ಅಹರ್ನಿಶಿ ಪ್ರಕಾಶನವು ಪ್ರಕಟಿಸಿದ ಹಂಪಿಯ ಕನ್ನಡ ವಿ.ವಿ.ಯಲ್ಲಿ ಪ್ರೊಫೆಸರ್ ಆಗಿ ನಿವೃತ್ತರಾದ ಉಷಾ ಎಂ. ಅವರ ಕಾದಂಬರಿ ‘ಬಾಳಬಟ್ಟೆ’ ಬಯಲು ಸೀಮೆಯ ಒಂದು ಕುಟುಂಬದ ಮೂರು ತಲೆಮಾರುಗಳ ಬಾಳ ಪಥದಲ್ಲಿ ಉಂಟಾದ ಏಳು-ಬೀಳುಗಳು ಮತ್ತು ಅವರು ಎದುರಿಸಿದ ಕಷ್ಟ-ನಷ್ಟಗಳ ಕಥೆ. ಕಥೆಯ ನಡುವೆ ಹಾಸು-ಹೊಕ್ಕಾಗಿರುವ ಒಂದು ಕಾಲದ ಜೀವನ ಶೈಲಿ, ಜನರು ತಮ್ಮ ಬದುಕಿನಲ್ಲಿ ರೂಢಿಸಿಕೊಂಡು ಬಂದ ಸಾಂಪ್ರದಾಯಿಕ ಆಚರಣೆಗಳು, ಪದ್ಧತಿಗಳು ಮತ್ತು ನಂಬಿಕೆಗಳ ಒಂದು ‘ಪನೋರಮಿಕ್ ವ್ಯೂ’ ಕೂಡಾ ಇಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿರುವುದು ಈ ಕಾದಂಬರಿಯ ವೈಶಿಷ್ಟ್ಯ. ಕಥೆ ನಡೆಯುವ ಕಾಲವು ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಸ್ವಾತಂತ್ರ್ಯಾನಂತರದ ಕೆಲವು ವರ್ಷಗಳಾಗಿದ್ದು, ಆ ನಿರ್ದಿಷ್ಟ ಕಾಲಘಟ್ಟದಲ್ಲಿ ಗ್ರಾಮೀಣ ಭಾರತದ ಬದುಕನ್ನೂ, ಆಧುನಿಕತೆ ಉಂಟುಮಾಡಿದ ಪಲ್ಲಟಗಳನ್ನೂ ಈ ಕಾದಂಬರಿ ಕಟ್ಟಿಕೊಡುತ್ತದೆ.
ಕಥೆಯಲ್ಲಿ ಬರುವ ಮುಖ್ಯ ಪಾತ್ರಗಳು ಶ್ರೀಕಂಠಯ್ಯ, ಅವನ ಹೆಂಡತಿ ತಾಯವ್ವ, ಅವರ ಮಕ್ಕಳು ನಿಜಗುಣ ಮತ್ತು ರಾಜಶೇಖರ, ಅವರ ಹೆಂಡತಿಯರಾದ ಪುಟ್ಟಮ್ಮ, ಸುಶೀಲಾ, ದಾಕ್ಷಾಯಿಣಿ (ರಾಜಶೇಖರನ ಎರಡನೇ ಹೆಂಡತಿ), ತಾಯವ್ವನ ಸಹೋದರರಾದ ವಿಶ್ವನಾಥ ಮತ್ತು ನೀಲಕಂಠ, ಅವರ ಪತ್ನಿಯರಾದ ಮೀನಾಕ್ಷಿ ಮತ್ತು ಸುಗುಣಾ, ಶ್ರೀಕಂಠಯ್ಯನ ಇತರ ಬಂಧುಗಳು, ಅಕ್ಕಪಕ್ಕದ ಮನೆಯವರು -ಹೀಗೆ. ಪರಿಶ್ರಮದಿಂದ ದುಡಿದು ತಿನ್ನುವ, ಆರ್ಥಿಕ ದೃಷ್ಟಿಯಿಂದ ಕೆಳ ಮಧ್ಯಮ ವರ್ಗದವರೇ ಇರುವ ಕುಟುಂಬ. ಮಕ್ಕಳನ್ನು ಓದಿಸಿ ಆ ಮೂಲಕ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಆಸೆ ಶ್ರೀಕಂಠಯ್ಯ ಮತ್ತು ತಾಯವ್ವರಿಗಿದ್ದರೂ ಅದು ಸಾಧ್ಯವಾಗುವುದಿಲ್ಲ. ನಿಜಗುಣ ತನ್ನ ಮಾವ ವಿಶ್ವನಾಥನ ಸಹಾಯದಿಂದ ಒಂದಷ್ಟು ವೇದ ಮಂತ್ರ -ಜ್ಯೋತಿಷ್ಯ ಕಲಿತು ಪುರೋಹಿತನಾದರೆ ರಾಜಶೇಖರ ಮೈಸೂರಿಗೆ ಹೋಗಿ ಒಂದಷ್ಟು ಕಲಿತು ಕಾಂಟ್ರಾಕ್ಟುದಾರನಾಗಿ ಸ್ವಲ್ಪ ಹೆಚ್ಚು ಸಂಪಾದನೆ ಮಾಡುತ್ತಾನೆ. ಆದರೂ ದುಡ್ಡಿನ ತಾಪತ್ರಯವೇ ಮನುಷ್ಯರ ನಡುವಣ ಬಾಂಧವ್ಯಕ್ಕೆ ಅಡ್ಡಿಯಾಗುತ್ತದೆ. ಆರಂಭದಲ್ಲಿ ಚಿಕ್ಕ ಕುಟುಂಬವಾಗಿದ್ದಾಗ ಶ್ರೀಕಂಠಯ್ಯನ ಹಿಡಿತದೊಳಗೆ ಹೊಂದಾಣಿಕೆಯಿಂದ ಒಂದಾಗಿ ನಡೆಯುತ್ತಿದ್ದ ಕೌಟುಂಬಿಕ ಬದುಕಿನಲ್ಲಿ ಮಕ್ಕಳಿಗೆ ಮಕ್ಕಳು ಹುಟ್ಟಿ, ಅಗತ್ಯಗಳು ಹೆಚ್ಚಾದಂತೆ ಬಿರುಕುಗಳು ಹೆಚ್ಚಾಗುತ್ತವೆ. ಇದ್ದ ಮೂರಡಿ ಭೂಮಿಯೂ ಪಾಲಾಗಿ ಕುಟುಂಬಗಳು ಒಡೆಯುತ್ತವೆ. ಬಾಳೆ ಬಟ್ಟೆಯ ತುಂಬಾ ಬರೇ ಕಲ್ಲು ಮುಳ್ಳುಗಳು ಕಾರ್ಬಾರು ನಡೆಸುತ್ತವೆ.
ಕುಟುಂಬಗಳು ಒಡೆಯುವುದಕ್ಕೆ ಮನೆಯೊಳಗಿನ ಹೆಂಗಸರೇ ಕಾರಣವೆಂದು ಹೊರನೋಟಕ್ಕೆ ಅನ್ನಿಸಿದರೂ ಅದು ಕೇವಲ ಒಂದು ಮಿಥ್ ಎಂದು ಸಾಧಿಸಲು ಕಾದಂಬರಿ ತನ್ನ ಸೂಕ್ಷ್ಮ ವಿವರಗಳ ಮೂಲಕ ಪ್ರಯತ್ನಿಸುತ್ತದೆ. ಮನೆವಾರ್ತೆಯ ಮತ್ತು ಮಕ್ಕಳ ಜವಾಬ್ದಾರಿಯನ್ನು ಪೂರ್ತಿಯಾಗಿ ಹೆಂಗಸರ ಮೇಲೆ ಹಾಕಿ ಗಂಡಸರು ತಮ್ಮ ಸಂಪಾದನೆಯ ದಾರಿಯನ್ನಷ್ಟೇ ನೋಡಿಕೊಂಡರೆ ಸಾಕಾಗುವುದಿಲ್ಲ. ಕೂಡು ಕುಟುಂಬದಲ್ಲಿ ಹಣದ ಕೊರತೆಯಿಂದಾಗಿ ಮಕ್ಕಳ ರಾಜಕೀಯವೂ ತಾನೇತಾನಾಗಿ ಹುಟ್ಟಿಕೊಳ್ಳುತ್ತದೆ. ಬಡ ಕುಟುಂಬಗಳಲ್ಲಿ ಹೆಂಗಸರು ಅಡುಗೆ-ಮನೆಯ ಸುತ್ತಿನ ಕೆಲಸಗಳ ಜೊತೆಗೆ ಹೊಲ-ಗದ್ದೆ-ತೋಟಗಳಲ್ಲೂ ದುಡಿಯ ಬೇಕಾಗುತ್ತದೆ. ದುಡಿದು ಹೈರಾಣಾಗಿ ಮಕ್ಕಳ ಕಾರಣದಿಂದಾಗಿಯೇ ಒಡಕು ಮೂಡುತ್ತದೆ. ಆದ್ದರಿಂದ ಅಣ್ಣ-ತಮ್ಮಂದಿರ ನಡುವಣ ಸಂಬಂಧ ಸರಿಯಾಗಿದ್ದರೂ ಕುಟುಂಬ ಕಲಹಗಳು ಬಗೆ ಹರಿಯುವುದಿಲ್ಲ. ಇಲ್ಲಿ ಆಗುವುದೂ ಅದುವೇ. ಮಕ್ಕಳು ದೊಡ್ಡವರಾಗುವ ಹೊತ್ತಿಗೆ ಆರ್ಥಿಕ ಸ್ಥಿತಿ ಸುಧಾರಿಸಿದರೂ ಇಳಿವಯಸ್ಸಿನಲ್ಲಿ ತಮ್ಮನ್ನು ನೋಡಿಕೊಳ್ಳುವವರು ಯಾರು ಎಂಬ ಅಭದ್ರ ಭಾವನೆ ಹಿರಿಯರನ್ನು ಕಾಡುತ್ತದೆ. ನೋಡಿಕೊಳ್ಳುವ ಜವಾಬ್ದಾರಿಯ ಬಗ್ಗೆ ತಲೆಕೆಡಿಸದ ಮಕ್ಕಳು ಕೂಡಾ ಆಸ್ತಿ ವಿಭಜನೆ ಸರಿಯಾಗಿಲ್ಲ ಎಂದು ಅಸಹನೆ ತೋರಿಸುವಲ್ಲಿಗೆ ಕಾದಂಬರಿ ಮುಗಿಯುತ್ತದೆ. ಒಂದಿಲ್ಲೊಂದು ರೀತಿಯಲ್ಲಿ ಇದು ಸಾರ್ವಕಾಲಿಕ ಸತ್ಯವೂ ಹೌದು. ಹಳ್ಳಿ, ನಗರ ಮತ್ತು ಜಗತ್ತಿನ ಎಲ್ಲೆಡೆ ಘಟಿಸುವ ಸಾರ್ವತ್ರಿಕ ಕಹಿ ವಾಸ್ತವವೂ ಹೌದು.
ಕಾದಂಬರಿಯಲ್ಲಿ ತಾಯವ್ವ ಮತ್ತು ಪುಟ್ಟಮ್ಮರ ಪಾತ್ರಗಳು ಸಶಕ್ತವಾಗಿ ಮೂಡಿಬಂದಿವೆ. ಮನೆಯ ಒಳಗೂ ಹೊರಗೂ ನಿರಂತರವಾಗಿ ದುಡಿಯುತ್ತಾ ಗಂಡ ಒಡ್ಡುವ ಅಡ್ಡಿಗಳಿಗೆ ಸಡ್ಡು ಹೊಡೆದು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಂಡು ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲು ಸದಾ ಪ್ರಯತ್ನಿಸುವ ಪುಟ್ಟಮ್ಮನಂತೂ ಪರ್ಲ್ ಎಸ್. ಬಕ್ ಬರೆದ ‘ಗುಡ್ ಅರ್ತ್’ ಕಾದಂಬರಿಯ ಓಲನ್ ಳನ್ನು ನೆನಪಿಸುತ್ತಾಳೆ.
ಕಾದಂಬರಿಯ ಉದ್ದಕ್ಕೂ ಅಗತ್ಯವಿರುವ ಎಲ್ಲಾ ಕಡೆಗಳಲ್ಲಿ ಸಾಂದರ್ಭಿಕವಾಗಿ ಸಂಪ್ರದಾಯ ಮತ್ತು ಆಚರಣೆಗಳ ಚಿತ್ರಕ ವಿವರಗಳಿವೆ. ದೈನಿಕ ಬದುಕಿನಲ್ಲಿ ಅನುಸರಿಸುವ ರೀತಿ-ರಿವಾಜುಗಳು, ಮದುವೆ-ಮುಂಜಿ, ಸೀಮಂತ, ನಾಮಕರಣ, ಕನ್ಯೆಯ ಮುಟ್ಟಿಗೆ ಸಂಬಂಧಿಸಿದ ಆಚರಣೆಗಳು, ಜನನ-ಮರಣಗಳಿಗೆ ಸಂಬಂಧಿಸಿದ ಕ್ರಿಯೆಗಳು-ಹೀಗೆ ನೂರಾರು ವಿವರಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತವೆ. ಜನರು ಮಾತನಾಡುತ್ತಿದ್ದ ಆಡುಭಾಷೆಯ ಸಂಭಾಷಣೆಯ ಶೈಲಿ, ಅಲ್ಲಲ್ಲಿ ಬಳಸುವ ಗಾದೆ ಮಾತುಗಳು ಯಥೇಚ್ಛವಾಗಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಗ್ರಾಮೀಣ ಜೀವನದ ಸ್ಥಿತಿಗತಿಗಳು, ನಿಧಾನವಾಗಿ ಹಳ್ಳಿಗಳನ್ನು ಪ್ರವೇಶಿಸಿದ ನಾಗರಿಕತೆ, ಹಳ್ಳಿಗಳ ಮೇಲೆ ನಗರ ಜೀವನ ಶೈಲಿಯ ಪ್ರಭಾವ, ಆಧುನಿಕ ಫ್ಯಾಷನ್ ಗಳಿಗೆ ಮಾರುಹೋಗಿ ಅದನ್ನು ಅನುಕರಿಸುವ ಹೆಣ್ಣು ಮಕ್ಕಳು -ಹೀಗೆ ಸಾಂಸ್ಕೃತಿಕ ಪಲ್ಲಟಗಳ ಚಿತ್ರಣವೂ ಇಲ್ಲಿದೆ. ಒಟ್ಟಿನಲ್ಲಿ ಕಥೆಯ ನೆಪದಲ್ಲಿ ಈ ಕಾದಂಬರಿಯು ಹಳೆಯ ಲೋಕದ ಮೆಲುಕು ಹಾಕುವಂತೆ ಮಾಡುತ್ತದೆ.
– ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
ಲೇಖಕರ ಬಗ್ಗೆ :
ಮೂಲತಃ ಚಾಮರಾಜನಗರ ಜಿಲ್ಲೆಯವರಾದ ಎಂ. ಉಷಾ ಅವರು ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಿಂದ ಕ್ರಮವಾಗಿ ಎಂ.ಎ. ಮತ್ತು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿ 2019ರಲ್ಲಿ ಸ್ವಯಂ ನಿವೃತ್ತಿ ಹೊಂದಿದರು. ಭಾಷಾಂತರ ಅಧ್ಯಯನ, ಮಹಿಳಾ ಅಧ್ಯಯನ, ಸಾಹಿತ್ಯ ವಿಮರ್ಶೆ ಇತ್ಯಾದಿ ಕ್ಷೇತ್ರಗಳಲ್ಲಿ ಆಸಕ್ತರಾದ ಇವರು ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಅಧ್ಯಯನ ನಿರತರಾಗಿದ್ದಾರೆ.
ಇವರ ಮುಖ್ಯ ಪ್ರಕಟಣೆಗಳು ಸಂಸ್ಕೃತಿ ಚಿಂತನೆ ಮತ್ತು ಭಾರತೀಯ ಸ್ತ್ರೀವಾದ, ಮಹಿಳಾ ಚಳುವಳಿ ಮತ್ತು ಮಹಿಳಾ ವಿಷಯಗಳು, ಮಹಿಳೆ ಮತ್ತು ಜಾತಿ, ಆಧುನಿಕ ಮಹಿಳಾ ಸಾಹಿತ್ಯ: ಇನ್ನಷ್ಟು ಪುಟಗಳು (ಸಂ), ಸುರುಚಿ, ಒಳಗಣ ರಣರಂಗ ಹೊರಗಣ ಶೃಂಗಾರ, ಭಾಷಾಂತರ ಮತ್ತು ಲಿಂಗರಾಜ ಕಾರಣ, ಭಾಷಾಂತರ ಪ್ರವೇಶಿಕೆ, ಕನ್ನಡ ಮ್ಯಾಕ್‌ಬೆತ್‌ಗಳು, ಲಿಖ್ಯಂತೆ ದೇಶ ಭಾಷೆಯೊಳ್, ಹೆಣ್ಣೆಂಬಶಬುದ (ಸಂ) ಇತ್ಯಾದಿಗಳು. ಈ ಅಧ್ಯಯನ ಕೃತಿಗಳಲ್ಲದೆ ಶೂಲಿಹಬ್ಬ ಎನ್ನುವ ನಾಟಕವನ್ನು ಮತ್ತು ಅರ್ಧ ಕಥಾನಕ ಎನ್ನುವ ಭಾಷಾಂತರ ಕೃತಿಯನ್ನೂ ಪ್ರಕಟಿಸಿದ್ದಾರೆ. ಶೂಲಿಹಬ್ಬ ನಾಟಕವು ರವೀಂದ್ರ ಕಲಾಕ್ಷೇತ್ರ-50ರ ನೆನಪಿಗಾಗಿ ಹಮ್ಮಿಕೊಳ್ಳಲಾಗಿದ್ದು ಬೆಂಗ್ಳೂರು ನಾಟಕೋತ್ಸವ 2013ರಲ್ಲಿ ಉತ್ತಮ ನಾಟಕ ರಚನಾ ಬಹುಮಾನವನ್ನು, ಕರ್ನಾಟಕ ಲೇಖಕಿಯರ ಸಂಘದ ಇಂದಿರಾವಾಣಿ ರಾವ್ ದತ್ತಿನಿಧಿ-2015 ಬಹುಮಾನಗಳನ್ನು ಪಡೆದರೆ, ಅರ್ಧಕಥಾನಕ ಕೃತಿಗೆ ಕುವೆಂಪು ಭಾಷಾ ಭಾರತಿಯ 2016ರ ಪುಸ್ತಕ ಬಹುಮಾನ ಬಂದಿದೆ. ಕನ್ನಡ ಮ್ಯಾಕ್‌ಬೆತ್ ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2019ರ ಪಿ. ಶ್ರೀನಿವಾಸರಾವ್ ದತ್ತಿನಿಧಿ ಪ್ರಶಸ್ತಿ ಮತ್ತು ಬಿ.ಎಂ.ಶ್ರೀ. ಪ್ರತಿಷ್ಠಾನದ 2019ರ ಸೂ.ವೆ. ಆರಗಂ ವಿಮರ್ಶಾ ಪ್ರಶಸ್ತಿಗಳೆರಡನ್ನೂ ಪಡೆದಿದೆ.