ಆಧುನಿಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಹೊಸ ರೀತಿಯ ಬರವಣಿಗೆಗಳಿಂದ ಓದುಗ ವೃಂದಕ್ಕೆ ಚಿರಪರಿಚಿತರಾದ ಗಿರಿಮನೆ ಶ್ಯಾಮರಾವ್ ಇವರು ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕೌತುಕ ಹೊಂದಿದವರು. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿರುವ ಇವರು ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಮುಂತಾದ ಕ್ಷೇತ್ರಗಳಲ್ಲಿ 26ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ಗ್ರಾಮದವರಾದ ಇವರು ಗಿರಿಮನೆ ಪ್ರಕಾಶನದ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.
‘ದುಷ್ಕೃತ್ಯ’ ಎಂಬುದು ಗಿರಿಮನೆ ಶ್ಯಾಮರಾವ್ ಅವರ ಮನೋವೈಜ್ಞಾನಿಕ ಕಾದಂಬರಿ ಸರಣಿಯ ಮೂರನೇ ಕೃತಿಯಾಗಿದೆ. ಸಮಾಜದಲ್ಲಿ ಘಟಿಸುವ ಅಪರಾಧವು ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಗುವ ಸಾಧ್ಯತೆಗಳ ಕುರಿತು ಕಾದಂಬರಿ ಚರ್ಚಿಸುತ್ತದೆ. ಬಡತನವು ಎಲ್ಲಾ ಬಗೆಯ ಹಸಿವುಗಳಿಗೆ ಕಾರಣವಾಗುತ್ತದೆ. ಹಾಗೆಯೇ ಬಡತನದಿಂದ ಹುಟ್ಟುವ ಛಲ, ಉತ್ಸಾಹ ಹಾಗೂ ಪ್ರಾಮಾಣಿಕ ಪ್ರಯತ್ನ ಗೆಲುವಿನ ಹಾದಿಯ ಕಡೆಗೆ ಕರೆದೊಯ್ಯುತ್ತದೆ ಎಂಬುದಕ್ಕೆ ಪ್ರಸ್ತುತ ಕೃತಿಯಲ್ಲಿ ಬರುವ ಸುಚಲ ಮತ್ತು ಸುನೀತಾಳ ಪಾತ್ರಗಳು ಉದಾಹರಣೆಯಾಗಿದೆ. ಬಡತನದ ವಿಷವರ್ತುಲದ ಸುಳಿ ಸುಚಲಾ ಮತ್ತು ಅವಳ ಕುಟುಂಬವನ್ನು ಆವರಿಸಿದ್ದರೂ ಅದನ್ನು ಲೆಕ್ಕಿಸದೇ ದಿಟ್ಟತನದ ಹೆಜ್ಜೆ ಇಟ್ಟ ಸುಚಲಾ ಕೊನೆಗೂ ಉತ್ತಮ ಸಂಬಳ ದಕ್ಕುವ ಉದ್ಯೋಗವನ್ನು ಪಡೆಯುವುದರಲ್ಲಿ ಯಶಸ್ವಿಯಾಗುತ್ತಾಳೆ. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಆಕೆಯ ಭೂತಕಾಲವು ಅವಳ ವರ್ತಮಾನದ ಬದುಕಿನ ಮುಂದೆ ಸೋಲುತ್ತದೆ. ಊಹೆಗೂ ಮೀರಿದ ತಿಂಗಳ ವೇತನ, ಲಭಿಸಲಿರುವ ಭಡ್ತಿಯ ಕನಸು ಆಕೆಗೆ ಹೊಸ ಚೈತನ್ಯವನ್ನು ನೀಡುತ್ತದೆ. ತಂದೆಯಿಲ್ಲದ ಬದುಕಿನಲ್ಲಿ ತಾಯಿ ವಿದ್ಯಾವತಿಯೇ ತಂದೆಯಾಗಿ ತಮ್ಮನ್ನು ಬೆಳೆಸಿದ ಸಾರ್ಥ್ಯಕ್ಯದ ಭಾವ ಒದಗಿಸಬೇಕೆಂದು ಹವಣಿಸುವ ಸುಚಲಾ ಮತ್ತವಳ ತಂಗಿ ಸುನೀತಾಳ ಪಾತ್ರಗಳು ಜೀವಂತವಾಗಿ ಕಂಗೊಳಿಸುತ್ತದೆ.
ಬಿರುಗಾಳಿ ಎದ್ದ ಬಳಿಕ ಸಹಜ ಸ್ಥಿತಿಗೆ ಮರಳಿದ ಕಡಲಿನಲ್ಲಿ ಮತ್ತೊಮ್ಮೆ ಅನಿರೀಕ್ಷಿತವಾಗಿ ಏಳುವ ಬಿರುಗಾಳಿಯಿಂದಾಗಿ ಉಂಟಾಗುವ ಅನಾಹುತಗಳು ಕಲ್ಪನೆಗೂ ನಿಲುಕದ ಪರಿವರ್ತನೆಗಳಿಗೆ ನಾಂದಿಯಾಗುವಂತೆ ಸುಚಲಾಳ ಬದುಕಿನಲ್ಲೂ ವಿಧಿಯ ಬಿರುಗಾಳಿ ಕಷ್ಟಗಳನ್ನು ತಂದು ಕೊಡುತ್ತದೆ. ತನ್ನ ಮೊದಲ ಗಳಿಕೆಯಲ್ಲಿ ತಾಯಿ ಮತ್ತು ತಂಗಿಯ ಅಪೇಕ್ಷೆಗಳನ್ನು ಸಾಕಾರಗೊಳಿಸುವ ಮೂಲಕ ವೃತ್ತಿ ಬದುಕಿನ ಸಂತೃಪ್ತಿಯನ್ನು ಅನುಭವಿಸಲು ಬಯಸುವ ಸುಚಲಾಳ ನಡೆ ಒಂದೆಡೆಯಾದರೆ, ಸರಳ ಉಡುಗೆಯಲ್ಲೂ ಚೆಲುವೆಯಾಗಿ ಕಾಣುವ ಆಕೆಯಲ್ಲಿ ಸುಖ ಕಾಣ ಬಯಸುವ ಉದ್ದೇಶದಿಂದ ಕುತಂತ್ರ ರೂಪಿಸುವ ಕಾಮುಕರ ನಡೆ ಕೃತಿಯ ಉತ್ತರಾರ್ಧದಲ್ಲಿ ಕವಲೊಡೆಯಬಹುದಾದ ಪಲ್ಲಟಗಳನ್ನು ಬಿಂಬಿಸುತ್ತದೆ. ಮನೆಯಿಂದ ದೂರದಲ್ಲಿರುವ ಸುಚಲಾಳ ಕರ್ಮಭೂಮಿ ಅವಳ ಆಶಾ ಗೋಪುರವನ್ನು ಕೆಡವಲು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕಾರಣವಾಗುವುದು ಅಭಿವೃದ್ಧಿ ತರಬಹುದಾದ ಅಪಾಯಗಳನ್ನು ಸೂಚಿಸುತ್ತದೆ. ತನ್ನ ಮನೆಯ ಗಲ್ಲಿಗಳಲ್ಲೇ ಓಡಾಡುವ ಲಂಪಟತನ ಮನವರಿಕೆಯಾಗುವುದರೊಳಗೆ ವಿಕೃತ ಕಾಮಿಗಳಾದ ಬಳ, ಭಾಷಾ, ರಶೀದ್ ಮತ್ತು ವೇಲುವಿನ ಬಲಾತ್ಕಾರಕ್ಕೆ ಬಲಿಯಾಗಿ ದಾರುಣ ಅಂತ್ಯ ಕಾಣುವ ಸುಚಲಾಳ ಪರಿಸ್ಥಿತಿ ಹೃದಯ ವಿದ್ರಾವಕವಾಗಿದೆ. ಮೊದಲ ವೇತನದಿಂದ ತನ್ನ ತಾಯಿ ಮತ್ತು ತಂಗಿಗೆ ಉಡುಗೊರೆಗಳ್ನು ಒಯ್ಯುವ ಸುಚಲಾಳ ಬಹುದಿನಗಳ ಕನಸು ಕಾಮುಕರ ಕೈಗಳಲ್ಲಿ ಕಮರಿ ಹೋಗುವುದರೊಂದಿಗೆ ಆಕೆಯ ಆರ್ತನಾದ ಓದುಗರ ಕಿವಿಯಲ್ಲಿ ಪ್ರತಿಧ್ವನಿಸುತ್ತದೆ.
ಸುಚಲಾಳ ಮರಣದ ನಂತರ ಭಾವಜೀವಿಯೂ, ಹಿಂಜರಿಕೆಯ ಸ್ವಭಾವದವಳೂ ಆದ ಸುನೀತಾಳ ಮನಸ್ಸು ಬದಲಾಗುವುದಲ್ಲದೇ ಅಕ್ಕನ ದಿಟ್ಟತನವನ್ನು ತನ್ನೊಳಗೆ ವಿಸ್ತರಿಸಿಕೊಳ್ಳುವ ರೀತಿಯು ತನ್ನ ತಂಗಿಯ ಮೂಲಕ ಸುಚಲಾ ಜೀವಂತವಾಗಿ ಉಳಿದಿರುವ ಭಾವವನ್ನು ಮೂಡಿಸುತ್ತದೆ. ಅಕ್ಕನ ಮೇಲಿನ ಅತ್ಯಾಚಾರ ಮತ್ತು ಮರಣಕ್ಕೆ ಕಾರಣರಾದ ಆರೋಪಿಗಳನ್ನು ಕಾನೂನಿನ ವ್ಯಾಪ್ತಿಗೆ ತರುವ ಮೂಲಕ ಸುನೀತಾಳ ದಿಟ್ಟತನದ ಹೆಜ್ಜೆಗಳಿಗೆ ಜೊತೆ ನೀಡುವಂತೆ ಓಡಾಡುವ ಆರಕ್ಷಕ ಇಲಾಖೆಯ ಅಧಿಕಾರಿಗಳಾದ ದೇವದತ್ ಮತ್ತು ಸುಂದರಂ ಇವರುಗಳ ಸಹಕಾರ ಸುನೀತಾಳ ವ್ಯಕ್ತಿತ್ವವನ್ನು ವಿಸ್ತರಿಸಲು
ನೆರವಾಗುತ್ತದೆ. ಇದು ಕಾದಂಬರಿಯ ತಿರುವಿಗೆ ಕಾರಣವಾಗುತ್ತದೆ.
ಈ ಜ್ವಲಂತ ವಿದ್ಯಮಾನಗಳ ನಡುವೆ ತಲೆ ಹಾಕುವ ರಾಜಕಾರಣಿ ಶುಭರತ್ನಂ, ಇತರರ ಸಂಕಷ್ಟಗಳನ್ನು ನಿರ್ಲಕ್ಷ್ಯದಿಂದ ಕಾಣುತ್ತಾ ವೃತ್ತಿ ನಿಯಮಕ್ಕೆ ಎರಡು ಬಗೆಯುವ ಎ.ಎಸ್.ಐ. ಪ್ರದೀಪ್ ಈಗಿನ ಸಮಾಜದಲ್ಲಿ ಜೀವಂತವಾಗಿರುವ ಭ್ರಷ್ಟಾಚಾರ, ಅನೈತಿಕತೆಯನ್ನು ಪೋಷಿಸುವ ಪಾತ್ರಗಳಾಗಿ ಕಂಡು ಬರುತ್ತದೆ. ಸುಚಲಾಳ ಸಾವಿನೊಂದಿಗೆ ನೇರ ಸಂಪರ್ಕ ಹೊಂದಿದ ಶುಭರತ್ನಂ ತನ್ನ ಮಗನನ್ನು ಆರೋಪದಿಂದ ವಿಮುಖಗೊಳಿಸುವ ಹಿನ್ನಲೆಯಲ್ಲಿ ಕೈಗೊಳ್ಳುವ ಪ್ರಯತ್ನಗಳು ಒಂದು ಹಂತದವರೆಗೆ ಯಶಸ್ಸು ಕಾಣುವ ಬಗೆಯು ಒಳಿತಿನ ಪಕ್ಷದವರಲ್ಲಿ ಛಲವನ್ನು ಹುಟ್ಟಿಸಿ, ಕ್ರಾಂತಿಕಾರಿ ಬದಲಾವಣೆಗಳಿಗೆ ಕಾರಣವಾಗುವ ಅಂಶವಾಗಿ ಕಂಡು ಬರುತ್ತದೆ. ಕಾನೂನು, ಶಿಕ್ಷೆ, ನೀತಿ ಮತ್ತು ನಿಯಮಾವಳಿಗಳು ಆರೋಪಗಳನ್ನು ಶಿಕ್ಷಿಸದೆ ಸರಿದು ನಿಂತಾಗ ದೇವದತ್ ಮತ್ತು ಸುಂದರಂ ಕೈಗೊಳ್ಳುವ ನಿರ್ಧಾರ ಗತಿಸಿದ ಸುಚಲಾಳಿಗೆ ನ್ಯಾಯ ದೊರಕಿಸುವಂತದ್ದು. ಕನಸನ್ನು ಸಾಕಾರಗೊಳಿಸುವ ಮೂಲಕ ಬದುಕಿನ ಸಾರ್ಥಕತೆ ಕಾಣಲು ಹವಣಿಸಿ, ಆ ನೆಲೆಯಲ್ಲಿ ಹೆಜ್ಜೆ ಊರುತ್ತಿರುವಾಗಲೇ ಅಸುನೀಗಿದ ಸುಚಲಾ ನ್ಯಾಯವಂಚಿತಳಾಗುವುದನ್ನು ಬಯಸದ ಸುಂದರಂ ಮತ್ತು ದೇವದತ್ ಆರೋಪಿಗಳ ವಿಚಾರದಲ್ಲಿ ಕೈಗೊಳ್ಳುವ ತೀರ್ಪು ಮಾನವ ಹಕ್ಕುಗಳ ಉಲ್ಲಂಘನೆಯಂತೆ ಕಂಡು ಬಂದರೂ ಹೆಣ್ಣಿನ ಜೀವಕ್ಕೆ ದಾರುಣ ಮರಣ ತಂದವರ ಬದುಕು ಅದೇ ತೆರನಾಗಿ ಅಂತ್ಯ ಕಾಣುವಂತೆ ಮಾಡಿದ್ದರಲ್ಲಿ ಅತಿಶಯೋಕ್ತಿಯಿಲ್ಲ. ಆರೋಪಿಗಳ ನಕಲಿ ಎನ್ಕೌಂಟರ್ ನಂತರ ಸುಚಲಾ ಪ್ರಕರಣ ಮುಕ್ತಾಯಗೊಂಡು ಆಕೆಯ ಕುಟುಂಬ ಸಹಜ ಸ್ಥಿತಿಗೆ ಮರಳುವಂತೆ ಕಂಡು ಬಂದರೂ ಕುಟುಂಬದ ಸದಸ್ಯರ ಪಾಲಿಗೆ ಮಾಸದ ಗಾಯವಾಗಿ ಉಳಿದುಕೊಳ್ಳುತ್ತದೆ. ಸಮಾಜದಲ್ಲಿ ಕಾಣಿಸಿಕೊಳ್ಳುವ ಕ್ರೌರ್ಯದ ಬೇರಿನ ಆಳ ಎಷ್ಟಿರಬಹುದು ಎಂಬುದನ್ನು ಆಲೋಚಿಸುವಂತೆ ಮಾಡುತ್ತದೆ. ಪರಿಸ್ಥಿತಿಯನ್ನು ತಿಳಿಯಾಗಿಸುವಲ್ಲಿ ಸುನೀತಾ ಮತ್ತು ಆಕೆಯ ತಾಯಿಗೆ ನೆರವು ನೀಡುತ್ತಾ ಬಂದ ಎಸ್.ಪಿ ಸುಂದರಂ ಅವರು ಸುನೀತಾಳನ್ನು ತಮ್ಮ ಮಗನಿಗೆ ತಂದುಕೊಳ್ಳುವ ಮೂಲಕ ಆಕೆಯನ್ನು ಮನೆ ಬೆಳಗುವ ದೀಪವನ್ನಾಗಿ ಆರಿಸಿಕೊಳ್ಳುವ ಬಗೆ ಸಮಾಜದಲ್ಲಿ ಉಳಿದಿರುವ ಮಾನವೀಯತೆಯನ್ನು ಪ್ರತಿಫಲಿಸುತ್ತದೆ. ಸುಚಲಾಳ ಮರಣಾನಂತರ ಬದಲಾಗಲು ಬಯಸುವ ಸುನೀತಾ ತನ್ನೊಳಗಿನ ಮುಗ್ಧತೆಯನ್ನು ಕಳೆದುಕೊಂಡು ದಿಟ್ಟೆಯಾಗಿ ಬೆಳೆಯುವ ಪ್ರಕ್ರಿಯೆಯು ಬದುಕಿಗೆ ಹೊಸ ಅರ್ಥವನ್ನು ನೀಡುತ್ತದೆ.
ಹುಟ್ಟಿನಲ್ಲಿ ಯಾರೂ ಸಬಲರಾಗಲಿ ದುರ್ಬಲರಾಗಲಿ ಆಗಿರುವುದಿಲ್ಲ ಎಂಬ ತತ್ವದ ಎಳೆಯನ್ನು ಇಟ್ಟುಕೊಂಡು ಮೈವೆಡೆದ ಕೃತಿಯು ತನ್ನ ಪ್ರತಿಯೊಂದು ಮಗ್ಗುಲಲ್ಲಿಯೂ ಏಳ್ಗೆಯ ಬಗೆಯನ್ನು ಹೊತ್ತು ಸಾಗುತ್ತದೆ. ಕೃತಿಯ ಕೇಂದ್ರ ಬಿಂದುವಾಗಿ ಕಾಣಿಸಿಕೊಂಡ ಸುಚಲಾ ಮತ್ತು ಸುನೀತಾ ಕೇವಲ ಪಾತ್ರಗಳಷ್ಟೇ ಆಗಿರದೇ ದಿನನಿತ್ಯದ ಬದುಕಿನಲ್ಲಿ ಕಾಣಿಸಿಕೊಳ್ಳುವ ಜೀವಂತ ಚರ್ಯೆಗಳಾಗಿವೆ. ನೋವು, ನಿರಾಸೆ, ಕಷ್ಟ, ಕಂಬನಿಗಳು ವ್ಯಕ್ತಿಗಳ ಗುರಿಯನ್ನು ದೃಢಗೊಳಿಸಿ ಆ ಮೂಲಕ ಅವರನ್ನು ಬೆಳೆಸಲು ಕಾರಣವಾಗುವಂತೆ ಕಾಲಾನಂತರದಲ್ಲಿ ಈರ್ಷ್ಯೆ, ಅನೈತಿಕತೆ, ವ್ಯಾಮೋಹದ ಪರಮಾವಧಿಯಲ್ಲಿ ಬೆಳವಣೆಗೆಗಳನ್ನು ಅಕಾಲದಲ್ಲಿ ಮುರುಟಿಸುವ ರೀತಿಯನ್ನು ಬಿಂಬಿಸುವುದರೊಂದಿಗೆ, ಸಮಾಜದಲ್ಲಿ ನಡೆಯುವ ದಾರುಣ ಘಟನೆಗಳು ಮತ್ತು ಅವುಗಳಿಗೆ ಕಾರಣರಾದವರ ಕಡೆಗೂ ಬೆಳಕು ಚೆಲ್ಲಿ ಇದೆಲ್ಲವೂ ಅವರು ಬೆಳೆದು ಬಂದ ರೀತಿಯಿಂದ ಪ್ರೇರಣೆಗೊಂಡಿವೆ ಎಂಬ ಕಹಿಸತ್ಯವನ್ನು ಓದುಗರ ಮುಂದಿಡುತ್ತದೆ. ‘ಮನಸ್ಸು’ ಎಂಬುದು ದೇಹದ ಒಂದು ಭಾಗವಷ್ಟೇ ಆಗಿರದೆ ಮಾನವ ತನ್ನ ಜೀವಿತಾವಧಿಯಲ್ಲಿ ಕಲ್ಪಿಸಿಕೊಂಡ ಕನಸುಗಳು, ವಾಂಛೆಗಳು ಮತ್ತು ಆಶಯಗಳಿಗೆ ಚೈತನ್ಯವನ್ನು ನೀಡಿ, ಮನುಷ್ಯನ ಗೆಲುವಿನ ಕಡೆಗೆ ಮಹತ್ವದ ಕೊಡುಗೆ ನೀಡುವ ಜೀವನಾಡಿಯೇ ಆಗಿದೆ. ಬಾಳ್ವೆಯ ಜವಾಬ್ದಾರಿಯುತ ಹೆಜ್ಜೆಗಳನ್ನು ಸಮರ್ಥವಾಗಿ ನಿಭಾಯಿಸಲು ಬೇಕಾದ ಪೂರ್ವತಯಾರಿಗಳು ಎಳವೆಯಿಂದಲೇ ಆಗಬೇಕಿದ್ದು, ದಾರಿ ಮಧ್ಯದಲ್ಲಿ ಎಡವಿದರೆ ಆಗಬಹುದಾದ ಎಡವಟ್ಟುಗಳನ್ನು ವಿವರಿಸುವ ಕಾದಂಬರಿ ಎಲ್ಲಾ ಕಾಲಕ್ಕೂ ಸಲ್ಲುವಂತಿದೆ. ಸುಚಲಾಳ ಬದುಕಿನ ಅಂತ್ಯ, ಅವಳ ದಯನೀಯ ಸ್ಥಿತಿಯನ್ನು ಧ್ವನಿಸುವುದರಿಂದ
ಓದುಗರ ಮನಸ್ಸು ಅವಳು ಅನುಭವಿಸಿರಬಹುದಾದ ಹಿಂಸೆಗಳ್ನು ಕಲ್ಪಿಸಿಕೊಳ್ಳುವಂತೆ ಮಾಡಿದರೆ, ಸುನೀತಾಳ ಬದುಕು ಸುಚಲಾಳ ಸಾವಿನ ನೋವನ್ನು ಅರಗಿಸಿ ಅಕ್ಕನ ಮೇಲೆ ಆದ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ದಿಟ್ಟ ಹೆಣ್ಣು ಮಗಳಾಗಿ ಗೋಚರಿಸುತ್ತಾಳೆ. ಪ್ರಸ್ತುತ ಕೃತಿ ಸ್ತ್ರೀ ಕೇಂದ್ರಿತ ಎಂಬಂತೆ ಕಂಡುಬರುತ್ತಿದ್ದರೂ ಪುರುಷರನ್ನು ದ್ವೇಷಿಸುತ್ತಾ ಹೆಣ್ಣನ್ನು ಮಾತ್ರ ಪ್ರತಿನಿಧಿಸುವುದಿಲ್ಲ. ಸ್ತ್ರೀ ಮತ್ತು ಪುರುಷರಿಬ್ಬರನ್ನೂ ಸಮಾನ ನೆಲೆಯಿಂದ ಚಿತ್ರಸುವ ಕೃತಿ ಸುಚಲಾ ಮತ್ತು ಸುನೀತಾಳ ಮೂಲಕ ತನ್ನ ಉದ್ದೇಶವನ್ನು ವ್ಯಕ್ತಪಡಿಸಿರುವುದು ಕೃತಿಯ ಜೀವಂತಿಕೆಗೆ ಸಾಕ್ಷಿಯಾಗಿದೆ. ದೇಶದ ಕಾನೂನು ಅಥವಾ ಯಾವುದೇ ವ್ಯವಸ್ಥೆ ಎಷ್ಟೇ ಬಲವಾಗಿರಲಿ ಅವುಗಳನ್ನು ಬೇಗನೆ ಕಾರ್ಯರೂಪಕ್ಕೆ ತಂದರೆ ಮಾತ್ರ ವ್ಯವಸ್ಥೆ ಸಾರ್ಥಕವಾಗುತ್ತದೆ. ವ್ಯವಸ್ಥೆ ಕೇವಲ ಹೆಸರಿಗಷ್ಟೇ ಇದ್ದು, ಒಳಗೆ ಟೊಳ್ಳಾಗಿದ್ದರೆ ನಿರೀಕ್ಷೆಗಳು ಭಾಗಶಃ ಸತ್ತು ವ್ಯಕ್ತಿಗತ ನಿರ್ಧಾರಗಳು ತಲೆಎತ್ತಲು ಕಾರಣವಾಗಬಹುದು ಎಂಬ ದನಿ ಇಲ್ಲಿದೆ. ಸಮಾಜದಲ್ಲಿ ಕಾಣಸಿಗುವ ಅತಿರೇಕದ ಘಟನೆಗಳ ಎಳೆಯನ್ನು ಹಿಡಿದು, ಅವುಗಳನ್ನು ಪ್ರೇರೇಪಿಸುವ ಅಂಶಗಳು, ಅವುಗಳಿಂದ ಹುಟ್ಟುವ ದುರಂತಗಳನ್ನು ಸರಳ ಭಾಷೆ ಹಾಗೂ ಸಹಜ ನಿರೂಪಣೆಗಳ ಮೂಲಕ ತಿಳಿಸುವ ಗಿರಿಮನೆ ಶ್ಯಾಮರಾವ್ ಅವರ ‘ದುಷ್ಕೃತ್ಯ’ ಕಾದಂಬರಿ ಎಂದೆಂದಿಗೂ ಪ್ರಸ್ತುತವೆನಿಸಿಕೊಳ್ಳುತ್ತದೆ.
ಕಾದಂಬರಿಯ ಹೆಸರು : ‘ದುಷ್ಕೃತ್ಯ’ ಲೇಖಕರು : ಗಿರಿಮನೆ ಶ್ಯಾಮರಾವ್
ಪ್ರಕಾಶಕರು : ‘ಗಿರಿಮನೆ ಪ್ರಕಾಶನ, ಸಕಲೇಶಪುರ’. ಬೆಲೆ : ರೂ.2೦೦/-
ನಯನ ಜಿ.ಎಸ್ :
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ವಾಸವಾಗಿದ್ದಾರೆ. ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲಿ, ಪಿ.ಯು.ಸಿ. ಶಿಕ್ಷಣವನ್ನು ಸರಕಾರಿ ಪದವಿ ಪರ್ವರ ಕಾಲೇಜು ಬೆಳ್ಳಾರೆ ಎಂಬಲ್ಲಿ ಪೂರೈಸಿರುತ್ತಾರೆ. ಇವರು ತಮ್ಮ ಬಿ.ಎ. ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಇಲ್ಲಿಂದ ಪಡೆದಿರುತ್ತಾರೆ. ಹವ್ಯಾಸಿ ಬರಹಗಾರ್ತಿಯಾಗಿರುವ ಇವರ ಅನೇಕ ಲೇಖನಗಳು, ಪ್ರವಾಸ ಕಥನಗಳು, ಕವನಗಳು, ಗಜಲ್ ಗಳು, ಲಲಿತ ಪ್ರಬಂಧಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ‘ಕುವೆಂಪು ಸಾಹಿತ್ಯ ಪ್ರತಿಷ್ಠಾನ (ರಿ) ಕುಪ್ಪಳ್ಳಿ ಇವರು ಆಯೋಜಿಸಿದ್ದ ‘ಕುವೆಂಪು ಅವರ ನಾಡು – ನುಡಿ ಚಿಂತನೆ’ ವಿಷಯದ ಬಗೆಗಿನ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. 2021-22ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ ಇವೆರಡರ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನೂ, 2022-23ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು ಇವರ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ ಇವರ ಕಥೆಗಳು ಮತ್ತು ಕವನಗಳು ಆಕಾಶವಾಣಿಯ ದನಿಯಲ್ಲಿ ಬಿತ್ತರಗೊಂಡಿದೆ.
ಲೇಖಕರ ಬಗ್ಗೆ :
ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದು, ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ಪ್ರಕಾರಗಳಲ್ಲಿ ಓದುಗರಿಗೆ ಮೆಚ್ಚುವಂತಹ 26ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಗಿರಿಮನೆ ಪ್ರಕಾಶನ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.