ಈಗಾಗಲೇ ತಮ್ಮ ಹನ್ನೊಂದು ಕಾದಂಬರಿಗಳ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಪ್ರಸನ್ನಾ ವಿ. ಚೆಕ್ಕೆಮನೆಯವರು ತಮ್ಮ ಹನ್ನೆರಡನೆಯ ಕೃತಿಯಾಗಿ ‘ಹೂ ಮಳೆಗೆ ಮಿನುಗುವ ಮೇಘಗಳು’ ಎಂಬ ಒಂದು ಸಣ್ಣ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಹೆಚ್ಚು ದೀರ್ಘವಲ್ಲದ ನಲವತ್ತೈದು ಕಥೆಗಳಿವೆ. ಹೆಚ್ಚಿನ ಕಥೆಗಳು ಕೌಟುಂಬಿಕ ವಸ್ತುಗಳ ಸುತ್ತ ಬರೆಯಲ್ಪಟ್ಟಿವೆ. ಪ್ರೀತಿ- ಪ್ರೇಮ- ಮದುವೆ- ದಾಂಪತ್ಯ ಸಾಮರಸ್ಯ- ಸುಖ ಸಂಸಾರ- ದಾಂಪತ್ಯ ವೈಫಲ್ಯ- ವಿಚ್ಚೇದನ ಹೀಗೆ ಸರಳ ಫಾರ್ಮುಲಾಗಳಲ್ಲಿ ರಚಿತವಾದ ಕಥೆಗಳಿವು.
ಬದುಕು ಒಡ್ಡುವ ಸವಾಲುಗಳು, ಬಿಡಿಸಲಾಗದ ನಿಗೂಢ ಸಮಸ್ಯೆಗಳು, ಮನಶಾಸ್ತ್ರೀಯ ಒಳನೋಟಗಳು ಪ್ರಸನ್ನಾ ಅವರ ಕಥೆಗಳಲ್ಲಿ ಸಿಗುವುದಿಲ್ಲ. ಯಾವುದೇ ವಿಚಾರದ ಸಂಕೀರ್ಣ ಮುಖವನ್ನು ಚರ್ಚಿಸಲು ಅವರು ಹೋಗುವುದಿಲ್ಲ. ಆದ್ದರಿಂದಲೇ ಅವರು ಜನಪ್ರಿಯ ಕಥೆಗಾರ್ತಿಯಾಗುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯ ಮತ್ತು ಗಂಭೀರ ಎಂಬ ಎರಡು ವರ್ಗಗಳ ನಡುವೆ ಇರುವ ಚರ್ಚೆ-ಭಿನ್ನಾಭಿಪ್ರಾಯಗಳು ಇಂದು ನಿನ್ನೆಯದೇನೂ ಅಲ್ಲ. ಹಾಗೆಂದು ಎರಡೂ ಪ್ರಕಾರಗಳಲ್ಲಿ ಸಾಕಷ್ಟು ಕೃತಿಗಳು ಬರುತ್ತಲೇ ಇವೆ. ಜನಸಾಮಾನ್ಯರಿಗೆ ಸಂಕೀರ್ಣ ಶೈಲಿಯಲ್ಲಿ ಬರೆದ ಸಾಹಿತ್ಯ ಬೇಡ. ಅವರಿಗದು ಅರ್ಥವಾಗಲಾರದು ಮಾತ್ರವಲ್ಲದೆ ಕಷ್ಟಪಟ್ಟು ಅರ್ಥಮಾಡಿಕೊಳ್ಳುವ ಮನಸ್ಸೂ ಅವರಿಗಿಲ್ಲ. ಅಂಥವರ ಓದುವ ಆಸಕ್ತಿ ಮೇಲ್ನೋಟದ ಸಂಗತಿಗಳಿಗೆ ಸೀಮಿತವಾಗಿರುತ್ತದೆ. ಸಮಸ್ಯೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಮನಸ್ಥಿತಿ ಅವರದ್ದಲ್ಲ. ಇದನ್ನು ಮನಗಂಡೇ ನಮ್ಮ ಪತ್ರಿಕೆ-ನಿಯತಕಾಲಿಕಗಳು ಇಂಥ ಕಥೆಗಳನ್ನೇ ಪ್ರಕಟಿಸುತ್ತವೆ. ಸಾಹಿತ್ಯವನ್ನು ಬದುಕಿನ ಒಂದು ಗಂಭೀರ ಅಧ್ಯಯನವನ್ನಾಗಿ ಪರಿಗಣಿಸುವವರಿಗೇನೋ ಈ ಪ್ರಕಾರದ ಕಥೆಗಳು ರುಚಿಸಲಾರವು. ಆದರೆ ಆರಂಭದ ಹಂತದ ಸಾಹಿತ್ಯದ ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಸುಲಭದಲ್ಲಿ ಅರ್ಥ ಮಾಡಿಕೊಳ್ಳಲು ಮತ್ತು ಮನರಂಜನೆಗಾಗಿ ಇಂಥ ಕಥೆಗಳು ಬೇಕೇ ಬೇಕು.
ಪ್ರಸನ್ನಾ ಅವರ ಈ ಸಂಕಲನದ ಕೆಲವು ಕಥೆಗಳ ವಸ್ತುಗಳು ಹೀಗಿವೆ : ಸಂಪ್ರದಾಯ ಮತ್ತು ಅರ್ಥಹೀನ ಕಟ್ಟುಕಟ್ಟಳೆಗಳಿಂದಾಗಿ ಮಾವ ತಾನು ಪ್ರೀತಿಸಿದವಳನ್ನು ಮದುವೆಯಾಗಲು ಅಸಾಧ್ಯವಾಗಿ ಕೊರಗುವುದನ್ನು ನೋಡಿದ ಸೊಸೆ ಮೀರಾ ಅವಕಾಶ ಒದಗಿ ಬಂದಾಗ ಅವರಿಬ್ಬರನ್ನೂ ಒಂದುಗೂಡಿಸುವ ಸುಖಾಂತ್ಯ ಕಥೆ (ಒಲವಿನ ನದಿ ಪು.9), ಗಂಡನ ಹಿಂದಿನ ಪ್ರೇಮ ಸಂಬಂಧದ ಬಗ್ಗೆ ರೇಷ್ಮಾಳ ತಪ್ಪು ತಿಳುವಳಿಕೆಯಿಂದಾದ ಪ್ರಮಾದ ಮತ್ತು ಕೊನೆಗೆ ಉಂಟಾಗುವ ಅರಿವು (ಭಾವಯಾಮಿ ಪು.21), ತ್ಯಾಗಮೂರ್ತಿಯಾದ ಹೆಂಡತಿಯ ಒಳ್ಳೆಯತನವನ್ನು ತಡವಾಗಿ ಅರ್ಥಮಾಡಿಕೊಂಡು ಅವಳ ಮೇಲೆ ಪ್ರೀತಿ ತೋರಿಸುವ ಗಂಡ (ಒಲವೆಂಬ ಚಿಪ್ಪಿನೊಳಗೆ ಪು.29), ಬದುಕಿನುದ್ದಕ್ಕೂ ಬರೇ ಕಷ್ಟಗಳನ್ನು ಅನುಭವಿಸಿ ನೊಂದ ರೋಹಿಣಿಯ ಮಹದಾಸೆಯಾಗಿದ್ದ ಡಾಕ್ಟರಾಗುವ ಬಯಕೆಯನ್ನು ಪೂರೈಸುವುದಲ್ಲದೆ ಅವಳ ಬಾಳಸಂಗಾತಿಯಾಗುವ ಭರವಸೆಯನ್ನೀಯುವ ಗೌರಿಶಂಕರ್ (ಬಾಡದ ನಿಶಾಗಂಧಿ ಪು.55), ಅನುರಾಗದ ಅಲೆಗಳು ಮತ್ತು ಬೆಳ್ಳಿಯ ಗೆಜ್ಜೆಗಳ ಮೂಲಕ ಹೆಣ್ಣು ತನ್ನ ಮನಸೆಳೆದ ಪುರುಷನನ್ನು ಮದುವೆಯಾಗುವ ಕಥೆ (ನಿನ್ನೆದೆಯ ಮಿಡಿತ ಪು.109), ಅಣ್ಣನ ಮುದ್ದಿನ ತಂಗಿಯಾಗಿ ಬೆಳೆದ ರಶ್ಮಿ ತನ್ನ ಗಂಡನಿಂದ ಅವಗಣನೆಗೆ ಒಳಗಾಗಿ ಗರ್ಭಿಣಿಯಾಗಿದ್ದಾಗಲೇ ವಿಚ್ಛೇದನಕ್ಕೊಳಪಟ್ಟು ಹೆರಿಗೆಯಲ್ಲಿ ಸಾವಿಗೆ ತುತ್ತಾದಾಗ ಅವಳ ಅಣ್ಣ ಅತ್ತಿಗೆಯರೇ ಆ ಮಗುವನ್ನು ಸಾಕಿ ಕೊನೆಯಲ್ಲಿ ಅಪಘಾತದಲ್ಲಿ ಕಾಲುಗಳನ್ನು ಕಳೆದುಕೊಂಡು ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯುವ ಗಂಡ ಬಂದು ಅಂಗಲಾಚಿದರೂ ಮಗುವನ್ನು ಅವನಿಗೆ ಕೊಡದಿರುವುದು (ಯಾರೂ ಅನಾಥರಲ್ಲ ಪು.173), ಮಕ್ಕಳು ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳುವ ಸ್ಥಿತಿ ಒಂದೆಡೆಯಾದರೆ ಹಣದ ಹಿಂದೆ ಹೋಗುತ್ತ ಅಪ್ಪ-ಅಮ್ಮರಿಂದ ದೂರವಾಗಿ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಸ್ಥಿತಿ ಇನ್ನೊಂದೆಡೆ ಎಂಬುದು ಚಿತ್ರಿತವಾದ ಕಥೆ (ಗುಳಿಯಪ್ಪ ಪು.73), ದೀರ್ಘಕಾಲ ಮಕ್ಕಳಾಗದೆ ಕೊನೆಗೆ ಅವಳಿ ಮಕ್ಕಳಾಗುವ ಒಂದು ಸಂತೃಪ್ತ ಕುಟುಂಬದ ಕಥೆ (ನನ್ನ ಮುದ್ದು ಕಂದಮ್ಮ ಪು.147) ಇತ್ಯಾದಿ.
ಹಾಗೆಯೇ ಸಾಮಾಜಿಕ ಚಿಂತನೆಯಿರುವ ಕಥೆಗಳೂ ಇಲ್ಲದಿಲ್ಲ. ತನ್ನದಲ್ಲದ ತಪ್ಪಿಗೆ, ಎಳೆಯ ಮಗುವಿನ ಮೇಲೆ ಅತ್ಯಾಚಾರ ಮಾಡುತ್ತಿದ್ದವನನ್ನು ಕೊಂದ ಆರೋಪದ ಮೇಲೆ ಜೈಲುವಾಸ ಅನುಭವಿಸುವ ಕೋಕಿಲಾಳ ಬಿಡುಗಡೆಯಾದ ನಂತರ ಅವಳನ್ನು ಇನ್ನಷ್ಟು ಓದಿಸಿ ನಂತರ ಅವಳನ್ನು ಒರಟು ಸ್ವಭಾವದ ಅರ್ಜುನ್ ಮದುವೆಯಾಗುವ ಕಥೆ- ಅದು ಕಥೆಯ ಫೋಕಸ್ ಅಲ್ಲದಿದ್ದರೂ – ಸ್ವಲ್ಪ ಮಟ್ಟಿಗೆ ಒಂದು ಸಾಮಾಜಿಕ ಸಮಸ್ಯೆಯ ಮೇಲೆ ಬೆಳಕು ಚೆಲ್ಲುತ್ತದೆ. (ಕುಹೂ ಉಲಿಯೇ ಕೋಗಿಲೆ ಪು.14), ‘ಮಾಂತ್ರಿಕ ಉಂಗುರ’ ಒಂದು ಮಕ್ಕಳ ಕಥೆಯಾದರೂ ದೃಢನಂಬಿಕೆ-ಆತ್ಮವಿಶ್ವಾಸಗಳು ನಮ್ಮ ಬದುಕಿನಲ್ಲಿ ಬದಲಾವಣೆಗಳನ್ನು ತರಬಲ್ಲವು ಎಂಬ ಸಂದೇಶವನ್ನೂ ಸಾರುತ್ತದೆ (ಪು.227).
ಸಾಮಾನ್ಯ ಓದುಗರು ಖುಷಿಯಿಂದ ಸುಲಭವಾಗಿ ಓದಿ ಸವಿಯಬಹುದಾದ ಕಥೆಗಳಾದರೂ ಪ್ರಸನ್ನಾ ಅವರು ಬಳಸುವ ಭಾಷೆ ಮತ್ತು ಕಥನ ಶೈಲಿಗಳು ತುಂಬಾ ಚೆನ್ನಾಗಿವೆ. ಇಂದು ಕಥೆಗಾರರೆಂದು ಪ್ರಸಿದ್ಧಿ ಪಡೆದ ಎಷ್ಟೋ ಮಂದಿ ಲೇಖಕರ ಬರಹಗಳಲ್ಲಿ ಕಂಡುಬರುವ ಕಾಗುಣಿತ ಮತ್ತು ವ್ಯಾಕರಣ ದೋಷಗಳು ಇಲ್ಲಿ ಕಾಣುವುದಿಲ್ಲ ಅನ್ನುವುದೇ ಈ ಲೇಖಕಿಯ ಹೆಗ್ಗಳಿಕೆ. ಕಥೆಗಳ ಬಿಗಿಯಾದ ಬಂಧ ಹಾಗೂ ರಚನೆಯ ಅಚ್ಚುಕಟ್ಟುತನಗಳು ಕೃತಿಯನ್ನು ಒಂದೇ ಓಟಕ್ಕೆ ಓದಿಸಿಕೊಳ್ಳುವ ಪೂರಕ ಅಂಶಗಳಾಗಿವೆ ಮತ್ತು ಮುಂದೆ ಇವರಿಂದ ಗಂಭೀರ ಕೃತಿಗಳು ಬರಬಹುದು ಎಂಬ ಭರವಸೆ ನೀಡುತ್ತವೆ.
ವಿಮರ್ಶಕಿ : ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
ಲೇಖಕಿ : ಪ್ರಸನ್ನಾ ವಿ. ಚೆಕ್ಕೆಮನೆ
ಪ್ರಸನ್ನಾ ವಿ. ಚೆಕ್ಕೆಮನೆ ಇವರು ಕಾಸರಗೋಡಿನ ಬಾಡೂರು ಗ್ರಾಮದ ಪಳ್ಳದಲ್ಲಿರುವ ಸರ್ಪಂಗಳ ಹರಿಯಪ್ಪ ಭಟ್ ಹಾಗೂ ರಮಾ ಎಚ್. ಭಟ್ ದಂಪತಿಯ ಸುಪುತ್ರಿ ಹಾಗೂ ಚೆಕ್ಕೆಮನೆ ವೆಂಕಟಕೃಷ್ಣರ ಧರ್ಮಪತ್ನಿ. ಕನ್ನಡ, ಮಲೆಯಾಳಂ ಹಾಗೂ ಹವ್ಯಕ ಭಾಷೆಗಳಲ್ಲಿ ಕಥೆ, ಕವನ, ಭಾವಗೀತೆ, ಭಕ್ತಿಗೀತೆ, ಲೇಖನಗಳನ್ನು ಬರೆಯುತ್ತಿರುವ ಇವರ ಒಂದು ಹವ್ಯಕ ಕಾದಂಬರಿ ಸ್ವಯಂವರವು ಒಪ್ಪಣ್ಣ.ಕಾಂ ಎಂಬ ವೆಬ್ ಸೈಟ್ ನಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ.
ತುಳಸೀಹಾರ, ಗರಿಕೆಯಂಚಿನ ಹಿಮಬಿಂದು, ಸಿಂಧೂರ ರೇಖೆಯ ಮಿಂಚು, ನಿನಗಾಗಿ ತೆರೆದ ಬಾಗಿಲು, ಯಾವ ಕಾಣಿಕೆ ನೀಡಲಿ ನಿನಗೆ, ನನ್ನೆದೆಯು ಮಿಡಿಯುತಿದೆ ನಿನ್ನ ಹೆಸರು ಎಂಬ ಕಾದಂಬರಿಗಳನ್ನು ರಚಿಸಿದ್ದಾರೆ. ಮೊದಲ ಕವನ ಸಂಕಲನ ‘ಇನಿದನಿ’ಯು 2014ರಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರದಿಂದ ಪ್ರಕಟವಾಯಿತು. ಮನದ ಮಲ್ಲಿಗೆ, ಕರಿಮಣಿ ಮಾಲೆ (ಹವ್ಯಕ), ನೀಲಾಂಬರಿ ಎಂಬ ಮೂರು ಕಥಾಸಂಕಲನಗಳು ಚಿಕ್ಕಮಗಳೂರಿನ ಅಪರಂಜಿ ಪ್ರಕಾಶನದ ಮೂಲಕ ಪ್ರಕಟಗೊಂಡಿದ್ದು, ಸಿಂಧೂರರೇಖೆಯ ಮಿಂಚು, ತುಳಸೀಹಾರ ಹಾಗೂ ಸ್ವಯಂವರ ಕಾದಂಬರಿಗಳು ಪ್ರಕಟಣೆಯ ಹಂತದಲ್ಲಿವೆ.
ಅಖಿಲ ಭಾರತ ಮಟ್ಟದ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿ, ಒಪ್ಪಣ್ಣ.ಕಾಂ ನಡೆಸುತ್ತಿರುವ ವಿಷು ವಿಶೇಷ ಸ್ಪರ್ಧೆಯ ಕಥೆ, ಲಘು ಬರಹ ವಿಭಾಗಗಳಲ್ಲಿ ಪ್ರಶಸ್ತಿ, ಚುಟುಕು ಸಾಹಿತ್ಯ ಪರಿಷತ್ತು ನಡೆಸಿದ ಕಥಾಸ್ಪರ್ಧೆಯಲ್ಲಿ ಪ್ರಶಸ್ತಿ ಸಹಿತ ಹಲವು ಪುರಸ್ಕಾರಗಳನ್ನು ಗಳಿಸಿದ ಇವರಿಗೆ ತಿರುವನಂತಪುರಂ ನ ಸಂಸ್ಕೃತಂ ಪ್ರತಿಷ್ಠಾನದ ವಿಶೇಷ ಪುರಸ್ಕಾರವು ಗಳಿಸಿದೆ. ಮೈಸೂರಿನ ಸಾಹಿತ್ಯ ಬಳಗ ಏರ್ಪಡಿಸಿದ ಕವನ ಸ್ಪರ್ಧೆಯಲ್ಲಿಯೂ ಬಹುಮಾನ ಗಳಿಸಿದ್ದಾರೆ. ಕೇರಳ ಸರಕಾರದ ಎರಡನೇ ತರಗತಿಯ ಪಠ್ಯಪುಸ್ತಕದಲ್ಲಿ ಇವರ ಕವನವೊಂದು ಪಠ್ಯವಾಗಿ ಸೇರ್ಪಡೆಗೊಂಡಿರುವುದು ಇವರ ಪ್ರತಿಭೆಗೆ ಸಂದ ಗೌರವ.