ವ್ಯಕ್ತಿ, ಕುಟುಂಬ ಮತ್ತು ಸಮುದಾಯಗಳ ಕತೆಯನ್ನು ಏಕಕಾಲಕ್ಕೆ ಹೇಳುತ್ತಾ ತನ್ನೆಲ್ಲ ಸಂಕೀರ್ಣತೆಯೊಂದಿಗೆ ಬಿಚ್ಚಿಕೊಳ್ಳುವ ‘ದೇವ’ ಕಾದಂಬರಿಯು ಶ್ರೀಮತಿ ಎ.ಪಿ. ಮಾಲತಿಯವರ ಅನನ್ಯ ರಚನೆಗಳಲ್ಲೊಂದು. ಕಥಾನಾಯಕನಾದ ದೇವನ ಚಿಂತೆ, ಚಿಂತನೆ ಮತ್ತು ಚಟುವಟಿಕೆಗಳು ಕಾದಂಬರಿಯ ಹೆಚ್ಚಿನ ಭಾಗವನ್ನು ಆವರಿಸಿಕೊಂಡಿದ್ದು ಅವನ ಸುತ್ತ ಜರಗುವ ವಿದ್ಯಮಾನಗಳು ಕೃತಿಯ ವಿನ್ಯಾಸವನ್ನು ರೂಪಿಸಿವೆ. ದೇವನ ಆದರ್ಶ, ಕನಸು, ಶೋಧ ಮತ್ತು ಪ್ರಗತಿಪರ ಚಟುವಟಿಕೆಗಳನ್ನು ದಾಖಲಿಸುತ್ತಾ ಅವನ ವ್ಯಕ್ತಿತ್ವದೊಳಗಿನ ವ್ಯಂಗ್ಯ ವೈರುಧ್ಯ ಮತ್ತು ನೈತಿಕ ಸಂಘರ್ಷಗಳನ್ನು ವಿವರಿಸುವ ಲೇಖಕಿಯ ಕಥನ ಕೌಶಲ ಗಮನ ಸೆಳೆಯುತ್ತದೆ.
ದೇವನ ಸಾಕು ತಂದೆ ಈಶ್ವರಯ್ಯನವರು ತಮ್ಮ ಬದುಕಿನ ಕೊನೆಯ ದಿನಗಳಂದು ಅವನ ಜನ್ಮರಹಸ್ಯವನ್ನು ತಿಳಿಸಿದ ಬಳಿಕ ಕಾದಂಬರಿಯು ಹೊಸ ತಿರುವನ್ನು ಪಡೆದುಕೊಳ್ಳುತ್ತದೆ. ತಾನು ಈಶ್ವರಯ್ಯ-ನಾಗಮ್ಮ ದಂಪತಿಗಳ ಮಗನಲ್ಲವೆಂದೂ, ದಲಿತ ಹೆಂಗಸಿನಿಂದ ಉಪೇಕ್ಷಿತನಾದ ತನ್ನನ್ನು ಅವರು ಸ್ವಂತ ಮಗನಂತೆ ಬೆಳೆಸುತ್ತಾ ಬಂದಿದ್ದರು ಎಂಬುದನ್ನು ತಿಳಿದು ಆಘಾತಗೊಂಡ ದೇವನು ತನ್ನ ಬದುಕಿನ ಸತ್ಯವನ್ನು ದಿಟ್ಟತನದಿಂದ ಸ್ವೀಕರಿಸಿದರೂ ಅದನ್ನು ಅರಗಿಸಿಕೊಳ್ಳಲು ವಿಫಲನಾಗುತ್ತಾನೆ. ಬೆಳೆಯುವ ಅಥವಾ ಬೆಳೆಸುವ ಕ್ರಮದಲ್ಲಿ ಅಸ್ಮಿತೆಯ ನಿರ್ಧಾರವಾಗುತ್ತದೆಯೇ ಹೊರತು ಹುಟ್ಟಿನಿಂದಲ್ಲ ಎಂಬಂತೆ ಜನ್ಮದಿಂದ ದಲಿತನಾಗಿದ್ದ ಮಗು ಕರ್ಮದಿಂದ ಬ್ರಾಹ್ಮಣನಾಗುತ್ತಾನೆ. ಅಂತ್ಯದಲ್ಲಿ ರಹಸ್ಯವನ್ನು ಸ್ಫೋಟಿಸಿ ಓದುಗರನ್ನು ಬೆಚ್ಚಿ ಬೀಳಿಸುವ ತಂತ್ರವನ್ನು ಬಿಟ್ಟುಕೊಟ್ಟ ಕೃತಿಯು ಸತ್ಯವನ್ನು ಮೊದಲೇ ನಿರೂಪಿಸಿ, ಅದನ್ನು ಒಪ್ಪಿಕೊಂಡೇ ದೇವನ ವರ್ತನೆ, ತಲ್ಲಣ ಮತ್ತು ಯಾತನೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಅವಕಾಶವನ್ನು ನೀಡುತ್ತದೆ. ಮನುಷ್ಯನ ಸಾಮಾಜಿಕ ವರ್ತನೆಯ ಮೂಲವೆಲ್ಲಿದೆ ? ಅವನ ವ್ಯಕ್ತಿತ್ವವನ್ನು ನಿರ್ಧರಿಸುವ ಅಂಶ ಯಾವುದು ? ಎಂಬ ಪ್ರಶ್ನೆಗಳ ಆಧಾರದಲ್ಲಿ ವ್ಯಕ್ತಿಯ ಬದುಕನ್ನು ಹೆಣೆಯುತ್ತದೆ.
ದೇವನ ಮನೆಯೊಳಗೇ ಇದ್ದು ಬೇರೆಬೇರೆ ಕಾರಣಗಳಿಗಾಗಿ ಅವನ ಆಚಾರ ವಿಚಾರಗಳನ್ನು ವಿರೋಧಿಸುವ ಸದಾನಂದ, ಶಶಿಧರ ಮುಂತಾದವರು ಅವನು ದಲಿತನೆಂಬ ವಿಚಾರವನ್ನು ಮುಂದಿಟ್ಟುಕೊಂಡು ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಈಶ್ವರಯ್ಯನವರ ಜಮೀನಿನಲ್ಲಿ ವಾಸಿಸುವ ದಲಿತರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಾರೆ. ಇದರಿಂದ ರೋಷಗೊಳ್ಳುವ ದೇವನು ಅವರ ವಿರುದ್ಧ ಸೆಟೆದು ನಿಲ್ಲುತ್ತಾನೆ. ಗಾಂಧೀವಾದಿಯಾಗಿದ್ದ ಈಶ್ವರಯ್ಯನವರ ಆದರ್ಶದ ಮುಂದುವರಿಕೆ ಎಂಬಂತೆ ದಲಿತಪರ ಕಾಳಜಿಯನ್ನಿಟ್ಟುಕೊಳ್ಳುತ್ತಾನೆ. ತನ್ನ ಚಟುವಟಿಕೆ, ಸಭೆ ಸಮಾರಂಭ, ಸಂಚಾರಗಳ ಮೂಲಕ ಅವರ ಬದುಕಿನ ಕ್ರಮಗಳನ್ನು ಗಮನಿಸುತ್ತಾನೆ. ಹುಟ್ಟಿನಿಂದ ದಲಿತನಾದುದರಿಂದ ಕುಟುಂಬದವರೊಂದಿಗೂ, ಬ್ರಾಹ್ಮಣನಾಗಿ ಬೆಳೆದುದರಿಂದ ದಲಿತರೊಂದಿಗೂ ಬೆರೆಯಲಾರದೆ ಪರಕೀಯನೆನಿಸಿಕೊಳ್ಳುತ್ತಾನೆ. ತಾನು ದಲಿತನಾಗಿರುವುದರಿಂದಲೇ ಇವರ ಕಡೆಗೆ ಸೆಳೆತ ಉಂಟಾಗಿದೆಯೇ ? ಆದ್ದರಿಂದಲೇ ಇವರನ್ನು ದೌರ್ಜನ್ಯದಿಂದ ಪಾರು ಮಾಡಲು ಯತ್ನಿಸುತ್ತಿದ್ದೇನೆಯೇ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಾಗದೆ ಒದ್ದಾಡುತ್ತಾ ಅಂತರ್ಮುಖಿಯಾಗುತ್ತಾನೆ. ಆ ಮೂಲಕ ದೇವನ ಮನಸ್ಸು ಮತ್ತು ಕುಟುಂಬದೊಳಗಿನ ಪ್ರಪಂಚವು ಹೊರಜಗತ್ತಿನ ಸೂಕ್ಷ್ಮ ರೂಪವಾಗಿ ಕಂಡುಬರುತ್ತದೆ.
ದೇವನ ವ್ಯಕ್ತಿತ್ವದ ವಿಘಟನೆಯನ್ನು ಮನೋವೇದಕವಾಗಿ ಚಿತ್ರಿಸುವ ಕಾದಂಬರಿಯು ಅವನ ವಿಕ್ಷಿಪ್ತತೆಗೆ ತರ್ಕಬದ್ಧ ಕಾರಣಗಳನ್ನು ಹುಡುಕುತ್ತದೆ. ಮೂಲತಃ ಅಸ್ತಿತ್ವದ ಸಮಸ್ಯೆಯಾಗಿರುವುದರಿಂದ ಅವನು ಅತೀವ ಸಂಕಟಕ್ಕೊಳಗಾಗುತ್ತಾನೆ. ಅವನೊಳಗಿನ ದಲಿತ ಮತ್ತು ಬ್ರಾಹ್ಮಣನ ನಡುವೆ ಸಂಘರ್ಷ ನಡೆಯುತ್ತದೆಯೇ ಹೊರತು ಸಮನ್ವಯವಲ್ಲ. ಇದೇ ಕೊರಗಿನಲ್ಲಿ ಅವನು ಗೃಹಸ್ಥ ಧರ್ಮದಿಂದ ಹಿಂದುಳಿದು ಸಾಂಸಾರಿಕ ಸೌಖ್ಯಕ್ಕೆ ಎರವಾಗುತ್ತಾನೆ. ಕೊನೆಗೆ ಅವನು ಸುನೀತಿಯೊಡನೆ ತನ್ನ ಜನ್ಮರಹಸ್ಯವನ್ನು ಹೇಳಿದಾಗ ಅವನ ಒಳಜೀವನದ ಅರಿವಿಲ್ಲದ ಆಕೆ ತನಗೆ ಸಾಂತ್ವನವನ್ನೀಯುವ ಬದಲು ಮಾನಸಿಕವಾಗಿ ದೂರವಾಗುತ್ತಿರುವುದನ್ನು ಕಂಡು ಒಂಟಿತನವನ್ನು ತಾಳಲಾರದೆ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಾನೆ. ವ್ಯಕ್ತಿಯು ತನ್ನ ಮೂಲ ಸಂಸ್ಕೃತಿಯನ್ನು ಕಳೆದುಕೊಂಡರೂ ಅದು ಅವನ ಅಂತರ್ಯದಲ್ಲಿ ಎಲ್ಲೋ ಉಳಿದುಕೊಂಡು ಚಿತ್ತಸ್ವಾಸ್ಥ್ಯವನ್ನು ಕದಡುತ್ತಿರುತ್ತದೆ. ಆ ಅನುಭವದಿಂದ ಅವನು ಪೂರ್ತಿಯಾಗಿ ಕಳಚಿಕೊಳ್ಳಲಾರ. ಯಾಕೆಂದರೆ ಅದರಿಂದ ದೊರಕಿದ ಮೌಲ್ಯಗಳು ಅವನಿಗೆ ಗ್ರಾಹ್ಯವೆನಿಸುತ್ತವೆ. ಮೂಲಸಂಸ್ಕೃತಿಗೂ ಮರಳಲಾರ. ಹೀಗಾಗಿ ಆತ್ಮಸಂಘರ್ಷಕ್ಕೊಳಗಾಗಬೇಕಾಗುತ್ತದೆ.
ಬ್ರಾಹ್ಮಣ ಸಮಾಜ ಮತ್ತು ದಲಿತ ಸಮುದಾಯಗಳನ್ನು ಏಕರೀತಿಯ ಶಿಲ್ಪವಾಗಿ ಕಡೆಯದ ಲೇಖಕಿಯು ದೇವನ ಕುಟುಂಬದೊಳಗಿನ ಭಿನ್ನ ನೆಲೆಗಳನ್ನು ಗುರುತಿಸಿರುವುದು ಅವರ ಸೂಕ್ಷ್ಮತೆಗೆ ನಿದರ್ಶನ. ನಾಗಮ್ಮ, ಸುನೀತಿ, ಸುಜಾತೆಯರ ನಡುವಿನ ವ್ಯತ್ಯಾಸಗಳು ಕೇವಲ ವ್ಯಕ್ತಿಗತ ಭಿನ್ನತೆಗಳಲ್ಲ. ಜನ್ಮರಹಸ್ಯವನ್ನು ಅರಿತ ಮೇಲೂ ಅವರಿಗೆ ದೇವನ ಮೇಲೆ ಪ್ರೀತಿಯಿರುತ್ತದೆ. ಆದರೆ ಬದುಕಿನ ಏರಿಳಿತಗಳು ಸಂಬಂಧಗಳನ್ನು ಎಷ್ಟು ವಕ್ರಗೊಳಿಸುತ್ತವೆ, ಸಾಮಾನ್ಯ ಘಟನೆಗಳು ತಿರುಚಿಕೊಂಡು ಜೀವನವನ್ನು ಹೇಗೆ ಹಾಳು ಮಾಡುತ್ತವೆ ಎಂಬುದನ್ನು ಇಲ್ಲಿನ ಹೆಂಗಸರ ಅನುಭವಗಳ ಮೂಲಕ ಅರ್ಥ ಮಾಡಿಕೊಳ್ಳಬಹುದು. ಬಾಂಧವ್ಯದ ಮೇಲೆ ನೆರಳೊಂದು ಹೇಗೆ ಬೀಳಬಹುದು ! ಜೀವ ಜೀವಗಳ ನಡುವೆ ಪ್ರೀತಿ ಇದ್ದಾಗಲೂ ಪರಸ್ಪರ ಅರ್ಥ ಮಾಡಿಕೊಂಡು ಬದುಕುವುದೆಷ್ಟು ಕಷ್ಟ ! ಎಷ್ಟು ಹತ್ತಿರವಿದ್ದರೂ ಎಷ್ಟು ದೂರ ! ಕೊನೆಗೆ ದೇವನು ತನ್ನ ವೈರಿಗಳ ಹಲ್ಲೆಯಿಂದ ಗಾಯಗೊಂಡಾಗ ನಾಗಮ್ಮ ಮತ್ತು ಸುನೀತಿಗೆ ಅವನ ಮೇಲಿದ್ದ ಅಸಮಾಧಾನವು ತೊಲಗಿ, ಪಶ್ಚಾತ್ತಾಪ ಪಡುತ್ತಾ ಅವನ ಬಳಿಗೆ ಬಂದು ಆರೈಕೆ ಮಾಡುತ್ತಾರೆ. ನಾಗಮ್ಮ ಮಂಚದ ಬದಿಯಲ್ಲಿ ಕುಳಿತು ದೇವನಿಗೆ ಹಾಲನ್ನ ತಿನ್ನಿಸುವಾಗ ಮಗನ ಮೇಲಿನ ಪ್ರೀತಿಗೆ ದೈವಿಕ ಸ್ಪರ್ಶ ಒದಗುತ್ತದೆ. ಜಾತಿ-ಮತವೆನ್ನದೆ ಅವನ ಸಹಾಯಕ್ಕೆ ಬರುವ ಊರಿನ ಜನರ ಪ್ರೀತಿ, ಸಹಾನುಭೂತಿಯ ನುಡಿಗಳನ್ನು ಕೇಳುತ್ತಾ ಅವನು ಅಂದುಕೊಳ್ಳುತ್ತಾನೆ- ಪರಿಶುದ್ಧ ವ್ಯಕ್ತಿತ್ವಕ್ಕೆ, ಪರೋಪಕಾರಿ ಜೀವಕ್ಕೆ, ನಿಸ್ವಾರ್ಥ ದುಡಿಮೆಗೆ ಎಣೆಯಿಲ್ಲದಷ್ಟು ಬೆಲೆ ! ಇದು ಅವನಲ್ಲಿ ಹುಟ್ಟಿದ ಹೊಸ ಅರಿವು. ದೂರವಾಗಿದ್ದ ಸಂಬಂಧಗಳು ಹತ್ತಿರವಾಗುತ್ತಿದ್ದಂತೆ ಬಿರುಕೊಡೆದ ಮನಸ್ಸು ಒಂದಾಗುತ್ತದೆ. ವಿಘಟನೆಗೊಂಡ ವ್ಯಕ್ತಿತ್ವ ಆಂತರಿಕ ತುಮುಲಗಳಿಂದ ಬಿಡುಗಡೆಗೊಂಡು ಪೂರ್ಣತೆಯನ್ನು ಪಡೆಯುತ್ತದೆ. ಎಲ್ಲರೂ ತಮ್ಮ ಮನಸ್ಸಿನ ಕಟ್ಟುಗಳನ್ನು ಹರಿದೊಗೆದು ಪ್ರೀತಿಯ ಬಂಧನದಲ್ಲಿ ಒಂದಾಗುತ್ತಾರೆ.
ಜಾತೀಯತೆಯನ್ನು ಮೀರಿ ಮಾನವೀಯತೆಯನ್ನು ಎತ್ತಿಹಿಡಿಯುವ ಕಾದಂಬರಿಯು ದೇವನ ತುಮುಲ, ಸಂಪ್ರದಾಯನಿಷ್ಠರ ತಿರಸ್ಕಾರ, ಸ್ವಾರ್ಥಲಾಲಸೆ, ಹಳ್ಳಿಯ ಬದುಕಿನ ಒಳಹೊರಗುಗಳನ್ನು ಅನಾವರಣಗೊಳಿಸುತ್ತದೆ. ದೇವನ ಕ್ರಿಯೆ-ಪ್ರತಿಕ್ರಿಯೆಗಳನ್ನು ಸಾಮಾಜಿಕ ಸಂದರ್ಭದಲ್ಲಿಟ್ಟು ನೋಡುತ್ತಾ ಅವನಿಗಿಂತ ತೀರಾ ಭಿನ್ನ ನೆಲೆಯ ಪಾತ್ರಗಳನ್ನೂ ಅಷ್ಟೇ ಸಂಕೀರ್ಣವಾಗಿ ಬಿಡಿಸುತ್ತದೆ. ಸಮಾಜದೊಳಗಿನ ಭಿನ್ನ ವ್ಯಕ್ತಿಗಳ ಮಾದರಿಯನ್ನು ಸೃಷ್ಟಿಸುತ್ತಾ ಸಾಮರಸ್ಯದ ಸಂದೇಶವನ್ನು ನೀಡುತ್ತದೆ. ಯಾವುದನ್ನೂ ವೈಭವೀಕರಿಸದೆ, ಹೀಗೆಳೆಯದೆ ಸಾಹಿತ್ಯಕ ಸಮತೋಲನವನ್ನು ಕಾಯ್ದುಕೊಳ್ಳುತ್ತಾ ಕೋಮಲವಾದ ಹೃದಯವಂತಿಕೆಯಲ್ಲಿ ತೊಯ್ದು ಹೋಗುತ್ತದೆ.
ಪುಸ್ತಕದ ಹೆಸರು : ದೇವ (ಕಾದಂಬರಿ)
ಲೇಖಕರು : ಎ.ಪಿ. ಮಾಲತಿ
ಪ್ರಕಾಶಕರು : ಕನ್ನಡ ಪ್ರಪಂಚ ಪ್ರಕಾಶನ, ಪುತ್ತೂರು
ಪುಟಗಳು : 121
ಬೆಲೆ ರೂ. : 22
ಡಾ. ಸುಭಾಷ್ ಪಟ್ಟಾಜೆ :
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.
ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
ಲೇಖಕಿ ಶ್ರೀಮತಿ ಎ.ಪಿ. ಮಾಲತಿ ಅವರು ಕಳೆದ ಆರು ದಶಕಗಳಿಂದ ಕನ್ನಡ ಸಾಹಿತ್ಯರಂಗದಲ್ಲಿ ಸಣ್ಣ ಕಥೆ, ಕಾದಂಬರಿ, ಜೀವನ ಚರಿತ್ರ, ವಿಚಾರ ಸಾಹಿತ್ಯ ಕೃತಿಗಳಿಂದ ಕ್ರಿಯಾಶೀಲರಾದವರು. ಅರ್ಧಾಂಗಿ, ಆಘಾತ, ಅನಿಶ್ಚಯ, ಅತೃಪ್ತೆ, ದೇವ, ತಿರುಗಿದ ಚಕ್ರ, ಮಂದಾರ, ಹಸಿರು ಚಿಗುರು, ಬದಲಾಗದವರು, ಕಾಡು ಕರೆಯಿತು, ವಕ್ರರೇಖೆ, ಅಲೋಕ ಮುಂತಾದ ಇಪ್ಪತ್ತು ಕಾದಂಬರಿಗಳು, ಸಂಜೆಬಿಸಿಲು ಮತ್ತು ವಸಂತದ ಹೂವುಗಳು – ಸಣ್ಣ ಕಥಾಸಂಕಲನ, ಸುಖದಹಾದಿ, ದಿವ್ಯಪಥ, ಸಂತೋಷದ ಹುಡುಕಾಟ, ಪರಿವರ್ತನೆಯ ಹಾದಿಯಲ್ಲಿ ಮಹಿಳೆ, ಮಕ್ಕಳ ಪಾಲನೆ ಮುಂತಾದ – ಒಂಬತ್ತು ಲೇಖನ ಪುಸ್ತಕಗಳು, ಕಾರುಣ್ಯನಿಧಿ ಶ್ರೀಮಾತಾ ಶ್ರೀ ಶಾರದಾ ದೇವಿ, ಅನನ್ಯ ಅನುವಾದಕ ಅಹೋಬಲ ಶಂಕರ ಜೀವನಚರಿತ್ರೆಗಳು, ‘ಕಾದಂಬರಿ ರಚನೆಯಲ್ಲಿ ಸ್ಟ್ರಕ್ಚರಲ್ ಮೆಥೆಡ್’ -ಡಿಪ್ಲೋಮಾ ಪ್ರಬಂಧ, ಅಂಜನ ಕಾದಂಬರಿ – ಸಂಸ್ಕೃತಕ್ಕೆ ಅನುವಾದ, ಸ್ಮೃತಿಯಾನ ಆತ್ಮಚರಿತ್ರೆ ಇವರ ಪ್ರಮುಖ ಕೃತಿಗಳು. ಹಲವಾರು ಸಣ್ಣ ಕಥೆಗಳು ಮಲೆಯಾಳಂ, ತೆಲುಗಿಗೆ ಅನುವಾದಗೊಂಡು, ರೇಡಿಯೋ ನಾಟಕವಾಗಿ ಪ್ರಸಾರವಾಗಿವೆ.
ಇವರ ಅನೇಕ ಕಥೆ ಕಾದಂಬರಿಗಳಿಗೆ ನಿಯತಕಾಲಿಕ ಪತ್ರಿಕೆಗಳು ಏರ್ಪಡಿಸಿದ ಸ್ಪರ್ಧೆಗಳಲ್ಲಿ ಬಹುಮಾನ ಲಭ್ಯವಾಗಿದೆ. ಇವರ ಸಾಹಿತ್ಯದಲ್ಲಿ ಸಾಮಾಜಿಕ ಕಳಕಳಿ, ಮನೋವೈಜ್ಞಾನಿಕ ಚಿಂತನೆ, ಮಾನವ ಪರ ಗ್ರಹಿಸುವ ಶಕ್ತಿ, ಕ್ರೌರ್ಯ, ಹತಾಶೆ ಸೋಲಿನಲ್ಲೂ ಉತ್ಸಾಹದ ಜೀವನ್ಮುಖಿ ಧೋರಣೆ, ಸ್ತ್ರೀ ಪರ ಕಾಳಜಿ ಎದ್ದು ಕಾಣುವ ಅಂಶಗಳು. ಇವರ ‘ಸುಖದ ಹಾದಿ’ ಚಿಂತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ, 2006ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿಯಿಂದ ಜೀವಮಾನದ ಸಾಹಿತ್ಯ ಸಾಧನೆಗೆ ಗೌರವ ಪ್ರಶಸ್ತಿ. ‘ನಿರಂಜನ ಪ್ರಶಸ್ತಿ’, ‘ಕಥಾರಂಗಂ ಪ್ರಶಸ್ತಿ’, ‘ಸೂರಿ ವೆಂಕಟರಮಣ ಶಾಸ್ತ್ರೀ ಕರ್ಕಿ ಪ್ರಶಸ್ತಿ’, ‘ಭಾರ್ಗವ ಪ್ರಶಸ್ತಿ’ ಇನ್ನೂ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದಾರೆ.