ಭಯವಿರಲು ಬಾಳಿಗದು ಭದ್ರತೆಯ ಸಂಕೇತ
ಜಯವ ಸಾಧಿಸುವಲ್ಲಿ ಊರುಗೋಲು
ನಯವಿನಯ ಭಕ್ತಿಯಲಿ ಮನವಿರಿಸುವಂಥವಗೆ
ಹಯವೇಗ ಯಶಕಿಹುದು ಧೀರ ತಮ್ಮ ll 180 ll
ಗೋಗೀತೆ, ಮುಕ್ತಕ ಸಂಕಲನಗಳು, ತುಷಾರ ಬಿಂದುಗಳ ಮೂಲಕ ಪರಿಚಿತರಾದ ಡಾ. ಸುರೇಶ ನೆಗಳಗುಳಿ ಅವರು ಈ ಧೀರತಮ್ಮನ ಕಬ್ಬ ಎಂಬ 222 ಮುಕ್ತಕಗಳ (2021) ಮೂಲಕ ಸದಾಚಾರ ಸಂಪನ್ನತೆಯ ಸ್ವರೂಪದರ್ಶನ ಮಾಡಿಕೊಟ್ಟಿದ್ದಾರೆ.
ಭಯವೆಂಬುದು ಹೇಡಿತನದ ಲಕ್ಷಣ ಎಂದು ಮಹಾಕವಿಗಳು ಕೂಡ ಹೇಳಿರುವಾಗ ಆ ಪದದ ಸಾಂಸ್ಕೃತಿಕ ಮುಖವನ್ನು ಮೇಲಿನ ಮುಕ್ತಕದಲ್ಲಿ ಪರಿಚಯಿಸುತ್ತ, ಭಯ ಭದ್ರತೆಯನ್ನು ನಿರ್ಮಿಸುತ್ತದೆ. ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತದೆ, ಜೊತೆಗೆ ನಯವಿನಯವನ್ನೂ ಬೆರೆಸಿಕೊಂಡರೆ ಯಶಸ್ಸಿನ ಹಾದಿ ಸುಗಮವಾಗಿಸುತ್ತದೆ ಎನ್ನುತ್ತಾರೆ. ಧೀರತಮ್ಮನ ಕಗ್ಗ ಕವಿಯ ತಾತ್ವಿಕ ನಿಲುವು, ವೃತ್ತಿ ಪ್ರವೃತ್ತಿಗಳು ಬೆರೆತ ಕವಿಯೊಬ್ಬನ ಅಂತರಂಗವನ್ನು ಪ್ರತಿನಿಧಿಸುತ್ತದೆ.
ನೆಗಳಗುಳಿ ಸಾವಿರಾರು ವಿದ್ಯಾರ್ಥಿವೈದ್ಯ ಶಿಷ್ಯರಿಗೆ ಮಾರ್ಗದರ್ಶಕನಾಗಿ, ಅಲೋಪತಿ ಮತ್ತು ಆಯುರ್ವೇದ ವೈದ್ಯ ಪದ್ಧತಿಗಳಲ್ಲಿ ಪ್ರಾವೀಣ್ಯ ಹೊಂದಿ ಅನೇಕ ರೋಗಿಗಳಿಗೆ ಆರೋಗ್ಯದ ಭಾಗ್ಯ ಹಂಚಿದವರು. ಅದಕ್ಕೇ ತಾನು ಕಲಿತ ಹಾಗೂ ಬಳಸಿದ ಎರಡೂ ಶುಶ್ರೂಷಾ ವಿಧಾನಗಳ ಮರ್ಮವನ್ನು ನಿರ್ಭಿಡೆಯಿಲ್ಲದೆ ಪ್ರತಿಪಾದಿಸುತ್ತಾರೆ :
ಆರೋಗ್ಯವುಳಿಸುವೆಡೆ ಸೂಕ್ತ ಭೇಷಜ ಮುಖ್ಯ
ಬೇರೆ ಬೇರಾದರೂ ಪದ್ಧತಿಗಳು
ಸಾರವತ್ತಾಗಿರುವ ಸೌಖ್ಯ ಸಂಪಾದನೆಗೆ
ಇರಲಿ ಪದ್ಧತಿ, ಮಿಶ್ರ ಧೀರ ತಮ್ಮ l 13 l
ಆರೋಗ್ಯ ಕಾಪಿಡುವುದಕ್ಕೆ ಅಗತ್ಯವಾದ ಜೀವನ ವಿಧಾನ, ಮಾನಸಿಕ ನೆಮ್ಮದಿಗೆ ಬೇಕಾಗಿರುವ ನಡತೆಗಳನ್ನು ಈ ಕವಿ ತನ್ನದೇ ಶೈಲಿಯಲ್ಲಿ ಪ್ರತಿಪಾದಿಸುತ್ತಾರೆ :
ಹರಣ ಉಳಿಸಲು ಶ್ರಮದಿ ದುಡಿವವನು ನಿಜವೈದ್ಯ
ಅರಿಯಂತೆ ಅವನಿಗೇತಕ್ಕೆ ಹೊಡೆಯುವಿರಿ
ಹಿರಿದಾದ ಕಾಯಿಲೆಯು ಔಷಧಿಗೆ ಬಗ್ಗದಿರೆ
ಸರಿಯೆ ವೈದ್ಯಗೆ ಶಿಕ್ಷೆ ಧೀರತಮ್ಮ l 34 l
ಮೂರು ಸ್ತಂಭಗಳ ಬಳಕೆ ಮಾಡಬೇಕನ್ನುತ್ತಾನೆ ಕವಿ. ಅವು ನಿದ್ರೆ, ತಿನಿಸು ಹಾಗೂ ಬ್ರಹ್ಮಚರ್ಯಗಳು. ಕರಿದ ವಸ್ತುಗಳನ್ನು ತಿನ್ನುತಿದ್ದರೆ ರಕ್ತದಲ್ಲಿ ಕೊಬ್ಬು ತುಂಬುತ್ತದೆ, ತೂಕ ಹೆಚ್ಚಿಸಬಲ್ಲ ಖಾದ್ಯಗಳನ್ನು ಹೊತ್ತುಗೊತ್ತಿಲ್ಲದೆ ತಿನ್ನುವುದು, ಅತಿಯಾಗಿ ಸಿಹಿಯ ಸೇವನೆಯೇ ಮುಂತಾದ್ದನ್ನು ಕವಿ ಟೀಕಿಸುತ್ತಾನೆ.
ಹಾಗೇ, “ಹದವಿರದ ಆಸೆಗೆ ಮಿತಿಯಿಲ್ಲ, ಅದನ್ನು ಗೆಲ್ಲುವುದು ಮುಖ್ಯ, ತೆವಲುಗಳ ನಿಯಂತ್ರಣ ಆಗಲೇಬೇಕು, ಸಂಸ್ಕಾರ ರಹಿತ ನೀಚತನ ಅಪಾಯಕಾರಿ, ನಡತೆ ಸರಿ ಇಲ್ಲದೆ ಸೋತಾಗ ದೇವರನ್ನೇಕೆ ಹಳಿಯುತ್ತೀರಿ, ಬಾಳ ಬಂಡಿಗೆ ನಂಬಿಕೆಯೇ ಹಳಿ, ಪರರ ನೆರವು ಬಯಸುವ ರೀತಿ ಮರದ ಬಂದಣಿಕೆಯಂತೆ ಎತ್ತರದಲ್ಲಿದ್ದೀತು ಅಷ್ಟೆ, ನೊಂದ ಮನಸ್ಸುಗಳಿಗೆ ಪ್ರೀತಿ ತುಂಬಿದ ಮಾತುಗಳಿಂದ ಶಕ್ತಿ ತುಂಬಬೇಕು. ಮುಂತಾದ ಸಲಹೆಗಳು ಮುಕ್ತಕಗಳಲ್ಲಿ ಇಡಿಕಿರಿದಿವೆ.
ಭಾವ ಚಿತ್ರವ ತೆಗೆದು ಜೋಪಾನವಾಗಿರಿಸಿ
ಯಾವುದೋ ಹೊಸ ಪುಳಕ ಪಡೆಯುವಂತೆ
ನೋವಿರದ ದಿನಮಾನ ನಲಿವಿನಂಗಳದಲ್ಲಿ
ಈವ ಚಣವದು ಸೊಗಸು ಧೀರ ತಮ್ಮ ll 152 ll
ಒಂದೊಂದೂ ಮುಕ್ತಕ ಹೀಗೆ ಪ್ರತ್ಯೇಕವಾಗಿ ಸೆಳೆಯುತ್ತವೆ. ಸಾವಿರಕ್ಕೂ ಮಿಕ್ಕು ಮುಕ್ತಕಗಳನ್ನು ಪ್ರಕಟಿಸಿರುವ ಡಾ. ನೆಗಳಗುಳಿ ಸ್ನೇಹಶೀಲರು. ನಗುನಗುತ್ತ ಮಾತನಾಡಿ ಹಗುರ ಆಗುವ ವ್ಯಕ್ತಿತ್ವದ ಮೂಲಕ ಗಂಭೀರ ಸಂದೇಶಗಳನ್ನು ಕೊಡುವ ತತ್ವಜ್ಞಾನಿಯೂ ಹೌದು.
ಪ್ರೊ. ಪಿ.ಎನ್. ಮೂಡಿತ್ತಾಯ
ಪ್ರೊ. ಪಿ.ಎನ್. ಮೂಡಿತ್ತಾಯ ಇವರು ಏಳು ವರ್ಷ ಆಕಾಶವಾಣಿ ಸಲಹೆಗಾರನಾಗಿಯೂ ಒಂದು ವರ್ಷ ತಲಚ್ಚೇರಿಸರಕಾರಿ ಕಾಲೇಜಿನ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿರುವ ಇವರು ‘ದೇವರ ಕ್ಷಮೆ ಕೋರಿ’, ‘ಕಾರ್ಟೂನು ಬರೆಹಗಳು’, ‘ಮಿಸ್ಕಾಲು’ ಹೀಗೆ ನಾಲ್ಕು ಲಲಿತ ಪ್ರಬಂಧಗಳ ಸಂಕಲನ, ‘ಗೋವು ಮತ್ತು ಸಾವಯವ ಬದುಕು’ ಹಾಗೂ ‘ಹಸಿರುವಾಣಿ’ ಎಂಬ ಎರಡು ಪ್ರಕೃತಿ ಪರಿಸರ ಕೃತಿಗಳನ್ನು ರಚಿಸಿದ್ದಾರೆ. ಗೋಪಕುಮಾರ್ ವಿ. ಇವರ ಜೊತೆ ಸೇರಿ ಕಾರಂತರ ‘ಚೋಮನ ದುಡಿ’, ‘ಮೂಕಜ್ಜಿಯ ಕನಸುಗಳು’ ಹಾಗೂ ‘ಒಡಿಯೂರಿಲೆ ಅವಧೂತನ್’ ಹೀಗೆ ಆರು ಕೃತಿಗಳನ್ನು ಕನ್ನಡದಿಂದ ಮಲಯಾಳಕ್ಕೆ, ‘ಜ್ಞಾನಪ್ಪಾನ’, ‘ಚಟ್ಟಂಬಿ ಸ್ವಾಮಿಗಳು’, ‘ವ್ಯಾಸ ಭಾರತದ ದ್ರೌಪದಿ’ ಇತ್ಯಾದಿ ಕೃತಿಗಳನ್ನು ಮಲಯಾಳದಿಂದ ಕನ್ನಡಕ್ಕೆ ಅನುವಾದಿಸಿದ ಖ್ಯಾತಿ ಇವರದ್ದು. ಕವನ ಸಂಕಲನ ‘ಬೇರೆ ಶಬ್ದಗಳಿಲ್ಲ’ ಎಂಬ ಸ್ವರಚಿತ ಕವನ ಸಂಕಲನ ಮತ್ತು ಓರೆಗೆರೆ ಬರಹ (ಕಾರ್ಟೂನ್) ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಲೇಖಕ ಡಾ. ಸುರೇಶ ನೆಗಳಗುಳಿ :
ಶ್ರೀ ತಿಮ್ಮಣ್ಣ ಭಟ್ಟ ಮತ್ತು ಶ್ರೀಮತಿ ಸಾವಿತ್ರಿಯವರ ಸುಪುತ್ರ. ವೈದ್ಯಾಧಿಕಾರಿ, ಪ್ರಾಧ್ಯಾಪಕ, ಪ್ರಾಂಶುಪಾಲ ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಇವರ ‘ತುಷಾರ ಬಿಂದು’ –ಕವನ ಸಂಕಲನ, ‘ಪಡುಗಡಲ ತೆರೆಮಿಂಚು’, ‘ನೆಗಳಗುಳಿ ಗಜಲ್ಸ್’, ‘ಕಡಲ ಹೂವು’, ‘ಕಡಲ ಹನಿ ಒಡಲ ಧ್ವನಿ’ ಮತ್ತು – ಗಜ್ಹಲ್ ಸಂಕಲನ, ‘ಗೋ ಗೀತೆ’, ‘ಕಾವ್ಯ ಭೋಜನ’ – ಚುಟುಕು ಸಂಕಲನ, ‘ಧೀರತಮ್ಮನ ಕಬ್ಬ’ – ಮುಕ್ತಕ ಲೇಖನಗಳು ಪ್ರಕಟವಾಗಿದೆ. ಇವರ ವೈದ್ಯಕೀಯ ಹಾಗೂ ಸಾಹಿತ್ಯ ಕೃಷಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.