ಕನ್ನಡದ ಮಹತ್ವದ ಲೇಖಕರಲ್ಲಿ ಒಬ್ಬರಾದ ಡಾ. ನಾ. ಮೊಗಸಾಲೆ ಅವರ ‘ಭಾರತ ಕಥಾ’ ಎಂಬ ಕಾದಂಬರಿಯು ರಾಜಕೀಯದ ಮುಷ್ಠಿಯೊಳಗೆ ಸಿಲುಕುವ ಊರಿನ ವಿದ್ಯಮಾನಗಳನ್ನು ವಾಸ್ತವದ ನೆಲೆಯಲ್ಲಿ ಬಿಚ್ಚಿಡುತ್ತದೆ. ಬೇಡವೆಂದರೂ ನಮ್ಮ ಬದುಕಿನೊಳಗೆ ನುಸುಳುವ, ಇಷ್ಟವಿಲ್ಲದಿದ್ದರೂ ನಮ್ಮನ್ನು ಕರಾಳ ಕೈಗಳಲ್ಲಿ ಅಪ್ಪಿಕೊಳ್ಳುವ, ದೂರವಾಗಲು ಹೊರಟವರನ್ನು ಬೆಂಬತ್ತಿ ಒಳಗೆ ಎಳೆದುಕೊಳ್ಳುವ ಕ್ರೌರ್ಯವು ಈ ಕಾದಂಬರಿಯನ್ನು ಮುನ್ನಡೆಸುತ್ತದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಸೀತಾಪುರ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವುದಾದರೂ ಅದನ್ನು ಭಾರತದ ಯಾವುದೇ ಹಳ್ಳಿಗೂ ಅನ್ವಯಿಸಬಹುದಾಗಿದೆ. ಒಂದರ್ಥದಲ್ಲಿ ಮೊಗಸಾಲೆಯವರ ಕಾಳಜಿಯೇ ಗ್ರಾಮ ಭಾರತ. ಹಳ್ಳಿಯಲ್ಲಿ ನಿಂತು ಸಾಮಾಜಿಕ ವಿದ್ಯಮಾನಗಳ ಬದಲಾವಣೆಗಳನ್ನು ವೀಕ್ಷಿಸುವ ಅವರಿಗೆ ಗ್ರಾಮ ಭಾರತವು ರಾಜಕೀಯದ ಬಲೆಯೊಳಗೆ ಬಿದ್ದು ನರಳುವಂತೆ ಕಾಣಿಸುತ್ತದೆ.
ರಾಜಕೀಯ ಸ್ಥಿತ್ಯಂತರವು ಮನುಷ್ಯನ ಬದುಕು ಭಾವಗಳನ್ನು ಪ್ರಭಾವಿಸುವ ವಿವರಗಳಿರುವುದರಿಂದ ಈ ಕಾದಂಬರಿಗೆ ರಾಜಕೀಯ ಅರ್ಥವ್ಯಾಪ್ತಿಯು ಒದಗಿದೆ. ಈ ಪರಿಸ್ಥಿತಿಯು ರಾಜಕೀಯ ದೃಷ್ಟಿಕೋನವಿಲ್ಲದವರ ಬದುಕನ್ನೂ ಸೆರೆಹಿಡಿಯುತ್ತದೆ. ಕಣ್ಣಿಗೆ ಕಾಣದ ಕೆಟ್ಟ ವ್ಯವಸ್ಥೆಯು ನಮ್ಮ ಕತ್ತು ಹಿಸುಕುತ್ತಾ ಇದೆ ಎಂಬ ಭಾವವನ್ನು ಉಂಟು ಮಾಡುತ್ತದೆ. ಕಾಲದ ದುರ್ನಡತೆಗೆ ಮುಖಾಮುಖಿಯಾದ, ಅಧಿಕಾರ ಮೋಹದ ನಡುವೆ ವಿಷಣ್ಣವಾದ ಸಮಾಜದ ಚಿತ್ರಣವನ್ನು ನೀಡುತ್ತದೆ. ಹಳ್ಳಿಗಳು ತಮ್ಮ ಅಸ್ಮಿತೆಯನ್ನು ಕಳೆದುಕೊಳ್ಳಲು ರಾಜಕೀಯವೇ ಕಾರಣವಾಗುತ್ತಿದೆ ಎಂಬ ಆಶಯವನ್ನು ವ್ಯಕ್ತಪಡಿಸುತ್ತದೆ.
ಏಕಪಾತ್ರ ಅಥವಾ ನಾಯಕಪ್ರಧಾನ ಕಾದಂಬರಿಗಳಿಗಿಂತ ಭಿನ್ನವಾಗಿರುವ ಈ ಕಾದಂಬರಿಯಲ್ಲಿ ಊರೇ ಕೇಂದ್ರವಾಗಿದೆ. ಊರನ್ನು ವಿಚಲಿತಗೊಳಿಸುವ ರಾಜಕಾರಣದ ಪರಿಣಾಮಗಳನ್ನು ಪರ ಅಥವಾ ವಿರೋಧದ ನೆಲೆಗಳಲ್ಲಿ ದಾಖಲಿಸದೆ ಇವುಗಳು ಓದುಗರ ಪ್ರಜ್ಞೆಯಲ್ಲಿ ಅಚ್ಚೊತ್ತುವ, ಅವುಗಳಿಗೆ ಅದರದ್ದೇ ಆದ ಪ್ರತಿಕ್ರಿಯೆ ಮತ್ತು ಪ್ರತಿಸ್ಪಂದನೆಯನ್ನು ಉಂಟುಮಾಡುವ ಬಗೆಯನ್ನು ನಿರೂಪಿಸುತ್ತದೆ. ಲೇಖಕರು ಸೃಷ್ಟಿಸುವ ಲೋಕದ ಒಳ ತರ್ಕವನ್ನು ಅನುಸರಿಸಿಕೊಂಡು ಹೋಗಲು ಸಾಧ್ಯವಾಗುವಂಥ ನಿರೂಪಣ ಶೈಲಿಯನ್ನು ಒಳಗೊಂಡಿರುವ ಕಾದಂಬರಿಯಲ್ಲಿ ಮನುಷ್ಯನ ಅಂತರಂಗ ಮತ್ತು ಸಾಮಾಜಿಕ ವಾಸ್ತವಗಳು ಬಿಚ್ಚಿಕೊಳ್ಳುತ್ತವೆ.
ಭಾಸ್ಕರ ಹೆಗಡೆಯ ಸಾಮಾಜಿಕ – ರಾಜಕೀಯ ಬೆಳವಣಿಗೆಯನ್ನು ವಿವರಿಸುವ ಕಾದಂಬರಿಯು ಆತನಿಂದಾಗಿ ಅಧಪತನಕ್ಕೆ ಒಳಗಾಗುವ ಊರಿನ ಪರಿಸ್ಥಿತಿಯನ್ನು ಅನಾವರಣಗೊಳಿಸುತ್ತದೆ. ಯುವಕ ಮಂಡಲದ ಕಾರ್ಯದರ್ಶಿಯ ಸ್ಥಾನವು ಸಿಗುವುದರೊಂದಿಗೆ ಅವನ ಭಾಗ್ಯದ ಬಾಗಿಲು ತೆರೆದುಕೊಳ್ಳುತ್ತದೆ. ಕ್ರಮೇಣ ಅವನ ಬೇರುಗಳು ಸಮಾಜದೊಳಗೆ ಇಳಿದುಕೊಳ್ಳುತ್ತವೆ. ಏನೂ ಇಲ್ಲದಿದ್ದ ಭಾಸ್ಕರ ಹೆಗಡೆಯು ಎಲ್ಲವೂ ಬೇಕು ಎಂದು ದೋಚಿಕೊಳ್ಳುವ ನೆಲೆಗೆ ತಲುಪುತ್ತಾನೆ. ಶಾಲೆ, ನ್ಯಾಯ ಬೆಲೆ ಅಂಗಡಿ, ಪಂಚಾಯತ್ ಸದಸ್ಯತ್ವ, ಸಹಕಾರಿ ಸಂಘ ಸಂಸ್ಥೆಗಳ ಪಾಲುದಾರಿಕೆಗಳನ್ನು ಗ್ರಾಮದ ಏಳಿಗೆಗೆ ವಿನಿಯೋಗಿಸುವ ಬದಲು ತಾನು ಕನಸು ಕಾಣುತ್ತಿರುವ ಶಾಸಕ ಸ್ಥಾನವನ್ನು ಏರುವ ಮೆಟ್ಟಿಲುಗಳಾಗಿ ಉಪಯೋಗಿಸುತ್ತಾನೆ. ಹಿರಿಯರಿಗೆ ಮಣಿಯುವ ವಿನಯ, ಅನುಕಂಪ, ಭಾವುಕತೆ ಮುಂತಾದ ಒಳ್ಳೆಯ ಅಂಶಗಳಿದ್ದರೂ ಧೂರ್ತತನ, ಓಲೈಕೆ, ಅರ್ಹರನ್ನು ಪದಚ್ಯುತಗೊಳಿಸುವ ತಂತ್ರ, ಹಿಂಬಾಗಿಲ ಪ್ರವೇಶ, ಸಮಯ ಸಾಧಕತನ, ಪ್ರಚಾರ – ಮನ್ನಣೆಗಳ ಒತ್ತಾಸೆ, ಲಾಲಸೆಗಳಿಗೆ ಬಲಿಯಾಗಿ ಊರ ನಾಯಕನೆಂಬ ಹಣೆಪಟ್ಟಿಯನ್ನು ಹಚ್ಚಿ ಮೆರೆಯುವ ಅಹಂಕಾರ, ಪ್ರತಿಯೊಂದರಲ್ಲೂ ಹಸ್ತಕ್ಷೇಪವನ್ನು ಮಾಡುವ ಬುದ್ಧಿ, ಅಧಿಕಾರದ ಬಲ, ಗುಂಪುಗಾರಿಕೆ, ಲಂಪಟತನ, ಲಾಭಕೋರತನಗಳನ್ನೇ ಬಂಡವಾಳವಾಗಿಸಿಕೊಂಡು ಸಮಾಜ ಸುಧಾರಕ-ಸಾಂಸ್ಕೃತಿಕ ನೇತಾರನೆಂಬ ಮುಖವಾಡವನ್ನು ತೊಟ್ಟು ಮೆರೆಯುವ, ವಿರೋಧಿಸಲು ಸಾಧ್ಯತೆಯಿರುವ ಜನರ ಗುಂಪಿಗೆ ಮದ್ಯಮಾಂಸಗಳನ್ನು ಒದಗಿಸಿಕೊಟ್ಟು ಯಜಮಾನ್ಯ ವ್ಯವಸ್ಥೆಯ ಭಾಗವೆನಿಸಿಕೊಳ್ಳುವ ಆತನ ಹಾದಿಯು ಆಧುನಿಕ ರಾಜಕೀಯದ ದಾರಿ. ಅಸುರೀ ಭಾವದಿಂದ ಕುದಿದು ಕನಲುತ್ತಾ ಪರಿಸ್ಥಿತಿಯ ಮೇಲೆ ರಾಕ್ಷಸೀಯ ಆಧಿಪತ್ಯವನ್ನು ಸ್ಥಾಪಿಸಿ, ಜಗತ್ತಿನ ಒಳ್ಳೆಯತನ, ಸ್ವಚ್ಛತೆಗಳ ಮೇಲೆ ಒಡೆತನವನ್ನು ಹೇರಿ ದುಷ್ಟತನವೇ ವಿಜೃಂಭಿಸುವಂತೆ ಮಾಡುವ ಅವನ ಅಮಾನವೀಯ ನಡವಳಿಕೆಗಳು ಮುಗ್ಧರ ಮನಸ್ಸನ್ನು ಚಿವುಟುತ್ತವೆ.
ಒಬ್ಬನ ಕ್ರೌರ್ಯವು ಇಡೀ ಸಮುದಾಯಕ್ಕೆ ತರುವ ದುಃಖ, ಅವನತಿಗಳನ್ನು ಚಿತ್ರಿಸುವ ಕಾದಂಬರಿಯು ಭಾಸ್ಕರ ಹೆಗಡೆ ಏಕೆ ಹೀಗೆ ಆದ ಎಂಬುದನ್ನು ಕಾಣಲು ಯತ್ನಿಸುತ್ತದೆ. ಒಬ್ಬ ಸಾಮಾನ್ಯ ಮನುಷ್ಯ ಇದನ್ನು ಸಾಧಿಸಿದ್ದು ಹೇಗೆ? ಯಾವ ಶಕ್ತಿಗಳು ಇವನನ್ನು ಮೇಲೆ ತಳ್ಳಿದವು? ಮೇಲೇರುತ್ತಾ ಹೋದಂತೆ ಅವನ ವ್ಯಕ್ತಿತ್ವದಲ್ಲಿ ಯಾವ ರೀತಿಯ ಬದಲಾವಣೆಗಳು ಉಂಟಾದವು? ಎಂಬ ಪ್ರಶ್ನೆಗಳನ್ನು ಬಿಡಿಸುತ್ತಾ ಹೋಗುವ ಲೇಖಕರು ಭಾಸ್ಕರ ಹೆಗಡೆಯ ವೈಯಕ್ತಿಕ ಆಸೆ ಆಕಾಂಕ್ಷೆ, ಸಾಮರ್ಥ್ಯ ದೌರ್ಬಲ್ಯಗಳು ಮತ್ತು ಅವನನ್ನು ಸುತ್ತುವರಿದ ಸಾಮಾಜಿಕ ರಾಜಕೀಯ ಪರಿಸರದ ಕಡೆ ಗಮನವನ್ನು ಹರಿಸಿದ್ದಾರೆ. ಮೌಲ್ಯಗಳು ಕುಸಿದರೆ ವ್ಯವಸ್ಥೆ ಉಳಿಯಲಾರದು. ಈ ಮೌಲ್ಯಗಳನ್ನು ನಾಶಮಾಡುವ ದುಷ್ಟ ಇಡೀ ವ್ಯವಸ್ಥೆಯ ಅವನತಿಗೆ ಕಾರಣನಾಗುತ್ತಾನೆ. ವ್ಯಕ್ತಿನಿಷ್ಠೆ- ಪಕ್ಷನಿಷ್ಠೆಗಳನ್ನು ಮುಖ್ಯವಾಗಿರಿಸಿಕೊಂಡು ಸಾರ್ವಜನಿಕ, ಸಾಮುದಾಯಿಕ ಬದುಕಿನಲ್ಲಿ ಕರ್ತವ್ಯವನ್ನು ಕೈಬಿಡುವವರೂ ಅವನಂತೆಯೇ ಇಡೀ ವ್ಯವಸ್ಥೆಯ ಅವನತಿಗೆ, ಸಮುದಾಯದ ದುಃಖಕ್ಕೆ ಕಾರಣರಾಗುತ್ತಾರೆ. ಆದರೆ ಮನುಷ್ಯನನ್ನು ಮೀರಿದ ಶಕ್ತಿಯಿದೆ. ಕಾಲ ಕೂಡಿ ಬಂದಾಗ ಅದು ತನ್ನ ಶಕ್ತಿಯನ್ನು ಪ್ರಕಟಿಸುತ್ತದೆ ಎಂಬುದಕ್ಕೆ ಶಾಲೆಯ ಕಟ್ಟಡವು ಕುಸಿದುಬೀಳುವ ಸನ್ನಿವೇಶವು ಸಾಕ್ಷಿಯಾಗುತ್ತದೆ. ಮಾನವನು ಎಷ್ಟೇ ಮೆರೆದರೂ ಪ್ರಕೃತಿಯ ಎದುರು ನಿಲ್ಲಲಾರ. ನಿಸರ್ಗವು ಅವನ ಸೃಷ್ಟಿಯನ್ನು ಕ್ಷಣಮಾತ್ರದಲ್ಲಿ ನಾಶ ಮಾಡಬಲ್ಲದು. ಅದರ ಶಕ್ತಿಯೆದುರು ಮಾನವನಿರ್ಮಿತ ವ್ಯವಸ್ಥೆಯು ಉಳಿಯುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡುತ್ತದೆ.
ವ್ಯಕ್ತಿಯ ಪ್ರಜ್ಞೆಯಲ್ಲಿ, ಅವನು ಬದುಕುತ್ತಿರುವ ಸಮಾಜದಲ್ಲಿ ಕಾಣಿಸಿಕೊಂಡ ಪಲ್ಲಟಗಳನ್ನು ದಾಖಲಿಸುವ ಕಾದಂಬರಿಯಲ್ಲಿ ನ್ಯಾಯ ಬೆಲೆ ಅಂಗಡಿಯನ್ನು ಸ್ಥಾಪಿಸುವ ಸನ್ನಿವೇಶವಿರುವುದರಿಂದ ಅದು ಎಪ್ಪತ್ತರ ದಶಕ ಎಂದು ಅರ್ಥಮಾಡಿಕೊಳ್ಳಬಹುದು. ಕನ್ನಡದ ಬಹುತೇಕ ಕಾದಂಬರಿಗಳಲ್ಲಿ ಸಮಾಜದ ಚಿತ್ರಣವಿರುವುದು ನಿಜವಾದರೂ ಅವುಗಳು ಹೆಚ್ಚಾಗಿ ನಾಯಕ ಪ್ರಧಾನವಾಗಿದ್ದು ವ್ಯಕ್ತಿಯ ವೈಯಕ್ತಿಕ ಬದುಕಿನ ಕಡೆ ಲಕ್ಷ್ಯವನ್ನು ಇಟ್ಟುಕೊಂಡಿರುತ್ತವೆ. ಆದರೆ ತನ್ನದೇ ಆದ ಕಟ್ಟುಕಟ್ಟಳೆಗಳೊಂದಿಗೆ ಬದುಕುತ್ತಿದ್ದ ಸಮಾಜವು ಧೂರ್ತನೊಬ್ಬನ ಚಟುವಟಿಕೆಗಳಿಗೆ ಬಲಿಯಾಗಿ ತಾನು ನಿರೀಕ್ಷಿಸದಿದ್ದ ವಿದ್ಯಮಾನಗಳಿಗೆ ಮೂಕಸಾಕ್ಷಿಯಾಗುವುದು ಈ ಕಾದಂಬರಿಯ ವಸ್ತು. ಸಮಾಜದಲ್ಲಿ ಭ್ರಷ್ಟಾಚಾರ ಬೆರೆತು ಹೋಗಿರುವುದನ್ನು ಮೂರ್ತವಾಗಿ ಅನುಭವಕ್ಕೆ ತಂದುಕೊಡುವ ಕಾದಂಬರಿಯು ಕಪ್ಪುಬಿಳುಪಿನ ಪಾತ್ರಚಿತ್ರಣದಲ್ಲಿ ಲೀನವಾಗದೆ, ಅನುಕರಣೆಗೆ ಯೋಗ್ಯರಾದ ಒಳ್ಳೆಯವರು ಮತ್ತು ತಿರಸ್ಕಾರಕ್ಕೆ ಅರ್ಹರಾದ ಕೆಟ್ಟವರು ಯಾರು ಎಂಬ ನೈತಿಕ ತೀರ್ಮಾನವನ್ನು ಕೊಡುವುದರಲ್ಲಿ ನಿರತವಾಗದೆ ಮನುಷ್ಯ ಸ್ವಭಾವದ ವೈವಿಧ್ಯಗಳನ್ನು ಕಂಡು ಅರ್ಥ ಮಾಡಿಕೊಳ್ಳುವ ಕುತೂಹಲವನ್ನು ಹೊಂದಿದೆ. ಜನನಾಯಕರೆನಿಸಿಕೊಳ್ಳುವವರು ಮಾಡುವ ಅನ್ಯಾಯಗಳನ್ನು ಬಯಲಿಗೆಳೆಯುವ ಮೂಲಕ ಸಮಾಜದ ಅವನತಿಯ ಚಿತ್ರವನ್ನು ನೀಡುವುದರೊಂದಿಗೆ ಅವರ ಅಸ್ತಿತ್ವ ಮತ್ತು ವ್ಯಕ್ತಿತ್ವದೊಳಗೆ ಹುದುಗಿಕೊಂಡಿರುವ ವ್ಯಂಗ್ಯಗಳನ್ನು ನೇರವಾಗಿ ಓದುಗರ ಮುಂದಿಡುವ ಕಾದಂಬರಿಯು ಭಾವುಕತೆ, ಬೌದ್ಧಿಕತೆಗಳನ್ನು ಬಿಟ್ಟುಕೊಟ್ಟು, ನಿರ್ದಿಷ್ಟ ವ್ಯಕ್ತಿ ಮತ್ತು ಸನ್ನಿವೇಶಗಳ ಮೂಲಕ ಅವರು ಬದುಕುತ್ತಿರುವ ಸಮಾಜ ಸಂಸ್ಕೃತಿಗಳನ್ನು ಅವಲೋಕಿಸುತ್ತದೆ.
ಸಾಮಾನ್ಯವಾಗಿ ಹೆಚ್ಚಿನ ಕಾದಂಬರಿಗಳ ಮುಖ್ಯ ಪಾತ್ರ ಅಥವಾ ವ್ಯಕ್ತಿಗಳು ತಮ್ಮ ಬದುಕಿನಲ್ಲಿ ಸಾಕಷ್ಟು ಕಷ್ಟ ಸುಖಗಳನ್ನುಂಡು, ಒಳ್ಳೆಯ ಅಥವಾ ಕೆಟ್ಟ ಕೆಲಸಗಳನ್ನು ಮಾಡಿ, ಅನೇಕ ಬಗೆಯ ಏರಿಳಿತಗಳನ್ನು ಕಂಡು ಮಾಗುತ್ತಾ ಬೆಳೆಯುತ್ತಾರೆ. ಕಾದಂಬರಿಯ ಕೊನೆಗೆ ಬರುವಷ್ಟರಲ್ಲಿ ಲೌಕಿಕ ಕಾಮನೆಗಳಿಂದ ಕಳಚಿಕೊಂಡು ವೈರಾಗ್ಯದ ಅಂಚನ್ನು ಮುಟ್ಟಿರುತ್ತಾರೆ. ಕೆಟ್ಟವರು ಕಠಿಣ ಶಿಕ್ಷೆಗೆ ಒಳಗಾಗಿ ಅಪರಾಧಿ ಭಾವದಿಂದ ಕುಸಿದಿರುತ್ತಾರೆ ಇಲ್ಲವೇ ಬದುಕಿನ ಶೂನ್ಯತೆಯ ದರ್ಶನವನ್ನು ಮಾಡಿಕೊಂಡು ಸಾಯುತ್ತಾರೆ. ಆದರೆ ಇಲ್ಲಿ ಭಾಸ್ಕರ ಹೆಗಡೆಯು ಕೊನೆಯವರೆಗೂ ತನ್ನ ಅಹಂಕಾರ, ವ್ಯಾಮೋಹ, ಸ್ವಾರ್ಥಗಳಿಂದ ದೂರವಾಗುವುದಿಲ್ಲ. ಮರ್ಯಾದೆಯನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದರೂ ಅವನಲ್ಲಿ ಪಶ್ಚಾತ್ತಾಪ, ಪಾಪಪ್ರಜ್ಞೆ ಹುಟ್ಟುವುದಿಲ್ಲ. ಖಳನಾಯಕನೆಂದು ಹೇಳಲಾಗದಿದ್ದರೂ ಅವನದ್ದು ಪ್ರತಿನಾಯಕನ ಪಾತ್ರಕ್ಕೆ ಹತ್ತಿರವಾಗಿದೆ. ಆದ್ದರಿಂದ ಕಾದಂಬರಿಯಲ್ಲಿ ಭಾವುಕತೆಯ ಅಂಶ ಕಡಿಮೆಯಾಗಿದ್ದು ಪಾತ್ರಚಿತ್ರಣ, ಘಟನೆಗಳ ನಿರೂಪಣೆ, ಸನ್ನಿವೇಶದ ವ್ಯಾಖ್ಯಾನ ವಿಶ್ಲೇಷಣೆಗಳಲ್ಲಿ ವಸ್ತುನಿಷ್ಠತೆಯು ಕಂಡುಬರುತ್ತದೆ. ಮೊಗಸಾಲೆಯವರ ಇತರ ಕಾದಂಬರಿಗಳಲ್ಲಿ ನಿರೂಪಕರು ತಮ್ಮ ನಾಯಕರೊಂದಿಗೆ ದೂರವನ್ನು ಕಾಯ್ದುಕೊಂಡರೂ ಅವರ ಮೆಚ್ಚುಗೆ ತಮ್ಮ ತಮ್ಮ ಪಾತ್ರಗಳ ಬಗ್ಗೆ ಹರಿದಿರುವುದು ಸ್ಪಷ್ಟವಾಗಿದೆ. ಆದರೆ ಈ ಕಾದಂಬರಿಯ ನಿರೂಪಣೆಯಲ್ಲಿ ಮೆಚ್ಚುಗೆ ಆರಾಧನ ಭಾವಗಳ ಬದಲು ಒಂದು ಬಗೆಯ ವಿಮರ್ಶೆಯು ಹುದುಗಿರುವಂತೆ ಭಾಸವಾಗುತ್ತದೆ. ಉಳಿದವರನ್ನು ಹಿಂಸಿಸುವ ಭಾಸ್ಕರ ಹೆಗಡೆಯು ತನ್ನ ಕ್ರೌರ್ಯದಿಂದ ತಾನೇ ಬಳಲಿ, ಶಿಕ್ಷೆಯನ್ನು ಅನುಭವಿಸುವ ಅಥವಾ ದುರಂತದ ಕಡೆ ಸಾಗುವ ಮೂಲಕ ತನ್ನ ಸತ್ಯವನ್ನು ಅರಿಯುವ ಯಾತನಾಮಯ ಸ್ಥಿತಿಗೆ ತಲುಪುವ ಬಗೆಯನ್ನು ಮೊಗಸಾಲೆಯವರು ತಮ್ಮ ಮುಂದಿನ ಕಾದಂಬರಿಯ ವಸ್ತುವನ್ನಾಗಿಸಿಕೊಂಡರೆ ಹೊರ ಜಗತ್ತಿಗೆ ತನ್ನನ್ನು ಹೇಗೆ ಬೇಕಾದರೂ ತೋರಿಸಿಕೊಳ್ಳುವ ವ್ಯಕ್ತಿಯು ತನ್ನ ಅಂತರಂಗದ ಮುಂದೆ ಶರಣಾಗಿ, ತಾನು ಮಾಡಿದ ತಪ್ಪುಗಳಿಗೆ ಪರಿಹಾರವಿಲ್ಲ ಎಂದರಿತು ಹೈರಾಣಾಗುವ ಪರಿಸ್ಥಿತಿಯನ್ನು ಮನಶಾಸ್ತ್ರೀಯ ನೆಲೆಯಲ್ಲಿ ವಿಶ್ಲೇಷಿಸುವ ಅವಕಾಶ ಸೃಷ್ಟಿಯಾಗಬಹುದು.
ರಾಜಕೀಯವು ಮಾನವನ ಬದುಕನ್ನು ಆವರಿಸುವಾಗ ಹುಟ್ಟುವ ಬದುಕಿನ ಅನಿಶ್ಚಿತತೆ, ಗುರಿಯಿಲ್ಲದ ಕಾಯುವಿಕೆ, ಬೇರ್ಪಡುವ ಸಂಬಂಧಗಳು, ನಿರಪರಾಧಿಯ ಯಾತನೆಗಳಿಗೆ ಸಂಕೀರ್ಣ ರೂಪಕವೇ ನಿರ್ಮಾಣಗೊಂಡಿದೆ. ಚರಿತ್ರೆಯು ನಿರ್ದಯವಾಗಿ ಚಲಿಸುತ್ತದೆ ಎಂಬ ಸತ್ಯವನ್ನು ಕಾದಂಬರಿಯು ಮರೆಮಾಚುವುದಿಲ್ಲ. ಈ ಚಲನೆಯು ಜನರ ಮೇಲೆ ಬೀರುವ ಪರಿಣಾಮಗಳನ್ನು ಅಲಕ್ಷಿಸುವುದಿಲ್ಲ. ಬದುಕಿನ ಸುಖ, ಸಂಭ್ರಮ ಮತ್ತು ವಿಕೃತಿಗಳನ್ನು ಮುಖಾಮುಖಿಯಾಗಿಸಿ, ಸಾಮಾಜಿಕ ಪ್ರಕ್ರಿಯೆಗಳು ಮತ್ತು ಮನುಷ್ಯರ ಮನೋವ್ಯಾಪಾರಗಳ ಸಂಕೀರ್ಣ ಚಿತ್ರಗಳನ್ನು ನೇಯುವುದರೊಂದಿಗೆ ಪ್ರಪಂಚದ ಯಾವ ಕಡೆಯಲ್ಲೂ ಕಾಣಿಸಬಹುದಾದಂಥ ಸ್ವಾರ್ಥ ಪ್ರೇರಿತ ರಾಜಕೀಯ, ಪ್ರತ್ಯೇಕತೆ, ಸರ್ವಾಧಿಕಾರ, ಒಳಿತಿನ ಶಕ್ತಿಗಳ ಹುಟ್ಟಡಗಿಸುವ ಹುನ್ನಾರ ಮತ್ತು ಅಜ್ಞಾನದ ಒಟ್ಟು ಮೊತ್ತದ ಪರಿಣಾಮಗಳನ್ನು ದಾಖಲಿಸುವುದರಿಂದ, ವೈರುಧ್ಯಗಳಿಂದ ಕೂಡಿದ ಸಮಾಜದಲ್ಲಿ ಬದುಕುವ ಮನುಷ್ಯನ ಸ್ಥಿತಿ ಮತ್ತು ಸಾಧ್ಯತೆಗಳ ಬಗ್ಗೆ ಚಿಂತಿಸುವುದರಿಂದ ಈ ಕಾದಂಬರಿಯು ಎಲ್ಲಾ ಕಾಲಕ್ಕೂ ಸಲ್ಲುವ ಕೃತಿಯೆನಿಸಿಕೊಳ್ಳುತ್ತದೆ.
ಡಾ. ಸುಭಾಷ್ ಪಟ್ಟಾಜೆ – ವಿಮರ್ಶಕರು:
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.
ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
ಲೇಖಕ ಬಗ್ಗೆ :
ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಿಕ ಚಟುವಟಿಕೆ ನಡೆಸುತ್ತಿದ್ದಾರೆ.
ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದ್ದೂ ಇಲ್ಲದ್ದು, ಇಹಪರದ ಕೊಳ, ಕಾಮನೆಯ ಬೆಡಗು, ದೇವರು ಮತ್ತೆ ಮತ್ತೆ, ಬೇಲಿಯ ಗೂಟದ ಮೇಲೊಂದು ಚಿಟ್ಟೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ಮಕ್ಕಳು, ಅನಂತ, ಕನಸಿನ ಬಳ್ಳಿ, ನನ್ನದಲ್ಲದ್ದು, ಪಲ್ಲಟ, ಹದು. ಪ್ರಕೃತಿ, ನೆಲಮುಗಿಲುಗಳ ಮಧ್ಯೆ, ದಿಗಂತ, ದೃಷ್ಟಿ, ಉಪ್ಪು, ತೊಟ್ಟಿ, ಪಂಥ, ಅರ್ಥ, ಉಲ್ಲಂಘನೆ. ಮುಖಾಂತರ, ಧಾತು (ಕಾದಂಬರಿಗಳು), ಆಶಾಂಕುರ, ಹಸಿರುಬಿಸಿಲು, ಸುಂದರಿಯ ಎರಡನೇ ಅವತಾರ. ಸೀತಾಪುರದ ಕಥೆಗಳು, ಸನ್ನಿಧಿಯಲ್ಲಿ ಸೀತಾಪುರ (ಕಥಾ ಸಂಕಲನಗಳು), ಸೀತಾಪುರದಲ್ಲಿ ಕತೆಗಳೇ ಇಲ್ಲ (ಸಮಗ್ರ ಕಥಾ ಸಂಕಲನ) ಬಿಸಿಲಕೋಲು (ವ್ಯಕ್ತಿಚಿತ್ರಗಳ ಸಂಗ್ರಹ) ಪ್ರಕಟಿತ ಕೃತಿಗಳು.