ಗಿರಿಮನೆ ಶ್ಯಾಮರಾವ್ ಅವರ ‘ಬಣ್ಣದ ಜಿಂಕೆ’ ಕಾದಂಬರಿಯು ಮಲೆನಾಡಿನ ರೋಚಕ ಕಥಾ ಸರಣಿಯ ಹದಿನೈದನೇ ಕೃತಿಯಾಗಿದ್ದು ಚಿತ್ರರಂಗದ ಥಳುಕು ಬಳುಕಿನ ಜಗತ್ತಿನ ಆಗು ಹೋಗುಗಳನ್ನು ಭಾವನಾತ್ಮಕವಾಗಿ ವಿವರಿಸುತ್ತದೆ. ಖ್ಯಾತ ನಿರ್ದೇಶಕ ಭಾನುಪಿಳ್ಳೈಯ ಚಿತ್ರದ ನರ್ತಕಿಯಾಗಿ ಬಣ್ಣದ ಬದುಕಿಗೆ ಕಾಲಿಡುವ ಮಂದಾಕಿನಿಯು ಅದೇ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಕುಮಾರ ಎಂಬ ಸ್ಫುರದ್ರೂಪಿ ಯುವಕನ ಪ್ರೇಮಕ್ಕೆ ಪಾತ್ರಳಾದ ಬಳಿಕ ಜರಗುವ ವಿದ್ಯಮಾನಗಳು ಮುಖ್ಯವಾಗುತ್ತವೆ.
ಹಳ್ಳಿ ಹುಡುಗಿಯಾದ ಮಂದಾಕಿನಿಯನ್ನು ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳುವ ಮೂಲಕ ಮಾನವೀಯತೆಯನ್ನು ಮೆರೆಯುವ ಸುಕುಮಾರನು ಆಕೆಯ ನಡೆನುಡಿಗಳನ್ನು ತಿದ್ದಲು ಮುಂದಾಗುವ ಕ್ರಿಯೆಯು ಬಹಳಷ್ಟು ಬದಲಾವಣೆಗಳಿಗೆ ಮುನ್ನುಡಿ ಬರೆಯುತ್ತದೆ. ಇತ್ತೀಚಿನ ಬದುಕಿನಲ್ಲಿ ಹಾಸುಹೊಕ್ಕ ಆಧುನಿಕತೆಯ ಅಂಶಗಳನ್ನು ಮಂದಾಕಿನಿಯ ಬದುಕಿನಲ್ಲಿ ಅಳವಡಿಸಲು ಮುಂದಾಗುವ ಸುಕುಮಾರನ ಕಾರ್ಯತತ್ಪರತೆಯಲ್ಲಿ ಅವನ ಅಂತರಂಗದ ನೈರ್ಮಲ್ಯ ಪ್ರತಿಫಲಿಸುತ್ತದೆ. ಮಂದಾಕಿನಿಯ ಭಾಷಾ ಶೈಲಿಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಸುಕುಮಾರನು ಆಕೆಗೆ ಇಂಗ್ಲೀಷ್, ತಮಿಳು ಮತ್ತು ಮಲಯಾಳಂ ಭಾಷೆಗಳನ್ನು ಕಲಿಸುವುದರೊಂದಿಗೆ ಸಂಗೀತ, ಭಿನ್ನ ರೀತಿಯ ನೃತ್ಯ ಪ್ರಕಾರಗಳಲ್ಲಿ ನಿಪುಣಳಾಗುವಂತೆ ಮಾಡುವಲ್ಲಿ ಸಫಲನಾಗುವುದಲ್ಲದೆ, ಮಂದಾಕಿನಿಯನ್ನು ಅವಳೂ ಊಹಿಸದ ಮಟ್ಟಕ್ಕೆ ಕೊಂಡೊಯ್ಯುವ ಬಗೆಯು ಕೃತಿಯ ಕೇಂದ್ರ ಭಾಗವಾಗಿ ನಿರೂಪಿತಗೊಂಡಿದೆ.
ಸುಕುಮಾರ – ಮಂದಾಕಿನಿಯ ದಾಂಪತ್ಯದ ಕುಡಿ ವಿನಯ್ ತನಗೆ ಒಂದು ವರ್ಷ ತುಂಬುವ ಮೊದಲೇ ತಾಯಿಯನ್ನು ಅಗಲುವುದು ಭವಿಷ್ಯದ ದೃಷ್ಟಿಯಿಂದ ಖೇದಕರವಾಗಿದೆ. ಚಲನಚಿತ್ರ ರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಭಾನು ಪಿಳ್ಳೈ ಕಪಟಿ ಮತ್ತು ಕಾಮುಕ ಎಂಬುದನ್ನು ಅರಿತ ಸುಕುಮಾರನು ಆತನ ಸಖ್ಯವನ್ನು ತೊರೆದು ಸ್ವತಂತ್ರ ಹಾದಿಯನ್ನು ಕಂಡುಕೊಳ್ಳಲು ನಿರ್ಧರಿಸುವುದು, ಅಂಥ ನಿರ್ಧಾರಕ್ಕೆ ಬರಲು ಪ್ರೇರಣೆ ನೀಡಿದ ಕುರಿತು ತನ್ನ ಮಡದಿಗೆ ಹೇಳಿದರೂ ಅದನ್ನು ಒಲ್ಲದ ಆಕೆಯ ಮನಸ್ಸು ಭಾನು ಪಿಳ್ಳೈ ನೀಡುವ ಅವಕಾಶಕ್ಕೆ ಮರುಳಾಗಿ ಮನೆ, ಗಂಡ ಮತ್ತು ಮಗುವನ್ನು ತೊರೆದು ಆತನನ್ನು ಹಿಂಬಾಲಿಸಿ ಹೋಗುವುದು ಕೃತಿಯ ಮಧ್ಯಂತರದಲ್ಲಿ ಕಾಣಸಿಗುವ ಘಟನೆಗಳಿಗೆ ಕಾರಣವಾಗುತ್ತದೆ.
ಮಂದಾಕಿನಿ ಕಂಡ ಕನಸಿನ ಬಾಳಿಗೆ ರಂಗು ಹಚ್ಚಿದ ಭಾನು ಪಿಳ್ಳೈಯಿಂದಾಗಿ ಸಿನಿಮಾ ರಂಗದ ಮುಂಚೂಣಿಯ ನಟಿಯಾಗುವ ಮಂದಾಕಿನಿಯ ಹೆಸರು ‘ಮಂದಾರ’ ಎಂದು ಬದಲಾಗುವಲ್ಲಿಗೆ ಅವಳ ಬದುಕು ದಿಕ್ಕುಗಾಣದ ಹಡಗಿನಂತಾಗುತ್ತದೆ. ಸಿನಿಮಾ ಎಂಬ ಕಡಲಿನಲ್ಲಿ ಈಜತೊಡಗಿದ ಮಂದಾರಳ ಪ್ರತಿಯೊಂದು ಹೆಜ್ಜೆಗಳನ್ನು ಭಾನು ಪಿಳ್ಳೈಯೇ ನಿರ್ದೇಶಿಸುವ ಪರಿಸ್ಥಿತಿ ಆಕೆಗೆ ದುರದೃಷ್ಟಕರ ದಿನಗಳನ್ನು ಒದಗಿಸುತ್ತದೆ. ಸಿನಿಮಾ ನಟಿಯಾಗುವ ವಾಂಛೆಯಲ್ಲಿ ಸ್ವೇಚ್ಛೆಯ ಬದುಕಿಗೆ ಮರುಳಾಗಿ, ತನ್ನದೆಲ್ಲವನ್ನೂ ಭಾನು ಪಿಳ್ಳೈಗೆ ಅರ್ಪಿಸಿಕೊಂಡಾಗಲೂ ಅದನ್ನು ಸಹಜವೆಂದು ಭಾವಿಸುವಲ್ಲಿಗೆ ಅವಳ ಬದುಕು ಕರಾಳವಾಗುತ್ತಾ ಹೋಗುತ್ತದೆ.
ಮಿತಿ ಎಂಬುದು ವಿಧಿ ನಿರ್ಧರಿತವೋ ಎಂಬಂತೆ ಭಾನು ಪಿಳ್ಳೈಯ ಏಳ್ಗೆ ಕುಸಿತ ಕಾಣುವಲ್ಲಿಗೆ ಮಂದಾರಳಿಗೆ ಸಿನಿಮಾ ರಂಗದಲ್ಲಿದ್ದ ಬೇಡಿಕೆ ಇಳಿಯುವುದು ಅವಳ ಭವಿಷ್ಯದ ಕತ್ತಲಿಗೆ ಕಾರಣವಾಗುತ್ತದೆ. ಪಿಳ್ಳೈಯ ಬಳಿಕ ನಟ ಧನ್ಯಕುಮಾರ್ ಮತ್ತು ಖ್ಯಾತ ಉದ್ಯಮಿ ಪ್ರಕಾಶ್ ಕಡವಾಡಕರ್ ಮಂದಾರಳ ಬದುಕಿನ ನೋವುಗಳ ಮೆರವಣಿಗೆಗೆ ಕಾರಣರಾಗುತ್ತಾರೆ. ಯಾವ ಮುಲಾಜಿಲ್ಲದೆ ಇಬ್ಬರೊಂದಿಗೂ ಬೆರೆಯುವ ಮಂದಾರ ಉದ್ಯಮಿ ಪ್ರಕಾಶನಿಂದ ‘ವರ್ಷ’ ಎಂಬ ಹೆಣ್ಣು ಮಗುವಿನ ತಾಯಿಯಾದರೂ ತಾಯ್ತನದ ಸುಖ ಕಂಡುಕೊಳ್ಳುವಲ್ಲಿ ಹಿಮ್ಮೆಟ್ಟಿ ಅವರೀರ್ವರಿಂದಲೂ ದೂರ ಸಾಗುವ ಬಗೆಯು ಓದುಗರ ಸಂವೇದನೆಯನ್ನು ಮೀಟುತ್ತದೆ.
ಮಂದಾರಳ ಬದುಕು ಏಳು ಬೀಳುಗಳನ್ನು ಕಾಣುತ್ತಿರುವಾಗಲೇ ಸುಕುಮಾರನ ಬದುಕು ವಿಸ್ಮಯದ ಪ್ರಕೃತಿಯೊಂದಿಗೆ ಬೆರೆಯುವುದು ವಿಶೇಷ. ಜಂಜಡಗಳಿಂದ ತುಂಬಿರುವ ಪಟ್ಟಣದ ಬದುಕಿಗೆ ವಿದಾಯ ಹೇಳುವ ಸುಕುಮಾರನು ಸುಬ್ರಹ್ಮಣ್ಯ ಸಮೀಪದ ದಟ್ಟವಾದ ಕಾನನ ಪ್ರದೇಶವೊಂದರಲ್ಲಿ ವಾಸ್ತವ್ಯ ಹೂಡುವುದು ಮಗ ವಿನಯನ ಭವಿಷ್ಯದ ದೃಷ್ಟಿಯಿಂದ ಸಮಂಜಸವಾಗಿ ತೋರುತ್ತದೆ. ಹೆಗಲೆತ್ತರಕ್ಕೆ ಬೆಳೆದು ನಿಂತ ವಿನಯ್ ಮುಂದಿನ ಓದಿಗಾಗಿ ಆಸ್ಟ್ರೇಲಿಯಾಗೆ ಹೋಗುವುದು, ಅಲ್ಲಿ ಪರಿಚಿತಳಾಗುವ ವರ್ಷಾಳನ್ನು ಪ್ರೇಮಿಸಿ ವರಿಸಲು ಬಯಸುವ ವಿಪರ್ಯಾಸವು ಮಂದಾಕಿನಿ ಮತ್ತು ಸುಕುಮಾರ ಎಸಗಿದ ತಪ್ಪಿನ ಪರಾಕಾಷ್ಠೆಯಾಗಿ ಕಂಡುಬರುತ್ತದೆ. ತನ್ನ ಪ್ರೇಮದ ಬಗ್ಗೆ ತಂದೆಯಲ್ಲಿ ಪ್ರಸ್ತಾಪಿಸಿದಾಗ ಬೇರೆ ದಾರಿ ಕಾಣದ ಸುಕುಮಾರನು ತಾನು ಬಚ್ಚಿಟ್ಟ ಕೌಟುಂಬಿಕ ವಿಷಯವನ್ನು ಮಗನ ಬಳಿಯಲ್ಲಿ ಬಹಿರಂಗಪಡಿಸಿದಾಗ ವಿನಯನ ಬದುಕಿನಲ್ಲಿ ಅದು ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ. ತನ್ನ ತಾಯಿ ತೀರಿಕೊಂಡಿರುವಳೆಂದು ತಿಳಿದುಕೊಂಡಿದ್ದ ವಿನಯನು ತನ್ನ ಮುಂದೆ ಅನಾವರಣಗೊಂಡ ಸತ್ಯವನ್ನು ಅರಗಿಸಲಾಗದೆ ಒದ್ದಾಡುವ ಸನ್ನಿವೇಶವು ಮಿಥ್ಯೆಯು ಜೀವನದಲ್ಲಿ ತಂದೊಡ್ಡುವ ಘೋರ ನರಕವನ್ನು ಓದುಗರಿಗೆ ಮನವರಿಕೆ ಮಾಡಿಕೊಡುತ್ತದೆ. ಸತ್ಯವನ್ನು ತಿಳಿದು ಪಶ್ಚಾತ್ತಾಪದಲ್ಲಿ ಕೊರಗುವ ಮಗನನ್ನು ‘ಅರಿಯದೇ ಮಾಡಿದ ತಪ್ಪಿಗಾಗಿ ಕೊರಗುವುದು ಬಾಳಿನ ನಾಳೆಗಳಿಗೆ ಒಳ್ಳೆಯದಲ್ಲ’ ಎಂದು ಸಂತೈಸಿ ಈ ಕುರಿತು ವರ್ಷಾಳಲ್ಲಿ ಪ್ರಸ್ತಾಪಿಸುವಂತೆ ಸೂಚಿಸುವ ತಂದೆಯ ಸಲಹೆಗೆ ಬದ್ಧನಾಗಿ ವ್ಯವಹರಿಸುವ ವಿನಯನ ನಡೆಗೆ ಪೂರಕವಾಗಿ ತನ್ನ ಮುಂದೆ ವ್ಯಕ್ತವಾದ ಸತ್ಯ ಕಹಿಯಾದರೂ ಅದನ್ನು ಅರಗಿಸಿಕೊಂಡು ನಿನ್ನೆಗಳನ್ನು ಮರೆತು ವಾಸ್ತವಕ್ಕೆ ಬದ್ಧವಾಗಿ ಭವಿಷ್ಯವನ್ನು ಕಂಡುಕೊಳ್ಳುವ ಮೂಲಕ ಏರ್ಪಡುವ ಅಣ್ಣ – ತಂಗಿಯರ ನಂಟು ಅಲ್ಪ ಸಮಯದಲ್ಲಿ ಭದ್ರಗೊಳ್ಳುವ ಬಗೆಯು ಕೃತಿಯಲ್ಲಿ ಸುಖೀ ಭಾವವನ್ನು ಹಬ್ಬಿಸುತ್ತದೆ. ಬದುಕಿನ ತಿರುವುಗಳನ್ನು ಅತ್ಯಂತ ನಿರಾಸೆ ಹಾಗೂ ವ್ಯಥೆಗಳಿಂದ ಕಂಡುಕೊಂಡಿದ್ದ ಮಂದಾರ ಸಿನಿಮಾ ಜಗತ್ತಿನಿಂದ ಬೇರೆಯಾಗಿ, ಅನಾಥ ಮಕ್ಕಳ ಪಾಲನೆ – ಪೋಷಣೆಯಲ್ಲಿ ನಿರತಳಾಗಿರುವಾಗ ತನ್ನ ಬಳಿಗೆ ಬರುವ ಕರುಳ ಕುಡಿಗಳಾದ ವಿನಯ್ ಮತ್ತು ವರ್ಷಾಳ ಸಾಮೀಪ್ಯ ಮಂದಾಕಿನಿಯ ಯಾತನೆಗಳನ್ನು ಕೊನೆಗೊಳಿಸುತ್ತದೆ. ತಾನು ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪ ಪಡುತ್ತಾ ಮಕ್ಕಳಲ್ಲಿ ಕ್ಷಮೆ ಯಾಚಿಸುವ ಮಂದಾಕಿನಿ ಕೊನೆಗೂ ತನ್ನ ಮಕ್ಕಳ ಹೃದಯದಲ್ಲಿ ತಾಯಿಯ ಸ್ಥಾನ ಪಡೆಯುವುದು, ಪತಿಯಾದ ಸುಕುಮಾರನನ್ನು ಮೂವತ್ತು ವರ್ಷಗಳ ನಂತರ ಭೇಟಿಯಾಗಿ ಅತೀವ ಪಶ್ಚಾತ್ತಾಪದಿಂದ ಮಾತನಾಡುವ ಮಡದಿಯನ್ನು ಕಂಡಾಗ ಸುಕುಮಾರನ ಮನ ಕರಗುವುದು, ಮಂದಾಕಿನಿಯೆಡೆಗಿನ ಅವನ ನೈಜ ಒಲವನ್ನು ಪ್ರತಿಫಲಿಸುತ್ತದೆ. ಮುಂದಿನದ್ದೆಲ್ಲವೂ ವಿಧಿ ನಿಯಮಿತ ಎಂಬಂತೆ ತನ್ನ ಬದುಕನ್ನು ಕೊನೆಗಾಣಿಸಿಕೊಳ್ಳುವ ಮಂದಾಕಿನಿ ತನ್ನ ನೈಜ ಜೀವನದಲ್ಲಿ ಇದುವರೆಗೂ ನಿರ್ವಹಿಸುತ್ತಿದ್ದ ಪಾತ್ರವನ್ನು ಅಕ್ಷರಶಃ ಕೊನೆಗಾಣಿಸುತ್ತಾಳೆ. ನೊಂದರೂ ಮಡದಿಯ ಕಳೇಬರವನ್ನು ನೋಡಲಿಚ್ಛಿಸದ ಸುಕುಮಾರ ಆ ಕೆಲಸಕ್ಕೆ ಮಗ – ಮಗಳನ್ನು ಕಳುಹಿಸಿಕೊಡುವ ಮೂಲಕ ಮಂದಾಕಿನಿಗೆ ತನ್ನ ಮಕ್ಕಳಿಂದ ದಕ್ಕಬೇಕಾದ ಕರ್ಮಗಳು ದಕ್ಕುವಂತೆ ಮಾಡುತ್ತಾನೆ. ಕೆಲವೇ ತಿಂಗಳುಗಳ ಪ್ರೇಮವನ್ನು ಮಂದಾಕಿನಿಯಿಂದ ಪಡೆದ ಸುಕುಮಾರನ ಹೃದಯ ಮಂದಾಕಿನಿಯೆಡೆಗೆ ಎಡೆಬಿಡದೆ ತುಡಿಯುತ್ತಿದ್ದುದನ್ನು ಕೃತಿಯು ಸ್ಪಷ್ಟಪಡಿಸುತ್ತದೆ.
ಬದುಕಿನ ಸತ್ಯವನ್ನು ಅರಿಯುವಲ್ಲಿ ಎಡವಿದ ಮಂದಾಕಿನಿ ಆ ನಂತರ ನೊಂದು ತನ್ನ ಸಹಜ ಬದುಕನ್ನು ಮರಳಿ ಪಡೆಯುವಲ್ಲಿ ವಿಫಲಗೊಳ್ಳುವ ಕ್ರಿಯೆಗಳು ಬದುಕಿನ ಹೆಜ್ಜೆಗಳನ್ನು ಇಡುವಾಗ ಪಾಲಿಸಬೇಕಾದ ಜಾಗ್ರತೆ, ನಡೆಸಬೇಕಾದ ಆಳವಾದ ಚಿಂತನೆ ಹಾಗೂ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ವಹಿಸಬೇಕಾದ ಎಚ್ಚರಿಕೆಯನ್ನು ಧ್ವನಿಸುತ್ತದೆ. ಎಲ್ಲೂ ಅತೀ ಎನಿಸುವ ವಿವರಣೆಗಳಿಲ್ಲದ, ಭಾವೋದ್ವೇಗಕ್ಕೆ ಒಳಗಾಗುವ ಸನ್ನಿವೇಶಗಳನ್ನು ಸಹಜವಾಗಿ ನಿರೂಪಿಸುವ ಕೃತಿಯ ಆಶಯಗಳು ಓದಿನ ಪ್ರೀತಿಯನ್ನು ವಿಸ್ತರಿಸುತ್ತದೆ. ಬದುಕೆಂಬ ಮೂರಕ್ಷರದ ಪಯಣ ಸಾರ್ಥಕತೆಯನ್ನು ಕಂಡುಕೊಳ್ಳಬೇಕಾದರೆ ಸಹಜತೆಗೆ ಆದ್ಯತೆ ನೀಡಬೇಕಲ್ಲದೆ ಬಣ್ಣಗಳ ಆಕರ್ಷಣೆಗಳಿಗೆ ಅಲ್ಲ ಎಂಬ ಸಂದೇಶವನ್ನು ಸಾರುವ ಕೃತಿ ಸಾರ್ವಕಾಲಿಕ ಸತ್ಯವನ್ನು ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾಗಿದೆ.
ಪುಸ್ತಕದ ಹೆಸರು : ಬಣ್ಣದ ಜಿಂಕೆ
ಲೇಖಕರು : ಗಿರಿಮನೆ ಶ್ಯಾಮರಾವ್
ಮುದ್ರಣ : 2022
ಪುಟಗಳ ಸಂಖ್ಯೆ : 192
ಬೆಲೆ : ₹.220/-
ಪ್ರಕಾಶಕರು : ಗಿರಿಮನೆ ಪ್ರಕಾಶನ, ಸಕಲೇಶಪುರ 573134
ನಯನಾ ಜಿ.ಎಸ್ :
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ವಾಸವಾಗಿದ್ದಾರೆ. ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲಿ, ಪಿ.ಯು.ಸಿ. ಶಿಕ್ಷಣವನ್ನು ಸರಕಾರಿ ಪದವಿ ಪರ್ವರ ಕಾಲೇಜು ಬೆಳ್ಳಾರೆ ಎಂಬಲ್ಲಿ ಪೂರೈಸಿರುತ್ತಾರೆ. ಇವರು ತಮ್ಮ ಬಿ.ಎ. ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಇಲ್ಲಿಂದ ಪಡೆದಿರುತ್ತಾರೆ. ಹವ್ಯಾಸಿ ಬರಹಗಾರ್ತಿಯಾಗಿರುವ ಇವರ ಅನೇಕ ಲೇಖನಗಳು, ಪ್ರವಾಸ ಕಥನಗಳು, ಕವನಗಳು, ಗಜಲ್ ಗಳು, ಲಲಿತ ಪ್ರಬಂಧಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ‘ಕುವೆಂಪು ಸಾಹಿತ್ಯ ಪ್ರತಿಷ್ಠಾನ (ರಿ) ಕುಪ್ಪಳ್ಳಿ ಇವರು ಆಯೋಜಿಸಿದ್ದ ‘ಕುವೆಂಪು ಅವರ ನಾಡು – ನುಡಿ ಚಿಂತನೆ’ ವಿಷಯದ ಬಗೆಗಿನ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. 2021-22ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ ಇವೆರಡರ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನೂ, 2022-23ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು ಇವರ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ ಇವರ ಕಥೆಗಳು ಮತ್ತು ಕವನಗಳು ಆಕಾಶವಾಣಿಯ ದನಿಯಲ್ಲಿ ಬಿತ್ತರಗೊಂಡಿದೆ.
ಲೇಖಕರ ಬಗ್ಗೆ :
ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದು, ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ಪ್ರಕಾರಗಳಲ್ಲಿ ಓದುಗರಿಗೆ ಮೆಚ್ಚುವಂತಹ 26ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಗಿರಿಮನೆ ಪ್ರಕಾಶನ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.