವಗಳ ಚಿತ್ರವನ್ನು ಆಪ್ತವಾಗಿ ಕಟ್ಟಿಕೊಡುತ್ತವೆ. ಮುಂದೆ ‘ಅಗಲಿದವರ ನೆನವರಿಕೆ’ ವಿಭಾಗದಲ್ಲೂ ಕೂಡ ಅವರು ತಾವು ಗೌರವಿಸುವ, ತಮಗೆ ಒಡನಾಟದ ಸವಿಯನ್ನು ನೀಡಿದ ಸಮಾಜ ಮರೆಯಬಾರದ ಹಲವರ ಸ್ಮೃತಿಚಿತ್ರಗಳನ್ನು ನೀಡಿದ್ದಾರೆ. ತಮ್ಮ ತಂದೆ ಅಗ್ರಾಳ ಪುರಂದರ ರೈಯವರಿಂದ ತೊಡಗಿ ಎಸ್. ಅನಂತನಾರಾಯಣ, ಕೆ.ಎಸ್. ನಿಸಾರ್ ಅಹಮದ್, ಯು.ಪಿ. ಉಪಾಧ್ಯಾಯ, ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಶೇಕ್ ಆಲಿ, ಡಿ.ಕೆ. ಚೌಟ, ಎಂ.ಐ. ಸವದತ್ತಿ, ಲಕ್ಕಪ್ಪಗೌಡ, ಸಿದ್ಧಲಿಂಗಯ್ಯ, ಬಿ. ಸುರೇಂದ್ರ ರಾವ್, ಎಚ್.ಎಂ. ಮಹೇಶ್ವರಯ್ಯ, ಬಿ.ಎಂ. ಇಚ್ಲಂಗೋಡು, ರಾಜೇಶ್ವರಿ ತೇಜಸ್ವಿ, ಸಾರಾ ಅಬೂಬಕ್ಕರ್ ಹಾಗೂ ಕೊನೆಯಲ್ಲಿ ತಮ್ಮ ಸೂಕ್ಷ್ಮ ಸಂವೇದಿ ವಿದ್ಯಾರ್ಥಿನಿ ಎಸ್. ಮಾಲತಿ -ಇವರ ಒಡನಾಟದ ನೆನಪುಗಳು ದಾಖಲೆಗೊಳ್ಳುವುದರೊಂದಿಗೆ –ಇವರೆಲ್ಲರ ಅಸಾಧಾರಣ ವ್ಯಕ್ತಿತ್ವ, ಜೀವನಪ್ರೀತಿ ಸ್ಫುಟಗೊಳ್ಳುತ್ತ ಹೋಗುತ್ತದೆ. ವಿದ್ವತ್ವಲಯದ ಒಡನಾಟ ವ್ಯಾವಹಾರಿಕವಾಗಿ ಉಳಿಯದೆ ಪರಸ್ಪರ ಸ್ನೇಹ, ಆರ್ದ್ರತೆಯ ಬಾಂಧವ್ಯವಾಗಿ ಮುಂದುವರಿದುದರ ಬಗ್ಗೆ ಅವರು ಹೇಳುತ್ತಾರೆ. ಅಗಲಿದವರ ಸಾಧನೆಯ ಬಹುಮುಖಗಳ ನೋಟ ಇಲ್ಲಿ ತೆರೆದುಕೊಳ್ಳುತ್ತದೆ. ಈ ಭಾಗ ದ.ಕ. ಜಿಲ್ಲೆಯವರನ್ನು ಮಾತ್ರವಲ್ಲದೆ ಆ ಎಲ್ಲೆಯನ್ನು ಮೀರಿ ಅಗಲಿದ ಸೀಮಾ ಪುರುಷರನ್ನು, ಸಾಧಕರನ್ನು ನೆನೆದುಕೊಂಡು ಋಣಭಾರವನ್ನು ಸಲ್ಲಿಸುತ್ತದೆ.
ದ.ಕ. ಜಿಲ್ಲೆಯು ಕನ್ನಡ ನಾಡಿನ ಭಾಗವಾಗಿರುತ್ತ ಕನ್ನಡ ನಾಡಿನ ಇತಿಹಾಸದಲ್ಲಿ ಈ ಸಂಗ್ರಹದ ಬಿಡಿಬರಹಗಳಿಗೆ ಮಹತ್ವದ ಸ್ಥಾನವಿದೆ. ಅವು ಮುಂದಿನ ಪೀಳಿಗೆಯ ಅಧ್ಯಯನಾಸಕ್ತರಿಗೆ ಉತ್ತಮ ಆಕರಗಳಾಗಿ ಉಪಯುಕ್ತವಾಗಿವೆ. ಬದುಕು ಕಟ್ಟಿದ ಬಗೆಗಳನ್ನು ಪರಿಚಯಿಸುವ ಈ ಹೊತ್ತಗೆ ನೆನಪಿನ ಕಣಜವಾಗಿ ಅಳಿಯದ ಸಂಪತ್ತಾಗಿ ಆಸಕ್ತರನ್ನು ಪೊರೆಯಲಿದೆ. ರೈಯವರ ಸಾಮಾಜಿಕ ಬದುಕಿನ ಸಮೃದ್ಧ ನೆನಪುಗಳನ್ನು ಹೊತ್ತು ಅವರ ಆತ್ಮಕಥನದ ಒಂದು ಭಾಗದಂತಿರುವ ಈ ಕೃತಿಯಿಂದ ವಿವೇಕ, ಸಂಕಲ್ಪಶಕ್ತಿ ಸಂಯಮ, ಸಹೃದಯತೆ, ಅಧ್ಯಯನಾಸಕ್ತಿ, ನಾಡುನುಡಿ ಸಂಸ್ಕೃತಿಯ ಕಾಳಜಿ, ಜೀವನೋತ್ಸಾಹ ಮೊದಲಾದ ಗುಣಗಳನ್ನೊಳಗೊಂಡ ಅವರ ವ್ಯಕ್ತಿತ್ವದ ಮಾದರಿಯೂ ಅನಾವರಣಗೊಳ್ಳುತ್ತ ಸಾಗುತ್ತದೆ. ಈ ಮೌಲಿಕ ಕೃತಿಗಾಗಿ ಹಿರಿಯರಿಗೆ ಅಭಿವಂದನೆಗಳು.
ವಿಮರ್ಶಕರು – ಡಾ. ಮಹೇಶ್ವರಿ ಯು.
ಡಾ. ಮಹೇಶ್ವರಿ ಯು. ಇವರು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ 32 ವರ್ಷಗಳ ಕಾಲ ಅಧ್ಯಾಪನ ಹಾಗೂ ನಿವೃತ್ತಿಯ ಬಳಿಕ ಕಣ್ಣೂರು ವಿ.ವಿ.ಯ ಭಾರತೀಯ ಭಾಷಾ ಅಧ್ಯಯನಾಂಗದಲ್ಲಿ ಸಂಯೋಜಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಪ್ರಕಟಿತ ಕೃತಿಗಳು ಮುಗಿಲ ಹಕ್ಕಿ (ಕವನ ಸಂಕಲನ) ವಾರಂಬಳ್ಳಿ ಪ್ರತಿಷ್ಠಾನ ಪ್ರಶಸ್ತಿ, ಇದು ಮಾನುಷಿಯ ಓದು (ಕನ್ನಡದ ಮೊದಲ ಕಾದಂಬರಿಗಳ ಸ್ತ್ರೀ ವಾದಿ ಅಧ್ಯಯನ) ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ, ಮಧುರವೇ ಕಾರಣ (ವಿಮರ್ಶೆ, ವೈಚಾರಿಕ), ಅಟ್ಟುಂಬೊಳದ ಪಟ್ಟಾಂಗ (ಅಂಕಣ ಬರಹಗಳ ಸಂಕಲನ), ಎಜ್ಯುನೇಶನ್ (ಇಂಗ್ಲಿಷ್ ನಿಂದ ಕನ್ನಡಕ್ಕೆ ಭಾಷಾಂತರ), ಗಡಿನಾಡಿನ ಪ್ರತಿಭೆ ಕೆ.ವಿ. ತಿರುಮಲೇಶ್ (ನಾಡಿಗೆ ನಮಸ್ಕಾರ ಮಾಲಿಕೆಯ ಕೃತಿ ‘ಶಬ್ದ ಸೂರೆ’ (ವಿಮರ್ಶಾ ಬರಹಗಳ ಸಂಗ್ರಹ). ‘ಸಂಕ್ರಮಣ ಕಾವ್ಯ ಪ್ರಶಸ್ತಿ’, ‘ಧರೆಯು ಗರುವದಿ ಮೆರೆಯಲಿ’ ಎಂಬ ಕವನ ಸಂಕಲನ (ಅಪ್ರಕಟಿತ)ಕ್ಕೆ ಮುಂಬೈಯ ‘ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ’ ಇವರ ಸಾಹಿತ್ಯ ಕೃಷಿಗೆ ಸಂದ ಗೌರವ.
ಲೇಖಕ ಡಾ. ಬಿ.ಎ.ವಿವೇಕ ರೈ ಇವರು ತುಳು ಹಾಗೂ ಕನ್ನಡದ ಹಿರಿಯ ವಿದ್ವಾಂಸರು. ಮಂಗಳೂರು ವಿ.ವಿ.ಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವಿಭಾಗ ಮುಖ್ಯಸ್ಥರಾಗಿ ಹಾಗೂ ಹಂಪಿ ಕನ್ನಡ ವಿ.ವಿ.ಯಲ್ಲಿ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅಧ್ಯಯನ, ಅಧ್ಯಾಪನ, ಸಂಶೋಧನೆ ಮತ್ತು ಬರವಣಿಗೆಗೆ ನಿರಂತರ ತಮ್ಮನ್ನು ಅರ್ಪಿಸಿಕೊಂಡು ಬಂದವರು. ಜರ್ಮನಿಯ ವ್ಯೂತ್ಸ್ ಬರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿದ್ದದ್ದು, ಮಾತ್ರವಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿಯೂ ಸೇರಿದಂತೆ ವಿವಿಧ ಅಕಾಡೆಮಿಗಳಲ್ಲಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ, ಉಡುಪಿಯ ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಕೇಂದ್ರದಲ್ಲಿ ಸದಸ್ಯರಾಗಿ ಪಾತ್ರ ನಿರ್ವಹಿಸಿದ್ದಾರೆ. ಮೂರು ಸಂಪುಟಗಳಲ್ಲಿ ಬಂದ ಮಂಗಳೂರು ದರ್ಶನ ಕೃತಿಯ ಪ್ರಧಾನ ಸಂಪಾದಕರಾಗಿ ದುಡಿದಿದ್ದು, 25ಕ್ಕೂ ಮಿಕ್ಕಿ ಕೃತಿ ರಚನೆ ಮಾಡಿದ ಇವರು ಒಟ್ಟು 18 ಕೃತಿಗಳ ಸಂಪಾದನೆಯನ್ನು ಮಾಡಿದ್ದಾರೆ. ‘ನೀವು ಕಂಡರಿಯದ ಕುದ್ಮುಲ್ ರಂಗರಾವ್’ ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಗೊಂಡು ಇತ್ತೀಚೆಗೆ ಪ್ರಕಟವಾದ ಕೃತಿ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ತುಳು ಸಾಹಿತ್ಯ ಅಕಾಡೆಮಿಗಳ ಗೌರವ ಪ್ರಶಸ್ತಿ, ಹೀಗೆ ವಿವಿಧ ಪ್ರಶಸ್ತಿ ಪುರಸ್ಕೃತರು.