ಈ ಕಾದಂಬರಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶತಮಾನಗಳಿಂದ ಇದ್ದ ಗಾದೆ ಮಾತು ‘ವೆಂಕು ಪಣಂಬೂರ್ ಗ್ ಪೋಯಿ ಲೆಕ್ಕೊ’. ಅಂದರೆ ವೆಂಕು ಪಣಂಬೂರಿಗೆ ಹೋದ ಹಾಗೆ ಜಾನಪದಲ್ಲಿರುವ ನಂಬಿಕೆಯ ಪ್ರಕಾರ ವೆಂಕು ಒಬ್ಬ ಪೆದ್ದ. ಪೆದ್ದ ಎಂದರೆ ತೀರಾ ಮುಗ್ಧ. ಅವನ ಮುಗ್ಧತೆಯನ್ನು ಶೋಷಿಸಿ ಅವನಿಂದ ಸಾಕಷ್ಟು ಕೆಲಸ ಮಾಡಿಸಿಕೊಂಡು ಅವನನ್ನೆ ಮಕ್ಕರ್ ಅಂದರೆ ತಮಾಷೆ ಮಾಡುವರು, ಗೇಲಿ ಮಾಡುವರು. ಅಂತಹ ಪೆದ್ದನ ದ್ಯೋತಕವಾಗಿ ಈ ವೆಂಕು.
ಒಂದು ರಾತ್ರಿ ವೆಂಕುವಿನ ಯಜಮಾನ ಮತ್ತು ಯಜಮಾನತಿ ಮಾತಾಡುತ್ತ ‘ನಾಳೆ ಎಂಕುವನ್ನು ಪಣಂಬೂರಿಗೆ ಕಳಿಸಬೇಕು.’ ಎಂಬುದನ್ನು ವೆಂಕು ಕೇಳಿ ಏನು ಯಾಕೆ ಎಂಬ ಗೊತ್ತುಗುರಿಯಿಲ್ಲದೆ ವೆಂಕು ಪಣಂಬೂರಿಗೆ ಹೊರಟುಬಿಟ್ಟ. ಮಾರನೆಯ ದಿನ ವೆಂಕು ಮನೆಗೆ ಬಂದಾಗ ಯಜಮಾನರು ಕೇಳಿದರು: “ವೆಂಕು, ಎಲ್ಲಿಗೆ ಹೋಗಿದ್ದೆ?”
“ಪಣಂಬೂರಿಗೆ”
“ಯಾಕೆ?”.
” ನಿನ್ನೆ ರಾತ್ರಿ ನೀವು ನನ್ನನ್ನು ಪಣಂಬೂರಿಗೆ ಕಳುಹಿಸಬೇಕೆಂದು ಅಮ್ಮನೊಡನೆ ಹೇಳುವಾಗ ನಾನು ಕೇಳಿದ್ದೆ. ಅದಕ್ಕಾಗಿ ಹೋಗಿ ಬಂದೆ”.
“ಸೈ ಹೋಗಿಯಾದರೂ ಏನು ಮಾಡಿಕೊಂಡು ಬಂದೆ ಮಾರಾಯ?”.
“ಏನು ಮಾಡುವುದು? ಬೇರೇನೂ ಕೆಲಸವಿರಲಿಲ್ಲ ಹಾಗಾಗಿ ಅಲ್ಲಿ ಸ್ವಲ್ಪ ಸುತ್ತಾಡಿದೆ. ಒಂದು ಕಡೆ ಎಮ್ಮೆಯ ಕರುವೊಂದು ಬಾವಿಯ ಬಳಿಯಲ್ಲಿ ಮೇಯುತ್ತಿತ್ತು ಅದನ್ನು ಬಾವಿಯಲ್ಲಿ ನೂಕಿ ಬಂದೆ” ದೊಡ್ಡ ಕೆಲಸ ಸಾಧಿಸಿದವನಂತೆ ವೆಂಕು ಅಭಿಮಾನಪೂರ್ವಕವಾಗಿ ಹೇಳಿದಾಗ ಯಜಮಾನ ಹಣೆ ಹಣೆ ಬಡಿದುಕೊಂಡು ಕೆಲಸದಿಂದ ಕಿತ್ತು ಹಾಕಿದನಂತೆ.
ಇದು ಶತಶತಮಾನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದ ವೆಂಕು ಎಂಬ ಪೆದ್ದ ಅಥವಾ ಹುಂಬನ ಚಿತ್ರ
ಮಂಗಳೂರಿನಲ್ಲಿ – ‘ವೆಂಕು ಪಣಂಬೂರಿಗೆ’
ಉಡುಪಿಯಲ್ಲಿ – ‘ಕುಟ್ಟಿ ಕುಂದಾಪುರಕ್ಕೆ’
ಶಿರಸಿಯಲ್ಲಿ – ‘ಅಲೆಭಟ್ಟ ಸೋದೆಗೆ ಹೋದ’
ಹುಬ್ಬಳ್ಳಿಯಲ್ಲಿ – ‘ಸಿದ್ಧ ಕವಲೂರಿಗೆ ಹೋದ’
ಬೆಂಗಳೂರಿನಲ್ಲಿ – ‘ಹೋದ ಪುಟ್ಟ ಬಂದ ಪುಟ್ಟ’
ಮತ್ತೆ ಗುಜರಾತಿನಲ್ಲೂ ‘ಮಲ್ಯರು ಗಗೆ ಘೋಗೆ ಚಾಯ್ಕಿ ಆವ್ಕೊ’ ಎಂಬ ನಾಣ್ಣುಡಿಗಳಲ್ಲಿ ಜೀವಂತವಾಗಿದ್ದು ಎಲ್ಲ ಕಡೆಗಳಲ್ಲಿ ಚಿರಂಜೀವಿಯಾದ ಚಿರಪರಿಚಿತ ಜಾನಪದ ವ್ಯಕ್ತಿಯಾಗಿದ್ದು ಒಬ್ಬನೇ ಎಂದು ನನಗೆ ಮನದಟ್ಟಾಯಿತು. ಬೇರೆ ಬೇರೆ ಪ್ರದೇಶಗಳಲ್ಲಿ ಹೆಸರು ಬೇರೆ ಬೇರೆಯಾಗಿದ್ದರೂ ಕಲ್ಪನೆ ಒಂದೇ ಆಗಿತ್ತು.
ಅಂತೂ ಆತನ ಕುರಿತು ಅರಿಯಬೇಕೆಂದು ಪ್ರಯತ್ನಿಸಿದಾಗ ನನಗೆ ತೋರಿದುದು ಇಷ್ಟೇ : ಆತನು ಹುಂಬನೆಂಬುದು ಖಂಡಿತ ಆದರೆ ಆ ಹುಂಬತನದ ನಡುವಿನಲ್ಲೂ ಆತ ಪ್ರಾಮಾಣಿಕನಾಗಿದ್ದು ವಿಧೇಯನಾಗಿ ವರ್ತಿಸುತ್ತಿದ್ದ. ಇಲ್ಲವಾದರೆ ಯಜಮಾನ ಪಣಂಬೂರಿನ ಹೆಸರೆತ್ತಿದೊಡನೆ ಪಣಂಬೂರಿಗೆ ಓಡಿ ಹೋಗಿ ಹಿಮ್ಮರಳುತ್ತಿರಲಿಲ್ಲ. ಈ ಕೃತಿಯಲ್ಲಿ ವೆಂಕುವಿನ ಈ ಎರಡು ಸದ್ಗುಣಗಳನ್ನು ಭೂತಗನ್ನಡಿಯಲ್ಲಿ ಹಿಡಿದು ಚಿತ್ರಿಸಲೆತ್ನಿಸಿದ್ದೇನೆ.
ಪಡಪಣಂಬೂರಿನಲ್ಲಿ ಮೂಲ್ಕಿ ಸೀಮೆಯ ಅರಮನೆಯಿದೆ. ನನ್ನ ಚಿಕ್ಕಂದಿನಲ್ಲಿ ಅರಸರ ಕಂಬಳ ತುಂಬ ಹೆಸರುವಾಸಿಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಹರಿಕಥೆ, ಯಕ್ಷಗಾನ, ಕಂಬಳಗಳೇ ಇವೇ ಮೊದಲಾದ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ಒಂದೆರಡು ಶತಮಾನಗಳ ಹಿಂದಿನ ಜನಜೀವನವನ್ನು ಕಾಲ್ಪನಿವಾಗಿ ಚಿತ್ರಿಸಿ ವೆಂಕುವಿಗೆ ಐತಿಹಾಸಿಕ ವ್ಯಕ್ತಿಯ ಮೆರಗನ್ನು ಇತ್ತಿದ್ದೇನೆ.
ಆದರೆ ಈ ದಿಶೆಯಲ್ಲಿ ಪಣಂಬೂರಿನ ಅರಸನಿಗೆ ಸಂಬಂಧಿಸಿದ ಘಟನೆ ಮಾತ್ರ ಸಂಪೂರ್ಣವಾಗಿ ಕಾಲ್ಪನಿಕವಾಗಿದೆ. ಹಿಂದೆ ತುಳುನಾಡಿನಲ್ಲಿ ಅಳಿಯಕಟ್ಟು ಸಂಪ್ರದಾಯವಿತ್ತು. ಆದರೆ ಕಾಲ ಕಳೆದಂತೆ ಆ ಸಂಪ್ರದಾಯ ಮೆಲ್ಲಗೆ ಮಾಯವಾಗುತ್ತ ಬಂದರೂ ರೂಢಿಯಲ್ಲಿರುವ ಕಟ್ಟು ಕಟ್ಟಲೆಯೊಂದನ್ನು ಒಮ್ಮಿಂದೊಮ್ಮೆಗೆ ಕಿತ್ತು ಹಾಕಲು ಅರಸನಿಂದಲೂ ಅಸಾಧ್ಯ ಎಂಬುದನ್ನು ಸೂಚಿಸುತ್ತ ಕಥಾನಾಯಕನಾದ ವೆಂಕುವನ್ನು ಮತ್ತಷ್ಟು ಎತ್ತರಕ್ಕೆ ಏರಿಸಲು ಈ ಕಾಲ್ಪನಿಕ ಘಟನೆಯ ಮೂಲಕ ಪ್ರಯತ್ನಿಸಿದ್ದೇನೆ” ಎಂದು ಕಾದಂಬರಿಕಾರರು ತಮ್ಮ ಮುನ್ನುಡಿಯಲ್ಲಿ ಹೇಳುತ್ತಾರೆ.
ಈ ಕಾದಂಬರಿ ಜಾನಪದ ಕಥೆಯ ಮೊದಲ ಭಾಗವನ್ನು ಯಥಾವತ್ತಾಗಿ ತೆಗೆದುಕೊಂಡು ವೆಂಕುವಿನ ಪಣಂಬೂರು ಪಯಣದ ವಿಶಿಷ್ಟ ಅನುಭವಗಳನ್ನೂ, ಪಣಂಬೂರಿಗೆ ಹೋಗುವ ದಾರಿಯಲ್ಲಿ ಸಿಗುವ ಅನೇಕ ಊರುಗಳ ಭೌಗೋಲಿಕ ಪ್ರಾಕೃತಿಕ ಸೌಂದರ್ಯವನ್ನೂ ಅತ್ಯಂತ ಸೊಗಸಾಗಿ ಚಿತ್ರಿಸುತ್ತದೆ. ವೆಂಕುವಿನ ಪ್ರವಾಸದ ಅನುಭವಗಳನ್ನು ರೋಚಕವಾಗಿ ಚಿತ್ರಿಸಲಾಗಿವೆ. ಈ ಕಥೆಯು ಸುಮಾರು ಎರಡು ಶತಮಾನಗಳ ಹಿಂದಿನ ದಕ್ಷಿಣ ಕನ್ನಡ ಜಿಲ್ಲೆಯ ಭೌಗೋಲಿಕ ಪ್ರಾದೇಶಿಕ ಚಿತ್ರಗಳನ್ನು ಕೊಡುತ್ತದೆ. ಅಂದು ರಾಜ ರಸ್ತೆ ಎಂಬುದಿರದೆ, ಕಾಲು ಹಾದಿಯಂತಹ ದಾರಿಯಲ್ಲಿ ನಡೆದುಕೊಂಡು ಹೋಗಬೇಕಿತ್ತು. ಯಾವುದೇ ವಾಹನಗಳು ಇರದೆ ಜನರ ಸಂಚಾರ ಎತ್ತಿನ ಗಾಡಿಗಳಲ್ಲಿ ಆಗುತ್ತಿತ್ತು.
ಇಂದು ಗುಡ್ಡ ಬೆಟ್ಟಗಳನ್ನು ಕಡಿದು ಅಗಲ ರಸ್ತೆ ಮಾಡಲಾಗಿದೆ. ಇಂದಿನಂತೆ ದಾರಿ ಮಧ್ಯದಲ್ಲಿರುವ ನದಿಗಳನ್ನು ದಾಟಲು ಸೇತುವೆಗಳು ಇರಲಿಲ್ಲ. ದೋಣಿಗಳ ಮೂಲಕವೇ ದಾಟಬೇಕಿತ್ತು. ನಡುವೆ ಎದುರಾದ ಗುಡ್ಡ ಬೆಟ್ಟಗಳನ್ನು ದಾಟಿ ಒಂದೂರಿನಿಂದ ಇನ್ನೊಂದು ಊರಿಗೆ ನಡೆದುಕೊಂಡು ಹೋಗಬೇಕಿತ್ತು. ಮತ್ತೆ ನಡುವೆ ದಟ್ಟ ಕಾನನ ಹುಲಿ ಚಿರತೆಗಳಂತಹ ಕಾಡುಪ್ರಾಣಿಗಳ ಭಯ ಇವುಗಳಿಂದಾಗಿ ಪ್ರಯಾಣಿಕರಿಗೆ ಅವರ ಪ್ರಯಾಣ ತುಂಬ ತ್ರಾಸದಾಯಕವಾಗಿರುತ್ತಿತ್ತು.
ವೆಂಕು ತನ್ನೂರಾದ ಪುಟ್ಟ ಹಳ್ಳಿಯಾದ ಮುಕ್ಕಡಪ್ಪುನಿಂದ ಪ್ರಯಾಣವನ್ನು ಪ್ರಾರಂಭಿಸುತ್ರಾನೆ. ಊರ ದೇವಸ್ಥಾನದ ಅರ್ಚಕರಲ್ಲಿ ಪಣಂಬೂರಿಗೆ ಹೋಗುವ ದಾರಿಯ ಬಗ್ಗೆ ಕೇಳುತ್ತಾನೆ. ಅವರು ದಾರಿಯ ವಿವರವನ್ನು ಕೊಡುವುದು ಹೀಗೆ: “ಇಲ್ಲಿಂದ ನೇರವಾಗಿ ಗದ್ದೆಗಳ ಸಂಚಿನಲ್ಲಿ ಮುಂದೊತ್ತಬೇಕು. ಹತ್ತಿಪ್ಪತ್ತು ಗದ್ದೆಗಳನ್ನು ದಾಟಿದ ಮೇಲೆ ಕರಿಮರದ ಕಾಡು ಸಿಗುತ್ತದೆ. ಕಾಡು ಎಂದು ಹೆದರಬೇಕಿಲ್ಲ ಹುಲಿ, ಕರಡಿ ಯಾವುದೂ ಇಲ್ಲ. ಕಾಡು ದಾಟುತ್ತಲೇ ಕುಂಟಲ ಹಣ್ಣಿನ ಗಿಡಗಳಿರುವ ಇನ್ನೆರಡು ಗುಡ್ಡಗಳಿವೆ. ಅವನ್ನೇರಿ ಮತ್ತೆ ಕಾಲ್ದಾರಿಯಲ್ಲೇ ಮುಂದೆ ಸಾಗುವಾಗ ರಾಜ ಮಾರ್ಗವನ್ನು ಸೇರುವೆ. ರಾಜಮಾರ್ಗದಲ್ಲಿ ನೇರವಾಗಿ ಪಡು ದಿಕ್ಕಿಗೆ ಹೋಗುವಾಗ ಜಾರಿಗೆ ಕಟ್ಟೆ ಸಿಗುತ್ತದೆ. ಮೂರು ಮಾರ್ಗ ಸೇರುವಲ್ಲೇ ಇದ್ದು ಜಾರಿಗೆ ಕಟ್ಟೆ ಅಂದರೆ ಜಾರಿಗೆ ಮರ ಇರುವ ಒಂದು ಕಟ್ಟೆ ಹೊರತು ಬೇರೇನೂ ಅಲ್ಲ. ಅಲ್ಲಿಂದ ಪುನಃ ತೆಂಕಿಗೆ ಹೋಗುವಾಗ ಸಂಕಲಕರಿಯ ಸಿಗುತ್ತದೆ. ಸಂಕಲಕರಿಯದಿಂದ ಕಿನ್ನಿಗೋಳಿ, ಕಿನ್ನಿಗೋಳಿಯಿಂದ ತೋಕೂರು, ತೋಕೂರಿನಿಂದ ಪಣಂಬೂರು, ಅಲ್ಲಿಂದ ಹಳೆಯಂಗಡಿ ಮತ್ತು ಪಾವಂಜೆ, ಅಲ್ಲಿಂದ ಮತ್ತೆ ಸುರತ್ಕಲ್, ಸುರತ್ಕಲ್ಲಿನ ನಂತರ ಮತ್ತೆ ಸಿಗುವುದೇ ಪಣಂಬೂರು ದಾರಿಯಲ್ಲಿ ಸಂಕಲಕರಿಯ ಹಾಗೂ ಪಾವಂಜೆಯಲ್ಲಿ ಕಡವು ಇದ್ದು ದೋಣಿ ಇದೆ. ಯಾರನ್ನಾದರೂ ಕೇಳಿದರೆ ಹೇಳಿಯಾರು ಅದಿರಲಿ ಪಣಂಬೂರಿಗಾದರೂ ಏಕೆ ಹೊರಟಿರುವೆ ಮಾರಾಯ?” ಎಂದು ಅರ್ಚಕರು ಕೇಳುತ್ತಾರೆ.
“ಹೀಗೆಯೇ ಹೋಗುತ್ತಿದ್ದೇನೆ.” ಎಂದು ವೆಂಕು ಉತ್ತರಿಸುತ್ತಾನೆ ಯಾಕೆ ಹೋಗುತ್ತಿದ್ದೇನೆ ಎಂಬುದು ಅವನಿಗೂ ಗೊತ್ತಿರುವುದಿಲ್ಲ
ವೆಂಕುವಿನ ಪಯಣ ನಿಸರ್ಗದ ಸುಂದರವಾದ ಬಯಲು, ಗುಡ್ಡ ಬೆಟ್ಟ, ನದಿಗಳು, ಬೆಟ್ಟದಲ್ಲಿ ಸಿಗುವ ಕುಂಟಲು ಹಣ್ಣು, ಕರಂಡೆ ಹಣ್ಣುಗಳನ್ನು ತಿನ್ನುತ್ತ, ಕಾಲುವೆಯಲ್ಲಿ ಹರಿಯುವ ಶುದ್ಧ ನೀರನ್ನು ಕುಡಿಯುತ್ತ ಸಂಕಲಕರಿಯ ಕಿನ್ನಿಗೋಳಿಯನ್ನು ದಾಟಿ ತೋಕೂರಿಗೆ ಬರುತ್ತಾನೆ. ಅಲ್ಲಿನ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಕೈಮುಗಿದು ಅಲ್ಲಿ ಊಟವಿಲ್ಲ ಎಂದು ತಿಳಿದು ಅರ್ಚಕರು, ಅನತಿ ದೂರದಲ್ಲಿದ್ದ ಅಜ್ಜಿಯು ಗಂಜಿ ಊಟ ಕೊಡುವಳೆಂದು ತಿಳಿಸುತ್ತಾರೆ. ಆದರೆ ಅಜ್ಜಿಗೆ ಅಂದು ಜ್ವರ. ವೆಂಕುವೆ ಅವಳಿಗೆ ಗಂಜಿ ಬೇಯಿಸಿ ಹಾಕುತ್ತಾನೆ. ಅಲ್ಲಿಂದ ಮುಂದೆ ಹೋಗುವಾಗ ಅಜ್ಜಿ ತನ್ನ ಮಗಳು ಹಾಗೂ ಮೊಮ್ಮಗಳು ಪಣಂಬೂರಿನಲ್ಲಿದ್ದಾರೆ. ಅವರಿಗೆ ನಾನು ಕೊಡುವ ಈ ಹೊನ್ನಿನ ನಾಣ್ಯವನ್ನು ಕೊಡು ಎನ್ನುತ್ತಾಳೆ. ವೆಂಕು ಅವಳ ಆಶೀರ್ವಾದ ಪಡೆದು ಪಡಪಣಂಬೂರಿಗೆ ಹೋಗಿ ಅಲ್ಲಿದ್ದ ಅರಮನೆಯನ್ನು ನೋಡಲು ಹೋಗುತ್ತಾನೆ. ಅರಮನೆಯ ವರ್ಣನೆ ಮತ್ತು ದ್ವಾರಪಾಲಕರ ಕೆಂಪು ಸಮವಸ್ತ್ರದ ವರ್ಣನೆ ಇದೆ. ಅರಮನೆಯೊಳಗೆ ಹೋಗಲು ಸಾಧ್ಯವಾಗದೆ, ಅರಸು ಕಂಬಳವಿರುವುದರಿಂದ ಅರಮನೆಯೊಳಗೆ ಕಂಬಳವಾಗುವವರೆಗೆ ಹೋಗಲು ಸಾಧ್ಯವಿಲ್ಲ ಎಂದು ದ್ವಾರಪಾಲಕರು ಹೇಳುತ್ತಾರೆ ಸುಮಾರು ನೂರಕ್ಕಿಂತ ಹೆಚ್ಚು ಕೋಣಗಳ ಜೋಡಿಗಳು ಬಂದಿದ್ದವು. ಅವುಗಳಲ್ಲಿ ಐಕಳ ಗುತ್ತಿನ ಕಂಬಳ ಕೋಣದ ಜೊತೆ ಪ್ರಸಿದ್ಧ. ವೆಂಕು ಐಕಳ ಕಂಬಳದ ಕೋಣಗಳನ್ನು ಓಡಿಸಿ ನಿಶಾನೆಗೆ ನೀರು ರಟ್ಟುವಂತೆ ಮಾಡಿ ಐಕಳ ಗುತ್ತಿನ ಕೋಣ ಗೆಲ್ಲುತ್ತದೆ. ಅರಸರು ಐಕಳ ಗುತ್ತಿನಾರಿಗೆ ಚಿನ್ನದ ಹರುವಾಣದಲ್ಲಿ ವೀಳ್ಯವನ್ನು ಇಟ್ಟು ಶಾಲು ಹೊದಿಸಿ ಸನ್ಮಾನಿಸುತ್ತಾರೆ. ಗುತ್ತಿನಾರ ಶೆಟ್ಟರು ವೆಂಕುಗೆ ತಮ್ಮ ಕೈಬೆರಳಿನ ಉಂಗುರ ಕೊಟ್ಟು ಸನ್ಮಾನಿಸುತ್ತಾರೆ.
ಪಣಂಬೂರಿನಲ್ಲಿದ್ದ ಅಜ್ಜಿಯ ಮಗಳ ಮನೆ ನಂದಿಕೇಶ್ವರ ದೇಗುಲದ ಬಳಿ ಇತ್ತು. ಅಲ್ಲಿ ಹೋದಾಗ ಮಗಳು ಮತ್ತು ಅವಳ ಅಮ್ಮ ತುಂಬ ದುಃಖದ ಪರಿಸ್ಥಿತಿಯಲ್ಲಿದ್ದು, ಅವರ ಮನೆಯನ್ನು ಗಂಡ ಗಿರವಿ ಇಟ್ಟು ಸಾಲ ತೀರಿಸಲಾಗದೆ ಸಾಲಕೊಟ್ಟ ಶ್ರಿಮಂತನು ಅವರನ್ನು ಮನೆಯಿಂದ ಹೊರ ಹಾಕುವ ಯತ್ನದಲ್ಲಿದ್ದಾಗ ವೆಂಕು ಆ ಶ್ರೀಮಂತನಿಗೆ ಗುತ್ತಿನಾರ್ ಕೊಟ್ಟ ಒಂದು ಚಿನ್ನದ ನಾಣ್ಯವನ್ನು ಕೊಡುತ್ತಾನೆ ನಾಲ್ಕು ತಿಂಗಳೊಳಗೆ ಬಾಕಿ ಆರು ಚಿನ್ನದ ನಾಣ್ಯಗಳನ್ನು ಕೊಟ್ಟು ಮನೆ ಬಿಡಿಸಿಕೊಳ್ಳುತ್ತೇವೆ ಎಂದು ಹೇಳಿ ತಾಯಿ ಮಗಳ ಸಂಕಷ್ಟವನ್ನು ನಿವಾರಿಸುತ್ತಾನೆ.
ಊರ ಅರಸು ಅಳಿಯಕಟ್ಡು ಸಂಪ್ರದಾಯದಂತೆ ಅಳಿಯನಿಗೆ ಕೊಡಲಿಷ್ಟವಿಲ್ಲದೆ ಮಗನಿಗೆ ಪಟ್ಟ ಕಟ್ಟಬೇಕೆಂಬ ಹುನ್ನಾರ ಮಾಡಿ ಅಳಿಯ ಮನೆ ಬಿಟ್ಟು ಹೋಗುವಂತೆ ಮಾಡಿ, ಕಾಡಿನಲ್ಲಿದ್ದ ಒಂದು ಹಳೆ ಮನೆಯಲ್ಲಿ ತನ್ನ ಮೂರು ಸಹಾಯಕರೊಂದಿಗೆ ಮರೆಯಾಗಿದ್ದು, ಅವರ ಅಡಗು ತಾಣ ಅರಸನಿಗೆ ಗೊತ್ತಾಗಿ, ಆ ಮನೆಯನ್ನು ಸುಟ್ಟುಬಿಡಲು ಅರಸನು ಆದೇಶವಿತ್ತಾಗ ವೆಂಕು ಅಳಿಯನಿಗೆ ಪಾರಾಗಲು ಸಹಾಯ ಮಾಡುತ್ತಾನೆ. ಅಳಿಯ ವೆಂಕುಗೆ ಹನ್ನೊಂದು ಚಿನ್ನದ ನಾಣ್ಯಗಳನ್ನು ಕೊಟ್ಟು ಒಂದು ನಾಣ್ಯವನ್ನು ನಂದಿಕೇಶ್ವರ ದೇವಸ್ಥಾನಕ್ಕೆ ಕೊಡುವಂತೆ ಹೇಳಿ ಅವನಿಗೊಂದು ಖಡ್ಗವನ್ನು ಕೊಡುತ್ತಾನೆ.
ವೆಂಕು ಪಣಂಬೂರಿಗೆ ಹೋಗಿ ಗೌರಿ ಮತ್ತು ಶಾರದೆಯ ಮನೆಯನ್ನು ಸಾಲಗಾರರಿಂದ ಬಿಡಿಸಿ ದಾಖಲೆ ಪತ್ರವನ್ನು ಗೌರಿಯ ಕೈಯಲ್ಲಿಡುತ್ತಾನೆ ಮತ್ತು ಸುಂದರಿಯಾದ ಶಾರದೆಯನ್ನು ವಿವಾಹವಾಗುತ್ತಾನೆ. ಈ ಕಾದಂಬರಿಯಲ್ಲಿ ವೆಂಕುವಿನ ಪಾತ್ರ ಅತಿ ಎತ್ತರಕ್ಕೆ ಕೊಂಡೊಯ್ಯಲಾಗಿದೆ. ಸತ್ಯ ಧರ್ಮ, ಪ್ರಾಮಾಣಿಕತೆ ಹಾಗೂ ಕಷ್ಟದಲ್ಲಿರುವವರಿಗೆ ಉಪಕಾರ ಮಾಡುವ ಉದಾತ್ತ ಮೌಲ್ಯಗಳ ಸಂದೇಶ ಈ ಕಾದಂಬರಿಯಲ್ಲಿದೆ. ಪ್ರಾಣಿ ದಯೆ ಇನ್ನೊಂದು ಮೌಲ್ಯ. ದನಕರು, ಕೋಣ ಮತ್ತು ಎಮ್ಮೆಗಳು ತಮ್ಮ ಮನದ ಭಾವನೆಗಳನ್ನು ಹೇಳಿಕೊಳ್ಳಲು ಅವುಗಳಿಗೆ ಭಾಷೆ ಇಲ್ಲ. ನಾವು ಅವುಗಳನ್ನು ಬೆತ್ತದಿಂದ ಹೊಡೆದು ಬಡಿದು ಮಾಡುವುದು ಸರಿಯಲ್ಲ. ಅದು ಕ್ರೌರ್ಯ ಎಂದು ವೆಂಕು ಹೇಳುತ್ತಾನೆ. ಮನೋರಂಜನೆಗೆ ಕಂಬಳದ ನೆಪದಲ್ಲಿ ಕೋಣಗಳಿಗೆ ಹೊಡೆದು ಓಡಿಸುವುದು ಮಹಾಕ್ರೌರ್ಯ ಎನ್ನುತ್ತಾನೆ ವೆಂಕು.
ಅಂತಿಮವಾಗಿ ಕಾದಂಬರಿ ಸುಖಾಂತವಾಗುತ್ತದೆ. ಮಲ್ಯರ ಶೈಲಿ ಅತ್ಯಂತ ಆಕರ್ಷಕವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿ ಕಂಬಳ, ಯಕ್ಷಗಾನ, ಹರಿಕಥೆ ಕೃಷಿ, ಇವಿಷ್ಟಲ್ಲದೆ ಜಾನಪದ ವೀರ ಅಗೋಳಿ ಮಂಜಣ್ಣನ ಕುರಿತು ಪ್ರಸ್ತಾಪವೂ ಇದೆ. ಅಪೂರ್ವ ಕಾದಂಬರಿ ಇದು “ಎಂಕು ಪಣಂಬೂರಿಗೆ”.
ಉದಯಕುಮಾರ್ ಹಬ್ಬು
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನವರಾದ ಉದಯಕುಮಾರ್ ಹಬ್ಬು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರಿನ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕವನ, ಕಥೆ, ಕಾದಂಬರಿ, ವಿಮರ್ಶೆ, ವ್ಯಕ್ತಿತ್ವ ವಿಕಸನದ ಬಗ್ಗೆ ಕೃತಿಗಳು ಹೀಗೆ ಸಾಹಿತ್ಯದ ವಿವಿಧ ಮಜಲುಗಳಲ್ಲಿ ಕೃಷಿ ಮಾಡಿದವರು. ಬಸವಣ್ಣ, ಬುದ್ಧ ಬೌದ್ಧಧರ್ಮದ ಬಗ್ಗೆ, ಪ್ರಾಚೀನ ಭಾರತೀಯ ತತ್ವದರ್ಶನಗಳು ಈ ಬಗ್ಗೆಯೂ ಕೃತಿ ರಚನೆ ಮಾಡಿದ್ದಾರೆ. ನಾಥ ಪಂಥ- ಸಿದ್ಧಾಂತಗಳು ಮತ್ತು ಆಚರಣೆಗಳು ಇದು ಇವರ ಸಂಶೋಧನಾತ್ಮಕ ಗ್ರಂಥ. ಕಾಂತಾವರ ಕನ್ನಡ ಸಂಘದ ನಾ ಮೊಗಸಾಲೆ ಸಾಹಿತ್ಯ ಪುರಸ್ಕಾರ ಇವರ ಸಾಹಿತ್ಯ ಕೃಷಿಗೆ ಸಂದ ಗೌರವ.