ದಿನಕರ ದೇಸಾಯಿಯವರ ಬಳಿಕ ಚುಟುಕು ಸಾಹಿತ್ಯವನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡವರಲ್ಲಿ ಹಿರಿಯ ಕವಿ ಗೋಪಾಲಕೃಷ್ಣ ಶಗ್ರಿತ್ತಾಯರೂ ಒಬ್ಬರು. ‘ತೊದಲ್ನುಡಿ’, ‘ಕಂದನ ಕವನಗಳು’, ‘ನೂರೊಂದು ಚುಟುಕುಗಳು’, ’76 ಚುಟುಕುಗಳು’, ‘ಚುಟುಕು-ಗುಟುಕು’, ‘ಒಳ್ನುಡಿಗಳು’, ‘ಚಿಂತನ ಲಹರಿ’, ‘ಗಾಳಿಪಟ’, ‘ಚುಟುಕು ಲೋಕ’ ಮುಂತಾದ ಸಂಕಲನಗಳನ್ನು ಪರಿಶೀಲಿಸಿದರೆ ಕವಿಯ ಚೇತನವು ಕ್ರಮವಾಗಿ ವಿಕಾಸ ಹೊಂದುತ್ತಾ ಪ್ರಬುದ್ಧತೆ ಮತ್ತು ಸಾರ್ಥಕತೆಯ ಕಡೆ ಸಾಗಿರುವುದು ವ್ಯಕ್ತವಾಗುತ್ತದೆ.
‘ಚುಟುಕು ಲೋಕ’ ಸಂಕಲನದ ಮೊದಲ ನಲುವತ್ತು ಚುಟುಕಗಳು ಕವಿಯ ರಸಿಕತೆ, ಬೆರಗು ಮತ್ತು ಉತ್ಸಾಹಗಳ ಪ್ರತೀಕವಾಗಿದೆ. ನಯವಾದ, ನವಿರಾದ ಬಣ್ಣ ಬಣ್ಣದ ಭಾವನೆಗಳು ಸರಳ ಸವಿ ಮಾತುಗಳಲ್ಲಿ ಮೈದಾಳಿದರೂ ಆದರ್ಶ, ಭರವಸೆ, ಕಲ್ಪನೆಗಳಿಗೆ ವಿಮುಖವಾಗದೆ ವಾಸ್ತವ ಜಗತ್ತಿನ ಓರೆಕೋರೆಗಳನ್ನು ಗಮನಿಸುವ, ಅದರ ಬಗ್ಗೆ ಸಾತ್ವಿಕ ರೋಷವನ್ನು ತಳೆಯುವ ನಿಲುವು ಮುಖ್ಯವಾಗುತ್ತದೆ. ವಸ್ತುವಿನ ಆಯ್ಕೆಯಲ್ಲಿ ತಂದುಕೊಂಡ ವ್ಯಾಪಕತೆ, ಧೋರಣೆಯಲ್ಲಿ ಕಾಣಿಸಿಕೊಳ್ಳುವ ಸಾಮಾಜಿಕ ಕಾಳಜಿ, ವಿಡಂಬನೆಯ ತೀಕ್ಷ್ಣತೆ ಮತ್ತು ವಿನ್ಯಾಸದಲ್ಲಿ ಅಳವಡಿಸಿಕೊಂಡ ಮುಕ್ತಛಂದಸ್ಸುಗಳನ್ನು ಗಮನಿಸಿದರೆ ಅವರು ದಿನಕರ ದೇಸಾಯಿಯವರ ಪರಂಪರೆಯನ್ನು ಮುಂದುವರಿಸುವಂತೆ ಕಂಡರೂ ಹಲವು ರಚನೆಗಳು ತಮ್ಮದೇ ಆದ ಛಾಪೊತ್ತಿರುವುದನ್ನು ಅಲ್ಲಗೆಳೆಯುವಂತಿಲ್ಲ.
ಚೌಪದದ ಬ್ರಹ್ಮನನು ಮನದೊಳಗೆ ನೆನೆದು
ಚುಟುಕುಗಳ ಮಾಲೆಯೊಂದನು ನಾನು ಹೆಣೆದು
ಚುಟುಕುಪ್ರಿಯರ ಮುಂದೆ ಇಟ್ಟೆ ನಾನಿಂದು
ಗುಟುಕು ಗುಟುಕಾಗಿಯೇ ಸವಿಯಬೇಕೆಂದು
ಎಂಬ ಸಾಲುಗಳು ತಮ್ಮ ಕವಿತ್ವಕ್ಕೊದಗಿದ ಪ್ರಭಾವ ಪ್ರೇರಣೆಗಳನ್ನು ದಾಖಲಿಸಿದರೆ
ಆಗೊಮ್ಮೆ ಈಗೊಮ್ಮೆ ನಾ ಬರೆದೆ ಚುಟುಕು
ಸವಿ ಸವಿಯಬೇಕೆಂದು ಒಂದೊಂದು ಗುಟುಕು
ನಡುನಡುವೆ ಇಣುಕುತಿದೆ ಕೆಣಕಿನಾ ಕುಟುಕು
ಗಂಟುಕಳ್ಳರ ತಲೆಗೆ ಒಂದೊಂದು ಮೊಟಕು
ಎಂಬ ಸಾಲುಗಳು ಅವರ ಕಾವ್ಯಲಕ್ಷಣವನ್ನೂ ಉದ್ದೇಶವನ್ನೂ ಹೇಳುತ್ತದೆ. ಇವರ ಚುಟುಕಗಳಲ್ಲಿ ಹಳೆಯದರ ಬಗ್ಗೆ ಅವಜ್ಞೆಯಾಗಲಿ, ಹೊಸತರ ಬಗ್ಗೆ ವ್ಯಾಮೋಹವಾಗಲಿ ಇಲ್ಲ. ಆದರೆ ಸೌಂದರ್ಯ ಕಣ್ಣು ಮಿಟುಕಿಸುತ್ತಿದ್ದ ತಾಣಗಳಲ್ಲಿ ಮಡುಗಟ್ಟುತ್ತಿರುವ ಕೊಳಕು ಹುಳುಕುಗಳನ್ನು, ಅದರ ವಿಷ ಪರಿಣಾಮಗಳನ್ನು ಗುರುತಿಸುವ ಕಣ್ಣು ಇದೆ. ವ್ಯಕ್ತಿತ್ವದ ಆಳಗಳನ್ನೇ ಕಲಕುವ, ನಂಬಿಕೆ ಭರವಸೆಗಳನ್ನು ಬೂದಿಗೊಳಿಸಲು ಕಾರಣವಾದ ಕಟುವಾಸ್ತವಗಳನ್ನು ಬಯಲುಗೊಳಿಸುವ ಮನಸ್ಸು ಇದೆ. ಕಾಲದ ಜೊತೆಗೆ ಸ್ಪಂದಿಸುತ್ತಾ ರಾಷ್ಟ್ರಜೀವನದ ಏರುಪೇರುಗಳನ್ನು ಶಕ್ತವಾಗಿ ದಾಖಲಿಸುವ ದಿಟ್ಟತನವಿದೆ. ಯಾವನೇ ವ್ಯಕ್ತಿ ಹೊರಗೆ ಎಷ್ಟೇ ದೊಡ್ಡವನಾಗಿದ್ದರೂ ಒಳಗೊಳಗೆ ತೋರ್ಪಡಿಸುವ ಕ್ಷುದ್ರ ಕ್ಷುಲ್ಲಕತನಗಳನ್ನು ಮುಖಕ್ಕೆ ಹೊಡೆದಂತೆ ಹೇಳುವ ತಾಕತ್ತು ಇದೆ. ಬದುಕಿನ ಸುಂದರ ಕ್ಷಣಗಳ ಒಲವನ್ನು ಉಳಿಸಿಕೊಂಡು ಹೊಸ ಕಾಲದ ಅಗತ್ಯಗಳಿಗೆ ಮನತೆರೆದುಕೊಂಡು ಹೊಸ ದೃಷ್ಟಿಯನ್ನು ಮೇಳೈಸಿಕೊಂಡು ಪ್ರಚಲಿತ ಸಾಮಾಜಿಕ ರಾಜಕೀಯ ವಿದ್ಯಮಾನಗಳನ್ನು ಅನಾವರಣಗೊಳಿಸುವುದರೊಂದಿಗೆ ಸಮಾಜದ ವಿವಿಧ ರಂಗಗಳಲ್ಲಿ ತಲೆಯೆತ್ತಿದ ಭ್ರಷ್ಟಾಚಾರ, ನಿರಾಶೆ, ಅಪ್ರಾಮಾಣಿಕತೆ, ಸ್ವಾರ್ಥ, ಮೌಲ್ಯಗಳ ಅಧಪತನಗಳನ್ನು ವಸ್ತುವನ್ನಾಗಿ ಆಯ್ದುಕೊಂಡದ್ದರಿಂದ ಇವರ ಚುಟುಕಗಳು ವ್ಯಂಗ್ಯ ವಿಡಂಬನೆಗಳ ಮೊನೆಯನ್ನು ಹೊಂದುವುದು ಅನಿವಾರ್ಯವಾಗುತ್ತದೆ.
ಒಳನೋಟ-ಹೊರನೋಟಗಳಲ್ಲಿ ಮುಚ್ಚುಮರೆ, ನಿಗೂಢತೆ, ಸಂದಿಗ್ಧತೆ ಮತ್ತು ಕ್ಲಿಷ್ಟತೆಗಳನ್ನು ಬಿಟ್ಟುಕೊಟ್ಟು ಪರಸ್ಪರ ಮಾತನಾಡುವ ಶೈಲಿಯಲ್ಲೇ ವಿಚಾರಗಳನ್ನು ತೆರೆದಿಡುವ ಮೂಲಕ ಸರಳ ಅಭಿವ್ಯಕ್ತಿಯನ್ನೇ ಮುಖ್ಯವಾಗಿಟ್ಟುಕೊಂಡ 225 ಚುಟುಕುಗಳನ್ನು ವಸ್ತು-ದೃಷ್ಟಿಗಳ ನಿಟ್ಟಿನಿಂದ ನಿಸರ್ಗ, ಕುಟುಂಬ, ವ್ಯಕ್ತಿಗೌರವ, ವಿಡಂಬನೆ, ಚಿಂತನ, ವ್ಯಕ್ತಿ ವೈಶಿಷ್ಟ್ಯ, ಸಾಂದರ್ಭಿಕ, ಪ್ರಚಲಿತ ಎಂದು ಎಂಟು ಭಾಗಗಳಾಗಿ ವಿಂಗಡಿಸಬಹುದು.
ರವಿಕಿರಣ ಹೊಂಬಣ್ಣ ಉದಯದಲಿ ಸೊಬಗು
ಸಂಜೆಗತ್ತಲು ಅಸ್ತಮಾನದಾ ಬೆರಗು
ಬದುಕೆಂದರೆ ಅಷ್ಟೆ ಉದಯ ಸೂರ್ಯಾಸ್ತ
ನಿಯತಿಯನು ತನ್ನದಾಗಿಸುವ ಸತ್ಪಾತ್ರ
ನವೋದಯದವರಂತೆ ಕವಿಗೆ ಕೂಡ ನಿಸರ್ಗದ ಮೇಲೆ ಒಲವಿದ್ದರೂ ಪ್ರಕೃತಿಗೀತಗಳು ಬೆರಳೆಣಿಕೆಯಷ್ಟೇ ಇವೆ. ನಿಸರ್ಗದ ಸುಂದರ ವರ್ಣನೆಯಿದ್ದರೂ ಅದರ ಸಂಕೀರ್ಣತೆಯ ಅನುಭವವು ಚಿಂತನೆಯ ತೆಕ್ಕೆಯಲ್ಲಿ ಮೊಗದೋರುತ್ತದೆ. ‘ಅರ್ತಿಕಜೆ’, ‘ಶಂಪಾ ದೈತೋಟ’ ಮೊದಲಾದ ವ್ಯಕ್ತಿಪರವಾದ ಚುಟುಕುಗಳು ಆತ್ಮೀಯತೆಯ ಅರಿವಿನಿಂದ ಮೂರ್ತಗೊಳ್ಳುವ ವ್ಯಕ್ತಿ ಚಿತ್ರಗಳಾಗಿ ಮನದುಂಬಿ ನಿಲ್ಲುತ್ತವೆ.
ನನ್ನ ತಂದೆಗೆ ಆಗ ತೊಂಬತ್ತು ವರುಷ
ಅದೇ ನಯ ನಾಜೂಕು ಮನದಲ್ಲಿ ಹರುಷ
ಜೀವನೋತ್ಸಾಹದಲಿ ಮುನ್ನಡೆದ ರೀತಿ
ಕಂಡುಕೊಂಡೆನು ಬದುಕಿನಲಿ ಎಂಥ ಪ್ರೀತಿ
ಬಾಹ್ಯವರ್ಣನೆಗಳಿಗೆ ಸೀಮಿತವಾಗಿರುತ್ತಿದ್ದರೆ ಕೇವಲ ಚಿತ್ರಗ್ರಹಣವಾಗಬಹುದಿದ್ದ ಚುಟುಕು ಕೊನೆಯ ಸಾಲಿನ ಮೂಲಕ ಚಿಂತನೆಯ ಮಗ್ಗುಲಿಗೆ ಹೊರಳಿ ಧ್ವನಿಪೂರ್ಣ ಮುಕ್ತಾಯವನ್ನು ಪಡೆಯುತ್ತದೆ. ‘ನನ್ನಮ್ಮ’, ‘ರಾಗದಾಲಾಪ’, ‘ನನ್ನ ಮನೆ’, ‘ತಂಗಿಯ ಮಗಳು’, ‘ತಮ್ಮನ ಮಗ’ ಮುಂತಾದ ರಚನೆಗಳು ಸುಕುಮಾರವಾದ, ಆರ್ದ ಭಾವ, ಕೋಮಲವಾದ ರಸಸಿಂಚಿತ ಭಾಷೆಯಲ್ಲಿ ಅರಳಿದ ರೀತಿ ರಮ್ಯವಾಗಿದೆ. ಇವರ ಚುಟುಕಗಳು ಮನೋಹರ ವಾತಾವರಣವನ್ನು ಕಟ್ಟಿಕೊಟ್ಟು ನುಣ್ಣಗೆ ಜಾರಿಕೊಳ್ಳದೆ ಸಾಮಾಜಿಕ ಪರಿಸ್ಥಿತಿಯತ್ತ ಕೈಚಾಚಿಕೊಳ್ಳುವ ಮೂಲಕ ಹೊಸ ಆಯಾಮವನ್ನು ಪಡೆದುಕೊಳ್ಳುತ್ತದೆ. ಸಾಮಾಜಿಕ ರಾಜಕೀಯ ಬದುಕನ್ನು ಲೇವಡಿ ಮಾಡುತ್ತವೆ. ಜನರಿಂದ ಚುನಾಯಿತರಾದ ಪ್ರತಿನಿಧಿಗಳೇ ಜನರ ಹಿತಾಸಕ್ತಿಗಳಿಗೆ ಅಡ್ಡಿ ಆತಂಕಗಳನ್ನು ಉಂಟುಮಾಡಿ ಬದುಕನ್ನು ದುಸ್ತರಗೊಳಿಸುವ ವಿರೋಧಾಭಾಸವನ್ನು, ಅಧಿಕಾರಕ್ಕೋಸ್ಕರ ತತ್ವನಿಷ್ಠೆಗಳನ್ನು ಮರೆತು ಪಕ್ಷದಿಂದ ಪಕ್ಷಕ್ಕೆ ನೆಗೆಯುವವರನ್ನು ಕಟುವಾಗಿ ಟೀಕಿಸುತ್ತದೆ. ನವಿರು ಹಾಸ್ಯದಿಂದ, ಮಾತಿನ ಮೊನೆಯಿಂದ, ವಿಡಂಬನೆಯ ಹರಿತದಿಂದ, ಅಂತರಂಗದಿಂದ ಜಿನುಗಿ ಬರುವ ವಿಷಾದದ ದನಿಯಿಂದ ಮನಸೆಳೆಯುವ ಸಾಲುಗಳು ರಾಜಕಾರಣಿಗಳ ನಾಚಿಕೆಗೇಡಿತನವನ್ನು ಬಯಲು ಮಾಡುವ ಮೂಲಕ ರಾಜಕೀಯ ಬದುಕು ಎಂಥ ಹೊಲಸಿನ ಹೊಂಡವಾಗಿದೆ, ಅನೈತಿಕತೆಯನ್ನು ಪೋಷಿಸುತ್ತಾ ಹೇಗೆ ಅಧಪತನಕ್ಕಿಳಿದಿದೆ, ಆ ಮೂಲಕ ಮೌಲ್ಯಗಳು ಹೇಗೆ ಅಪಮೌಲ್ಯಗೊಂಡಿವೆ ಎಂಬುದನ್ನು ವಿವರಿಸುತ್ತದೆ. ಮರ್ಮಕ್ಕೆ ನಾಟುವಂಥ ಚುಟುಕಗಳು ಬದುಕಿಗೆ, ಅಸ್ತಿತ್ವಕ್ಕೆ ಸವಾಲಾಗಿ ಬಂದ ಸನ್ನಿವೇಶಗಳಿಗೆ ಕ್ರಿಯಾತ್ಮಕ ಪ್ರತಿಕ್ರಿಯೆಯನ್ನು ತೋರುತ್ತಾ ಇವುಗಳೆಲ್ಲವೂ ಬದುಕನ್ನು ಒಡೆಯುವ ಅಪಾಯಕ್ಕೆಡೆ ಕೊಡುವ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ.
ಲೋಕ ಕಂಟಕರ ಅಡ್ರೆಸ್ಸುಗಳು ಗೊತ್ತೇ
ಈಗಲೇ ಹೇಳುವೆನು ಬರಕೊಳ್ಳಿ ಮತ್ತೆ
ಅಬಕಾರಿ, ಲೋಕೋಪಯೋಗಿ, ಪೋಲೀಸು
ಗಂಟುಗಳ್ಳರ ಕಾರ್ಯ ಭಾರೀ ಸಲೀಸು
ಸಮಾಜದಲ್ಲಿ ಅಪಾತ್ರರಾದವರಿಗೆ ದೊರೆಯುವ ಮಹತ್ವ ಗೌರವಗಳು ಸತ್ಪಾತ್ರರಿಗೆ ದೊರಕುತ್ತಿಲ್ಲ. ಆದರೆ ಇಂಥವರ ವಿಜೃಂಭಣೆ ಬದುಕಿನ ಎಲ್ಲೆಂದರಲ್ಲಿ ಉಗ್ರವಾಗಿ ನಡೆಯುತ್ತಾ ಬಂದಿದೆ. ಸತ್ಪುರುಷರನ್ನು ಆದರಿಸದೆ, ದುರ್ಬಲರನ್ನು ಕಾಪಾಡದೆ ಆಮೂಲಾಗ್ರವಾಗಿ ಕಂಟಕವೃತ್ತಿಯನ್ನೇ ಮೆರೆಸುವ ಸ್ವಭಾವಚಿತ್ರಣ ಇಲ್ಲಿ ಸಮರ್ಥವಾಗಿ ನಿರೂಪಿತವಾಗಿದೆ. ‘ವಿದ್ಯ-ಲಾಯ’, ‘ನಮ್ಮ ಪಂಚಾಯತು’, ‘ಉಚಿತ ಶಿಕ್ಷಣ’, ‘ಪ್ರಶಸ್ತಿ ವ್ಯಾಮೋಹ’, ‘ಪೋಲೀಸು ವ್ಯವಹಾರ’, ‘ಮೊಣಕೈಗೆ ಬೆಲ್ಲ’, ‘ನಮ್ಮ ಶಾಸಕರು’, ‘ಪುಸ್ತಕದ ಬದನೇಕಾಯಿ’, ‘ಕೊಳವೆ ಬಾವಿ’, ‘ಮಂತ್ರಿ ಮಗ’ ಮುಂತಾದ ಚುಟುಕಗಳು ಸಮಾಜದಲ್ಲಿ ಹೊಗೆಯಾಡುತ್ತಿರುವ ಅನೀತಿ, ಅನಾಚಾರ, ಸುಳ್ಳು, ಕಪಟ, ಬೂಟಾಟಿಕೆ, ಡಾಂಬಿಕತೆಗಳನ್ನು ಅನಾವರಣಗೊಳಿಸುತ್ತವೆ. ಸತ್ಯಧರ್ಮ, ನೈಜನೀತಿ, ಜೀವನನಿಷ್ಠೆ, ಪ್ರಾಮಾಣಿಕತೆಯ ಮೌಲ್ಯಗಳನ್ನು ಅನುಸರಿಸಿ ಬದುಕುತ್ತಿರುವವರಿಗಿಂತಲೂ ದುರ್ಜನರಿಗೆ ದೊರಕುತ್ತಿರುವ ಪ್ರಾಶಸ್ತ್ಯವನ್ನು ವಿಡಂಬಿಸುತ್ತವೆ. ಈ ವಿಚಾರಗಳ ಹಿಂದೆ ಹುದುಗಿರುವ ‘ಮುಳ್ಳಾಗಬೇಡ ಹೂವಾಗು’ ಎಂಬ ಆಶಯವನ್ನು ಗಮನಿಸಿದರೆ ಕವಿಯ ಸಾಮಾಜಿಕ ಕಳಕಳಿ, ನೀತಿಬೋಧೆಯ ಸತ್ವ ಅರಿವಾಗುತ್ತದೆ.
ಸಮಕಾಲೀನ ಪ್ರಜ್ಞೆ, ಸಮಾಜವಿಮರ್ಶೆ, ಪರಿಸರ ಪ್ರಜ್ಞೆ, ಸಾಂಸ್ಕೃತಿಕ ಜಾಗೃತಿ, ಆದರ್ಶ, ಸಂದೇಶ, ಹಿತೋಪದೇಶಗಳು ಅಡಗಿರುವ ನಾಲ್ಕು ಸಾಲುಗಳಲ್ಲಿ ಅನುಭವದ ಸಹಜ ಸ್ಪಂದನವಿದೆ. ಚಿಂತನೆಯ ಹೊಳಹುಗಳ ಉಕ್ತಿಗಳಲ್ಲಿ ಅರ್ಥಪ್ರಪಂಚ ತೆರೆದುಕೊಳ್ಳುತ್ತದೆ. ಹೊಸ ಕಲ್ಪನೆ, ಸರಳತೆ, ಸ್ಪಷ್ಟತೆ, ಚಾಕಚಕ್ಯತೆಗಳು ಚುಟುಕು ಸಾಹಿತ್ಯಕ್ಕೆ ಹೊಸ ಆಯಾಮವನ್ನೊದಗಿಸುತ್ತವೆ. ಬದುಕಿನ ಬಗೆಗಿನ ಆರೋಗ್ಯಕರ ಚಿಕಿತ್ಸಕ ನಿಲುವನ್ನು, ಸಮಚಿತ್ತದ ತರಂಗಗಳನ್ನು ಬಿತ್ತರಿಸುತ್ತವೆ. ಬದುಕಿನ ಹಲವು ದ್ವಂದ್ವಗಳ, ಸಮಸ್ಯೆಗಳ, ಪರಿಹಾರಗಳ ನಡುವೆ ಧುತ್ತನೆ ನಿಲ್ಲುವ ಕರಾಳ ಸತ್ಯಗಳನ್ನು ಕುರಿತ ಚಿಂತನೆಯ ಹರಳುಗಳನ್ನು, ಜೀವನಪ್ರೀತಿಯನ್ನು, ಒಳಬಾಳಿನ ತೆರೆಗಳಲ್ಲಿ-ಎದೆಯಾಳದ ಕರೆಗಳಲ್ಲಿ ಹುದುಗಿರುವ ಸಂಕಟ, ಸಿಟ್ಟು, ಅಸಮಾಧಾನಗಳನ್ನು ಹೊರಹಾಕುತ್ತವೆ. ದಿನನಿತ್ಯದ ವಾಸ್ತವ ಬದುಕಿನ ವಿವರಗಳ ಮೂಲಕ ಹಾಯುತ್ತಾ ಜಿಜ್ಞಾಸೆಯ ಶಿಖರಕ್ಕೇರಿಸುವ, ಬದುಕಿನ ನಿಜಮುಖದ ಶೋಧನೆಯೆಡೆಗೆ ಕೊಂಡೊಯ್ಯುವ ಗಂಭೀರ ಪ್ರಯತ್ನವನ್ನು ಮಾಡುತ್ತವೆ. ಪದಪ್ರಯೋಗದ ಹಿಡಿತ, ಅರ್ಥಭಾವಗಳ ಮಿಡಿತದ ಮೂಲಕ ಓದುಗರಲ್ಲಿ ಉಲ್ಲಾಸವನ್ನು ಮಾತ್ರ ಉಂಟು ಮಾಡದೆ ಬದುಕಿನ ಕುರೂಪ ಮತ್ತು ಕ್ಷುದ್ರತೆಗಳ ಕುರಿತು ಚಿಂತಿಸಲು ಒತ್ತಾಯಿಸುತ್ತವೆ. ಬಂಧ ಸಡಿಲವಾಗದೆ, ಅರ್ಥ ಜಾಳಾಗದೆ, ಮಾತು ಅತಿಯಾಗದೆ ಮನಸ್ಸನ್ನು ಸೆರೆಹಿಡಿಯಬಲ್ಲ, ಗತಿ ಲಯ ಪ್ರಾಸಗಳ ಮೂಲಕ ಕಾವ್ಯದ ಅಂತರಂಗವನ್ನು ಹೋಗುವಂತೆ ಮಾಡುವ ರಚನೆಗಳು ಬದುಕಿನ ಸಂಘರ್ಷ, ಸಂಕೀರ್ಣತೆಗಳನ್ನು ಅಭಿವ್ಯಕ್ತಿಸುತ್ತವೆ. ಸಮಾಜವು ಎದುರಿಸುತ್ತಿರುವ ಭಾವನಾತ್ಮಕ ತಳಮಳಗಳನ್ನು ಸ್ಪರ್ಶಿಸುತ್ತವೆ. ಇಂದಿನ-ಹಿಂದಿನ ಕಾವ್ಯಪರಂಪರೆಯ ಪರಿಚಯ ಮತ್ತು ಸಂಸ್ಕಾರಗಳಿಂದ ಪಕ್ವಗೊಂಡ ಚೌಪದಿಗಳು ಸುತ್ತಲಿನ ಆಗುಹೋಗುಗಳಿಗೆ ಸ್ಪಂದಿಸುವ ಸೂಕ್ಷ್ಮ ಸಂವೇದನೆಯನ್ನು ಪಡೆದುಕೊಂಡಿವೆ. ಪ್ರಾಸಪ್ರೀತಿಗೊಲಿದರೂ ಸಂಪ್ರದಾಯವಾದಿಯಾಗದೆ ಆಧುನಿಕ ಸಮಸ್ಯೆಗಳಿಗೆ ದನಿಯಾಗುತ್ತವೆ. ಇಲ್ಲಿನ ಚುಟುಕಗಳು ಕನ್ನಡದಲ್ಲಿ ಈಗಾಗಲೇ ಆಗಿಹೋದ ವಿನ್ಯಾಸವನ್ನು ಹೊಂದಿದ್ದರೂ ಅವುಗಳು ಕವಿಯ ವಿಶೇಷ ಅನುಭವ ಮತ್ತು ಒಳನೋಟಗಳನ್ನು ಒಳಗೊಂಡಿದ್ದು ದೈವಭಕ್ತಿ, ಪ್ರಕೃತಿ ಪ್ರೇಮ, ತಂದೆತಾಯಿ-ಬಂಧುಬಳಗ, ಹಿರಿಯರಲ್ಲಿ, ಹಿರಿದಾದುದರಲ್ಲಿ ಗೌರವಾದರ, ಜೀವದಯೆ, ಜೀವನಿಷ್ಠೆಗಳನ್ನು ಪ್ರತಿಪಾದಿಸುತ್ತವೆ. ರಾಜಕಾರಣಿಗಳು-ಸೋಗಲಾಡಿಗಳ ಮೇಲೆ ವಿಡಂಬನೆಗಳ ಕಿಡಿ ಸಿಡಿಸುವಾಗಲೂ ವ್ಯಗ್ರವಾಗದ, ಅಸ್ವಸ್ಥಗೊಳ್ಳದ ಋಜುತ್ವ, ಆರೋಗ್ಯಕರವಾದ ಸಾಮಾಜಿಕ ಕಾಳಜಿ ಎದ್ದು ಕಾಣುತ್ತದೆ. ಸ್ಫಟಿಕದ ಶಲಾಕೆಯಂಥ ಭಾಷೆ, ಹಿತಮಿತ ಮಾತುಗಾರಿಕೆ, ತೀರ ಸಂಕೀರ್ಣವಲ್ಲದ ತೆಳುವೂ ಅಲ್ಲದ ಚಿಂತನೆಯ ಎಳೆಗಳ ಸುತ್ತ ಚುಟುಕಗಳು ಸುಂದರ ಪರಿವೇಶವನ್ನು ನಿರ್ಮಿಸಿವೆ. ವಾಸ್ತವ ಚಿತ್ರಣ, ವಿಚಾರಗಳ ಹಾಸುಬೀಸು, ಎಚ್ಚರದ ಭಾಷಾಪ್ರಯೋಗಗಳಿಂದಾಗಿ ‘ಚುಟುಕು ಲೋಕ’ವು ಉಜ್ವಲ ಕಾವ್ಯಶಕ್ತಿಗೆ ಉತ್ಕೃಷ್ಟ ನಿದರ್ಶನವಾಗುತ್ತದೆ.
ಪುಸ್ತಕದ ಹೆಸರು : ಚುಟುಕು ಲೋಕ (ಚುಟುಕಗಳ ಸಂಕಲನ)
ಲೇಖಕರು : ಎಸ್. ಗೋಪಾಲಕೃಷ್ಣ ಶಗ್ರಿತ್ತಾಯ
ಪ್ರಕಾಶಕರು : ಸಹಸ್ರ ಚಂದ್ರ ಪ್ರಕಾಶನ, ಕೊಕ್ಕಡ
ಪುಟಗಳು : 46
ಬೆಲೆ ರೂ : 80 ರೂಪಾಯಿಗಳು
ಡಾ. ಸುಭಾಷ್ ಪಟ್ಟಾಜೆ :
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.
ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
ಲೇಖಕ ಶ್ರೀಯುತ ಎಸ್.ಜಿ. ಶಗ್ರಿತ್ತಾಯರು ವೃತ್ತಿಯಲ್ಲಿ ಅಧ್ಯಾಪಕರಾಗಿ, ಬಾಲಯಕ್ಷಗಾನ ಮೇಳವನ್ನು ಕಟ್ಟಿ ರಾಜ್ಯದ ಗಮನವನ್ನು ಸೆಳೆದವರು. ತಾಳಮದ್ದಳೆಯಲ್ಲಿ ಅರ್ಥಧಾರಿಗಳಾಗಿ ಹೆಸರುಗಳಿಸಿ, ರಂಗನಟರಾಗಿ ಖ್ಯಾತಿವೆತ್ತವರು. ಕಾವ್ಯವಾಚನ, ಪ್ರವಚನಗಳಲ್ಲಿ ಪಳಗಿದ ಇವರು ರಚಿಸಿದ ಶಿಶುಗೀತೆಯೊಂದು ಬೊಳುವಾರು ಮಹಮ್ಮದ್ ಕುಂಞಯವರು ಸಂಪಾದಿಸಿದ ಶತಮಾನದ ಗೀತೆಗಳು ಸರಣಿಯ “ತಟ್ಟು ಚಪ್ಪಾಳೆ ಪುಟ್ಟ ಮಗು” ಕೃತಿಯಲ್ಲಿ ಸೇರ್ಪಡೆಗೊಂಡಿದೆ.