ಶ್ರೀಮತಿ ಅನುಪಮಾ ರಾಘವೇಂದ್ರ ಅವರ ‘ಹತ್ತಗುಳು’ ಎಂಬ ಹವಿಗನ್ನಡ ಕಥಾ ಸಂಕಲನವು ನವೋದಯ ಮತ್ತು ಬಂಡಾಯದ ಸತ್ವವನ್ನು ಹೀರಿಕೊಂಡು ರೂಪು ತಾಳಿದೆ. ಕಷ್ಟ ಕಾರ್ಪಣ್ಯಗಳಲ್ಲಿ ಮಿಂದು, ಕ್ರೌರ್ಯ ತಿರಸ್ಕಾರಗಳಲ್ಲಿ ನೊಂದು, ಬದುಕಿನ ಬೇಗೆಯಲ್ಲಿ ಅನ್ನದ ಅಗುಳುಗಳಂತೆ ಬೆಂದು ಬಾಳಿದವರ ಬದುಕಿನ ಚಿತ್ರಣವು ಹತ್ತು ಕತೆಗಳ ರೂಪದಲ್ಲಿ ಮೂಡಿ ಬಂದಿದೆ. ಬೆಂದ ಅಗುಳುಗಳಂತೆ ಪಕ್ವವಾದ ರಚನೆಗಳು ಎಂಬ ಅರ್ಥದಲ್ಲೂ ಇಲ್ಲಿನ ಕತೆಗಳನ್ನು ನೋಡಬಹುದು.
‘ಶರಣರ ಬದುಕು ಮರಣಲ್ಲಿ ನೋಡು’ (ಶರಣರ ಬದುಕನ್ನು ಮರಣದಲ್ಲಿ ನೋಡು) ಎಂಬ ಕತೆಯು ಸ್ತ್ರೀ ಕೇಂದ್ರಿತವಾಗಿದ್ದರೂ ಕೌಟುಂಬಿಕ ಚೌಕಟ್ಟಿಗೆ ಸೀಮಿತವಾಗಿಲ್ಲ. ಹೆಣ್ಣಿನ ಯಾತನೆಯೇ ಇಲ್ಲಿನ ವಸ್ತುವಾದರೂ ಅದನ್ನು ವಿವರಿಸುವ ಕ್ರಮದಲ್ಲಿ ಹೊಸತನವಿದೆ. ಕತೆಯ ನಾಯಕಿ ಪಾತಜ್ಜಿಯು ತನ್ನವರಿಂದಲೇ ಶೋಷಣೆಗೊಳಗಾಗುತ್ತಾಳೆ. ಗಂಡನ ಮನೆಯವರು ಆಸ್ತಿಯನ್ನು ಪಾಲು ಮಾಡುವಾಗ ಮೋಸವನ್ನು ಮಾಡಿದರೆ, ಗಂಡನಿಗೆ ಆಶ್ರಯವನ್ನು ಕೊಟ್ಟ ಸೋದರ ಮಾವನು ಯಾವುದೋ ವಿಷಗಳಿಗೆಯಲ್ಲಿ ಅವನ ಮೇಲೆ ಕೋಪಿಸಿಕೊಂಡು ಪರಸ್ಪರ ದೂರವಾಗಲು ಕಾರಣರಾಗುತ್ತಾನೆ. ಇದರಿಂದ ಪಾತಜ್ಜಿ ಬೀದಿಪಾಲಾದರೂ ಬದುಕುವ ಛಲವನ್ನು ಬಿಡುವುದಿಲ್ಲ. ನೋವಿಗೆ ಕಾರಣರಾದವರನ್ನು ದೂರುವುದಿಲ್ಲ. ಆಕೆಯು ಬಲಿಪಶು ಎನ್ನುವುದು ನಿಜವಾದರೂ ಕ್ರಿಯಾಹೀನಳಲ್ಲ. ಬದುಕಿನ ಬಗ್ಗೆ ಅಪಸ್ವರವನ್ನು ಎತ್ತದೆ, ತನ್ನ ಅನುಭವದ ಆಧಾರದಿಂದ ಕಂಡುಕೊಂಡ ಮೌಲ್ಯಗಳನ್ನು ಅಡಿಗಲ್ಲಾಗಿಟ್ಟುಕೊಂಡು ಗೌರವಯುತವಾಗಿ ಬಾಳುತ್ತಾಳೆ. ಉಳುವವನೇ ಹೊಲದೊಡೆಯ ಎಂಬ ಕಾನೂನು ಜಾರಿಗೆ ಬಂದಾಗ ಯಾರನ್ನೂ ಒಕ್ಕಲೆಬ್ಬಿಸದೆ ಮಿಕ್ಕುಳಿದ ಜಾಗದಲ್ಲಿ ತೆಂಗು, ಅಡಿಕೆ, ಗೇರುಬೀಜದ ಕೃಷಿಯನ್ನು ಮಾಡಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಾಳೆ. ತಾನು ಕಷ್ಟದಲ್ಲಿದ್ದರೂ ಜಾತಿಬೇಧವೆನಿಸದೆ ಅಕ್ಕಪಕ್ಕದವರಿಗೆ ಸಹಾಯವನ್ನು ಮಾಡಿ ಬದುಕಿದವಳ ಹಿರಿಮೆಯು, ಆಕೆಯ ವೈಕುಂಠ ಸಮಾರಾಧನೆಗೆ ಉದಾರವಾಗಿ ಸಹಾಯ ಮಾಡಲು ಬರುವವರ ಸಹಕಾರಿ ಮನೋಭಾವದ ಮೂಲಕ ವ್ಯಕ್ತವಾಗುತ್ತದೆ.
‘ಎಲ್ಲೋರಿಂಗೂ ಒಂದು ಕಾಲ ಬಕ್ಕು’ (ಎಲ್ಲರಿಗೂ ಒಂದು ಕಾಲ ಬರುತ್ತದೆ) ಎಂಬ ಕತೆಯ ವಾಣಿಯು ಪಾತಜ್ಜಿಯ ಬವಣೆಯ ವಿಸ್ತೃತ ರೂಪವಾಗಿ ಕಾಣಿಸಿಕೊಳ್ಳುತ್ತಾಳೆ. ಅನಾಥಳಾಗಿದ್ದ ಆಕೆಯನ್ನು ವಿಷ್ಣು ಮದುವೆಯಾದ ಮೇಲೆ ಅವಳ ಬದುಕಿನ ಗತಿಯು ಬದಲಾಗುತ್ತದೆ. ಬಾವನವರಾದ ಗೋವಿಂದನಿಂದ ತಿರಸ್ಕಾರಕ್ಕೊಳಗಾಗಿ ಪಡಬಾರದ ಪಾಡು ಪಡುತ್ತಾಳೆ. ಮೈಮುರಿಯುವಂಥ ದುಡಿತ. ಹೊಟ್ಟೆ ತುಂಬ ಅನ್ನವಿಲ್ಲ. ಹಸುಳೆಗಳು ಹಾಲಿಗಾಗಿ ಅತ್ತರೂ ತಪ್ಪು. ಇಲ್ಲಿದ್ದರೆ ಉಳಿಗಾವಿಲ್ಲ ಎಂದು ಪುಟ್ಟ ಮಕ್ಕಳನ್ನು ಎತ್ತಿಕೊಂಡು ರಾತ್ರಿ ಊರು ಬಿಟ್ಟು ಹೋದವಳು ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ಸಾಕುತ್ತಾಳೆ. ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುವಷ್ಟು ಸಮರ್ಥರನ್ನಾಗಿಸುತ್ತಾಳೆ. ಆ ಪೈಕಿ ವೆಂಕಟರಮಣನ ಮಗ ಸತ್ಯಶಂಕರನು ಕಷ್ಟಪಟ್ಟು ಕಲಿತು ಐ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ತನ್ನ ಅಜ್ಜಿಯಾದ ವಾಣಿಯನ್ನು ಓಡಿಸಿದ ಗೋವಿಂದನ ಊರಿಗೆ ಜಿಲ್ಲಾಧಿಕಾರಿಯಾಗಿ ಬರುವ ಕ್ರಿಯೆಯು ಕೇವಲ ಸುಖಾಂತಕ್ಕಾಗಿ ಮಾಡಿಕೊಂಡಿರುವ ತಂತ್ರವಾಗಿರದೆ ಮಾನವ ಸಮುದಾಯದ ಅಸ್ತಿತ್ವದ ಆಧಾರವಾದ ಪ್ರೀತಿ ನಂಬಗೆಗಳ ಕುರುಹುಗಳ ಪ್ರತೀಕವಾಗಿದೆ. ಹಿಂದೆ ವಾಣಿ ಮರಣಶಯ್ಯೆಯಲ್ಲಿದ್ದಾಗ ಅನಾಥರಾಗಲಿರುವ ತನ್ನ ಮಕ್ಕಳನ್ನು ಕರೆದು “ಒಂದಾರಿ ತರವಾಡಿಗೆ ಹೋಗಿ ದೇವಿಯ ಸೇವೆ ಮಾಡ್ಸಿ ಅಜ್ಜನ ಆಶೀರ್ವಾದ ಬೇಡ್ಯೊಂಡು ಬನ್ನಿ” (ಒಂದು ಸಾರಿ ತರವಾಡಿಗೆ ಹೋಗಿ ದೇವಿಯ ಸೇವೆ ಮಾಡಿಸಿ ಅಜ್ಜನ ಆಶೀರ್ವಾದ ಬೇಡಿಕೊಂಡು ಬನ್ನಿ) ಎನ್ನುವ ಹೊತ್ತಿಗೆ ಮಕ್ಕಳ ಅಜ್ಜನಾದ ಶಂಕರಣ್ಣನು ತೀರಿಕೊಂಡು ಅಧಿಕಾರವೆಲ್ಲವೂ ಗೋವಿಂದನ ಕೈಯಲ್ಲಿರುತ್ತದೆ. ಮನೆಗೆ ಬಂದ ಮಕ್ಕಳನ್ನು ಆತನು ಅವಾಚ್ಯವಾಗಿ ಬೈದು ಕಳುಹಿಸುತ್ತಾನೆ. ಅಧಿಕಾರದ ಅಮಲು ತಲೆಗೇರಿದಾಗ ಮಾನವೀಯತೆಯು ಸ್ವಾರ್ಥ ದುರಾಸೆಗಳ ಹರಿವಿನಲ್ಲಿ ಕೊಚ್ಚಿ ಹೋಗುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯೆನಿಸಿದ ಗೋವಿಂದನು ಸತ್ಯಶಂಕರನ ಕಛೇರಿಗೆ ಬಂದು ಅಳುತ್ತಾ ತನ್ನ ಅಪರಾಧಕ್ಕೆ ಕ್ಷಮೆಯನ್ನು ಯಾಚಿಸಿ, ಚೋಮನ ಮಗಳಿಗೆ ಬಸಿರು ಮಾಡಿದ ಮೊಕದ್ದಮೆಯಲ್ಲಿ ಸಿಕ್ಕಿ ಹಾಕಿಕೊಂಡ ತನ್ನ ಮೊಮ್ಮಗ ಶ್ರೀಶನನ್ನು ಪಾರು ಮಾಡಬೇಕೆಂದು ಬೇಡಿಕೊಳ್ಳುತ್ತಾನೆ. ‘ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಒಂದೇ. ಹಳೆಯ ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಂಡು ತನಿಖೆ ನಡೆಸುವುದಿಲ್ಲ. ಏನಿದ್ದರೂ ಸತ್ಯಕ್ಕೆ ಜಯ’ ಎಂದುಕೊಂಡು ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸಿದಾಗ ನಿಜವು ಬಯಲಾಗುತ್ತದೆ. ಶ್ರೀಶನ ಮೇಲೆ ಶೀಲಹರಣದ ಆರೋಪ ಹೊರಿಸಿದ ಹೆಂಗಸಿಗೆ ಅನೇಕ ಮಂದಿಗಳೊಡನೆ ಸಂಬಂಧವಿತ್ತು. ಅವರೊಂದಿಗೆ ಕಳೆದ ಕ್ಷಣಗಳನ್ನು ಮೊಬೈಲಿನಲ್ಲಿ ದಾಖಲಿಸಿ ಅವರಿಂದ ಹಣ ಕೀಳುವುದೇ ಅವಳ ಉದ್ಯೋಗವಾಗಿತ್ತು. ಅವಳ ಬಲೆಗೆ ಬಿದ್ದ ಶ್ರೀಶನು ದೊಡ್ಡ ಮನೆತನದವನಾಗಿರುವುದರಿಂದ ಆಕೆಯು ತಾನು ಬಸಿರಾಗಿರುವೆನೆಂದೂ ತನ್ನನ್ನು ಮದುವೆಯಾಗದಿದ್ದರೆ ಮರ್ಯಾದೆ ತೆಗೆಯುತ್ತೇನೆಂದು ಬೆದರಿಕೆ ಒಡ್ಡಿದ ವಿಚಾರವು ಸಾಬೀತಾಗಿ ಶ್ರೀಶನಿಗೆ ಬಿಡುಗಡೆಯಾಗುತ್ತದೆ. ಸಂಬಂಧಿಕರು ಎರಡು ಬಗೆದರೂ ಸಹಜ ಭಾವನೆಗಳಾದ ಸಿಟ್ಟು ದ್ವೇಷಗಳನ್ನು ಮೀರಿ ಅವರನ್ನು ಕಾಪಾಡುವ ಸತ್ಯಶಂಕರನ ಹೃದಯವಂತಿಕೆಯೇ ಕತೆಯ ತಿರುಳು. ನಿಷ್ಪಾಪಿ ಕುಟುಂಬವೊಂದರ ದುರಂತಕ್ಕೆ ಕಾರಣನಾಗುವ ಗೋವಿಂದನ ಕ್ರೌರ್ಯವು ವೈಯಕ್ತಿಕವಾಗಿದೆಯೇ ಹೊರತು ಸಾಮಾಜಿಕ ವ್ಯವಸ್ಥೆಗೆ ಸಂಬಂಧಪಟ್ಟಿಲ್ಲ. ಚೋಮನ ಮಗಳ ವಿರುದ್ದ ನಡೆಯುವ ಕಾನೂನು ಹೋರಾಟದಲ್ಲಿ ಶ್ರೀಶನು ಪಡೆಯುವ ಗೆಲುವಿಗೆ ಸಾಮಾಜಿಕ ದೃಷ್ಟಿಯಿಂದ ಮಹತ್ವವಿದೆ. ಅವರಿಬ್ಬರ ಸಂಬಂಧದಲ್ಲಿ ಕಾಣಿಸಿಕೊಳ್ಳುವ ವ್ಯಂಗ್ಯವೂ ಪರಿಣಾಮಕಾರಿಯಾಗಿದೆ. ಗಂಡಸರನ್ನು ಶೋಷಕರನ್ನಾಗಿಯೂ ಹೆಂಗಸರನ್ನು ಶೋಷಿತರನ್ನಾಗಿಯೂ ಕಲ್ಪಿಸಿ ಅಭ್ಯಾಸವಾದ ಹೊತ್ತಿನಲ್ಲಿ ಹೆಣ್ಣು ತನ್ನ ಪರವಾಗಿರುವ ಕಾನೂನನ್ನು ತನ್ನ ಹೆಣ್ತನ ಮತ್ತು ಜಾತಿಯ ಬಲವನ್ನು ಅಸ್ತ್ರವನ್ನಾಗಿ ಉಪಯೋಗಿಸಿಕೊಂಡು ದುರ್ಬಳಕೆ ಮಾಡಬಲ್ಲಳು ಎಂಬುದನ್ನು ಧ್ವನಿಸುವ ಮೂಲಕ ಲೇಖಕಿಯು ವಸ್ತುಸ್ಥಿತಿಯ ಎರಡೂ ಮಗ್ಗುಲಿಗೆ ಕಣ್ಣು ಹಾಯಿಸಿದ್ದಾರೆ. ಬದುಕು ಅನುಭವವೇ ಹೊರತು ಸಿದ್ಧಾಂತವಲ್ಲ ಎಂದು ಸಾರುವ ಕತೆಗಳು ಔಪಚಾರಿಕ ಧೋರಣೆ, ವ್ಯವಸ್ಥೆಗಳನ್ನು ಬದಿಗೆ ಸರಿಸಿ ಬದುಕಿಗೆ ಕಣ್ಣಾಗುವ ಮೌಲ್ಯಗಳತ್ತ ತುಡಿಯುತ್ತವೆ. ಹಿಂದಿನ ತಲೆಮಾರಿನ ಬದುಕಿನ ಅಧ್ಯಯನದ ಮೂಲಕ ಶಾಶ್ವತವಾದ ಜೀವನ ಸೂತ್ರಗಳನ್ನು ಕಂಡುಕೊಂಡಿರುವ ಕತೆಗಳು ಸಂಪ್ರದಾಯ ನಿಷ್ಠ ಹವ್ಯಕ ಸಮಾಜವನ್ನು ಅತ್ಯಂತ ಕಾಳಜಿಯಿಂದ, ನಿಷ್ಠೆಯಿಂದ ಚಿತ್ರಿಸುತ್ತಾ ಅದರಲ್ಲಿನ ಒಳಿತನ್ನು ಸ್ವೀಕರಿಸುವುದರೊಂದಿಗೆ ಜಡತ್ವವನ್ನು ಪ್ರಶ್ನಿಸುತ್ತದೆ.
‘ತಾಳ್ಮೆ’ಯು ಮನ ಪರಿವರ್ತನೆಯನ್ನು ಆಧರಿಸಿದ ಕತೆಯಾಗಿದೆ. ಮುಖ್ಯ ಪಾತ್ರವಾದ ಶಂಕರ ಮಾವನಲ್ಲಿ ದಕ್ಷತೆ, ಸಭ್ಯತೆ, ಸಾಮರ್ಥ್ಯ ಮುಂತಾದ ಒಳ್ಳೆಯ ಗುಣಗಳಿದ್ದರೂ ಸಾಂಪ್ರದಾಯಿಕರಾಗಿರುವುದರಿಂದ ಆಧುನಿಕ ದೃಷ್ಟಿಕೋನದಿಂದ ಯೋಚನೆಯನ್ನು ಮಾಡುವ ಶಕ್ತಿಯು ಕಡಿಮೆ. ಸೊಸೆಯ ನೃತ್ಯ ಕಲೆಯ ಮೇಲೆ ಅವನಿಗಿದ್ದ ಅನಾದರ, ಅನಾಸ್ಥೆ, ಆತಂಕಗಳು ಮಾಯವಾಗಿ ಕಲೆಗೆ ಗೌರವವನ್ನು ನೀಡುವ ಮೂಲಕ ತನ್ನ ಸಂಕುಚಿತ ಮನೋಭಾವವನ್ನು ಕಳೆದುಕೊಂಡು ಪ್ರೀತಿಪಾತ್ರ ಸೌಜನ್ಯಯುಕ್ತ ವ್ಯಕ್ತಿಯಾಗಿ ಮಾರ್ಪಟ್ಟರೂ ಪರಿವರ್ತನೆಯನ್ನು ತನಗೆ ತಾನೇ ಸಾಧಿಸುವ ಶಕ್ತಿಯಿಲ್ಲದಿರುವುದರಿಂದ ಬದಲಾವಣೆಯ ಅರಿವು ಆತನ ಸಂವೇದನೆಗೆ ಹೊರತಾಗಿದೆ. “ಇದು ಶುದ್ಧ ಅನ್ಯಾಯ. ನಿನ್ನ ಹಾಂಗಿಪ್ಪ ಕಲಾವಿದೆ ಮನೆಲೇ ಕೂದರೆ ಆ ಅಬ್ಬೆಗೆ ಅನ್ಯಾಯ ಮಾಡಿದ ಹಾಗೆ ಆವುತ್ತು. ಶಂಕರಾ ನೀನಾದರೂ ಹೇಳಲಾಗದಾ. ಈಗಲೂ ತಡ ಆಯಿದಿಲ್ಲೆ. ಇನ್ನಾದರೂ ಆಲೋಚನೆ ಮಾಡು” (ಇದು ಶುದ್ಧ ಅನ್ಯಾಯ. ನಿನ್ನ ಹಾಗಿರುವ ಕಲಾವಿದೆ ಮನೆಯಲ್ಲೇ ಕೂತರೆ ಆ ಅಮ್ಮನಿಗೆ ಅನ್ಯಾಯ ಮಾಡಿದ ಹಾಗೆ ಆಗುತ್ತದೆ. ಶಂಕರಾ ನೀನಾದರೂ ಹೇಳಬಾರದಾ. ಈಗಲೂ ತಡ ಆಗಿಲ್ಲ. ಇನ್ನಾದರೂ ಆಲೋಚನೆ ಮಾಡು) ಎಂದ ಅನಂತಣ್ಣನ ಮಾತುಗಳನ್ನು ಕೇಳಿದ ಮೇಲೆ ಶಂಕರನ ಹೃದಯದಲ್ಲಿ ಸಂಕುಚಿತ ಮನಸ್ಸಿನ ಶೂನ್ಯವನ್ನು ಮೀರಿದ ಬದಲಾವಣೆಯು ಕಾಣಿಸಿಕೊಳ್ಳುತ್ತದೆ. ಈ ಕತೆಯಲ್ಲಿ ಹೆಣ್ಣು ತನ್ನ ಅಸ್ಮಿತೆಯ ಅರಿವು, ಸಾಧನೆಗಳಲ್ಲಿ ಸಾಧಿಸಿದ ಪ್ರಗತಿ ಮತ್ತು ಕ್ರಿಯಾಶಕ್ತಿಯನ್ನು ರೂಢಿಸಿಕೊಂಡ ನಿದರ್ಶನಗಳಿವೆ. ಅವಳ ಸಾಮಾಜಿಕ ಪರಿಸರಗಳಲ್ಲಿ ನಡೆದ ಶಿಕ್ಷಣದ ಪ್ರಸಾರ, ಸಾಮಾಜಿಕ ಸಮಾನತೆಯ ಸ್ವೀಕಾರ ಮತ್ತು ಗಂಡಸಿನ ಪ್ರೋತ್ಸಾಹ ಈ ಬದಲಾವಣೆಯ ಹಿಂದಿನ ಪ್ರೇರಣೆಯಾಗಿದೆ. ತನ್ನ ಅಂತರಂಗದಲ್ಲಿ ನಡೆದ ಮಹತ್ವದ ಬದಲಾವಣೆಯಿಂದಾಗಿ ಅವಳು ತನ್ನ ವ್ಯಕ್ತಿತ್ವದ ವಿಕಾಸದೆಡೆಗೆ ಗಮನ ಕೊಡುವಂತಾಗಿದೆ. ಮೊದಲು ಮೂಕ ಸ್ವರೂಪವನ್ನು ಹೊಂದಿದ್ದ ಪ್ರತಿಕ್ರಿಯೆಯು ಕ್ರಮೇಣ ಕೃತಿಗಳ ಮೂಲಕ ಆಕಾರವನ್ನು ಪಡೆದಿರುವ ಸೂಚನೆ ಇದೆ. ಇದರಿಂದ ಅವಳ ಬದುಕು ದುರಂತವಾಗುವುದು ಕಡಿಮೆಯಾದರೂ ಅಸಹನೀಯವಾಗುವುದು ತಪ್ಪಿಲ್ಲ ಎಂಬುದಕ್ಕೆ ‘ಕಥೆಯಾಗದ್ದ ಕಥೆ’ (ಕಥೆಯಾಗದ ಕಥೆ)ಯಲ್ಲಿ ಉದಾಹರಣೆಗಳಿವೆ. ಹತ್ತನೇ ತರಗತಿಯಲ್ಲಿದ್ದಾಗ ಬಸುರಾದ ರೇಖಾ, ಐ.ಎ.ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದರೂ ಶುಲ್ಕ ಪಾವತಿಸಲು ಹಣವಿಲ್ಲದೆ ಕಾರ್ಖಾನೆಯಲ್ಲಿ ದುಡಿಯುವ ಲಚ್ಚುಮಿಯ ಅಕ್ಕನ ಮಗಳು, ರಬ್ಬರ್ ಟ್ಯಾಪಿಂಗಿಗೆ ಬಂದವನ ಜೊತೆ ಓಡಿಹೋದ ಬಾಲಣ್ಣನ ಹೆಂಡತಿ, ವೃದ್ಧಾಶ್ರಮದಲ್ಲಿ ಕಾಲಕಳೆಯುವ ರಾಧಿಕಾಳ ಅತ್ತೆ, ಪ್ರೇಮ ಬಲಿತು ಮತ್ತೇರಿದ ಗೆಳೆಯನ ಇರಿತಕ್ಕೊಳಗಾಗಿ ತೀರಿಕೊಂಡ ಅಕ್ಷತಾ ಇವರೆಲ್ಲರೂ ಆಧುನಿಕ ಸಮಾಜದಲ್ಲಿ ಹೆಣ್ಣು ಅನುಭವಿಸುತ್ತಿರುವ ದುರಂತದ ರೂಪಗಳಾಗಿವೆ.
ಈ ಸಂಕಲನದಲ್ಲಿ ಲೇಖಕಿಯು ದೈನಂದಿನ ಬದುಕಿನಲ್ಲಿ ಘಟಿಸುವ ಅದೆಷ್ಟೋ ಸಂಗತಿಗಳನ್ನು ಕೇಳಿ ತಿಳಿದೋ, ಅವಲೋಕಿಸಿಯೋ ಕತೆಗಳ ಮೂಲಕ ಸಹಜವಾಗಿ ನಿರೂಪಿಸಿದ್ದಾರೆ. ಕಂಡು ಅನುಭವಿಸಿದ ಸಂಗತಿಗಳನ್ನು ಪ್ರಾಮಾಣಿಕವಾಗಿ ವಿವರಿಸಿದ್ದಾರೆ. ವಿವಿಧ ಜಾತಿ, ವಯಸ್ಸು, ಅಂತಸ್ತು, ಆಕೃತಿ, ಭಾವಸ್ಥಿತಿ ಮತ್ತು ಸಂವೇದನೆಗಳಲ್ಲಿ ಕಾಣಿಸಿಕೊಳ್ಳುವ ಹೆಣ್ಣು ಇವರ ಕತೆಗಳ ಕೇಂದ್ರ. ಸಂಪ್ರದಾಯಸ್ಥರಿಂದ ಆಧುನಿಕತೆಯವರೆಗೆ, ಅವಿವಾಹಿತೆಯರಿಂದ ವಿಧವೆಯರವರೆಗೆ ಈ ಜಗತ್ತು ಹರಡಿಕೊಂಡಿದೆ. ವ್ಯವಸ್ಥೆಯ ಹುಯಿಲಿನಲ್ಲಿ ಸಿಲುಕಿ ಪಡಿಪಾಟಲು ಪಡುತ್ತಿರುವ ಹೆಣ್ಣುಜೀವಗಳ ನಾಡಿಮಿಡಿತವನ್ನು ಬಹಳ ಸೂಕ್ಷ್ಮವಾಗಿ ಹಿಡಿದಿಡುತ್ತಾ ಯಾವುದೇ ಅಬ್ಬರವಿಲ್ಲದ ತಣ್ಣಗಿನ ಆದರೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ವ್ಯವಸ್ಥೆಯ ಒಳಗಿದ್ದುಕೊಂಡೇ ಯಾರ ಅರಿವಿಗೂ ಬಾರದೆ ಚೌಕಟ್ಟನ್ನು ಮೀರುತ್ತಾ ಪ್ರತಿರೋಧಗಳ ನಡುವೆಯೂ ತಮ್ಮತನವನ್ನು ಕಾಯ್ದುಕೊಳ್ಳುವ ಪಾತ್ರಗಳು ಇಲ್ಲಿವೆ. ಜೀವನವೆಂಬುದು ಅಸಂಖ್ಯ ಬಣ್ಣ, ವಾಸನೆಗಳಿಂದ ಕೂಡಿರುವುದೆಂಬ ಗ್ರಹಿಕೆ, ಮಾನವೀಯ ಸಂಬಂಧಗಳ ಹಿಂದೆ ಹಲವು ಬಗೆಯ ಒತ್ತಡಗಳಿರುತ್ತವೆ ಎಂಬ ತಿಳುವಳಿಕೆ, ಯಾವುದೇ ವ್ಯಕ್ತಿಯ ಬದುಕಿನ ಸಾಫಲ್ಯದ ಪ್ರಶ್ನೆಯು ಎಲ್ಲಾ ಜೀವಿಗಳ ಮತ್ತು ವರ್ಗಗಳ ಸಂಬಂಧಗಳ ಪ್ರಶ್ನೆಗಳೇ ಆಗಿರುತ್ತವೆ ಎಂಬ ಅರಿವು ಇಲ್ಲಿ ಕೆಲಸ ಮಾಡಿದೆ. ಕೆಲವು ಕತೆಗಳಲ್ಲಿ ಕಾದಂಬರಿಯ ವ್ಯಾಪ್ತಿಯು ಇದ್ದರೂ ಕಥನಕ್ಕೆ ತಕ್ಕಂತೆ ಅದರ ಸ್ತರ ಮತ್ತು ಕೇಂದ್ರವನ್ನು ಆಯ್ದುಕೊಳ್ಳುವ ಜಾಣ್ಮೆ ಇರುವುದರಿಂದ ಕತೆಯ ಓಟಕ್ಕೆ ತಡೆ ಉಂಟಾಗುವುದಿಲ್ಲ. ವಿಪುಲ ವಿವರಣೆಗಳಿಂದ ಕೂಡಿದ ಬರಹಗಳಲ್ಲಿ ಲೇಖಕಿಯ ಒಲವು ನಿಲುವುಗಳು ಪ್ರತಿಫಲಿಸುತ್ತವೆ. ಜ್ವಲಂತ ವಿದ್ಯಮಾನವನ್ನು ಹಿನ್ನೆಲೆಯಾಗಿಟ್ಟುಕೊಂಡು ಬದುಕಿನ ದುರಂತದತ್ತ ಬೊಟ್ಟು ಮಾಡುವ ಕತೆಗಳು ಕುರೂಪಗೊಂಡ ಬದುಕಿನ ರೀತಿ ನೀತಿ, ಜೀವನದೃಷ್ಟಿ, ಮೌಲ್ಯ, ಭಾವನೆ, ಇಳಿಮುಖವಾಗುತ್ತಿರುವ ಮನುಷ್ಯನ ಮನಸ್ಸು, ಆಧುನಿಕ ಜನಾಂಗದ ವಿರೋಧಾಭಾಸಗಳನ್ನು ಅನಾವರಣಗೊಳಿಸುತ್ತವೆ. ಚಿಕ್ಕಪುಟ್ಟ ಪದಗಳಲ್ಲೇ ಸನ್ನಿವೇಶವನ್ನು ಸೃಷ್ಟಿಸುವ ಕತೆಗಳು ವ್ಯಕ್ತಿಗತ-ಸಾಮಾಜಿಕ ಅನುಭವಗಳನ್ನು ಹಿಡಿದಿಡುತ್ತವೆ. ಅದರೊಳಗಿನ ಪದ ಸಂಪತ್ತು, ಧ್ವನಿ, ಸತ್ವಯುತವಾದ ಭಾಷೆ, ಖಚಿತವಾದ ನುಡಿಗಟ್ಟು, ನಿರೂಪಣೆಗಳು ಗಮನವನ್ನು ಸೆಳೆಯುತ್ತವೆ. ಸುತ್ತಲಿನ ಜಗತ್ತನ್ನು ತೀವ್ರವಾಗಿ ನೋಡಿದ್ದರ, ಹಿಂದಿನ ತಲೆಮಾರಿನವರ ಬದುಕನ್ನು ಅರಿತುಕೊಂಡದ್ದರ ಫಲವಾಗಿ ಮೂಡಿದ ಕತೆಗಳು ತನ್ನೆಲ್ಲ ಸ್ಪಷ್ಟತೆ ಮತ್ತು ಚೆಲುವಿನೊಂದಿಗೆ ಬದುಕಿನ ವಿವರಗಳನ್ನು ದಾಖಲಿಸುತ್ತವೆ. ಕೌಟುಂಬಿಕ ಸಮಸ್ಯೆ, ಗಂಡು ಹೆಣ್ಣಿನ ಸಂಬಂಧ, ಹೆಣ್ಣಿನ ದುಃಖ, ಮುಗ್ಧರ ವಂಚನೆ, ಸಮಾಜದ ದಬ್ಬಾಳಿಕೆಗೆ ಸಿಲುಕಿ ನೊಂದವರ, ತಿರಸ್ಕೃತರ ಯಾತನೆಗಳನ್ನು ಚಿತ್ರಿಸುತ್ತಾ ಅವುಗಳನ್ನು ಮೀರಲು ಅಗತ್ಯವಾದ ಮಾನವೀಯ ಸಾಧ್ಯತೆಗಳನ್ನು ಶೋಧಿಸುತ್ತವೆ. ಸಾಂಸಾರಿಕ ವಿರಸದಲ್ಲಿ ಹುಟ್ಟಿಕೊಳ್ಳುವ ನರಕದ ಅನುಭವಕ್ಕಿಂತ ಬೇರೆಯಾದ ಅನುಭವಗಳೂ ಸೇರಿಕೊಳ್ಳುವುದರಿಂದ ಕತೆಗಳು ಮನಸ್ಸನ್ನು ತಟ್ಟುತ್ತವೆ.
ಪುಸ್ತಕದ ಹೆಸರು : ಹತ್ತಗುಳು (ಹವಿಗನ್ನಡ ಕತೆಗಳ ಸಂಕಲನ)
ಲೇಖಕರು : ಶ್ರೀಮತಿ ಅನುಪಮಾ ರಾಘವೇಂದ್ರ
ಪ್ರಕಾಶಕರು : ಭೂಮಿಕಾ ಪ್ರತಿಷ್ಠಾನ (ರಿ) ಉಡುಪುಮೂಲೆ, ಎಡನೀರು
ಪ್ರಕಟವಾದ ವರ್ಷ : 2018
ಪುಟಗಳು : 80 + 4
ಬೆಲೆ ರೂ. : 75/-
ಡಾ. ಸುಭಾಷ್ ಪಟ್ಟಾಜೆ :
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.
ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
ಲೇಖಕಿಯ ಬಗ್ಗೆ :
ಉಡುಪುಮೂಲೆಯ ವೇದಮೂರ್ತಿ ರಾಘವೇಂದ್ರ ಭಟ್ಟರ ಪತ್ನಿ ವಿದುಷಿ ಅನುಪಮಾ ರಾಘವೇಂದ್ರ ಭರತನಾಟ್ಯ ಕಲಾವಿದೆ, ನೃತ್ಯ ಶಿಕ್ಷಕಿ, ನೃತ್ಯ ಸಂಯೋಜಕಿ, ಬರಹಗಾರ್ತಿ, ಅಂಕಣಗಾರ್ತಿ, ಕಥಾಗಾರ್ತಿ, ಯಕ್ಷಗಾನ ಕಲಾವಿದೆ, ಅರ್ಥಧಾರಿ ಹಾಗೂ ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ.) ಸಂಸ್ಥೆಯ ಸ್ಥಾಪಕಾಧ್ಯಕ್ಷೆ. ವಿಜ್ಞಾನ ಪದವೀಧರೆಯಾಗಿರುವ ಅನುಪಮಾ ಭರತನಾಟ್ಯದಲ್ಲಿ ವಿದ್ವತ್ ಪದವೀಧರೆ. ಕೇರಳ ಕಲೋತ್ಸವ, ಸಹೋದಯ ಫ಼ೆಸ್ಟ್, ಪ್ರತಿಭಾ ಕಾರಂಜಿ ಹಾಗೂ ಹಲವಾರು ಸಂಘ ಸಂಸ್ಥೆಗಳು ನಡೆಸುವ ನೃತ್ಯ ಸ್ಪರ್ಧೆಗಳಿಗೆ ನಿರ್ಣಾಯಕಳಾಗಿ ಕಾರ್ಯ ನಿರ್ವಹಿಸಿರುವ ಇವರು ಭರತನಾಟ್ಯ ಕಿರಿಯ, ಹಿರಿಯ, ವಿದ್ವತ್ ಪರೀಕ್ಷೆಗಳಿಗೆ ಪರೀಕ್ಷಕಳಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಗಡಿನಾಡಾದ ಕಾಸರಗೋಡಿನ ಕನ್ನಡ ಮಕ್ಕಳಿಗಾಗಿ ಭಾವಯಾನ, ಜಾನಪದ ಉತ್ಸವ, ಭಾವಸಂಗಮ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಯೋಜಿಸಿ ಕಾರ್ಯರೂಪಕ್ಕೆ ತಂದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಇವರ ಹಲವಾರು ಕಥೆ, ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
2016ರ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಇವರ ಯಶಸ್ಸಿನ ರೆಕ್ಕೆಗೆ ಮತ್ತೊಂದು ಗರಿ. 2017ರಲ್ಲಿ ಒಪ್ಪಣ್ಣ ಪ್ರತಿಷ್ಠಾನ ಏರ್ಪಡಿಸಿರುವ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ. 2017ರಲ್ಲಿ ನೃತ್ಯ, ಸಂಗೀತ, ಯಕ್ಷಗಾನ ಕಲಾ ವಿಷಯಗಳ ಬಗೆಗಿನ ಲೇಖನಗಳ ಸಂಕಲನ ‘ಕಲಾತರಂಗ ಕಲಾಂತರಂಗ’ ಪ್ರಕಟಗೊಂಡಿದೆ. 2018ರಲ್ಲಿ ಹತ್ತು ಹವ್ಯಕ ಕಥೆಗಳ ಸಂಕಲನ ‘ಹತ್ತಗುಳು’, 2019ರಲ್ಲಿ ‘ತಲ್ಲಣಗಳ ಪಲ್ಲವಿ’ ಎಂಬ ಕನ್ನಡ ಕಥಾ ಸಂಕಲನ ಹಾಗೂ 2023ರಲ್ಲಿ ‘ಗಾಲಿ ಕುರ್ಚಿಯಲಿ ಜೀವನ ಚಕ್ರ’ ಎಂಬ ಯೋಧನೊಬ್ಬನ ಜೀವನಗಾಥೆ ಲೋಕಾರ್ಪಣೆಗೊಂಡಿದೆ. 2011ರಲ್ಲಿ ದೆಹಲಿಯಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ವಿಶೇಷ ಪುರಸ್ಕಾರ, 2011ರಲ್ಲಿ ಬೆಂಗಳೂರಿನಲ್ಲಿ ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ, 2013ರಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿ, 2019ರಲ್ಲಿ ಪುತ್ತೂರಿನ ಶ್ರೀ ಶಾರದಾ ಕಲಾ ಕೇಂದ್ರದ ‘ರಜತಶ್ರೀ ಪ್ರಶಸ್ತಿ’ ಹಾಗೂ ಪುತ್ತೂರಿನಲ್ಲಿ ನಡೆದ ಗಡಿನಾಡ ಸಾಂಸ್ಕೃತಿಕ ಉತ್ಸವದಲ್ಲಿ 2023ರ ಸಾಲಿನ ‘ಗಡಿನಾಡಿನ ಸಾಧಕ ಪುರಸ್ಕಾರ’ವೂ ಇವರ ಮುಡಿಗೇರಿದೆ.